ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮತ್ಸ್ಯಾವತಾರಿ


 ಬಂದಿಲ್ಲಿ ಸಂಭವಿಸು ಮತ್ಸ್ಯಾವತಾರಿ 🙏


ಹಿಂದಿನ ಕಾಲದಲ್ಲಿ ಸತ್ಯವ್ರತನೆಂಬ ಒಬ್ಬ ರಾಜನಿದ್ದನು.  ಅವನು ತುಂಬಾ ಉದಾರನೂ, ಭಗವಂತನ ಪರಮಭಕ್ತನೂ ಆಗಿದ್ದನು.  ಒಂದು ದಿನ ಅವನು ‘ಕೃತಮಾಲಾ’ ಎಂಬ ನದಿಯಲ್ಲಿ ಸೂರ್ಯನಿಗೆ ಅರ್ಘ್ಯವನ್ನು ಕೊಡುತ್ತಿರುವಾಗ ಅವನ ಬೊಗಸೆಯಲ್ಲಿ ಒಂದು ಪುಟ್ಟ ಮೀನು ಬಂದು ಬಿಟ್ಟಿತು.  ಲೀಲಾ ಶರೀರಿಯಾದ ಭಗವಂತನೇ ಮತ್ಸ್ಯನಾಗಿ ಅವತರಿಸಿದನು.  ಅದು ತನ್ನನ್ನು ಕಾಪಾಡೆಂದು ಬೇಡಿಕೊಂಡಿತು.  ಆ ಮೀನಿನ ಮಾತನ್ನು ಕೇಳಿ ರಾಜನು ಅದನ್ನು ಕಮಂಡಲುವಿನಲ್ಲಿ ಹಾಕಿಕೊಂಡು ತನ್ನ ಆಶ್ರಮಕ್ಕೆ ತಂದನು.   ಅದು ಒಂದೇ ಸಮನೆ ಬೆಳೆಯುತ್ತಾ ಕಮಂಡಲುವಿನಲ್ಲಿ ಹಿಡಿಸದಾಯಿತು.  ಆಗ ಅದನ್ನು ಇನ್ನೊಂದು ದೊಡ್ಡ ಪಾತ್ರೆಯಲ್ಲಿ ಇಡಬೇಕಾಯಿತು.  ಸ್ವಲ್ಪ ಹೊತ್ತಿನಲ್ಲೇ ಅದು ಅದಕ್ಕಿಂತಲೂ ದೊಡ್ಡದಾಯಿತು, ಅದಕ್ಕೆ ಆ ಪಾತ್ರೆಯು ಸಾಲದಾಯಿತು.  ಕೊನೆಗೆ ರಾಜಾ ಸತ್ಯವ್ರತನು ಸೋಲನ್ನೊಪ್ಪಿಕೊಂಡು ಆ ಮೀನನ್ನು ಸಮುದ್ರಕ್ಕೆ ಬಿಡಲು ಹೊರಟನು.  ಸಮುದ್ರದಲ್ಲಿ ಬಿಡುವಾಗ ಆ ಮೀನು ರಾಜನಿಗೆ ಹೇಳಿತು – ‘ರಾಜನೇ! ಸಮುದ್ರದಲ್ಲಿ ದೊಡ್ಡ-ದೊಡ್ಡ ಮೀನು, ತಿಮಿಂಗಿಲಗಳು ಇರುತ್ತವೆ.  ಅವು ನನ್ನನ್ನು ತಿಂದುಬಿಟ್ಟಾವು.  ಅದಕ್ಕಾಗಿ ಸಮುದ್ರದಲ್ಲಿ ನನ್ನನ್ನು ಬಿಡಬೇಡ.’  ಮೀನಿನ ಮಧುರ ಗಂಭೀರ ವಾಣಿಯನ್ನು ಕೇಳಿ ರಾಜನು ಮೋಹಿತನಾದನು.  ಅವನಿಗೆ ಭಗವಂತನ ಲೀಲೆಯನ್ನು ಅರಿಯುವುದರಲ್ಲಿ ತಡವಾಗಲಿಲ್ಲ.  ಅವನು ಕೈಜೋಡಿಸಿಕೊಂಡು ಭಗವಂತನಲ್ಲಿ ಪ್ರಾರ್ಥಿಸತೊಡಗಿದನು.

ಮತ್ಯ್ಸಾವತಾರೀ ಭಗವಂತನು ತನ್ನ ಪ್ರಿಯ ಭಕ್ತನಾದ ಸತ್ಯವ್ರತನಲ್ಲಿ ಹೇಳಿದನು – ‘ಸತ್ಯವ್ರತನೇ! ಇಂದಿನಿಂದ ಏಳನೇ ದಿನ ಮೂರು ಲೋಕಗಳು ಪ್ರಳಯಕಾಲದ ನೀರಿನಲ್ಲಿ ಮುಳುಗಿಹೋಗುವುದು.  ಆಗ ನನ್ನ ಪ್ರೇರಣೆಯಂತೆ ನಿನ್ನ ಬಳಿಗೆ ದೊಡ್ಡದಾದ ದೋಣಿಯೊಂದು ಬರುವುದು.  ನೀನು ಎಲ್ಲ ವನಸ್ಪತಿ, ಔಷದೀಯ ಸಸ್ಯಗಳನ್ನೂ,  ಭತ್ತವೇ ಮುಂತಾದ ಬೀಜಗಳನ್ನು ಎತ್ತಿಕೊಂಡು, ಸಪ್ತರ್ಷಿಗಳೊಂದಿಗೆ ಆ ದೋಣಿಯಲ್ಲಿ ಕುಳಿತು ಸಂಚರಿಸುತ್ತಿರು.  ಚಂಡಮಾರುತವು ಬೀಸಿದಾಗ ದೋಣಿಯು ಅಲ್ಲೋಲ-ಕಲ್ಲೋಲವಾದಾಗ ನಾನು ಇದೇ ರೂಪದಿಂದ ಬಂದು ನಿಮ್ಮೆಲ್ಲರನ್ನೂ ಕಾಪಾಡುತ್ತೇನೆ.’  ಭಗವಂತನು ರಾಜನಲ್ಲಿ ಹೀಗೆ ಹೇಳಿ ಕಣ್ಮರೆಯಾದನು.

ಕೊನೆಗೆ ಆ ಸಮಯವೂ ಬಂತು.  ರಾಜಾ ಸತ್ಯವ್ರತನು ನೋಡು-ನೋಡುತ್ತಿರುವಂತೆ ಇಡೀ ಪೃಥ್ವಿಯು ನೀರಿನಲ್ಲಿ ಮುಳುಗತೊಡಗಿತು.  ರಾಜನಿಗೆ ಭಗವಂತನ ಮಾತು ನೆನಪಾಯಿತು.  ನೋಡುತ್ತಿರುವಾಗಲೇ ದೋಣಿಯು ಬಳಿಗೆ ಬಂತು.  ಅವನು ಎಲ್ಲ ಸಸಿಗಳನ್ನೂ, ಬೀಜಗಳನ್ನು ಎತ್ತಿಕೊಂಡು ಸಪ್ತರ್ಷಿಗಳೊಂದಿಗೆ ಬೇಗನೇ ದೋಣಿಯಲ್ಲಿ ಹತ್ತಿ ಕುಳಿತನು.

ಸಪ್ತರ್ಷಿಗಳ ಅಣತಿಯಂತೆ ರಾಜನು ಭಗವಂತನನ್ನು ಧ್ಯಾನಿಸಿದನು.  ಆಗಲೇ ಆ ವಿಸ್ತಾರವಾದ ಭಾರೀ ಸಮುದ್ರದಲ್ಲಿ ಮತ್ಸ್ಯರೂಪದಿಂದ ಭಗವಂತನು ಪ್ರಕಟವಾದನು.  ಬಳಿಕ ಭಗವಂತನು ಪ್ರಳಯ ಸಮುದ್ರದಲ್ಲಿ ವಿಹರಿಸುತ್ತಿರುವ ಸತ್ಯವ್ರತನಿಗೆ ಜ್ಞಾನ-ಭಕ್ತಿಯ ಉಪದೇಶ ಮಾಡಿದನು.

ಹಯಗ್ರೀವನೆಂಬ ಒಬ್ಬ ರಾಕ್ಷಸನಿದ್ದನು.  ಅವನು ಚತುರ್ಮುಖ ಬ್ರಹ್ಮದೇವರ ಮುಖದಿಂದ ಹೊರಟಿರುವ ವೇದಗಳನ್ನು ಕದ್ದುಕೊಂಡು ಹೋಗಿ ಪಾತಾಳದಲ್ಲಿ ಅಡಗಿಸಿಟ್ಟಿದ್ದನು.   ಮತ್ಸ್ಯಾವತಾರೀ ಭಗವಂತನು ಹಯಗ್ರೀವನನ್ನು ಕೊಂದು ಆ ವೇದಗಳನ್ನು ಉದ್ಧರಿಸಿದನು.  

ಸಮಸ್ತ ಜಗತ್ತಿನ ಪರಮಕಾರಣನಾದ ಮತ್ಸ್ಯಾವತಾರೀ ಭಗವಂತನಿಗೆ ನಮಸ್ಕರಿಸಿ ನಮ್ಮೆಲ್ಲರನ್ನೂ ಕಾಪಾಡಲೆಂದು ಪ್ರಾರ್ಥಿಸೋಣ.

Matsyavathari, Mathsyavathari


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ