ಶ್ಯಾಮಾಶಾಸ್ತ್ರಿ
ಶ್ಯಾಮಾಶಾಸ್ತ್ರಿಗಳು
ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆಂದು ಹೆಸರಾದವರು ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರಿಗಳು.
ಶ್ಯಾಮಾಶಾಸ್ತ್ರಿಗಳು ತಂಜಾವೂರು ಜಿಲ್ಲೆಯ ತಿರುವಾರೂರಿನಲ್ಲಿ 1762ರ ಏಪ್ರಿಲ್ 26 ರಂದು ಜನಿಸಿದರು. ತಂದೆ ವಿಶ್ವನಾಥಯ್ಯರ್ ಅವರು ಶಿಶುವಿಗೆ 'ವೆಂಕಟಸುಬ್ರಮಣ್ಯ' ಎಂದು ನಾಮಕರಣ ಮಾಡಿದರು. ಮುದ್ದಿಗಾಗಿ 'ಶ್ಯಾಮ' ಎಂದು ಕರೆಯುತ್ತಿದ್ದುದರಿಂದ ಶ್ಯಾಮಾಶಾಸ್ತ್ರಿಗಳೆಂದೇ ಅವರು ಖ್ಯಾತರಾಗಿದ್ದಾರೆ.
ಯುಕ್ತ ವಯಸ್ಸಿನಲ್ಲಿ ವಿಶ್ವನಾಥರವರು ಮಗನಿಗೆ ವೇದಾಧ್ಯಯನವನ್ನು ಮಾಡಿಸಿ, ಸಂಸ್ಕೃತ ಮತ್ತು ತೆಲುಗು ಭಾಷೆಗಳನ್ನು ಕಲಿಸಿದರು. ಶ್ಯಾಮಾಶಾಸ್ತ್ರಿಗಳು 18 ವಯಸ್ಸಿನವರಾದಾಗ ತಂದೆ ತಾಯಿಗಳೊಡನೆ ತಂಜಾವೂರಿಗೆ ಬಂದು ನೆಲೆಸಿದರು. ಇವರ ವಂಶಿಕರು ಸಂಗೀತಗಾರರಾಗಿರಲಿಲ್ಲ. ಸಂಗೀತಭ್ಯಾಸವನ್ನು ಹುರಿದುಂಬಿಸುತಿರಲಿಲ್ಲ. ಇವರಿಗೆ ಮಧುರವಾದ ಧ್ವನಿ ಮತ್ತು ಶಾರೀರ ಸಂಪತ್ತು ಇದ್ದರೂ ಸಹ, ಇವರ ತಾಯಿ ತಂದೆಯರು ಸಂಗೀತವನ್ನು ಹೇಳಿಸಲು ಪ್ರಯತ್ನ ಪಡಲಿಲ್ಲ. ದೈವ ಸಹಾಯದಿಂದ, ಸಂಗೀತವನ್ನು ಕಲಿಯಲು ಅವಕಾಶವು ತಾನೇ ತಾನಾಗಿ ಒದಗಿ ಬಂತು.
ಸಂಗೀತ ಸ್ವಾಮಿಗಳೆಂಬ ಆಂಧ್ರ ಸನ್ಯಾಸಿಗಳು ತೀರ್ಥಯಾತ್ರೆಯ ಸಲುವಾಗಿ ತಂಜಾವೂರಿಗೆ ಬಂದರು. ಚಾತುರ್ಮಾಸ ವ್ರತಾಚರಣೆಗಾಗಿ ಅಲ್ಲೇ ಉಳಿದುಕೊಂಡರು. ಇವರು ಸಂಗೀತ ಮತ್ತು ನಾಟ್ಯ ಕಲೆಗಳಲ್ಲಿ ನಿಪುಣರಾಗಿದ್ದರು. ಕಾಶಿ ವಿಶ್ವನಾಥನೆದುರಿನಲ್ಲಿ ಪ್ರತಿದಿನವೂ ನರ್ತನ ಮಾಡುತಿದ್ದರು. ವಿಶ್ವನಾಥಯ್ಯರ್ ಅವರು ಸ್ವಾಮಿಗಳನ್ನು ಒಂದು ದಿನ ಅಹ್ವಾನಿಸಿ, ಮುಂದೆ ಶ್ಯಾಮಾಶಾಸ್ತ್ರಿಗಳನ್ನೇ ಅವರ ಪರಿಚರ್ಯೆಗೆ ನೇಮಿಸಿದರು. ಸಂಸ್ಕೃತ ಮತ್ತು ತೆಲುಗು ಭಾಷೆಗಳ ಪಾಂಡಿತ್ಯವನ್ನು ಪಡೆದಿದ್ದುರಿಂದಲೂ, ಒಳ್ಳೆಯ ಮೇಧಾಶಕ್ತಿಯನ್ನು ಹೊಂದಿದ್ದರಿಂದಲೂ, ಶಾಸ್ತ್ರಿಗಳು ಬಹು ಬೇಗನೆ ರಾಗ, ತಾಳ ಮತ್ತು ಸ್ವರ ಪ್ರಸ್ತಾರಗಳಲ್ಲಿ ಪಾಂಡಿತ್ಯವನ್ನು ಪಡೆದರು. ಸ್ವಾಮಿಗಳು ಶಿಷ್ಯನಿಗೆ ಸಂಗೀತ ಶಾಸ್ತ್ರ ಮರ್ಮಗಳನ್ನು ಮತ್ತು ಗಾನಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥವನ್ನು ಅನುಗ್ರಹಿಸಿ ಆಶೀರ್ವದಿಸಿದರು. ಹೊರಡುವಾಗ, ನೀನು ಸಂಗೀತಶಾಸ್ತ್ರದಲ್ಲಿ ಪೂರ್ಣಪಾಂಡಿತ್ಯವನ್ನು ಪಡೆದಿರುವೆ, ಈಗ ನೀನು ಒಳ್ಳೆಯ ಸಂಗೀತವನ್ನು ಕೇಳಬೇಕು. ಪಚ್ಚಿಮರಿ ಆದಿ ಅಪ್ಪಯ್ಯನವರ ಸಂಗೀತವನ್ನು ಕೇಳು, ಎಂಬುದಾಗಿ ಹೇಳಿ, ಆಶೀರ್ವದಿಸಿ, ಕಾಶಿಗೆ ಹಿಂದಿರುಗಿದರು.
ಶ್ಯಾಮಾಶಾಸ್ತ್ರಿಗಳು ಗುರುಗಳ ಆಜ್ಞೆಗೆ ಅನುಸಾರವಾಗಿ ಆದೆಪ್ಪಯ್ಯನವರನ್ನು ಸಂದರ್ಶಿಸಿ, ಅವರ ಎದುರಿನಲ್ಲಿ ಆಗಾಗ್ಗೆ ತಾವು ಹಾಡುತ್ತಲೂ ಆ ಹಿರಿಯ ವಿದ್ವಾಂಸರ ಗಾಯನವನ್ನು ಕೇಳುತ್ತಲೂ ಇದ್ದರು.
ಶ್ಯಾಮಾಶಾಸ್ತ್ರಿಗಳು ಜೀವನವೃತ್ತಿಗಾಗಿ ಸಂಗೀತವನ್ನು ಕಲಿತವರಲ್ಲ. ತಂದೆಯ ನಂತರ ಶ್ಯಾಮಾಶಾಸ್ತ್ರಿಗಳೇ 'ಬಂಗಾರು ಕಾಮಾಕ್ಷಿ' ಸೇವೆಗೆ ನಿಂತರು. ಸ್ವಲ್ಪ ಕಾಲದ ನಂತರ ಇವರ ರಚನೆ ಮತ್ತು ಗಾಯನವು ಆಗಿನ ವಿದ್ವನ್ಮಂಡಳಿಯಲ್ಲಿ ಉನ್ನತ ಸ್ಥಾನವನ್ನು ಪಡೆಯಿತು. ಇವರು ಅತಿ ಕಷ್ಟವಾದ ತಾಳಗಳನ್ನು ನಿರ್ವಹಿಸುತ್ತಿದ್ದರು. ಅಪೂರ್ವ ರಾಗಗಳನ್ನು ಸಾಮಾನ್ಯ ರಾಗಗಳಂತೆ ಸರಾಗವಾಗಿ ಹಾಡುತ್ತಿದ್ದರು. ಪರಮ ಸ್ನೇಹಿತರಾದ ತ್ಯಾಗರಾಜರು ಶ್ಯಾಮಾಶಾಸ್ತ್ರಿಗಳ ಸಮ್ಮುಖದಲ್ಲೇ ಅವರ ಕೃತಿಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದುದೇ ಇದಕ್ಕೆ ನಿದರ್ಶನ. ಇವರ ಮೊದಲನೆ ಕೃತಿ "ಜನನಿ ನತಜನಪರಿಪಾಲಿನಿ" ಸಾವೇರಿ ರಾಗದಲ್ಲಿದ್ದು, ಸಂಸ್ಕೃತದಲ್ಲಿದೆ.
ಸಂಗೀತವಲ್ಲದೆ, ಜ್ಯೋತಿಷ್ಯ ಶಾಸ್ರ್ತದಲ್ಲೂ ಶ್ಯಾಮಾಶಾಸ್ತ್ರಿಗಳಿಗೆ ಪಾಂಡಿತ್ಯವಿತ್ತು. ತಮ್ಮ ಅಂತ್ಯಕಾಲವನ್ನು ಪೂರ್ವಭಾವಿಯಾಗಿಯೇ ಅರಿತಿದ್ದ ಶಾಸ್ತ್ರಿಗಳು ತಮ್ಮ ಸಹಧರ್ಮಿಣಿ ಸ್ವರ್ಗಸ್ಥಾರಾದ ಆರನೆಯ ದಿನ ಅಂದರೆ 1827ನೇ ಫೆಬ್ರವರ 1ರಂದು ತಮ್ಮ 65 ನೇ ವಯಸ್ಸಿನಲ್ಲಿ ಭೌತಿಕ ಶರೀರವನ್ನು ತ್ಯಜಿಸಿದರು.
ಶ್ರೀ ಕಾಮಾಕ್ಷಿ ದೇವಿಯನ್ನು ಮನಸಾರೆ ಅರ್ಚಿಸಿ, ವರ್ಣಿಸಿ ಹಾಡುವುದೇ, ಶ್ಯಾಮಾಶಾಸ್ತ್ರಿಗಳ ಸಂಗೀತದ ಹಾದಿಯಾಗಿತ್ತು. ಇವರ ಕೃತಿಗಳು ಅಪಾರ ಪಾಂಡಿತ್ಯದಿಂದಲೂ, ಭಕ್ತಿ ಭಾವದಿಂದಲೂ ತುಂಬಿಕೊಡಿವೆ. ತಮ್ಮ ರಚನೆಗಳನ್ನು ಪ್ರಸಿದ್ಧಿಪಡಿಸಬೇಕೆಂಬ ಯಾವ ಆತುರವು ಅವರಲ್ಲಿರಲಿಲ್ಲ. ಇವರು ರಚಿಸಿರುವ ಸ್ವರಜತಿ, ವರ್ಣ ಕೃತಿಗಳು ಮುನ್ನೂರಕ್ಕೆ ಮೇಲಿತ್ತು. ಅವರ 35 ಕೃತಿಗಳು ಪ್ರಚಾರದಲ್ಲಿವೆ. ಇದರಲ್ಲಿ ಮಧುರೆ ಕಾಮಾಕ್ಷಿ ದೇವಿಯ ಮೇಲೆ ರಚಿಸಿರುವ ಒಂಬತ್ತು ಕೃತಿಗಳಿಂದ ಕೂಡಿರುವ ನವರತ್ನ ಮಾಲಿಕೆಯೂ ಸೇರಿದೆ. ಸಂಸ್ಕೃತ, ತೆಲುಗು ಮತ್ತು ತಮಿಳಲ್ಲಿ ಕೃತಿಗಳನ್ನು ರಚಿಸಿರುವ ಇವರ ಕೃತಿಗಳಲ್ಲಿ 'ಶ್ಯಾಮಕೃಷ್ಣ' ಎಂಬ ಅಂಕಿತವಿದೆ. ಶ್ಯಾಮಾಶಾಸ್ತ್ರಿಗಳ ಶಿಷ್ಯರಲ್ಲಿ ಪ್ರಮುಖರಾದವರೆಂದರೆ ಅವರ ಪುತ್ರರಾದ ಸುಬ್ಬರಾಯಶಾಸ್ತ್ರಿ, ತರಂಗಂಬಾಡಿ ಪಂಚನದಯ್ಯರ್ ಮತ್ತು ದಾಸರಿ.
ಶ್ಯಾಮಾಶಾಸ್ತ್ರಿಗಳ ಕೆಲವು ಪ್ರಸಿದ್ಧ ಕೃತಿಗಳಲ್ಲಿ ಶಂಕರಿ ಶಂಕರು ಚಂದ್ರಮುಖಿ, ಕನಕ ಶೈಲ ವಿಹಾರಿಣಿ, ಬಿರಾಣ ವಾರಲಿಕ್ಕಿ ಬ್ರೊವಾವೆ, ಹಿಮಾದ್ರಿ ಸುತೆ ಪಾಹಿಮಂ, ಓ ಜಗದಂಬ ನನ್ನು, ಪಾರ್ವತಿ ನೀನು ನೇ ನೇರ ನಮ್ಮಿತಿ, ಸರೋಜ ದಳ ನೇತ್ರಿ ಹಿಮಗಿರಿ ಪುತ್ರಿ, ಕಾಮಾಕ್ಷಿ ಅನುದಿನಮು ಮರುವಕನೇ, ಕಾಮಾಕ್ಷಿ ಪದಯುಗಮೆ ಸ್ಥಿರಮನಿನೇ, ರಾವೇ ಹಿಮಗಿರಿ ಕುಮಾರಿ ಮುಂತಾದವು ಇವೆ.
On the birth anniversary of one among the 3 pillars of Carnatic music Shyama Shastri 🌷🙏🌷
ಕಾಮೆಂಟ್‌ಗಳು