ವೇಣುಗೋಪಾಲ್
ಟಿ. ಎಸ್. ವೇಣುಗೋಪಾಲ್
ಪ್ರೊ. ವೇಣುಗೋಪಾಲ್ ವೃತ್ತಿಯಿಂದ ಸಂಖ್ಯಾಶಾಸ್ತ್ರ ಪ್ರಾಧ್ಯಾಪಕರಾದರೂ ಭಾರತೀಯ ಸಂಗೀತ, ಸಂಸ್ಕೃತಿ, ಪುರಾಣ, ಅರ್ಥಶಾಸ್ತ್ರಗಳ ವಿಚಾರದಲ್ಲಿ ಕನ್ನಡಕ್ಕೆ ಅದ್ಭುತ ಕೊಡುಗೆ ನೀಡುತ್ತಾ ಬಂದಿದ್ದಾರೆ.
ಮೈಸೂರಿನ ಮೂಲದವರಾದ ಟಿ. ಎಸ್. ವೇಣುಗೋಪಾಲ್ 1955ರ ಏಪ್ರಿಲ್ 24ರಂದು ಜನಿಸಿದರು. ತಂದೆ ಡಾ. ಆರ್. ಸುಂದರಾಚಾರ್. ತಾಯಿ ಸುಶೀಲಾ.
ಸಂಖ್ಯಾ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಳಿಸಿ ಪ್ರಾಧ್ಯಾಪಕರಾಗಿ ಮೈಸೂರು ವಿಶ್ವವಿದ್ಯಾಲಯದಿಂದ ನಿವೃತ್ತರಾಗಿರುವ ವೇಣುಗೋಪಾಲರು ಸಂಖ್ಯಾಶಾಸ್ತ್ರ ಮತ್ತು ಅರ್ಥಶಾಸ್ತ್ರಗಳಲ್ಲಿ ಅನೇಕ ಬರಹಗಳು ಮತ್ತು ಕೃತಿಗಳನ್ನು ರಚಿಸಿದ್ದಾರೆ.
ಟಿ. ಎಸ್. ವೇಣುಗೋಪಾಲ್ ಮತ್ತು ಅವರ ಪತ್ನಿ ಪ್ರೊ. ಶೈಲಜಾ ಅವರು ಸಾಂಸ್ಕೃತಿಕ ಲೋಕದ ಅನುಪಮ ಜೋಡಿ. ಈ ದಂಪತಿಗಳು ಸಾಂಸ್ಕೃತಿಕ ಲೋಕದಲ್ಲಿ ಅದರಲ್ಲೂ ವಿಶೇಷವಾಗಿ ಸಂಗೀತ ಮತ್ತು ನೃತ್ಯ ಲೋಕದಲ್ಲಿನ ವ್ಯಕ್ತಿಗಳು ಮತ್ತು ವಿಶಿಷ್ಟ ಸಂಗತಿಗಳನ್ನು ವಿಶಿಷ್ಟ ಅಧ್ಯಯನ, ಅಭಿವ್ಯಕ್ತಿ ಮತ್ತು ಅನುವಾದಗಳ ಮೂಲಕ ಕನ್ನಡಕ್ಕೆ ತಮ್ಮದೇ ಆದ ರಾಗಮಾಲಾ ಕೃತಿ ಸರಣಿಗಳು ಮತ್ತು ಇತರ ಪ್ರಕಾಶನಗಳ ಮೂಲಕ ಉತ್ಕೃಷ್ಟ ರೂಪದಲ್ಲಿ ಪ್ರಕಟಿಸಿದ್ದಾರೆ.
ವೇಣುಗೋಪಲ್ - ಶೈಲಜಾ ದಂಪತಿಗಳ ಕೃತಿ ಕೊಡುಗೆಗಳಲ್ಲಿ 'ನಾದಬಿಂಬ', 'ಸಹಸ್ಪಂದನ' ಟಿ. ಎ. ಕೃಷ್ಣ ಅವರ ಚಿಂತನೆಗಳು, 'ಧರೆಗಿಳಿದ ನಾಟ್ಯತಾರೆ ಬಾಲಾ' - ಬಾಲಸರಸ್ವತಿ ನೃತ್ಯಕಥನ, ಸಂಗೀತಗಾರರ ಸಂಗೀತಗಾರ 'ಪಂ. ಮಲ್ಲಿಕಾರ್ಜುನ ಮನ್ಸೂರ್', 'ವಾದಿ ಸಂವಾದಿ' ಪಂಡಿತ್ ರಾಜೀವ್ ತಾರಾನಾಥರ ಸಂಗೀತದ ಕುರಿತಾದ ಚಿಂತನೆಗಳು, 'ದೇವಿಪ್ರಸಾದ ಚಟ್ಟೋಪಾಧ್ಯಾಯ', ಕುಮಾರಗಂಧರ್ವರ ಸಂಗೀತಯಾನದ 'ಕುಮಾರ ಸಂಗೀತ', ಎಂ. ಎಲ್. ವಸಂತಕುಮಾರಿ ಅವರ ಕುರಿತಾದ ‘ಗಾನವಸಂತ’, ‘ಭುವನದ ಭಾಗ್ಯ ಎಂಎಸ್' (ಎಂ. ಎಸ್. ಸುಬ್ಬುಲಕ್ಷ್ಮಿ), ಪಂಡಿತ್ ರವಿಶಂಕರ್, ಭೃಂಗಿ ನಡೆಯ ಮಾಲಿ (ಟಿ ಆರ್ ಮಹಾಲಿಂಗಂ) , 'ಕೇಳು ಜನಮೇಜಯ' ಸಂಗೀತದ ಕೇಳ್ಮೆಯನ್ನು ಕುರಿತ ಸಂಚಿಕೆ; ದಾಮೋದರ ಡಿ. ಕೋಸಾಂಬಿ ಅವರ ಕೃತಿಗಳ ಅನುವಾದಗಳಾದ 'ಭಗವದ್ಗೀತೆ' ಸಾಮಾಜಿಕ ಆರ್ಥಿಕ ಸಂಗತಿಗಳ ಒಳನೋಟ, 'ಪುರಾಣ ಮತ್ತು ವಾಸ್ತವ', 'ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ನಾಗರೀಕತೆ' ಚಾರಿತ್ರಿಕ ರೂಪುರೇಷೆ; 'ಹೆಗೆಲ್ ನಂತರದ ಯೂರೋಪಿನಲ್ಲಿ ತತ್ವಶಾಸ್ತ್ರ, 'ಲೋಕಾಯತ', ಮುಂತಾದ ಅನೇಕ ಬೃಹತ್ ಕೃತಿಗಳು ಸೇರಿವೆ.
ವೇಣುಗೋಪಲ್ - ಶೈಲಜಾ ದಂಪತಿಗಳು, ಅನೇಕ ಸಾಂಸ್ಕೃತಿಕ ಲೋಕದ ಪ್ರಸಿದ್ಧರ ಸಂದರ್ಶನಗಳನ್ನು, ಲೇಖನಗಳನ್ನು ಮತ್ತು ಚಿಂತನೆಗಳನ್ನು ಹಲವಾರು ಪ್ರಸಿದ್ಧ ಪತ್ರಿಕೆಗಳು ಮತ್ತು ಸಂಚಿಕೆಗಳಲ್ಲಿ ಪ್ರಕಟಿಸಿರುವುದಲ್ಲದೆ, ಕಾರ್ಯಕ್ರಮ ಆಯೋಜನೆ, ಸಂಗೀತ ವಿಮರ್ಶಾ ಕ್ಷೇತ್ರಗಳಲ್ಲೂ ಹೆಸರಾಗಿದ್ದಾರೆ. ಇವರ ಪುತ್ರಿ ಎಸ್. ವಿ. ಸಹನಾ ಪ್ರತಿಭಾವಂತ ವೀಣಾವಾದಕರಾಗಿ ಹೆಸರಾಗಿದ್ದಾರೆ.
ನನ್ ಸೋದರಬಂಧುಗಳಾದ ಬಹುರೂಪಿ ಪ್ರತಿಭಾನ್ವಿತರಾದ ಟಿ. ಎಸ್. ವೇಣುಗೋಪಾಲ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birthday of scholar Prof. T S Venu Gopal 🌷🙏🌷
ಕಾಮೆಂಟ್‌ಗಳು