ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ಜಯಸಿಂಹ



 ಎಸ್. ಜಯಸಿಂಹ


ಕನ್ನಡ ಕಾಯಕದ ಅಪರೂಪದ ನಿಷ್ಠಾವಂತರಲ್ಲಿ ಡಾ. ಜಯಸಿಂಹ ನಮಗೊಂದು ಆತ್ಮೀಯ ಹೆಸರು. ನನ್ನಂತಹ ಹಲವಾರು ವ್ಯಕ್ತಿಗಳಲ್ಲಿ ಕನ್ನಡದ ಬಗೆಗಿನ ಪ್ರೀತಿ, ಸಾರ್ವಜನಿಕ ಹಿತಾಸಕ್ತಿ, ಹಾಗೂ ಇಂತಹ ಚಟುವಟಿಕೆಗಳಲ್ಲಿ ಇರುವವರಿಗೆ ಸಜ್ಜನಿಕೆ ಎಷ್ಟು ಮಹತ್ವದ್ದು ಎಂಬುದನ್ನು ತಮ್ಮ ನಡೆ, ನುಡಿ, ಕೃತಿಗಳಿಂದ ತೋರಿಸಿಕೊಟ್ಟವರು ಜಯಸಿಂಹ.  ಅವರು ಕನ್ನಡದ ಕವಿ, ಕಥೆಗಾರ, ಧಾರ್ಮಿಕ – ಸಾಮಾಜಿಕ ಕಾರ್ಯಕರ್ತ, ಹರಿದಾಸ ಸಾಹಿತ್ಯದಲ್ಲಿ ಸಂಶೋಧಕ,  ಪರಿಮಳ ಗೆಳೆಯರ ಬಳಗದಂತಹ ಉನ್ನತ ಧ್ಯೇಯದ ಯುವಪಡೆಯ ನಿರ್ಮಾತೃ, ಸಾರ್ವಜನಿಕ ಸಂಪರ್ಕ ಕ್ಷೇತ್ರದ ನಿರ್ವಾಹಕ, ಅಂಕಣಕಾರ, ಪತ್ರಿಕೋದ್ಯಮದಲ್ಲಿ ಯುವ ಪ್ರತಿಭೆಗಳಿಗೆ ಶಿಕ್ಷಕ – ಮಾರ್ಗದರ್ಶಕ ಹೀಗೆ ವಿವಿಧ ಕ್ಷೇತ್ರಗಳಲ್ಲಿನ ಮಹತ್ಸಾಧಕ.  ನಾವು ಅಂದಿನ ದಿನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಚ್ಎಮ್‍ಟಿ ಸಂಸ್ಥೆಯಲ್ಲಿ  ‘ಕನ್ನಡ ಸಂಪದ’ ಎಂಬ ಈ ಹೆಸರನ್ನು 1979-80ರ ಅವಧಿಯಲ್ಲಿ ಹುಟ್ಟು ಹಾಕಿದವರು ಜಯಸಿಂಹ.  ಈ ‘ಕನ್ನಡ ಸಂಪದ’ ಎಂಬ ಕನ್ನಡ ಕಾರ್ಯಕ್ಷೇತ್ರವೇ ನನಗೆ ಬಾಳಿನಲ್ಲಿ ದೊರೆತಿರುವ ಹಲವಾರು ಸಂತಸ, ಹೃದ್ಭಾವಗಳ ಉಗಮಸ್ಥಾನ.  ಇದು ಇಂದು ಕೂಡಾ ನೀವು ಫೇಸ್ಬುಕ್ಕಿನಲ್ಲಿ ಕಾಣುತ್ತಿರುವ ಈ ಪುಟ ನನ್ನನ್ನು ನಡೆಸುತ್ತಿದೆ.  ಅವರು ಅಂದು ಬರೆದ ‘ಹಚ್ಚೋಣ ಸಂಪದದ ದೀಪ, ಕನ್ನಡ ಸಂಪದದ ದೀಪ’ ಎಂಬ ಬೆಳಕು ಇಂದೂ ಆರದಂತೆ ನಮ್ಮನ್ನು ಮುನ್ನಡೆಸಿದೆ.

ಏಪ್ರಿಲ್ 24, ಜಯಸಿಂಹ ಅವರ ಹುಟ್ಟುಹಬ್ಬದ ದಿನ.  ಜಯಸಿಂಹರ ತಂದೆ ಎಚ್ ಶ್ರೀನಿವಾಸಮೂರ್ತಿಯವರು ‘ಪರಿಮಳ’ ಎಂಬ ಹೆಸರಿನಿಂದ ಬರೆಯುತ್ತಿದ್ದರು.  ಕನ್ನಡದಲ್ಲಿ ಗಾಂಧಿ ಶಿಶು ಸಾಹಿತ್ಯವನ್ನು  ಪರಿಚಯಿಸಿದವರಲ್ಲಿ ಶ್ರೀನಿವಾಸಮೂರ್ತಿಗಳು ಪ್ರಮುಖರು.   ಆರ್. ಕಲ್ಯಾಣಮ್ಮ, ಚಿ. ಉದಯಶಂಕರ್ ಅವರುಗಳೊಂದಿಗೆ ಬೆಂಗಳೂರಿನ ಮಕ್ಕಳ ಕೂಟ ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರವಹಿಸಿದವರು.  ಶಾಲಾ ಕಾಲೇಜುಗಳಲ್ಲಿ ಬೋಧಕರಾಗಿ ಕರ್ನಾಟಕದ ವಿವಿದೆಡೆಗಳಲ್ಲಿ ಕಾರ್ಯ ನಿರ್ವಹಿಸಿದವರು.  ತಮ್ಮ ತಂದೆಯ ಎಲ್ಲ ಗುಣಗಳನ್ನೂ ಮೇಳೈಸಿಕೊಂಡವರು ಜಯಸಿಂಹ.

ಜಯಸಿಂಹ ಅವರು ಎಂಟನೇ ತರಗತಿಯಲ್ಲಿದ್ದಾಗ ಮಲ್ಲೇಶ್ವರದ ಭಾಷ್ಯಂ ಪಾರ್ಕ್ ಹಾಗೂ ಅದರ ಪಕ್ಕದ ಕ್ರಿಕೆಟ್ ಮೈದಾನದಲ್ಲಿ ಆಟ ಆಡುತ್ತಿದ್ದರಂತೆ.  ಅಲ್ಲಿ ಪ್ರತಿದಿನ ಸೇರುತ್ತಿದ್ದ ಮುದುಕರನ್ನು ಕುರಿತು “ಮುದುಕರ ಸಂಘ” ಎಂಬ ಪದ್ಯ ಬರೆದು ಯಾರಿಗೂ ಹೇಳದೆ ಪ್ರಜಾವಾಣಿ ಪತ್ರಿಕೆಗೆ ಕಳುಹಿಸಿದ್ದರು.  ಅದು ಪ್ರಕಟಗೊಂಡಾಗ ಪ್ರೋತ್ಸಾಹ ಪಡೆದರು. ಶಾಲೆಯ ತರಗತಿಯಲ್ಲಿ ಕುಳಿತೇ ಪದ್ಯ ಬರೆಯುತ್ತಿದ್ದು ಏಟು ತಿಂದಿದ್ದರು.  ಏಟು ಕೊಟ್ಟ ಅಧ್ಯಾಪಕರೇ ನಂತರದಲ್ಲಿ ಪ್ರತ್ಯೇಕವಾಗಿ ಕರೆದು ಪ್ರೋತ್ಸಾಹ ಕೊಟ್ಟರು.  ತ್ರಿವೇಣಿ ಅವರ ಕಾದಂಬರಿಗಳು ಜಯಸಿಂಹರಿಗೆ ಅಚ್ಚುಮೆಚ್ಚು.  ಒಂದೊಂದು ಕಾದಂಬರಿಯನ್ನು ಹಲವು ಬಾರಿ ಓದುವಷ್ಟು.     ಬೇಂದ್ರೆ, ಅಡಿಗ ಅವರ ಪದ್ಯಗಳು ಅವರನ್ನು ಅಪಾರವಾಗಿ ಆಕರ್ಷಿಸಿದ್ದವು. ನಿಸ್ಸಾರ್ ಅಹಮದ್ ಅವರ ಪ್ರಭಾವವನ್ನು ಜಯಸಿಂಹರ ಪ್ರಾರಂಭಿಕ ಕವನಗಳಲ್ಲಿ ಕಾಣಬಹುದಾಗಿದೆ.  ಜಯಸಿಂಹ ಕೇವಲ ಬರೆವಣಿಗೆಯಲ್ಲಿ ಮಾತ್ರ ಮುಂದಿರಲಿಲ್ಲ.  ಅವರು ಕ್ರೀಡೆಗಳಲ್ಲೂ ಎತ್ತಿದ ಕೈ.  ಈಜುಗಾರಿಕೆ ಸ್ಪರ್ಧೆಗಳಲ್ಲಿ ಅವರು ಅಂದಿನ ದಿನಗಳಲ್ಲಿ ರಾಜ್ಯಮಟ್ಟದ ಚಾಂಪಿಯನ್ ಆಗಿದ್ದವರು.

ಜಯಸಿಂಹರ ಮೇಲೆ ಅವರ ತಾತನವರ ಆಧ್ಯಾತ್ಮಿಕ ಪ್ರಭಾವ ಅಪಾರವಾಗಿತ್ತು.  ಅವರ ತಾತನವರು ಜ್ಯೋತಿಷ್ಯ ಶಾಸ್ತ್ರವನ್ನು ಕರಾರುವಾಕ್ಕಾಗಿ ಹೇಳಬಲ್ಲವರಾಗಿದ್ದರಂತೆ.  ತಾವು ಕೆಲಸಕ್ಕೆ ಸೇರಿದ ಮೊದಲ ಸಂಭಳ ಪಡೆದಾಗ ಜಯಸಿಂಹ ಮಂತ್ರಾಲಯಕ್ಕೆ ಭೇಟಿಕೊಟ್ಟಿದ್ದಾಗ ಅಲ್ಲಿ ದೊರೆತ ಅಂತರಾಳದ ಮೇಲಿನ ಪ್ರಭಾವ ಅವರನ್ನು ‘ಮಂತ್ರಾಲಯದ ಮಹಾಪ್ರಭುಗಳು’ ಎಂಬ ಕೃತಿಯನ್ನು ಮೂಡಿಸಲು ಪ್ರೇರೇಪಿಸಿತು.  ಅದು ಹಲವಾರು ಪುನರ್ಮುದ್ರಣಗಳನ್ನು ಕಂಡು ಇಂದೂ ತನ್ನ ಜನಪ್ರಿಯತೆಯನ್ನು ಕಾದುಕೊಂಡಿದೆ.

ಎಂಭತ್ತರ ದಶಕದಲ್ಲಿ  ಚೇಂಬರ್ ಆಫ್ ಕಾಮರ್ಸ್ ಅವರು ನಡೆಸಿದ ಅಂತರರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಜಯಸಿಂಹ ಅವರು ಬೇಂದ್ರೆಯವರ ಕುರಿತು ಪದ್ಯಮಂಡಿಸಿದಾಗ ಇವರ ಪ್ರತಿಭೆಯನ್ನು ಮೆಚ್ಚಿ ಬಹುಮಾನಿಸಿ ಆಶೀರ್ವದಿಸಿದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ವಿ. ಕೃ. ಗೋಕಾಕ್ ಅಂತಹ ಹಿರಿಯರು.   ಮುಂದೆ ಸಂದಿಗ್ಧ, ನಿವೇದನೆ, ಮೊದಲನೋಟ ಮೊದಲಾದ ಕವನಸಂಕಲನಗಳು ಪ್ರಕಟಗೊಂಡು ಜಯಸಿಂಹ ಅವರು ಕನ್ನಡ ನಾಡಿನಲ್ಲಿ ಜನಪ್ರಿಯರಾದರು.  ಅವರ ಸುಮ್ಮನೆ ಏತಕೆ ಕೂಗುವೆ ಕೋಗಿಲೆ, ಅದೇ ಬೆಳಗು ಅದೇ ಬಾನು ಇಲ್ಲ ಮಾತ್ರ ನೀನು, ನಾವು ಗೆಳೆಯರು ಮುಂತಾದ  ಗೀತೆಗಳು  ಇಂದೂ ನಮ್ಮ ಕಿವಿಗಳಲ್ಲಿ ಝೇಂಕರಿಸುತ್ತಿರುತ್ತವೆ.  ಅಂದಿನ ಕಾಲದ ಪ್ರಸಿದ್ಧ ಸಂಗೀತಗಾರರಾದ ಮೈಸೂರು ಅನಂತಸ್ವಾಮಿ, ರಾಯಪ್ಪ ಸಂಗಡಿಗರು ಮುಂತಾದವರ ಗೋಷ್ಠಿಗಳಲ್ಲಿ  ಜಯಸಿಂಹರ ಕವನಗಳು ಅಂದಿನ ಪ್ರಸಿದ್ಧ ಕವಿಗಳಾದ ಬೇಂದ್ರೆ, ಕುವೆಂಪು, ಮಾಸ್ತಿ, ಅಡಿಗ, ನಿಸಾರ್ ಅಹಮದ್, ಲಕ್ಷ್ಮೀನಾರಾಯಣ ಭಟ್ಟ, ಎಚ್ ಎಸ್ ವಿ ಮುಂತಾದ ಕವಿಗೀತೆಗಳ ಮಧ್ಯೆ ಕಂಗೊಳಿಸುತ್ತಿದ್ದುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿತ್ತು.

ಜಯಸಿಂಹ ಖಾದ್ರಿ ಶಾಮಣ್ಣನವರ ಪ್ರೋತ್ಸಾಹದ ಮೇರೆಗೆ ‘ಕನ್ನಡ ಪ್ರಭ’ದಲ್ಲಿ ವಿಮರ್ಶೆ ಬರೆಯುತ್ತಿದ್ದರು.  ‘ಲೋಕವಾಣಿ’ ಪತ್ರಿಕೆಯಲ್ಲಿ ವ್ಯಕ್ತಿವಿಚಾರ ಬರೆಯುತ್ತಿದ್ದರು.  ಅಂತರರಾಷ್ಟೀಯ ಮಕ್ಕಳ ವರ್ಷಾಚರಣೆಯ ಸಂದರ್ಭದಲ್ಲಿ ಜಯಸಿಂಹರ ಹರಪನ ಹಳ್ಳಿ ಭೀಮವ್ವ, ಶರ ಸೇತುವೆ, ಏಕಲವ್ಯ, ಮಕ್ಕಳ ರಾಘವೇಂದ್ರ ಸ್ವಾಮಿಗಳು, ಹೆಳವನ ಕಟ್ಟೆ ಗಿರಿಯವ್ವ, ಹಾಡೋಣ ಬನ್ನಿ ಎಂಬ ಐದು ಪುಸ್ತಕಗಳು ಪ್ರಕಟಣೆಗೆ ಆಯ್ಕೆಗೊಂಡಿದ್ದವು.  ರೇಡಿಯೋಗಾಗಿ ಶಾರೀ ಮದುವೆ ಮುಂತಾದ ಅನೇಕ ನಾಟಕಗಳನ್ನು ಬರೆದಿದ್ದರು.  ಜಯಸಿಂಹರ ‘ಅರಿವಾಯಿತು ನಡೆವ ದಾರಿ’ ಕವನ ಸಂಕಲನಕ್ಕೆ ‘ಕುವೆಂಪು’ ಪ್ರತಿಷ್ಠಾನದ ಗೌರವ ಸಂದಿತು.  ಮುಂದೆ  ಅವರಿಗೆ ಆರ್ಯಭಟ ಗೌರವ, ಉದಯಭಾನು ಕಲಾ  ಸಂಘದ  ಗೌರವ  ಮುಂತಾದ  ಹಲವು  ಗೌರವಗಳೂ ಅರಸಿ  ಬಂದಿವೆ.  ಜಯಸಿಂಹರಿಂದ  ನೂರಕ್ಕೂ  ಹೆಚ್ಚು  ಕೃತಿಗಳು ಇದುವರೆಗೂ ಪ್ರಕಟಗೊಂಡಿವೆ.  ಹರಿದಾಸ ಸಾಹಿತ್ಯದಲ್ಲಿ ಅವರು ಮಾಡಿರುವ ಸಂಶೋಧನೆ, ಚಿಂತನೆ ಪ್ರಕಟಣೆಗಳು ಅಗಾಧವಾದುದು.  ದಾಸ ಸಾಹಿತ್ಯ ಮತ್ತು ಜನಪದಕ್ಕೂ ಇರುವ ನಂಟಿನ ಕುರಿತು ಅವರು ಹಲವಾರು ಕಮ್ಮಟಗಳಲ್ಲಿ ಉಪನ್ಯಾಸ ನೀಡಿದ್ದಾರೆ.  ಇತ್ತೀಚಿನ ವರ್ಷದಲ್ಲಿ  ವಿವಿಧ  ಹರಿದಾಸರ ಜೀವನ, ಸಾಧನೆ ಕುರಿತಾದ  ಜಯಸಿಂಹರ  40 ಕೃತಿಗಳು  ಪರಿಮಳ  ಗೆಳೆಯರ  ಬಳಗದ  ಮುಖೇನ  ಪ್ರಕಟಗೊಂಡಿವೆ.    

ನಾವಿದ್ದ ಎಚ್ಎಮ್‍ಟಿ ಸಂಸ್ಥೆಯಲ್ಲಿ ‘ಎಚ್ಎಮ್‍ಟಿ ಕನ್ನಡ ಸಂಪದ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ನಮ್ಮಂತಹ ಪಡ್ಡೆ ಹುಡುಗರಿಗೆ ಸ್ಪೂರ್ತಿ ನೀಡಿದ್ದೇ ಅಲ್ಲದೆ, ಹಗಲೂ ರಾತ್ರಿ ಶ್ರಮಿಸಿ ‘ಪ್ರತಿಭಾ’, ‘ಕನ್ನಡ ಕಿರಣ’, ‘ದರ್ಪಣ’ ಮುಂತಾದ ಪ್ರಕಟಣೆಗಳನ್ನು ನಡೆಸಿ, ಅತ್ಯುತ್ಕೃಷ್ಟ ಉಪನ್ಯಾಸಗಳನ್ನು ಏರ್ಪಡಿಸಿ ನಾವೆಲ್ಲ ಕನ್ನಡದ ಶ್ರೇಷ್ಠ ಸಾಹಿತಿಗಳ ಉಪನ್ಯಾಸಗಳನ್ನು ಕೇಳುವ ಸೌಭಾಗ್ಯವನ್ನು ಜಯಸಿಂಹ  ಕಲ್ಪಿಸಿಕೊಟ್ಟರು.  ಇಂತಹ ಸುಖ ನಮಗೆ ಹೆಚ್ಚು ಕಾಲ ಸಿಗುತ್ತದೆ ಎಂದು ನಾವು ಸಂತೋಷಿಸುತ್ತಿದ್ದ ದಿನಗಳಲ್ಲೇ ಜಯಸಿಂಹರು ಎಚ್ಎಮ್‍ಟಿ ಸಂಸ್ಥೆಯನ್ನು ಬಿಟ್ಟು ಎನ್‍ಟಿಟಿಎಫ್ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಅಪಾರ ಹೆಸರು ಮಾಡಿದರು.  ಸಾರ್ವಜನಿಕ ಸಂಪರ್ಕ ಕ್ಷೇತ್ರದ ಕುರಿತಾಗಿ ಪುಸ್ತಕ ಬರೆದರು.  ಉತ್ತಮ ಸಾರ್ವಜನಿಕ ಸಂಪರ್ಕ ಕಾರ್ಯಸಾಧನೆಗಾಗಿ ನೀಡುವ ಪ್ರಶಸ್ತಿ ಗಳಿಸಿದರು.  ತಾವು ಇಷ್ಟೆಲ್ಲಾ ಸಾಧಿಸಿದರೂ ಸದಾ ಬಿಡುವಿಲ್ಲದೆ ಕಾರ್ಯ ನಿರತರಾಗಿದ್ದರೂ ಏನೊಂದು ತಿಳಿಯದೆ ‘ಕನ್ನಡ ಸಂಪದ’ವನ್ನು ನಡೆಸುವ ಜವಾಬ್ಧಾರಿಯನ್ನು ಹೊತ್ತಿದ್ದ ನಮ್ಮಂತಹ ಗೆಳೆಯರು ಅವರ ಮಾರ್ಗದರ್ಶನ ಬಯಸಿದಾಗಲೆಲ್ಲಾ ನಮಗೆ ಬಲವಾಗಿದ್ದರು.

ಕಾಲ ಹಲವಾರು ಬದಲಾವಣೆಗಳು ತರುತ್ತವೆ.  ಈ ಹೊಸ ಶತಮಾನ ಪ್ರಾರಂಭವಾದಾಗ ನಾವುಗಳು ಯಾರು ಎಲ್ಲಿದ್ದೇವೆ ಎಂಬುದು ಅರಿಯದಂತೆ ಬೇರೆ ಬೇರೆ ಸ್ಥಳಗಳಲ್ಲಿ ಚದುರಿಹೋಗಿದ್ದೆವು.  ಇಂದಿನ ವೆಬ್ ಅಂತರ್ಜಾಲದ ಫೇಸ್ಬುಕ್ ಮಾಧ್ಯಮದಲ್ಲಿ ಪುನಃ ಜಯಸಿಂಹರನ್ನು ಭೇಟಿಯಾಗುವ ಅವಕಾಶ ದೊರಕಿತು.  ಇಂದು ಪ್ರೊ. ಜಯಸಿಂಹ ಪತ್ರಿಕೋದ್ಯಮ ವಿಚಾರದಲ್ಲಿ ಪ್ರಾಧ್ಯಾಪನ ನಡೆಸುತ್ತಿದ್ದಾರೆ. ಅವರಿಗೆ ಈ ಕ್ಷೇತ್ರ ಡಾಕ್ಟರೇಟ್ ಗೌರವವನ್ನೂ ತಂದಿದೆ.

ಅಂದಿನ ದಿನಗಳಲ್ಲಿ ಜಯಸಿಂಹರಿಂದ ಸ್ಥಾಪಿತವಾದ ಪರಿಮಳ ಗೆಳೆಯರ ಬಳಗದ ಪರಿಮಳದ ಸೌಗಂಧ ನಾನು ಆಗಾಗ ನೋಡುತ್ತಿದ್ದ ಹನುಮಂತನಗರದ ಪರಿಸರದಲ್ಲಿ ಸುದೀರ್ಘವಾಗಿ ವ್ಯಾಪಿಸಿತ್ತು.   ಆ ಪರಿಮಳ ಗೆಳೆಯರ ಬಳಗ ಸಾಮಾಜಿಕ, ಸಾಹಿತ್ಯ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದೆ.  ನಾಡಿನ ಎಲ್ಲ ಕ್ಷೇತ್ರದ ಮಹಾನ್ ಸಾಧಕರನ್ನು ಗೌರವಿಸುತ್ತ ಬಂದಿದೆ. ದಾಸ ಸಾಹಿತ್ಯದ ಕುರಿತಾಗಿ ಮಹತ್ಕೃತಿಗಳನ್ನು ಕೊಡುಗೆ ನೀಡಿದೆ. ಅಂತೆಯೇ ಜಯಸಿಂಹ ನಮ್ಮಲ್ಲಿ ಭಿತ್ತಿದ್ದ ಕನ್ನಡದ ಪ್ರೀತಿಯ ಪರಿಮಳ ನಮ್ಮಲ್ಲಿ ಹಾಸುಹೊಕ್ಕಾಗಿದೆ.  ಈ ನಮ್ಮ ಪ್ರೀತಿಯ ಜಯಸಿಂಹರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳು.


On the birth day of my friend, guide, founder of HMT Kannada Sampada, poet, scholar in Dasa Sahithya and Professor in journalism Dr. Jayasimha Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ