ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೋಮಯಾಜುಲು


 ಜೆ.ವಿ. ಸೋಮಯಾಜುಲು 


ಶಂಕರಾಭರಣಂ ಚಿತ್ರದ 'ಓಂಕಾರನಾದಾನುಸಂಧಾನ'ದ ಶಂಕರಶಾಸ್ತ್ರಿ, 'ಗಂಧರ್ವಗಿರಿ'ಯ 'ನರಸಿಂಹ ಮಂತ್ರವೊಂದಿರಲು ಸಾಕು' ಹಾಡಿದ ಅರ್ಚಕ ಮುಂತಾದ ಅಭಿನಯ ನೀಡಿದ ಸೋಮಯಾಜುಲು ಮನದಿಂದ ಅಳಿಸಲಾಗದ ಕಲಾವಿದ.  2004ರ ಏಪ್ರಿಲ್ 27ರಂದು ಈ ಲೋಕವನ್ನಗಲಿದ ಇವರ ಸಂಸ್ಮರಣಾ ದಿನವಿದು.

ಜೊನ್ನಲಗಡ್ಡ ವೆಂಕಟ ಸೋಮಯಾಜುಲು 1928ರ ಜೂನ್ 30ರಂದು ಶ್ರೀಕಾಕುಲಮ್ ಜಿಲ್ಲೆಯ ಕಾಮೇಶ್ವರಿ ಪೇಟ, ನರಸನ್ನ ಪೇಟ ಬಳಿಯ ಲುಕಾಲಮ್ ಅಗ್ರಹಾರಂ ಎಂಬಲ್ಲಿ ಜನಿಸಿದರು.  ಅವರ ತಂದೆಯವರು ಪಾನನಿರೋಧ ಮತ್ತು ಕಂದಾಯ ಇಲಾಖೆಯಲ್ಲಿ ಇನ್ಸ್ಪೆಕ್ಟರಾಗಿ ಗುಡಿವಾಡ ಮತ್ತು ಇತರ ಕಡೆಗಳಲ್ಲಿ ಸೇವೆಯಲ್ಲಿದ್ದರು. ಸೋಮಯಾಜುಲು ಅವರ ಬಾಲ್ಯ ವಿಜಯನಗರಂನಲ್ಲಿ ಕಳೆಯಿತು.  ಅಲ್ಲಿ ಅವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಸೋಮಯಾಜುಲು ಅವರ ಕಲಾ ಆಸಕ್ತಿಯಲ್ಲಿ ಅವರ ತಾಯಿ ಶಾರದಮ್ಮ ಅವರ ಪ್ರೋತ್ಸಾಹ ಪ್ರೇರಣೆಗಳು ಅಪಾರವಾಗಿತ್ತು.

ಸುಮಾರು 5 ದಶಕಗಳ ಕಾಲ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆಯಲ್ಲಿ ಸೋಮಯಾಜುಲು ಅವರ ಅಭಿನಯ ವ್ಯಾಪಿಸಿತ್ತು. ಗುರಜಾಡ ಅಪ್ಪರಾವ್‌ ಅವರ ಪ್ರಸಿದ್ಧ ಕೃತಿ ಆಧರಿಸಿದ 'ಕನ್ಯಾಶುಲ್ಕಂ' ನಾಟಕದಲ್ಲಿ ಸೋಮಯಾಜುಲು ತಮ್ಮ ಸಹೋದರ ನಟ ಜೆ. ವಿ. ರಾಮಮೂರ್ತಿ ಅವರ ಜೊತೆಗೂಡಿ ಅಭಿನಯಿಸಿ ನಿರ್ವಹಿಸಿದ್ದ ರಾಮಪ್ಪ ಪಂತುಲು ಪಾತ್ರ ಅವರಿಗೆ ಆಂಧ್ರಾದ್ಯಂತ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.  ಸುಮಾರು 45 ವರ್ಷಗಳ ಸುದೀರ್ಘ ವ್ಯಾಪ್ತಿಯಲ್ಲಿ, ಆ ನಾಟಕದ 500ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಸೋಮಯಾಜುಲು ಕಾಣಿಸಿಕೊಂಡಿದ್ದರು. 

ಸರ್ಕಾರಿ ಅಧಿಕಾರಿಗಳಾಗಿದ್ದ ಸೋಮಯಾಜುಲು ಬಹುಕಾಲ ಡೆಪ್ಯೂಟಿ ಕಲೆಕ್ಟರ್ ಆಗಿದ್ದರು.  ನಿವೃತ್ತಿಗೆ ಮುಂಚೆ ಡೈರೆಕ್ಟರೇಟ್ ಆಫ್ ಕಲ್ಚರಲ್ ಅಫೇರ್ಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದರು.

1980ರಲ್ಲಿ ಮಹಾನ್ ನಿರ್ದೇಶಕ ಕೆ. ವಿಶ್ವನಾಥನ್ ನಿರ್ದೇಶನದ  'ಶಂಕರಾಭರಣಂ' ಚಿತ್ರದ ಶಂಕರಶಾಸ್ತ್ರಿಗಳ ಪಾತ್ರದಲ್ಲಿ ಸೋಮಯಾಜುಲು ಅವರ ತನ್ಮಯತೆ ಸಮಸ್ತ ಸಿನಿಮಾಲೋಕವನ್ನೇ ಮೋಡಿ ಮಾಡಿತ್ತು.  ಇದಲ್ಲದೆ ತ್ಯಾಗಯ್ಯ, ಸಪ್ತಪದಿ, ಸ್ವಾತಿಮುತ್ಯಂ, ಕನ್ನಡದ 'ಗಂಧರ್ವ ಗಿರಿ', ತಮಿಳಿನ ಶ್ರೀ ರಾಘವೇಂದ್ರರ್, ಹಿಂದಿಯ 'ಜಾಗ್ ಉಟಾ ಇನ್ಸಾನ್' ಮುಂತಾದ ಚಿತ್ರಗಳಲ್ಲೂ ಅವರ ಅಭಿನಯ ಮನೋಜ್ಞವಾಗಿತ್ತು.  ಭಾರತೀಯ ಸಂಸ್ಕೃತಿಯ ಚಿಂತನೆಯ ಜೊತೆಗೂಡಿದ ಕ್ರಾಂತಿಕಾರಿ ಚಿಂತನೆಯನ್ನು ಮೇಳೈಸಿದ ಅವರ ಪಾತ್ರ ಅಭಿವ್ಯಕ್ತಿಗಳು ಮರೆಯಲಾಗದಂತದ್ದು. ಈ ಚಿತ್ರಗಳಲ್ಲಿ ಅವರು ಸಂಗೀತದಲ್ಲಿ ಲೀನವಾಗಿದ್ದಂತೆ ಮೂಡಿಸಿದ್ದ ಅಭಿನಯಗಳಂತೂ ಹೃದಯಸ್ಪರ್ಶಿ.

ಸೋಮಯಾಜುಲು ಅವರ ಸುಮಾರು 150 ಚಿತ್ರಗಳ ಸಿನಿಮಾಲೋಕದ  ಇತರ ಪ್ರಮುಖ ಚಿತ್ರಗಳಲ್ಲಿ ಅಲ್ಲರಿ ಪಿಲ್ಲಡು, ನೆಲವಾಂಕ, ರೌಡಿ ಅಲ್ಲುಡು,  ವಿಜೇತಾ, ಅಪ್ಪುಲ ಅಪ್ಪಾರಾವ್, ವಂಶವೃಕ್ಷಂ ಮುಂತಾದವು ಸೇರಿವೆ.  ತಮ್ಮ ಪ್ರಸಿದ್ಧ ನಾಟಕವಾದ 'ಕನ್ಯಾ ಶುಲ್ಕಂ' ಅನ್ನು ಅವರು 13 ಕಂತುಗಳ ಧಾರಾವಾಹಿಯಾಗಿ ಕಿರುತೆರೆಯಲ್ಲಿ ಮೂಡಿಸಿದ್ದರು.  ಸಂತ 'ಅಭಯ ಚರಣ್' ಜೀವನಚಿತ್ರಣದ ಸರಣಿಯಲ್ಲಿ ಅವರು ಭಕ್ತಿವೇದಾಂತ ಪ್ರಭುಪಾದರ ಪಾತ್ರ ನಿರ್ವಹಿಸಿದ್ದರು.

ಸೋಮಯಾಜುಲು ಅವರು ಹೈದರಾಬಾದ್ - ಸಿಕಂದರಾಬಾದ್ ಜಂಟಿ ನಗರದಲ್ಲಿ ರಂಗಕಲೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ತಮ್ಮ ಸಮಕಾಲೀನ ಸಮಾನಮನಸಿನ ಕಲಾವಿದರೊಂದುಗೂಡಿ 'ರಸರಂಜನಿ' ಸಂಘಟನೆಯನ್ನು ಸ್ಥಾಪಿಸಿದ್ದರು.

ಭಾರತ ಚಿತ್ರರಂಗದ ಶತಮಾನೋತ್ಸವ ಸಂದರ್ಭದಲ್ಲಿ ಫೋರ್ಬ್ಸ್ 25 ಪ್ರಭಾವಿ ಪಾತ್ರನಿರ್ವಹಣೆಗಳ ಪಟ್ಟಿಯಲ್ಲಿ ಸೋಮಯಾಜುಲು ಅವರನ್ನು ಹೆಸರಿಸಿದೆ.

ಸೋಮಯಾಜುಲು ಅವರು 2004ರ ಏಪ್ರಿಲ್ 27ರಂದು ಈ ಲೋಕವನ್ನಗಲಿದರು. ಅವರ ಹಲವು ಪಾತ್ರನಿರ್ವಹಣೆಗಳನ್ನು ಕಂಡವರಿಗೆ ಅವರೊಬ್ಬ ಅಮರ ಕಲಾವಿದ.

On the death anniversary of unforgettable J. V. Somayajulu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ