ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಿಂಟು ನೆನಪು


 ಚಿಂಟು ನೆನಪು


ಓ ಚಿಂಟು, ರಿಷಿ, ಮುದ್ದು ಮುಖದ ಹುಡುಗ ಹೋಗಿ ಒಂದು ವರ್ಷ ಆಯ್ತು. ಆತ ನಿಧನರಾದದ್ದು 2020ರ ಏಪ್ರಿಲ್ 30ರಂದು.

ಚಿಂಟು ಜನಿಸಿದ್ದ 1952ರ ಸೆಪ್ಟೆಂಬರ್ 4ರಂದು.
ಚಿಂತು ಅಂದರೆ ಪ್ರೇಮ.  ಆತ ಏನೇನೇ ಪಾತ್ರ ಮಾಡಿರಬಹುದು.  ಪ್ರೇಮ ಅಂದರೆ ಚಿಂತು.  ಸಾಮಾನ್ಯವಾಗಿ ಹಲವು ಹೀರೋಗಳನ್ನ ನೋಡಿದರೆ ಈ ಮುಖಗಳಿಗೆ ಅಷ್ಟು ಚೆನ್ನಾಗಿರೋ ನಾಯಕಿಯರು ಪ್ರೇಮಕ್ಕೆ ಹಾತೊರೆಯೋದೇ ಅಪಕ್ವ ಕಲ್ಪನೆ ಅನಿಸುತ್ತೆ! ನಾ ಹೇಳೋದು ನಾವು ಪಡ್ಡೆ ಹುಡುಗರಾಗಿದ್ದಾಗ ಇದ್ದ ಹೀರೋ ಹೀರೋಯಿನ್ಗಳ ಕಲ್ಪನಾ ಲೋಕದ ಕಾಲದಲ್ಲಿಯ ಕಲ್ಪನೆಗಳಲ್ಲಿ.  ಆದರೆ ರಿಷಿ ಮಾತ್ರಾ ಸ್ಪೆಷಲ್. ಆತನ ಅಂದಿನ ಯುವ ಮುದ್ದುತನವನ್ನ ಯಾವುದೇ ಹುಡುಗಿ ಬಯಸದೆ ಇದ್ದಿರಲಿಕ್ಕೆ ಸಾಧ್ಯವೇ ಇಲ್ಲ.

ಮೇರಾ ನಾಮ್ ಜೋಕರ್ ಚಿತ್ರದ ಬಾಲಪಾತ್ರದಲ್ಲೂ ರಿಷಿ ಪ್ರೇಮವನ್ನು ತುಂಬಿಕೊಂಡೇ ಬಂದವ.  ಬಾಬ್ಬಿ, ಲೈಲಾ ಮಜ್ನು, ಸರ್ಗಂ, ಕರ್ಜ್, ಪ್ರೇಮ್ ರೋಗ್, 
ಹಮ್ ಕಿಸೀಸೆ ಕಮ್ ನಹಿ, ಸಾಗರ್, ಚಾಂದಿನಿ, ನಗೀನಾ, ಬೋಲ್ ರಾಧಾ ಬೋಲ್, ಯೇಹ್ ವಾದಾ ರಹಾ, ಖೇಲ್ ಖೇಲ್ ಮೆ,ಕಭೀ ಕಭೀ,ಬದಲ್ತೆ ರಿಷ್ತೆ, ಆಪ್ ಕೆ ದೀವಾನೆ, ಅಮರ್ ಅಕ್ವರ್ ಆಂಥೋನಿ ಹೀಗೆ ಅನೇಕ ಚಿತ್ರಗಳಲ್ಲಿ ರಿಷಿಯ ಮುದ್ದು ಮುಖ ನೆನಪಾಗುತ್ತೆ. ರಾಜ್ ಕಪೂರ್, ಶಶಿ ಕಪೂರ್, ಶಮ್ಮಿ ಕಪೂರ್ ಇವರು ಮೂವರದ್ದು ಸೇರಿದ ಮತ್ತು ಮೂವರೂ ಸೇರಿದರೂ ಅಲ್ಲಿ ಇಲ್ಲದ ಒಂದು ವಿಶಿಷ್ಟ ಕಾಂಬೋ ಮಿಂಚು, 'ರಿಷಿ'ಯಲ್ಲಿತ್ತು.

ಪ್ರೇಮ ಎಂಬುದು ಮನುಷ್ಯ ಜೀವನದಲ್ಲಿನ ಪ್ರೀತಿ ಕಾಮನೆಗಳ ನಡುವಣ,  ಪ್ರತಿ ಜೀವಿಯಲ್ಲಿನ ಒಂದು ಹಿತವಾದ ಅಂತಃ ಅನುಭವ.  ಇದಕ್ಕೆ ಪ್ರಕೃತಿ ಮತ್ತು ವಾತಾವರಣದಲ್ಲಿ ಹಲವು ರೀತಿಯಲ್ಲಿ ಪ್ರಲೋಭನಾ ಸೆಳೆತಗಳ ಸುಳಿಗಳಿವೆ.  ಕಾವ್ಯ, ನೃತ್ಯ ಮತ್ತು ಅಭಿನಯ ಅಭಿವ್ಯಕ್ತಿಗಳು ಈ ಮನುಷ್ಯನ ಸುಖವನ್ನು ಹಿತವಾಗಿಸಲೂ ಬಹುದು ಇಲ್ಲವೇ ರಾಢಿಗೊಳಿಸಲೂಬಹುದು.  ರಿಷಿ ನಮ್ಮ ಕಾಲದ ರೊಮಾಂಟಿಕ್ ಕಲ್ಪನೆಯ ಸೊಗಸಿನ ಹುಡುಗ.  ಹೀಗೆ ಇರಬೇಕು ಅಂತ ಆಸೆ ಹುಟ್ಟಿಸುವ ಚೆಲ್ಲು ಚೆಲ್ಲುತನ, ಸೌಂದರ್ಯ, ಅಂತರಾಳದ ಅನುಭೂತಿ ಎಲ್ಲವೂ ಆತನಲ್ಲಿ ಸೊಗಸಾಗಿ ಹಿತಮಿತವಾಗಿ ಹೊರಸೂಸುತ್ತಿತ್ತು.

ರಿಷಿ,
ನೀನು ಬದುಕಿಂದ ಮಾತ್ರಾ ಹೊರನಡೆಯಲಿಲ್ಲ, 
ನಮ್ಮೊಳಗ ಒಡಲಿಂದಲೂ ಏನೋ 
ಹೊರಹೋದಂತೆ 
ಅನಿಸಿ ಹೋದೆ.

On the day Rishi Kappor left

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ