ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಕಣಾಚಾರಿ


 ಜಕಣಾಚಾರಿ


ಬೇರೆ ಬೇರೆ ದೇಶಗಳ ಮಹಾನ್ ಕಲಾವಿದರ ಬದುಕಿನ ಬಗ್ಗೆ ನಿರ್ದಿಷ್ಟವೇನೋ ಎಂದು ಗೋಚರಿಸುವ ಸಂಗತಿಗಳು ನಮ್ಮ ಭಾರತೀಯ,  ಅದರಲ್ಲೂ ಹಿಂದೂ ಸಂಸ್ಕೃತಿಯ ನಿರ್ಮಾಣಗಳ ಬಗ್ಗೆ ಕಾಣಸಿಗುವುದಿಲ್ಲ. ಹೆಚ್ಚೆಂದರೆ ಆ ಕಾಲದ ಒಬ್ಬ ರಾಜನ ಹೆಸರು ಬಂದರೆ ಹೆಚ್ಚು.  ಉಳಿದಂತೆ ಕಥೆಗಳ ರೂಪದಲ್ಲಿ ಕಾಣುವುದೇ ಹೆಚ್ಚು.  ಅಪೂರ್ವ ಶಿಲ್ಪಕಲೆಗಳಿಗೆ ಹೆಸರಾದ ಜಕಣಾಚಾರಿ ನಮಗೆ ಸಾಕಷ್ಟು ಕೇಳಿಬರುವ ಹೆಸರು. ಆತನ ಬಗ್ಗೆ ಒಂದಷ್ಟು ಚಿಂತಿಸೋಣ.

ಜಕಣಾಚಾರಿ ಕರ್ನಾಟಕದ ದಕ್ಷಿಣ ಭಾಗದ ಅನೇಕ ಸುಂದರ ದೇವಾಲಯಗಳನ್ನು ಕಟ್ಟಿದ ರೂವಾರಿಯೆಂದು ನಂಬಲಾಗಿರುವ ವ್ಯಕ್ತಿ. ಆದರೆ ಇವನ ಬಗ್ಗೆ ಖಚಿತವಾಗಿ ಏನೂ ತಿಳಿದುಬಂದಿಲ್ಲ. ಯಾವೊಂದು ಸುಂದರವಾದ ಹೊಯ್ಸಳ ದೇವಾಲಯವಿದ್ದರೂ ಅದನ್ನು ಆ ಊರಿನವರು ಜಕಣಾಚಾರಿಯ ಕಟ್ಟಡ ಎನ್ನುತ್ತಾರೆ. 

ಕೋಲಾರ, ಚಿತ್ರದುರ್ಗ ಜಿಲ್ಲೆಗಳಲ್ಲಿರುವ ದ್ರಾವಿಡ ಶೈಲಿಯ ಕಟ್ಟಡಗಳನ್ನೂ ಜಕಣಾಚಾರಿಯೇ ಕಟ್ಟಿದನೆಂಬ ನಂಬಿಕೆ ಅಲ್ಲಿನವರಿಗಿದೆ. ಕುರುಡಮಲೆಯ ಸೋಮೇಶ್ವರ ದೇವಾಲಯದ ಹಿಂದಿನ ಭಾಗವನ್ನು ಜಕಣಾಚಾರಿಯೂ ಮುಂದಿನ ನವರಂಗವನ್ನು ಅವನ ಮಗನೂ ಕಟ್ಟಿದರೆಂದೂ, ಅಲ್ಲಿನ ಜಾಲಂಧ್ರವೊಂದರ ಮೇಲಿನ ಮೂರ್ತಿಗಳೆರಡನ್ನು ಜಕಣಾಚಾರಿ ಮತ್ತು ಅವನ ಮಗ ಕಡೆದರೆಂದೂ ಹೇಳುತ್ತಾರೆ. ಇವರ ವಿಷಯದಲ್ಲಿ ಹುಟ್ಟಿಕೊಂಡಿರುವ ಕಥೆಗಳು ಹಲವಾರು.

ತುಮಕೂರು ಜಿಲ್ಲೆಯ ಕೈದಾಳ ಜಕಣಾಚಣಾರಿಯ ಹುಟ್ಟೂರು-ಎಂದು ಹೇಳಲಾಗಿದೆ. ಇವನು ಚಿಕ್ಕ ವಯಸ್ಸಿನಲ್ಲಿಯೇ ತನ್ನ ಹೆಂಡತಿ ಮತ್ತು ಮಗುವನ್ನು ಬಿಟ್ಟು ಊರೂರು ಅಲೆಯುತ್ತ ಅಲ್ಲಲ್ಲಿ ದೇವಾಲಯಗಳನ್ನು ನಿರ್ಮಿಸುತ್ತ ಹತ್ತಾರು ವರ್ಷಗಳನ್ನು ಕಳೆದ. 

ಇವನ ಶಿಲ್ಪ ವೈಖರಿಯ ಖ್ಯಾತಿ ಹೊಯ್ಸಳ ಬಲ್ಲಾಳ ರಾಯನ ಕಿವಿ ಮುಟ್ಟಿತು. ತನ್ನ ರಾಜಧಾನಿಯಲ್ಲಿ ಸುಂದರವಾದ ದೇವಾಲಯಗಳನ್ನು ನಿರ್ಮಿಸುವಂತೆ ಜಕಣಾಚಾರಿಯನ್ನು ಆತ ಕೇಳಿಕೊಂಡ. ಅದರಂತೆ ಸರ್ವಾಂಗ ಸುಂದರವಾದ ದೇವಾಲಯವೊಂದನ್ನು ಜಕಣಾಚಾರಿ ಪೂರೈಸಿದ ಅಷ್ಟು ಹೊತ್ತಿಗೆ ಅವನ ಮಗ ಡಂಕಣಾಚಾರಿ ಹುಡುಗನಾಗಿದ್ದರೂ ಶಿಲ್ಪವಿದ್ಯೆಯಲ್ಲಿ ಪ್ರವೀಣನಾಗಿದ್ದ. ತಂದೆ ದೇಶ ಅಲೆಯಲು ಹೋದುದನ್ನು ಅವನು ತಾಯಿಯಿಂದ ತಿಳಿದು, ತಂದೆಯನ್ನು ಹುಡುಕುತ್ತ ಅಲೆದಾಡಿ, ದೇವಾಲಯ ನಿರ್ಮಾಣವಾಗುತ್ತಿದ್ದ ಹೊಯ್ಸಳ ರಾಜಧಾನಿಗೆ ಬಂದ. ಅಲ್ಲಿ ಪ್ರತಿಷ್ಠೆ ಮಾಡಲು ಜಕಣಾಚಾರಿ ಸಿದ್ಧಪಡಿಸಿಟ್ಟಿದ್ದ ಮೂರ್ತಿಯನ್ನು ಕಂಡ. ಅದರಲ್ಲಿ ದೋಷವಿರುವುದೆಂದು ಡಂಕಣಾಚಾರಿ ಹೇಳಿದಾಗ, ಹಾಗೆಂದು ತೋರಿಸಿಕೊಟ್ಟರೆ ತನ್ನ ಕೈಯನ್ನು ಕತ್ತರಿಸಿ ಕೊಳ್ಳುವುದಾಗಿ ಜಕಣಾಚಾರಿ ಪಣ ತೊಟ್ಟ. ಚಂದನವನ್ನು ತೆಯ್ದು ಮೂರ್ತಿಯ ಹೊಟ್ಟೆಯ ಭಾಗಕ್ಕೆ ಬಳಿದಾಗ ಹೊಕ್ಕಳಿನ ಭಾಗದಲ್ಲಿ ಮಾತ್ರ ಅದು ಹಸಿಯಾಗಿ ಉಳಿಯಿತು. ಆ ಸ್ಥಳದಲ್ಲಿ ವಿಗ್ರಹವನ್ನು ಒಡೆದಾಗ ಆ ಭಾಗ ಟೊಳ್ಳಾಗಿದ್ದುದನ್ನೂ ಅದರಲ್ಲಿ ಸ್ವಲ್ಪ ನೀರು, ಮರಳು ಮತ್ತು ಕಪ್ಪೆ ಇದ್ದುದನ್ನೂ ಕಂಡ ಜಕಣಾಚಾರಿ ತನ್ನ ಕೈಯನ್ನು ತತ್ ಕ್ಷಣ ಕತ್ತರಿಸಿಕೊಂಡ. ಜಕಣಾಚಾರಿ ತನ್ನ ತಂದೆಯೆಂದು ಡಂಕಣಾಚಾರಿಗೂ ಆ ಹುಡುಗ ತನ್ನ ಮಗನೇ ಎಂದು ಜಕಣಾಚಾರಿಗೂ ತಿಳಿದದ್ದು ಆಮೇಲೇಯೇ. ಮುಂದೆ ದೈವಪ್ರೇರಣೆಯಂತೆ ಜಕಣಾಚಾರಿ ತನ್ನ ಹುಟ್ಟೂರಿನಲ್ಲಿ ಒಂದೇ ಕೈಯಲ್ಲಿಯೇ ಕೇಶವ ದೇವಾಲಯವನ್ನು ಕಟ್ಟಿದ. ಅದು ಪೂರೈಸುತ್ತ ಬಂದ ಹಾಗೆ ಇವನ ಕೈ ಮೊದಲಿನಂತೆ ಬೆಳೆಯಿತಂತೆ. ಇದು ಜಕಣಾಚಾರಿಯ ಬಗ್ಗೆ ಪ್ರಚಲಿತವಾಗಿರುವ ಒಂದು ಪ್ರಸಿದ್ಧ ಕಥೆ.

ಬೇಲೂರಿನಲ್ಲಿ ಚೆನ್ನಕೇಶವ ದೇವಾಲಯದ ಪಕ್ಕದಲ್ಲಿರುವ ದೇವಾಲಯವನ್ನು ಕಪ್ಪೆಚೆನ್ನಿಗರಾಯನ ದೇವಾಲಯವೆಂದು ಕರೆಯುತ್ತಾರೆ. ದೋಷಯುಕ್ತವಾದ ಮೂರ್ತಿಯನ್ನು ಈ ದೇವಾಲಯದಲ್ಲಿ ಪ್ರತಿಷ್ಠಿಸಲಾಯಿತೆಂದು ಪ್ರತೀತಿ. ಈಗ ಅಲ್ಲಿ ದೇವರಿಗೆ ಪೂಜೆಯಿಲ್ಲ. ಆದರೆ ನಿಜಸಂಗತಿಯೆಂದರೆ ವಿಷ್ಣುವರ್ಧನ ವಿಜಯ ನಾರಾಯಣ ದೇವಾಲಯವನ್ನು ನಿರ್ಮಿಸುವಾಗ ಅವನ ರಾಣಿ ಶಾಂತಲೆಯೂ ಅದರ ಪಕ್ಕದಲ್ಲಿಯೇ ಒಂದು ಕೇಶವ ದೇವಾಲಯವನ್ನು ನಿರ್ಮಿಸಿದಳು. ಈ ವಿಷಯವನ್ನು ಮೂರ್ತಿಯ ಕೈ ಭಿನ್ನವಾದುದರಿಂದ ಬಹುಶಃ ಅಲ್ಲಿ ಪೂಜೆ ನಿಂತುಹೋಗಿರಬೇಕು. ಈ ದೇವಾಲಯಗಳ ನಿರ್ಮಾಣದಲ್ಲಿ ಹತ್ತಾರು ರೂವಾರಿಗಳ ಕೈವಾಡವಿರುವುದು ಅಲ್ಲಿಯ ಶಾಸನಗಳಿಂದ ವ್ಯಕ್ತವಾಗುತ್ತದೆ. ಬಳ್ಳಿಗಾಮೆಯ ದಾಸೋಜ, ಅವನ ಮಗ ಚಾವಣ, ಗದುಗಿನ ನಾಗೋಜ, ಲೊಕ್ಕಿಗುಂಡಿಯ ಚೌಂಡೋಜ ಮುಂತಾದ, ಕನ್ನಡನಾಡಿನ ಬೇರೆ ಬೇರೆ ಭಾಗಗಳು, ಶಿಲ್ಪಿಗಳು ಈ ದೇವಾಲಯಗಳಲ್ಲಿ ಕಂಡುಬಂದರೂ ಜಕಣಾಚಾರಿಯ ಹೆಸರು ಮಾತ್ರ ಎಲ್ಲಿಯೂ ಇಲ್ಲ. 

ತುರುವೇಕೆರೆಯಲ್ಲಿರುವ ಮೂಲೆ ಸಿಂಗೇಶ್ವರ ದೇವಾಲಯದ ಮೇಲಿರುವ ಜಕಣ್ಣ ಎಂಬ ರೂವಾರಿಯ ಹೆಸರು 13 ನೇ ಶತಮಾನಕ್ಕೆ ಸೇರಿದ್ದು. ಆದ್ದರಿಂದ ಪ್ರಸಿದ್ಧ ಜಕಣಾಚಾರಿಯೊಡನೆ ಅವನ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ.

ಸೋಮನಾಥಪುರದ ಕೇಶವದೇವಾಲಯವನ್ನು ಜಕಣಾಚಾರಿಯೆ ನಿರ್ಮಿಸಿದನೆಂಬ ಪ್ರತೀತಿ ಇದೆ. ಸುಂದರವಾದ ಈ ದೇವಾಲಯ ಇಂದ್ರನ ಅಮರಾವತಿಯಲ್ಲಿರಲು ಯೋಗ್ಯವೆಂದು ದೇವತೆಗಳು ಅದನ್ನು ಮೇಲಕ್ಕೆ ಒಯ್ಯಲಾರಂಭಿಸಿದರೆಂದೂ ಅದು ಮೇಲೇರುತ್ತಿದ್ದುದನ್ನು ಕಂಡ ಜಕಣಾಚಾರಿ ತನ್ನ ಕೈಯಲ್ಲಿದ್ದ ಉಳಿಯನ್ನು ಅದರ ಕಡೆಗೆ ಎಸೆದುದರಿಂದ ಮುಕ್ಕಾಗಿ ಅದು ಭೂಮಿಗಿಳಿಯಿತೆಂದೂ ಹಾಗೆ ಬೀಳುವಾಗ ಸ್ವಲ್ಪ ಓರೆಯಾದುದರಿಂದಲೆ ಅದರ ಮುಂದಿರುವ ಗರುಡಗಂಬ ಈಗ ವಾಲಿರುವಂತೆ ಕಾಣುವುದೆಂದೂ ಮತ್ತೊಂದು ಕಥೆ, ಬೇಲೂರಿನ ದೇವಾಲಯಕ್ಕೂ ಸೋಮನಾಥಪುರದ ದೇವಾಲಯಕ್ಕೂ 250 ವರ್ಷಗಳ ಅಂತರವಿರುವುದು ವಿದಿತ. ಕೈದಾಳದಲ್ಲಿ ಜಕಣಾಚಾರಿ ನಿರ್ಮಿಸಿದನೆಂದು ಹೇಳುವ ಕೇಶವ ದೇವಾಲಯ ಸಾಮಾನ್ಯ ಕಟ್ಟಡ. ಇದು ಬಹುಶಃ ವಿಜಯನಗರದ ಕಾಲದಲ್ಲಿ ನಿರ್ಮಿತವಾದ್ದು. ಅಲ್ಲಿಯೂ ಕಂಬವೊಂದರ ಮೇಲಿರುವ ಭಕ್ತ ವಿಗ್ರಹವನ್ನು ಜಕಣಾಚಾರಿಯೆಂದು ತೋರಿಸುತ್ತಾರೆ. ಆ ದೇವಾಲಯದಲ್ಲಿರುವ ಮೂರ್ತಿ ಹೊಯ್ಸಳ ಶಿಲ್ಪವೇ ಆದರು ಅದನ್ನು ಬೇರಡೆಯಿಂದ ತಂದು ಅಲ್ಲಿ ಪ್ರತಿಷ್ಠೆ ಮಾಡಿದುದಕ್ಕೆ ದಾಖಲೆಯಿದೆ. ಈ ಎಲ್ಲ ಕಾರಣಗಳಿಂದ ಜಕಣಾಚಾರಿ ಎಂಬ ವ್ಯಕ್ತಿ ಇದ್ದಾನೆ ಎಂಬ ಸಂಶಯ ಮೂಡುವುದು ಸಹಜ. 

ದಕ್ಷಿಣಾಚಾರ್ಯ ಎಂಬ ಒಂದು ಶಿಲ್ಪಸಂಪ್ರದಾಯವನ್ನು ಪ್ರತಿಬಿಂಬಿಸುವ ಒಬ್ಬ ಕಾಲ್ಪನಿಕ ವ್ಯಕ್ತಿ ಜನಮನದಲ್ಲಿ ಮೂಡಿ ಬಂದಿರಬೇಕು. ಹೊಯ್ಸಳರೂ ಅವರ ಅಧಿಕಾರಿಗಳು ಹೇರಳವಾಗಿ ನಿರ್ಮಿಸಿರುವ ಸುಂದರ ದೇವಾಲಯಗಳ ನಿರ್ಮಾಣ ಆ ವಂಶದ ನಾಶದೊಂದಿಗೇ ನಿಂತುಹೋಗಿ, ವಿಜಯನಗರದ ಅರಸರು ದ್ರಾವಿಡ ಶೈಲಿಯನ್ನೇ ಬಳಸಿದಾಗ ಈ ಹೊಯ್ಸಳ ಶೈಲಿಯ ವಿಷಯವಾಗಿ ಇಂಥ ಕಥೆಗಳು ಹುಟ್ಟಿದ್ದರೆ ಆಶ್ಚರ್ಯವಿಲ್ಲ. ಪವಾಡ ಸದೃಶವಾದ ಹೊಯ್ಸಳ ಶಿಲ್ಪದ ದಿವ್ಯಸಂಕೇತವಾಗಿ ಜನಮನದಲ್ಲಿ ಜಕಣಾಚಾರಿ ಮನೆಮಾಡಿಕೊಂಡಿದ್ದಾನೆ.

ಮಾಹಿತಿ ಕೃಪೆ: ಮೈಸೂರು ವಿಶ್ವಕೋಶ

Photo courtesy: http://double-dolphin.blogspot.com/2017/08/lesser-known-hoysala-temples-karnataka-india.html

Jakanachari, a name often associated with Hoysala architecture 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ