ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೈ. ಸಿ. ಕಮಲ


ವೈ.ಸಿ. ಕಮಲ 

ಡಾ. ವೈ. ಸಿ. ಕಮಲ ಅವರು ವಿಜ್ಞಾನ ಪ್ರಾಧ್ಯಾಪಕಿ, ಬರಹಗಾರ್ತಿ, ಸಂವಹನಗಾರ್ತಿ, ಸಂಘಟನಾಗಾರ್ತಿ, ಪ್ರಕೃತಿ ಪ್ರೇಮಿ ಹೀಗೆ ಬಹುಮುಖಿ.  "I’m a Teacher, Science Communicator, Event organizer, Education administrator all by passion” ಎಂದು ಹೇಳುವ ಅವರ ವಾಕ್ಯದಲ್ಲಿ all by passion  ಎಂಬುದು ಅತ್ಯಂತ ಗಮನಾರ್ಹ. 

ಕಮಲ ಅವರು ಜನಿಸಿದ ದಿನ ಏಪ್ರಿಲ್ 15. ತುಮಕೂರಿನ ನಾಗವಲ್ಲಿ ಅವರ ಊರು. ತಾಯಿ ಪಾರ್ವತಮ್ಮ.  ತಂದೆ ಪಂಡಿತ ಚನ್ನಪ್ಪ ಎರೇಸೀಮೆ ನಾಡಿನ ಪ್ರಸಿದ್ಧ ವಿದ್ವಾಂಸರಾಗಿ 'ನುಡಿಗಾರುಡಿಗ' ಎಂದು ಖ್ಯಾತಿವಂತರಾಗಿದ್ದವರು.  ಹೀಗಾಗಿ ಕಮಲ ಅವರಿಗೆ ವಿಜ್ಞಾನದ ಜೊತೆಗೆ ಸಂಶೋಧನೆ ಹಾಗೂ ಕನ್ನಡ ಸಾಹಿತ್ಯ ಕೂಡಾ ಆಸಕ್ತಿಯ ಕ್ಷೇತ್ರಗಳು.  ಕಮಲ ಅವರು ವಿಜ್ಞಾನ ಪದವಿ, ಸ್ನಾತಕೋತ್ತರ ಪದವಿಗಳ ಜೊತೆಗೆ "ಭಾರತದಲ್ಲಿ ಆಧುನಿಕ ಭೌತಶಾಸ್ತ್ರದ ಬೆಳವಣಿಗೆಯ ಆರಂಭಿಕ ಹಂತ - ಒಂದು ವಿಶ್ಲೇಷಣೆ" ಎಂಬ ಪ್ರೌಢ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ತನ್ನ ಪುಸ್ತಕವೊಂದರಲ್ಲಿ, ಕನ್ನಡ ವಿಜ್ಞಾನ ಸಾಹಿತ್ಯದಲ್ಲಿ ಇದು ಯಾರೂ ಕ್ರಮಿಸದ ದಾರಿಯ ಹೊಸ ಹೆಜ್ಜೆ ಎಂದು ಗುರುತಿಸಿದೆ.(ವಿಜ್ಞಾನ ಕರ್ನಾಟಕ ಪುಸ್ತಕ)

ಕಮಲ ಅವರು ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ, ಡೈರೆಕ್ಟರೇಟ್ ಆಫ್ ಕಾಲೇಜಿಯೇಟ್ ಎಜುಕೇಷನ್ನಿನ ಸಂವಹನಾಧಿಕಾರಿಯಾಗಿ ಹೀಗೆ ಬಹುಮುಖಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ. 

ಡಾ. ವೈ. ಸಿ. ಕಮಲ ಅವರು ಅನೇಕ ರೂಪಕ- ನಾಟಕಗಳನ್ನು ನಡೆಸಿ ಆಕಾಶವಾಣಿಯ ಮೂಲಕ ಪ್ರಸಾರ ಮಾಡಿದ್ದಾರೆ. ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಅನೇಕ ವಿಜ್ಞಾನ ಭಾಷಣಗಳನ್ನು ಆಕಾಶವಾಣಿ, ಶಾಲೆ, ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳಲ್ಲಿ ಮಾಡಿರುವರು. ವಿಜ್ಞಾನ ಜಾಥಾ, ವಿಜ್ಞಾನ ಭಾಷಣ ಸ್ಪರ್ಧೆ, ವಿಜ್ಞಾನ ಪ್ರಬಂಧ ಸ್ಪರ್ಧೆ. ವಿಜ್ಞಾನ ಬೇಸಗೆ ಶಿಬಿರ, ವಿಜ್ಞಾನ ಅಧ್ಯಾಪಕರಿಗೆ ತರಬೇತಿ ಶಿಬಿರಗಳು ಇನ್ನೂ ಮುಂತಾದ ನೂರಾರು ವಿಜ್ಞಾನ ಕಾರ್ಯಕ್ರಮಗಳನ್ನು ಸಂಘಟಿಸಿರುವರು.

ಕಮಲ ಅವರು ಒಟ್ಟು ಐದು ಪುಸ್ತಕಗಳನ್ನು ಬರೆದಿದ್ದು ಅವುಗಳಲ್ಲಿ ಎರಡು ಸಂಪಾದಿತ ಕೃತಿಗಳಾಗಿವೆ.

ಡಿಜಿಟಲ್ ಕ್ರಾಂತಿ ಮತ್ತು ಭಾರತ (ಅನುವಾದ)  ಇವರ ಕೃತಿಗಳಲ್ಲಿ ಸೇರಿವೆ.  'ವಿಜ್ಞಾನ ತಂತ್ರಜ್ಞಾನ ದರ್ಶನ' ಎಂಬ 1700 ಪುಟಗಳ, ವಿಜ್ಞಾನ ಕ್ಷೇತ್ರಕ್ಕೆ  ಕರ್ನಾಟಕದ ಕೊಡುಗೆಯನ್ನು ದಾಖಲಿಸುವ ಮಹತ್ವದ ಪುಸ್ತಕದ ಸಂಪಾದನೆಯ ಕೆಲಸ ಮಾಡುತ್ತಿದ್ದಾರೆ.

ಅನೇಕ ನಿಯತಕಾಲಿಕಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ.  ಆಕಾಶವಾಣಿ ಹಾಗೂ ವಿವಿಧ ವಿದ್ಯುನ್ಮಾನ ವಾಹಿನಿಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.

ವೈ. ಸಿ.  ಕಮಲ ಅವರ ಆಸಕ್ತಿಗಳಲ್ಲಿ ವಿಜ್ಞಾನ ಮಾತ್ರವಲ್ಲದೆ ಅವರಲ್ಲಿ ವಿಶಾಲ ವ್ಯಾಪ್ತಿಯ ಓದಿನ ಹರವಿದೆ.  ಪ್ರಕೃತಿ ಪ್ರೀತಿಯುಳ್ಳ ಅವರು ಉತ್ತಮ ಛಾಯಾಗ್ರಾಹಕಿಯೂ ಹೌದು. ಸಂಗೀತಾಸಕ್ತರಾದ ಅವರು ವೀಣಾವಾದಕಿ. ಕ್ರೀಡೆಯಲ್ಲೂ ಮುಂದು. ಟ್ರೆಕ್ಕಿಂಗ್ ಸಾಹಸವೂ ಜೊತೆಗಿದೆ. ಪ್ರವಾಸಪ್ರಿಯರೂ ಆಗಿದ್ದಾರೆ.

ಕಮಲ ಅವರು, ರಾಷ್ಟ್ರಮಟ್ಟದ ವಿವಿಧ ಸಂಘಟನೆಗಳಿಂದ ನಾಲ್ಕು ಬಾರಿ  ವಿವಿಧ ಕಾರ್ಯಗಳಿಗೆ ಪುರಸ್ಕೃತರಾಗಿದ್ದಾರೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ರೋಟರಿ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳು ಗೌರವಿಸಿವೆ.

ಸದಾ ಕ್ರಿಯಾಶೀಲರೂ, ಸರಳರೂ, ಆತ್ಮೀಯರೂ ಆದ ವೈ. ಸಿ. ಕಮಲ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 


Happy birthday Dr. Kamala Yereseeme Channappa

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ