ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಜೇಶ್


ರಾಜೇಶ್

ರಾಜೇಶ್ ಕನ್ನಡ ಚಿತ್ರರಂಗ ಕಂಡ ಮಹಾನ್ ಪ್ರತಿಭೆಗಳಲ್ಲಿ ಒಬ್ಬರು.  ರಾಜ್ ಕುಮಾರ್, ಉದಯ ಕುಮಾರ್, ಕಲ್ಯಾಣ ಕುಮಾರ್ ಅವರ ಕನ್ನಡ ಚಿತ್ರರಂಗದ  ಸಮಕಾಲೀನರಾಗಿ ಅಂತಹ ಮಹಾನ್ ಪ್ರತಿಭೆಗಳ ಕಾಲದಲ್ಲಿ ಕೂಡಾ ತಮ್ಮದೇ ಆದ ವಿಶಿಷ್ಟ ಛಾಪನ್ನು ಚಿತ್ರಂಗದಲ್ಲಿ ಮೂಡಿಸಿದ್ದವರು.  

ರಾಜೇಶ್ 1935ರ ಏಪ್ರಿಲ್ 15ರಂದು
ಬೆಂಗಳೂರಿನಲ್ಲಿ ಜನಿಸಿದರು.  ಎಲ್ಲ ಸಾಮಾನ್ಯ ಮಕ್ಕಳಂತೆ ಬಾಲ್ಯವನ್ನು ಕಳೆದ ರಾಜೇಶ್ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ  ಕಾರ್ಯನಿರ್ವಹಿಸುತ್ತಿದ್ದರು.  ಹೈಸ್ಕೂಲಿನ ದಿನಗಳಿಂದಲೇ  ಅವರಿಗೆ ರಂಗಭೂಮಿಯ ಸೆಳೆತ ಅಪಾರವಾಗಿತ್ತು.   ಅಂದಿನ ರಂಗಭೂಮಿ ಕಲಾವಿದರಾದ ತ್ಯಾಗರಾಜ ಭಾಗವತರ್, ಟಿ. ಆರ್. ಮಹಾಲಿಂಗಂ ಅಂತಹ ಕಲಾವಿದರ ಬಗ್ಗೆ ಅವರಿಗೆ ತುಂಬು ಅಭಿಮಾನ.  ಹೀಗಾಗಿ  ಮನೆಯವರಿಗೆ ತಿಳಿಯದಂತೆ ಸುದರ್ಶನ್ ನಾಟಕ ಮಂಡಳಿಯಲ್ಲಿ ಪಾತ್ರವಹಿಸತೊಡಗಿದರು.

ಮುಂದೆ ತಮ್ಮದೇ ಆದ 'ಶಕ್ತಿ ನಾಟಕ ಮಂಡಳಿ'ಯನ್ನು ಸ್ಥಾಪಿಸಿದ ರಾಜೇಶ್ ನಾಡಿನೆಲ್ಲೆಡೆ ಪ್ರಸಿದ್ಧ ನಾಟಕಗಳನ್ನಾಡಿದರು.  ನಾಟಕಗಳಲ್ಲಿನ ಜನಪ್ರಿಯತೆ ಅವರನ್ನು ಚಿತ್ರರಂಗಕ್ಕೂ ಕರೆದು ತಂದಿತು.  ಅಂದಿನ ಪ್ರಸಿದ್ಧ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿಯವರು ವಿದ್ಯಾಸಾಗರ್ ಎಂಬ ಹೆಸರಿದ್ದ ರಾಜೇಶ್ ಅವರನ್ನು 'ವೀರ ಸಂಕಲ್ಪ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.  

ಪ್ರಸಿದ್ಧ ನಿರ್ಮಾಪಕ ಬಿ. ಎಸ್. ನಾರಾಯಣ್ ನಿರ್ಮಿಸಿ, ಸಿ.ವಿ. ಶಿವಶಂಕರ್ ಅವರು ನಿರ್ದೇಶಿಸಿದ ‘ನಮ್ಮ ಊರು’ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದಲ್ಲದೆ ರಾಜೇಶ್ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದಿತು.  ಹೀಗೆ ಸಾಗಿದ ತಮ್ಮ ಚಿತ್ರರಂಗದ ಬದುಕಿನಲ್ಲಿ ರಾಜೇಶ್ 150ಕ್ಕೂ ಹೆಚ್ಚು ನಾಯಕ ಪ್ರಧಾನ ಪಾತ್ರಗಳು ಮತ್ತು ವೈವಿಧ್ಯಮಯ ಪೋಷಕ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. 

‘ನಮ್ಮ ಊರು’, ‘ಗಂಗೆ ಗೌರಿ’, ‘ಸತೀ ಸುಕನ್ಯ’, ಬೆಳುವಲದ ಮಡಿಲಲ್ಲಿ’, ‘ಕಪ್ಪು ಬಿಳುಪು’,  ‘ಬೃಂದಾವನ’, ‘ಬೋರೆ ಗೌಡ ಬೆಂಗಳೂರಿಗೆ ಬಂದ’, ‘ಮರೆಯದ ದೀಪಾವಳಿ’, 'ಪ್ರತಿಧ್ವನಿ', ‘ಕಾವೇರಿ’, ‘ದೇವರ ಗುಡಿ’, ‘ಬದುಕು ಬಂಗಾರವಾಯ್ತು’, ‘ಸೊಸೆ ತಂದ ಸೌಭಾಗ್ಯ’, 'ಮುಗಿಯದ ಕಥೆ', 'ಬಿಡುಗಡೆ', 'ದೇವರದುಡ್ಡು', ‘ಕಲಿಯುಗ’, 'ಪಿತಾಮಹ'  ಮುಂತಾದ ಚಿತ್ರಗಳಲ್ಲಿ ರಾಜೇಶರು  ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.   ರಾಜೇಶ್ ಅವರು ನಾಯಕನಾಗದೆ, ನಾಯಕನ ಅಥವಾ ನಾಯಕಿಯ ಅಣ್ಣನಂತಹ ಪಾತ್ರಗಳಲ್ಲಿ ಅಭಿನಯಿಸಿದಾಗ ಸಹಾ ಅದು ಬಹಳಷ್ಟು ಜನಪ್ರಿಯವಾಗಿದೆ. 'ಪ್ರತಿಧ್ವನಿ',  'ದೇವರಗುಡಿ', 'ಬದುಕು ಬಂಗಾರವಾಯ್ತು' ಚಿತ್ರಗಳಲ್ಲಿ ಅವರು ನಾಯಕನಾಗಿ ಅಭಿನಯಿಸದಿದ್ದರೂ  ಬಹಳ ಕಾಲ ನೆನಪಿನಲ್ಲುಳಿಯುತ್ತಾರೆ.  'ಕರ್ಣ' ಚಿತ್ರದಲ್ಲಿ ಡಾಕ್ಟರ್ ಆಗಿ ಅಭಿನಯಿಸಿದ ಅವರ ಗಾಂಭೀರ್ಯ ಕೂಡಾ ಬಹಳ ಕಾಲ ನೆನಪಿನಲ್ಲಿ ಉಳಿಯುವಂತದ್ದು.  ಪಾತ್ರವೇ ತಾನಾಗಿ ಪರಕಾಯ ಪ್ರವೇಶ ಮಾಡುವಂತಹ ನಟನೊಬ್ಬನ ಪ್ರಧಾನ ಗುಣಗಳಿವು.

ರಾಜೇಶ್ ಅವರ ಭಾಷಾ ಉಚ್ಚಾರ, ಭಾವಾಭಿನಯ ಉತ್ತಮ ಮಟ್ಟದ್ದಾಗಿದ್ದು ನಿರಂತರವಾಗಿ ಅವರು  ಉತ್ತಮ ಪಾತ್ರಗಳನ್ನು ನಿರ್ವಹಿಸುತ್ತಾ ಬಂದರು.  ‘ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ’, ‘ನಾನೇ ಎಂಬ ಭಾವ ನಾಶವಾಯಿತೋ’, ‘ರವಿವರ್ಮನ ಕುಂಚದ ಕಲೆ’, ‘ಈ ದೇಶ ಚೆನ್ನ ಈ ಮಣ್ಣು ಚಿನ್ನ’, ‘ಕಂಗಳು ವಂದನೆ ಹೇಳಿವೆ’  ಮುಂತಾದ ಜನಪ್ರಿಯ ಹಾಡುಗಳನ್ನು ನೆನೆದಾಗ ತಟ್ಟನೆ ರಾಜೇಶ್ ಕಣ್ಮುಂದೆ ಬಂದು ನಿಲ್ಲುತ್ತಾರೆ.  

‘ಕಲಾತಪಸ್ವಿ ರಾಜೇಶ್’ ಎಂಬುದು ಅವರ ಆತ್ಮಚರಿತ್ರೆಯ ಹೆಸರು.  ಅವರ ಅಭಿನಯ ಮೇರು ನಟ ಶಿವಾಜಿಗಣೇಶನ್ ಅವರ  ಅಭಿನಯವನ್ನು ನೆನಪಿಸುವಂತದ್ದು ಎಂಬುದು  ಅಂದಿನ ದಿನಗಳಲ್ಲಿ ಅವರನ್ನು ಕುರಿತ ಮೆಚ್ಚುಗೆಯ ಮಾತಾಗಿತ್ತು.  ಶ್ರೀಮಂತವಾದ ತಮಿಳು ಚಿತ್ರರಂಗದಿಂದ ಅಂದಿನ ದಿನಗಳಲ್ಲಿ ಅವಕಾಶಗಳು ಕೂಡಿಬಂದರೂ ಕನ್ನಡದ ನೆಲದಲ್ಲೇ ಏನನ್ನಾದರೂ ಸಾಧಿಸಬೇಕೆಂಬ ಪ್ರಬಲ ಇಚ್ಛೆ ಹೊಂದಿದ್ದ ರಾಜೇಶ್ ಅಂತಹ ಕರೆಗಳನ್ನು ನಯವಾಗಿ ನಿರಾಕರಿಸಿದ್ದರು. 

ಇಂದಿನ ಚಿತ್ರರಂಗದಲ್ಲಿ ಯಾರು ಬೇಕಾದರೂ ಹಣ ಸುರಿದು ನಾಯಕರಾಗಿ, ಭಾಷೆಗಾಗಲಿ, ಸಂಸ್ಕೃತಿಗಾಗಲಿ ಕಿಂಚಿತ್ತೂ ಸಭ್ಯ ಮನೋಭಾವ ಹೊಂದಿಲ್ಲದೆ ಅಸಭ್ಯ ಚಿತ್ರಗಳ ನಿರ್ಮಾಣಕ್ಕೆ ತೊಡಗಿರುವ  ಜನರ ಬಗ್ಗೆ ಯಾವುದೇ ಮುಚ್ಚು ಮರೆಯಿಲ್ಲದೆ ಕಿಡಿ ಕಾರುತ್ತಿದ್ದ ರಾಜೇಶ್ ಅವರ ಕಾಳಜಿಗಳು ಅತ್ಯಂತ ಅರ್ಥಪೂರ್ಣವಾಗಿದ್ದವು.  ಇದು ಶ್ರೇಷ್ಠ ಕಲಾಪರಂಪರೆಗೆ ಸೇರಿದ ಕಲಾವಿದರೊಬ್ಬರ ಹೃದಯಾಂತರಾಳದ ದನಿ ಕೂಡಾ ಆಗಿತ್ತು.    

ರಾಜೇಶ್ ಅವರನ್ನು  ಹಲವಾರು ಪ್ರಶಸ್ತಿ ಗೌರವಗಳು ಅರಸಿ ಬಂದಿದ್ದವು.  ಇವಕ್ಕೆಲ್ಲ ಶಿಖರ ಪ್ರಾಯದಂತೆ   ಧಾರವಾಡ ವಿಶ್ವವಿದ್ಯಾಲಯವು ರಾಜೇಶ್ ಅವರಿಗೆ  ಡಾಕ್ಟರೇಟ್ ಗೌರವವನ್ನು ಸಲ್ಲಿಸಿತ್ತು.    

ಅತ್ಯಂತ ಸರಳರಾಗಿದ್ದ ರಾಜೇಶ್ ಅವರ ಬಗ್ಗೆ ಬರೆದಾಗ ಕೆಲ ವರ್ಷದ ಹಿಂದೆ ಅವರ ಗೆಳೆಯರಾದ ನಮ್ಮ ಆತ್ಮೀಯ Mudgal Venkatesh Kalaburagi ಅವರಿಂದ ನಂಬರ್ ಪಡೆದು ನನಗೆ ದೂರವಾಣಿ ಕರೆ ಮಾಡಿ ಅಕ್ಕರೆಯಿಂದ ಕರೆಮಾಡಿದ್ದರು.  ಅಂತಹ ಸರಳತೆ ಅವರಲ್ಲಿತ್ತು.

'ಕಲಾತಪಸ್ವಿ'  ಎಂದು ಗೌರವಾನ್ವಿತರಾಗಿದ್ದ ರಾಜೇಶ್ 2022ರ ಫೆಬ್ರವರಿ 19ರಂದು ನಿಧನರಾದರು. 

On the birth anniversary of great actor Rajesh 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ