ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನೀಲಪುರಿ ರಾಣಿ


 ನೀಲಪುರಿ ರಾಣಿ


ರೈತನೊಬ್ಬ ಇಬ್ಬರು ಮಕ್ಕಳನ್ನು ಬಿಟ್ಟು ಸತ್ತುಹೋದ. ಅವನು ಅವರಿಗಾಗಿ ಉಳಿಸಿದುದು ಒಂದು ಹಸು ಮತ್ತು ಒಂದು ಬೆಕ್ಕು ಮಾತ್ರ. ದೊಡ್ಡ ಮಗ ಹಸುವನ್ನು ಎತ್ತಿಕೊಂಡು “ತಂಗಿ, ನೀನು ಬೆಕ್ಕನ್ನು ಇಟ್ಕೋ, ನಿಂಗೆ ಒಳ್ಳೆದಾಗ್ಲಿ. ನಾನು ಹೋಗಿಬರ್ತೀನಿ” ಎಂದು ಹೇಳುತ್ತಾ ಹೊರಟೇಹೋದ.

ತಂಗಿಯ ಹೆಸರು ನೀಲವೇಣಿ. ಬೆಕ್ಕನ್ನಿಟ್ಟುಕೊಂಡು ಮಾಡುವುದೇನು? ಎಂದು ಅವಳು ಅಳುತ್ತಾ ಕುಳಿತಳು. ಆಗ ಬೆಕ್ಕು ಮುಂದೆ ಬಂದು, “ಒಡತಿ, ಹೆದರಬೇಡ. ನಾನು ನಿನಗೆ ಸಹಾಯ ಮಾಡ್ತೇನೆ. ನಾನು ಹೇಳಿದ ಹಾಗೆ ಕೇಳು” ಎಂದಿತು. ಮರುದಿನ ಬೆಕ್ಕಿನ ಮಾತಿನಂತೆ ಅವರಿಬ್ಬರೂ ಕಾಡಿನೊಳಗೆ ನಡೆದರು. ದಟ್ಟವಾದ ಮರಗಳಿರುವ ಜಾಗವನ್ನು ನೋಡಿ ಬೆಕ್ಕು ನೀಲವೇಣಿಯ ಬಟ್ಟೆಗಳನ್ನೆಲ್ಲಾ ಹರಿದು ತುಂಡುತುಂಡು ಮಾಡಿ, ಸುತ್ತಲೂ ಎಸೆದು:

“ಒಡತಿ ನೀನು ಆ ಮರದ ಮರೇಲಿ ಅಡಗಿರು. ನಾನೀಗ ಬರ್ತೀನಿ” ಎನ್ನುತ್ತಾ ಆ ದೇಶದ ರಾಜನ ಅರಮನೆಗೆ ಅಳುತ್ತಾ ಹೋಯಿತು.

“ಮಹಾರಾಜ, ನೀಲಪುರಿಯ ರಾಜಕುಮಾರಿ ಪರಿವಾರದೊಂದಿಗೆ ಯಾತ್ರೆ ಮಾಡ್ತಾ ಇದ್ದಳು. ದೊಡ್ಡ ಕಳ್ಳರ ಗುಂಪೊಂದು ಬಂದು ಎಲ್ಲರನ್ನೂ ಸಾಯಿಸಿ, ಬಟ್ಟೆ ಹರಿದು ಹಾಕಿ, ದೇಹಗಳನ್ನು ಎಳೆದುಕೊಂಡು ಹೋಯಿತು. ಆ ದೊಡ್ಡ ಪರಿವಾರದಲ್ಲಿ ನಾನೂ ರಾಜಕುಮಾರಿ ಇಬ್ಬರೇ ಉಳಿದಿದೀವಿ. ರಾಜಕುಮಾರಿ ಹಾಕ್ಕೊಳ್ಳೋಕೆ ಬಟ್ಟೆ ಇಲ್ಲದೆ ತನ್ನ ಕೂದಲಿಂದಲೇ ಮೈ ಮುಚ್ಚಿಕೊಂಡು ಮರದ ಹಿಂದೆ ಅಡಗಿದಾಳೆ” ಎಂದಿತು.

ತನ್ನ ರಾಜ್ಯದಲ್ಲಿ ರಾಜಕುಮಾರಿಗೆ ಇಂಥ ದುರ್ಗತಿ ಒದಗಿತಲ್ಲಾ ಎಂದು ರಾಜ ಅವಳಿಗೆ ಒಳ್ಳೆಯ ಸೀರೆ, ಒಡವೆಗಳನ್ನು ಕಳುಹಿಸಿದುದಲ್ಲದೆ, ಅವಳನ್ನು ಕರೆತರಲು ರಾಜಪುತ್ರನನ್ನೇ ಕಳುಹಿಸಿದ.

ನೀಲವೇಣಿ ಸೀರೆ ಧರಿಸಿ ಹೊರಬಂದಳು. ಅವಳನ್ನು ನೋಡಿದೊಡನೆ ರಾಜಪುತ್ರ ಅವಳನ್ನು ಮೋಹಿಸಿದ. ಊರಿಗೆ ಕರೆತಂದ ಬಳಿಕ “ನಾನು ಅವಳನ್ನೇ ಮದುವೆ ಆಗ್ತೀನಿ ಅಮ್ಮ” ಎಂದು ತಾಯಿಗೆ ಹೇಳಿದ.

ರಾಣಿಗೆ ನೀಲವೇಣಿ ನಿಜವಾದ ರಾಜಕುಮಾರಿಯೋ ಅಲ್ಲವೋ ಪರೀಕ್ಷಿಸುವ ತವಕ. ಹೀಗಾಗಿ ಅವಳು ರಾಜಪುತ್ರಿಯರು ಹಾಕಿಕೊಂಡು ನಡೆಯುವ ಉದ್ದನೆಯ ವಸ್ತ್ರವನ್ನು ಕೊಟ್ಟು ಕಳುಹಿಸಿದಳು. ಅವಳ ಮಾತುಗಳನ್ನು ಕೇಳಿಸಿಕೊಂಡ ಬೆಕ್ಕು ಹಿಂತಿರುಗಿ ನೀಲವೇಣಿಗೆ ಆ ವಸ್ತ್ರಧರಿಸಿ ನಡೆಯುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿತು.

ಅವಳು ನಿಜವಾದ ರಾಜಪುತ್ರಿಯಂತೆಯೇ ನಡೆದು ಬಂದಾಗ ರಾಣಿಗೆ ಆಶ್ಚರ್ಯವಾಯಿತು. ಅವಳು ಊಟದ ವೇಳೆಯಲ್ಲಿ ಅಡುಗೆಯವನ ಕಿವಿಯಲ್ಲಿ ಪಿಸುಗುಟ್ಟಿದಳು. “ಬೆಳ್ಳಿ ಹಾಗೂ ಬಂಗಾರದ ಬಟ್ಟಿಲುಗಳಲ್ಲಿ ಪಾಯಸ ತಾ. ನಮ್ಮ ಪದ್ಧತಿಯಂತೆ ಮೊದಲು ಬೆಳ್ಳಿ ಅನಂತರ ಬಂಗಾರದ ಬಟ್ಟಲಲ್ಲಿ ಪಾಯಸ ಕುಡೀಬೇಕು” ಎಂದು ನುಡಿದ ಅವಳ ಮಾತನ್ನು ಬೆಕ್ಕು ಕೇಳಿಸಿಕೊಂಡಿತು. ಆದರೆ ನೀಲವೇಣಿ ಆಗಲೇ ಊಟದ ಮನೆಗೆ ಬಂದಾಗಿತ್ತು. ಹೇಳಲು ಸಮಯ ಇರಲಿಲ್ಲವಾಗಿ ಬೆಕ್ಕು ಊಟದ ಮೇಜಿನ ಕೆಳಗೆ ಅಡಗಿ ಕುಳಿತಿತು.

ಊಟ ಆರಂಭವಾದಾಗ ಬಂಗಾರದ ಬಟ್ಟಲೇ ಚೆಂದ ಎಂದು ನೀಲವೇಣಿ ಬಂಗಾರದ ಪಾಯಸದ ಬಟ್ಟಲು ತೆಗೆದುಕೊಂಡಳು. ಆಗ ಬೆಕ್ಕು ಅವಳ ಕಾಲು ಕೆರೆಯಿತು. ಇದರಲ್ಲೇನೋ ತಪ್ಪಿದೆ ಎನಿಸಿ ನೀಲವೇಣಿ ಅದನ್ನಲ್ಲೇ ಇಟ್ಟು ಬೆಳ್ಳಿಯ ಬಟ್ಟಲನ್ನು ಎತ್ತಿ ಕೊಂಡಳು.

ರಾಣಿಗೆ ಅವಳು ರಾಜಕುಮಾರಿಯೇ ಎಂಬುದು ಸ್ಪಷ್ಟ ಆಯಿತು.

ಕಡೆಗೆ ಅವಳೆಂದಳು: “ರಾಜಕುಮಾರಿ, ಮದುವೆ ನಿಮ್ಮೂರಾದ ನೀಲಪುರದಲ್ಲೇ ನಡೆಯಬೇಕು.ಅಲ್ಲಿಗೇ ನಾವೆಲ್ಲರೂ ಹೋಗೋಣ.”

ಈಗ ಮಾತ್ರ ನೀಲವೇಣಿಗೆ ಪ್ರಾಣಸಂಕಟಕ್ಕಿಟ್ಟುಕೊಂಡಿತು. ಆದರೆ ಬೆಕ್ಕಿನ ಆದೇಶದಂತೆ “ಆಗಲಿ, ಹೋಗೋಣ” ಎಂದಳು.

ರಾಜ, ರಾಣಿ, ರಾಜಪುತ್ರ ಮತ್ತು ನೀಲವೇಣಿ ಸಕಲ ಪರಿವಾರಗಳೊಂದಿಗೆ ನೀಲಪುರಿಗೆ ಹೊರಟರು.

ಇತ್ತ ನೀಲಪುರಿಯಲ್ಲಿ ಬಂಗಾರ ಗೋಪುರದ ಅರಮನೆ ಒಂದಿತ್ತು. ಅದಕ್ಕೆ ಕ್ರೂರಿಯಾದ ರಾಕ್ಷಸನೊಬ್ಬ ರಾಜನಾಗಿದ್ದ. ಅವನು ಪ್ರತಿದಿನ ರಾತ್ರಿ ಅರಮನೆಗೆ ಬೀಗಹಾಕಿ ಹೊರಗೆ ಹೋಗುತ್ತಿದ್ದ. ಬೆಕ್ಕು ಅವನು ಹೊರಗೆ ಹೋದುದನ್ನೇ ಕಾಯುತ್ತಿದ್ದುದು, ತಾನು ಒಂದು ಹಿಟ್ಟಿನ ಉಂಡೆಯಾಗಿ ಬಿಗದಕೈ ತೂತಿನಲ್ಲಿ ಕುಳಿತಿತು. ರಾಕ್ಷಸನು ಬೆಳಗಾಗುವುದರೊಳಗೆ ಅರಮನೆಯೊಳಗೆ ಸೇರಬೇಕಾಗಿತ್ತು. ಆದುದರಿಂದ ಅವನು ಬೆಳಗಿನ ಜಾವದಲ್ಲಿ ಹಿಂತಿರುಗಿ ಬೀಗದಕೈಯನ್ನು ತೂರಿಸಲು ಹೋದ. ಹಿಟ್ಟು ಅಡ್ಡವಿತ್ತು.

“ರಾಕ್ಷಸರಾಜ, ಒಂದು ನಿಮಿಷ ತಡೆ. ನನ್ನ ಕತೆ ಹೇಳ್ತೀನಿ” ಎಂದಿತು ಹಿಟ್ಟು.

“ನಿನ್ನ ಕಥೆ ಯಾರಿಗೆ ಬೇಕು? ಬೇಗ ಕೆಳಕ್ಕೆ ಬಾ” ಎಂದ ರಾಕ್ಷಸ.

ಹಿಟ್ಟು ತಾನು ಹುಟ್ಟಿ ಬೆಳೆದ ಚರಿತ್ರೆಯನ್ನು ಹೇಳತೊಡಗಿತು. ರಾಕ್ಷಸರಾಜ ಚಡಪಡಿಸುತ್ತಾ ಹೋದ. ಕೊನೆಗೆ ಹಿಟ್ಟು ಹೇಳಿತು: “ರಾಕ್ಷಸ, ತಿರುಗಿ ನೋಡು. ಎಂಥ ಸುಂದರಿಯಾದ ಹುಡುಗಿ ನಿಂತಿದಾಳೆ”
ರಾಕ್ಷಸ ತಿರುಗಿ ನೋಡಿದ. ಸೂರ್ಯನ ಬಂಗಾರದ ಕಿರಣಗಳು ಅವನನ್ನು ಮುಟ್ಟಿದುದೇ ತಡ ಅವನು ಒಂದು ಹಿಡಿ ಬೂದಿ ಆದ.

ಆಗ ಹಿಟ್ಟು ಚೆನ್ನಾಗಿ ಊರಲ್ಲೆಲ್ಲಾ ಸಂಚರಿಸಿ “ನಮ್ಮ ಕೆಟ್ಟರಾಜ ಸತ್ತುಹೋದ. ನೀಲಪುರಿಯ ರಾಜಪುತ್ರಿಯೇ ಇನ್ನು ನಿಮ್ಮ ರಾಣಿ. ಅವಳು ನಾಳೆ ಹಿಂತಿರುಗಿ ಬರ್ತಾಳೆ. ಅವಳ ಮದುವೆಗೆ ಸಿದ್ಧತೆ ಮಾಡಿ” ಎಂದು ಪ್ರಚುರಪಡಿಸಿತು.

ನೀಲವೇಣಿ ಬರುವ ಹೊತ್ತಿಗೆ ಊರೆಲ್ಲಾ ಸಿಂಗಾರ ಆಗಿತ್ತು. ಅಲ್ಲಿ ಅವಳ ಮದುವೆ ವೈಭವದಿಂದ ನಡೆಯಿತು. ನೀಲವೇಣಿ ಮತ್ತು ರಾಜಪುತ್ರನ ಜೊತೆಯಲ್ಲಿ ಬೆಕ್ಕು ಸದಾ ಉಳಿಯಿತು.

ನಿರೂಪಣೆ:  ಡಾ. ಅನುಪಮಾ ನಿರಂಜನ
Art pic courtesy: www.photowiki.com

Queen and the cat 😊

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ