ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನ್ವೇಷಣೆ


 ಅನ್ವೇಷಣೆ


ಸೂಫಿ ಸಂತ ಜುನ್ನೈದ್ ಓರ್ವ ವೃದ್ಧ ಸಂತರ ಬಳಿ ಬಂದು ಕೇಳಿದರಂತೆ, ‘ನಿಮಗೆ ಅರಿವಾಗಿದೆ ಎಂದು ಕೇಳಿರುವೆ, ನನಗೂ ದಾರಿ ತೋರಿಸಿ’ ಎಂದು.  ಆ ವೃದ್ಧ ಸಂತರು ಹೇಳಿದರಂತೆ, ‘ನೀನು ಕೇಳಿರುವೆಯಷ್ಟೇ ನನಗೆ ಜ್ಞಾನೋದಯ ಆಗಿದೆಯೆಂದು.  ನಿನಗೆ ಗೊತ್ತಿಲ್ಲ ನನಗೆ ಜ್ಞಾನೋದಯ ಆಗಿದೆಯೆಂದು.

ಜುನ್ನೈದ್ ಹೇಳಿದರಂತೆ, ‘ನಿಮ್ಮ ಬಳಿ ನನಗಾವುದೇ ಅನುಭೂತಿ ಆಗುತ್ತಿಲ್ಲ, ಆದರೂ ನೀವು ನನಗೆ ದಾರಿ ತೋರಿಸಿ, ನಾನಾವ ಗುರುಗಳ ಬಳಿ ಹೋಗಬೇಕು’ ಎಂದು.  ಆಗ ಆ ವೃದ್ಧ ಸಂತರು ಹೇಳಿದರಂತೆ, ‘ಮೊದಲು ನೀನು ಮೆಕ್ಕಾಗೆ ಹೋಗು; ತೀರ್ಥಯಾತ್ರೆಗೆ ಹೊರಡು; ಮತ್ತೆ ಇಂತಿಂತ ವ್ಯಕ್ತಿಗಳನ್ನು ಹುಡುಕು.  ಆ ವೃದ್ಧ ಸಂತರು ಒಂದು ಮರದ ಕೆಳಗೆ ಕುಳಿತಿರಬೇಕು.  ಅವರ ಕಣ್ಣುಗಳಲ್ಲಿ ಕಿರಣಗಳ ಬೆಳಕು ಚೆಲ್ಲುತ್ತಿದ್ದಿರಬೇಕು.  ಅವರ ಬಳಿ ಕಸ್ತೂರಿ ಸುಗಂಧ ಬೀರುತ್ತಿರುವುದನ್ನು ಅನುಭವಿಸಬಹುದು.  ಹೊರಡು, ಅಂಥವರನ್ನು ಹುಡುಕು.’

ಜುನ್ನೈದ್ ಇಪ್ಪತ್ತು ವರ್ಷದವರೆಗೆ ಯಾತ್ರಿಸುತ್ತಲೇ ಇದ್ದರು.  ಎಲ್ಲೇ ಯಾರೇ ಹೇಳಿದರೂ ಸರಿಯೇ ಇಲ್ಲೋರ್ವ ಗುರು ಇದ್ದಾರೆ ಎಂದು, ಅಲ್ಲಿಗವರು ಹೋಗುತ್ತಿದ್ದರು.  ಆದರವರಿಗೆ ಒಂದೋ ಆ ಮರವಾಗಲಿ, ಸುಗಂಧವಾಗಲಿ, ಕಸ್ತೂರಿಯಾಗಲಿ ಸಿಗಲಿಲ್ಲ.  ಅಷ್ಟೇ ಅಲ್ಲ ಆ ವೃದ್ಧ ಸಂತರು ಇದನ್ನೂ ಹೇಳಿದ್ದರು.  ಕಣ್ಣುಗಳಲ್ಲಿ ಕಿರಣಗಳ ಬೆಳಕು ಚೆಲ್ಲುತ್ತಿರಬೇಕು ಕೂಡ.’  ಇವಾವುವೂ ಸಿಗಲಿಲ್ಲ ಇವರಿಗೆ.  ಅವರಾವ ವ್ಯಕ್ತಿತ್ವವನ್ನು ವಿವರಿಸಿದ್ದರೋ ಆ ವ್ಯಕ್ತಿತ್ವ ಇನ್ನೆಲ್ಲೂ ಸಿಗಲು ಸಾಧ್ಯವೇ ಇರುತ್ತಿರಲಿಲ್ಲ.  ಜುನ್ನೈದರ ಬಳಿ ಒಂದು ಸೂತ್ರವಿತ್ತು.  ಅದರ ಮೂಲಕ ಅವರು ನೋಡಿದ ತಕ್ಷಣವೇ ನಿರ್ಣಯಿಸುತ್ತಿದ್ದರು, ಇವರು ನನ್ನ ಗುರುವಲ್ಲ ಎಂದು ಮುಂದೆ ಹೋಗಿಬಿಡುತ್ತಿದ್ದರು.    

ಹೀಗೆ ಇಪ್ಪತ್ತು ವರ್ಷ ಕಳೆಯುವಷ್ಟರಲ್ಲಿ ಇವರೊಂದು ವೃಕ್ಷದ ಬಳಿ ಬಂದರು.  ಗುರು ಅಲ್ಲಿದ್ದರು.  ಕಸ್ತೂರಿಯ ಗಂಧವು ಹೊಗೆಯ ತರಹ ಗಾಳಿಯಲ್ಲಿ ಹರಡುತ್ತಿತ್ತು.  ಅವರು ಕಣ್ಣುಗಳು ಪ್ರಜ್ವಲಿಸುತ್ತಿತ್ತು.  ಆ ಕಣ್ಣುಗಳಲ್ಲಿ ಕೆಂಪು ಪ್ರಕಾಶ ಹೊಳೆಯುತ್ತಿತ್ತು.  ಕೂಡಲೇ ಜುನ್ನೈದ್, ಅವರ ಪಾದಗಳಿಗೆರಗಿ ಹೇಳಿದರು, ‘ಗುರುದೇವ, ಇಪ್ಪತ್ತು ವರ್ಷದಿಂದ ನಿಮ್ಮನ್ನು ಹುಡುಕುತ್ತಿದ್ದೆ’ ಎಂದು.

ಆಗ ಗುರುಗಳು ಉತ್ತರಿಸಿದರು.  ‘ನಾನೂ ನಿನಗಾಗಿ ಇಪ್ಪತ್ತು ವರ್ಷಗಳಿಂದ ಕಾಯುತ್ತಲೇ ಇದ್ದೆ.  ಮತ್ತೆ ನನ್ನನ್ನು ಸರಿಯಾಗಿ ನೋಡು.’  ಜುನ್ನೈದ್ ಮತ್ತೆ ನೋಡಿದರು, ಆ ಇಪ್ಪತ್ತು ವರ್ಷದ ಹಿಂದೆ ಯಾರ ಬಳಿ ಬಂದಾಗ ಗುರುಗಳನ್ನು ಹುಡುಕುವ ಮಾರ್ಗವನ್ನು ತೋರಿಸಿದ್ದರೋ ಅವರೇ ಇವರು.  

‘ಜುನ್ನೈದ್ ಅಳತೊಡಗಿ ಕೇಳಿದರು, ‘ನೀವೇಕೆ ಹಾಗೆ ಮಾಡಿದಿರಿ?  ನೀವು ನನಗೆ ತಮಾಷೆ ಮಾಡಿದಿರೇನು?  ಇಪ್ಪತ್ತು ವರ್ಷ ಸುಮ್ಮನೆ ವ್ಯರ್ಥವಾಯಿತು.  ನೀವೇಕೆ ಹೇಳಲಿಲ್ಲ, ನಾನೇ ನಿನ್ನ ಗುರು’ ಎಂದು.

ಆಗ ವೃದ್ಧ  ಸಂತರು ಉತ್ತರಿಸಿದರು, ‘ಅದರಿಂದ ಯಾವ ಸಹಾಯವೂ ಆಗುತ್ತಿರಲಿಲ್ಲ, ಅದರಿಂದ ಯಾವ ಉಪಯೋಗವೂ ಆಗುತ್ತಿರಲಿಲ್ಲ.  ಏಕೆಂದರೆ ಎಲ್ಲಿಯವರೆಗೆ ನೋಡಲು ನಿನ್ನಲ್ಲಿ ಕಣ್ಣುಗಳಿಲ್ಲವೋ ಅಲ್ಲಿಯವರೆಗೆ ಏನೂ ಆಗುವುದಿಲ್ಲ.  ಈ ಇಪ್ಪತ್ತು ವರ್ಷ ನಿನಗೆ ಬಹಳ ಸಹಕಾರಿ ಆಗಿದೆ, ಉಪಯೋಗ ಆಗಿದೆ, ನನ್ನನ್ನು ನೋಡಲಿಕ್ಕಾಗಿ.  ಇಪ್ಪತ್ತು ವರ್ಷದ ಹಿಂದೆ ನೀನು ಬಂದು ಹೇಳಿದೆ, ನನ್ನನ್ನು ನೋಡಿದಾಗ ನಿನಗಾವ ಅನುಭೂತಿಯೂ ಆಗಲಿಲ್ಲ ಎಂದು, ನಾನದೇ ವ್ಯಕ್ತಿ.  ನೀನೀಗ ಅನುಭೂತಿಯನ್ನು ಹೊಂದಲು ಸಮರ್ಥನಾಗಿರುವೆ.  ನೀನೀಗ ಬದಲಾಗಿರುವೆ.  ಈ ಇಪ್ಪತ್ತು ವರ್ಷಗಳು ನಿನ್ನನ್ನು ಚೆನ್ನಾಗಿ ಹದಮಾಡಿದೆ, ಧೂಳೆಲ್ಲಾ ಹೋಗಿ ನಿನ್ನ ಚಿತ್ತವಿಂದು ನಿರ್ಮಲವಾಗಿದೆ.  ಕಸ್ತೂರಿಯ ಈ ಸುಗಂಧ ಆ ಸಮಯದಲ್ಲೂ ಇತ್ತು.  ಆಗ ಅದರ ಪರಿಮಳ ನಿನ್ನ ಮೂಗಿಗೆ ಬರುವಷ್ಟು ನೀನು ಸಮರ್ಥನಾಗಿರಲಿಲ್ಲ.  ನಿನ್ನ ಮೂಗು ಮುಚ್ಚಿತ್ತು.  ನಿನ್ನ ಕಣ್ಣುಗಳು ಕೆಲಸ ಮಾಡುತ್ತಿರಲಿಲ್ಲ.  ನಿನ್ನ ಹೃದಯವಾಗ ಕಿಂಚಿತ್ತೂ ಸ್ಪಂದಿಸುತ್ತಿರಲಿಲ್ಲ.  ಆದ್ದರಿಂದ ಸಂಯೋಗ ಸಂಭವಿಸಲಿಲ್ಲ ಆಗ.'  

ಸ್ವಯಂ ನಿಮಗೇ ಗೊತ್ತಿಲ್ಲ.  ನಿಮ್ಮ ಆಸ್ಥೆ ಎಲ್ಲಿ ಘಟಿಸಬಹುದು ಎಂಬುದನ್ನು ಯಾರಿಂದಲೂ ಹೇಳಲಾಗುವುದಿಲ್ಲ.  ಗುರುಗಳ ಬಗ್ಗೆ ಶ್ರದ್ಧೆ ಇರಲಿ ಎಂದಷ್ಟೇ ನಾನು ಹೇಳುವುದು.  ಹುಡುಕಿ, ಎಲ್ಲಿ ನಿಮಗೆ ಅಂಥ ವ್ಯಕ್ತಿ ಸಿಗಬಹುದೆಂದು.  ಎಲ್ಲಿ ಆ ಸಂಯೋಗ ಘಟಿಸಬಹುದೋ ಅಲ್ಲಿಯವರೆಗೆ ಹುಡುಕುತ್ತಲೇ ಹೋಗಿ.  ಎಲ್ಲಿ ಈ ಘಟನೆ ಘಟಿಸುವುದೋ ಅವರೇ ನಿಮ್ಮ ಗುರು.  ಅನ್ವೇಷಣೆ ಅಗತ್ಯ.  ಏಕೆಂದರೆ ಹುಡುಕಾಟ ನಿಮ್ಮನ್ನು ಸಿದ್ಧಗೊಳಿಸುತ್ತದೆ.  ಅವರನ್ನು ನೋಡಲು ಹೀಗೂ ಆಗಬಹುದು,  ಅವರು ನಿಮ್ಮ ಬಳಿಯಲ್ಲಿಯೇ ಇರಬಹುದು.

(ಓಶೋ ಅವರ ‘ಪತಂಜಲಿ ಯೋಗ ಸೂತ್ರ’ ಕೃತಿಯಲ್ಲಿ ಹೇಳಿದ್ದು)

Art by: Kailash Raj


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ