ಫೆರ್ಡಿನೆಂಡ್ ಕಿಟೆಲ್
ಫೆರ್ಡಿನೆಂಡ್ ಕಿಟೆಲ್
ಫೆರ್ಡಿನೆಂಡ್ ಕಿಟೆಲ್ ಕನ್ನಡವನ್ನು ಶ್ರೀಮಂತಗೊಳಿಸಿದ ಅಗ್ರಗಣ್ಯರಲ್ಲಿ ಪ್ರಾತಃಸ್ಮರಣೀಯರು.
ಫೆರ್ಡಿನಾಂಡ್ ಕಿಟೆಲ್ ಅವರು ಜರ್ಮನಿಯ ರಾಸ್ಟರ್ ಹಾಫ್ ಎಂಬಲ್ಲಿ 1832ರ ಏಪ್ರಿಲ್ 8ರಂದು, ಜನಿಸಿದರು. ಹತ್ತೊಂಬತ್ತನೆಯ ಶತಮಾನದಲ್ಲಿ ಜರ್ಮನಿಯ ಬಾಸೆಲ್ ಮಿಶನ್ ಮೂಲಕ ಕರ್ನಾಟಕಕ್ಕೆ ಬಂದು ಕನ್ನಡದಲ್ಲಿ ಸರ್ವಸಂಗ್ರಾಹಕ ವಿವರಣಾತ್ಮಕ ಶಬ್ಧಕೋಶ, ಸಾಹಿತ್ಯ ರಚನೆ, ಪಠ್ಯಪುಸ್ತಕ ನಿರ್ಮಾಣ, ವ್ಯಾಕರಣ ಗ್ರಂಥಗಳು, ಗ್ರಂಥ ಸಂಪಾದನೆ, ಛಂದಸ್ಸು, ಸಾಹಿತ್ಯ ಚರಿತ್ರೆ, ಅನ್ಯಧರ್ಮೀಯ ಅಧ್ಯಯನ ಮೊದಲಾದ ವಿದ್ವತ್ – ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆಗೈದರು.
ಬಾಸೆಲ್ ನಗರದ ಮಿಶನ್ ಸಂಸ್ಥೆಯ ಮೂಲಕ ಭಾರತಕ್ಕೆ ಕಳುಹಿಸಲ್ಪಟ್ಟ ಕಿಟೆಲ್ 1854ರ ಅಕ್ಟೋಬರ್ 20ರಂದು ಮಂಗಳೂರನ್ನು ತಲುಪಿದರು. ಆ ಬಳಿಕ ಅವರು ಧಾರವಾಡಕ್ಕೆ ಬಂದರು. 1856ರ ವರೆಗೆ ಹುಬ್ಬಳ್ಳಿ-ಧಾರವಾಡಗಳಲ್ಲಿ ತಮಗೆ ಕೊಟ್ಟ ಕೆಲಸದಲ್ಲಿ ಭಕ್ತಿಯಿಂದ ನಿರತರಾಗಿದ್ದರು.
ಕಿಟೆಲರಿಗೆ ಹೀಬ್ರೂ, ಗ್ರೀಕ್, ಲ್ಯಾಟಿನ್, ಫ್ರೆಂಚ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು. ಅದೇ ಮಟ್ಟದಲ್ಲಿ ಸ್ಥಳೀಯ ಜನ ಭಾಷೆಯಾದ ಕನ್ನಡವನ್ನು ಕಲಿಯಬೇಕೆಂಬ ಆಸೆ ಉಂಟಾಯಿತು. ಈ ಕಾರಣಕ್ಕಾಗಿ ಕಿಟೆಲರು ಮಂಗಳೂರಿಗೆ ಆಗಮಿಸಿ ಅಲ್ಲಿ ಅತ್ಯುತ್ಸಾಹದಿಂದ ಕನ್ನಡ ಅಧ್ಯಯನ ಆರಂಭಿಸಿದರು. ಕನ್ನಡದ ಜೊತೆ ಜೊತೆಯಲ್ಲಿ ಸಂಸ್ಕೃತ, ತುಳು, ಮಲಯಾಳಂ ಭಾಷೆಗಳನ್ನೂ ಪರಿಚಯಿಸಿಕೊಂಡರು. 1883-84ರಲ್ಲಿ ಧಾರವಾಡದ ಬಾಸೆಲ್ ಮಿಶನ್ ಹೈಸ್ಕೂಲಿನ ಪ್ರಾಂಶುಪಾಲರಾಗಿ ಕಿಟೆಲರು ಕೆಲಸ ಮಾಡಿದರು. 1886ರ ಅಕ್ಟೋಬರ್ 13ರಂದು ಅವರು ಧಾರವಾಡದಿಂದ ಮಡಿಕೇರಿಗೆ ಹೋದರು.
ಕಿಟೆಲರ ಚಿರಸ್ಮರಣೀಯ ಕೃತಿಯಾದ ಕನ್ನಡ –ಇಂಗ್ಲಿಷ್ ಡಿಕ್ಷನರಿ (1894)ಯನ್ನು ಅಂದು ಭಾರತದಲ್ಲಿ ಯಾರೂ ಗಮನಿಸದಿದ್ದರೂ ಜರ್ಮನಿಯ ಟ್ಯುಬಿಂಗನ್ ವಿಶ್ವವಿದ್ಯಾಲಯ ಅದನ್ನು ಗುರುತಿಸಿ ಕಿಟೆಲರಿಗೆ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಕೃತಾರ್ಥಗೊಂಡಿತು. ಕನ್ನಡದ ಕಾರ್ಯಕ್ಕೆ ಸಂದ ಪ್ರಪ್ರಥಮ ಡಾಕ್ಟರೇಟ್ ಪದವಿಯಿದು.
ಕಿಟೆಲರ ಕೊನೆಯ ಗ್ರಂಥವಾದ A Grammar of the Kannada Language (1903) ಕೃತಿ ತಮ್ಮ ಕೈ ಸೇರಿದ ಕೆಲವೇ ದಿನಗಳಲ್ಲಿ 1903ರ ಡಿಸೆಂಬರ್ 19ರಂದು ಕಿಟೆಲರು ನಿಧನರಾದರು.
ಕಿಟೆಲರು 1855ರಲ್ಲಿ ಬೈಬಲಿನ ಎರಡನೆಯ ಹೊಸ ಒಡಂಭಡಿಕೆಯ ಕೆಲವು ಭಾಗಗಳನ್ನು ಭಾಷಾಂತರಿಸಿದರು. 1858ರಿಂದ ‘ಸಂಸಾರ ಕ್ರಮ’, ‘ಉಭಯ ಮಾರ್ಗ’, ‘ನಂಬಿ ಜೀವಿಸಿರಿ’, ‘ಡೇನಿಯಲನೂ ಅವನ ಜತೆಗಾರರೂ’ ಎಂಬಿತ್ಯಾದಿ ಪ್ರಬಂಧಗಳನ್ನು ಪ್ರಕತಿಟಿಸಿದರಲ್ಲದೆ ಹಲವಾರು ಉತ್ತಮ ಗುಣಮಟ್ಟದ ಪಠ್ಯಪುಸ್ತಕಗಳನ್ನೂ ಬರೆದರು.
ಕಿಟೆಲರ ಸ್ವಂತ ಪದ್ಯ ಕೃತಿ ‘ಕಥಾಮಾಲೆ’ 1862ರಲ್ಲಿ ಪ್ರಕಟವಾಯಿತು. ಅದು ಏಸುವಿನ ಜೀವನ ವೃತ್ತಾಂತದ ಕಥನ ಆಗಿದೆ. ಇದರಲ್ಲಿ 280 ಭಾಮಿನಿ ಷಟ್ಪದಿ, 75 ವಾರ್ಧಕ ಷಟ್ಪದಿ ಹಾಗೂ 175 ಪೂರ್ವೀರಾಗದ ಹಾಡುಗಳಿವೆ. ಕಿಟೆಲ್ ಮಂಗಳೂರಿನ ‘ವಿಚಿತ್ರ ವರ್ತಮಾನ ಸಂಗ್ರಹ’, ‘ಸಚಿತ್ರ ಕನ್ನಡ ಮಾಸ ಪತ್ರಿಕೆ’ಗಳಲ್ಲಿ ದುಡಿದುದಲ್ಲದೆ, ಬಿ. ಎಲ್. ರೈಸ್ ಅವರು ನಡೆಸುತ್ತಿದ್ದ ‘ಅರುಣೋದಯ’ ಪತ್ರಿಕೆಯ ಸಹ ಸಂಪಾದಕರಾಗಿ ಸಹಾ ದುಡಿದಿದ್ದಾರೆ. ಹೆನ್ರಿ ಮೊರಿಸ್ ಬರೆದ ‘History of England’ ಎಂಬ ಚರಿತ್ರೆಯ ಗ್ರಂಥವನ್ನು 1864ರಲ್ಲಿ ಕನ್ನಡಕ್ಕೆ ಅನುವಾದಿಸಿದರು. ಅದೇ ವರ್ಷ ಅವರ ‘ಪಂಚತಂತ್ರ’ ಬೆಳಕನ್ನು ಕಂಡಿತು.
1865ರಲ್ಲಿ ‘Coorg Superstitions’ ಎಂಬ ಲೇಖನದಲ್ಲಿ ಕೊಡಗಿನಲ್ಲಿಯ ಭೂತಾರಾದನೆಯನ್ನು ಪ್ರಸ್ತಾಪಿಸಿ ಗುಳಿಗ, ಕುಟ್ಟಿಚಾತ, ಕಲ್ಲುರ್ಟಿ, ಪಂಜುರ್ಲಿ, ಕರಿಂಗಾಳಿ ಮೊದಲಾದ ಭೂತಗಳ ಆರಾಧನೆಯನ್ನು ಐತಿಹಾಸಿಕವಾಗಿ ಕಿಟೆಲ್ ಪರಿಶೀಲಿಸಿದ್ದಾರೆ. ‘ಯೇಸು ಕ್ರಿಸ್ತನ ಶ್ರಮ ಚರಿತ್ರೆ’ಯಲ್ಲಿ ಯೇಸು ಅನ್ಯರಿಗಾಗಿ ಪಟ್ಟ ಶ್ರಮದ ಕಥೆ ಇದೆ. ಇದು ಸರಳ ಕನ್ನಡ ಗದ್ಯಶೈಲಿಗೆ ಉತ್ತಮ ಉದಾಹರಣೆಯಾಗಿದೆ. 1865ರಲ್ಲಿ ಕಿಟೆಲ್ಲರಿಂದ ‘ಕನ್ನಡ ಸಂಗೀತಗಳು’ ಎಂಬ ಸಂಕಲನ ರಚಿತವಾಗಿ ಬೆಳಕನ್ನು ಕಂಡಿತು. ಇದರಲ್ಲಿ ದೇಶಿಯ ಕವಿಗಳ ಪದ್ಯಗಳ ಸಂಗ್ರಹವಲ್ಲದೆ ತಮ್ಮ ಸ್ವಂತ ಧಾರ್ಮಿಕ ಕವನಗಳೂ ಇದ್ದವು. ಆ ವರ್ಷ ಪ್ರಾರಂಭಗೊಂಡ ‘ವೃತ್ತಾಂತ ಬೋಧಿನಿ’ ಪತ್ರಿಕೆಯಲ್ಲಿ ಕಿಟೆಲರು ಕನ್ನಡ ಸಾಹಿತ್ಯ ಮತ್ತು ಚರಿತ್ರೆಯನ್ನು ಕುರಿತ ಅನೇಕ ವಿದ್ವತ್ಪೂರ್ಣ ಲೇಖನಗಳನ್ನು ಬರೆದಿದ್ದಾರೆ. ಕಿಟೆಲರು 1865ರಲ್ಲಿ ‘ಸಂಕ್ಷೇಪ ವ್ಯಾಕರಣ’ ಎಂಬ ಕನ್ನಡದ ವ್ಯಾಕರಣವನ್ನು ಪ್ರಕಟಿಸಿ ಆ ಬಳಿಕ ಅದನ್ನು ಪರಿಷ್ಕರಿಸಿ ‘ಹಳೆಗನ್ನಡ ವ್ಯಾಕರಣ ಸೂತ್ರಗಳು’ ಎಂಬುದಾಗಿ 1866ರಲ್ಲಿ ಬೆಳಕಿಗೆ ತಂದರು. 1865ರಲ್ಲಿ ಬೆಳಕನ್ನು ಕಂಡ ‘ಸಂಣ ಕರ್ನಾಟಕ ಕಾವ್ಯಮಾಲೆ’ ಎಂಬ ಕವನ ಸಂಗ್ರಹದಲ್ಲಿ ‘ಬಸವ ಪುರಾಣ’, ‘ಪ್ರಭುಲಿಂಗಲೀಲೆ’, ‘ಕುಮಾರವ್ಯಾಸ ಭಾರತ’, ‘ಭಾಗವತ’, ‘ಗಿರಿಜಾ ಕಲ್ಯಾಣ’ ಇತ್ಯಾದಿ ಪ್ರಾಚೀನ ಕನ್ನಡ ಕವಿಗಳ ಪದ್ಯಗಳೊಂದಿಗೆ ತಮ್ಮ ಸ್ವಂತ ಕವನಗಳನ್ನೂ ಸೇರಿಸಿ ಈ ಪದ್ಯಗಳಿಗೆ ಸಂಬಂಧಿಸಿದಂತೆ ವಿಸ್ತೃತ ಪದಕೋಶವನ್ನೂ ಕೂಡಿಸಿದ್ದರು. 1868ರ ‘ಕರ್ನಾಟಕ ವಾಗ್ವಿಧಾಯಿನಿ’ ಸಾಹಿತ್ಯ ಪತ್ರಿಕೆಯಲ್ಲಿ ರೈಸ್, ಸ್ಯಾಂಡರ್ಸನ್ ಮೊದಲಾದವರೊಡನೆ ಸೇರಿಕೊಂಡು ಕನ್ನಡ ವ್ಯಾಕರಣವನ್ನು ಧಾರಾವಾಹಿಯಾಗಿ ಪ್ರಕಟಿಸಿದ್ದಾರೆ.
1871ರವೇಳೆಗೆ ಬಾಸೆಲ್ ಮಿಶನ್ ಸಂಸ್ಥೆ ಕಿಟೆಲರ ಕನ್ನಡ ಭಾಷಾ ಪ್ರಭುತ್ವ ಹಾಗೂ ವಿದ್ವತ್ತನ್ನು ಗಮನಿಸಿ ಕನ್ನಡ-ಇಂಗ್ಲಿಷ್ ಶಬ್ದಕೋಶವನ್ನು ರಚಿಸಲು ಅವರನ್ನು ಒತ್ತಾಯಿಸಿತು. 1872ರಲ್ಲಿ ಕಿಟೆಲರು ಕೇಶೀರಾಜನ ‘ಶಬ್ದಮಣಿದರ್ಪಣ’ವನ್ನು 9 ಹಸ್ತಪ್ರತಿಗಳ ಆಧಾರದಿಂದ ಸಂಪಾದಿಸಿ ಅಲ್ಲಿಯ ಸೂತ್ರಗಳ ಸಾರಾಂಶವನ್ನು ಇಂಗ್ಲಿಷಿಗೆ ಭಾಷಾಂತರಿಸಿದರು. 1872ರಿಂದ ಅವರು ಇಂಗ್ಲಿಷಿನಲ್ಲಿ ಬರೆದ 24 ಅಮೂಲ್ಯ ಲೇಖನಗಳು ‘Indian Antiquery’ ಎಂಬ ನಿಯತಕಾಲಿಕೆಯಲ್ಲಿ ಸಿಗುತ್ತದೆ. ಅವುಗಳಲ್ಲಿ ದ್ರಾವಿಡ ಸಂಖ್ಯಾವಾಚಕಗಳಲ್ಲದೆ ಹಲವಾರು ದ್ರಾವಿಡ ಪದಗಳ ನಿಷ್ಪತ್ತಿಯನ್ನು ಕುರಿತೂ ಚರ್ಚಿಸಿದ್ದಾರೆ. ಯೂರೋಪಿಯನ್ ಭಾಷೆಗಳಲ್ಲಿಯೂ ಅವರು ಕನ್ನಡ ಹಾಗೂ ಇತರ ದ್ರಾವಿಡ ಭಾಷೆಗಳ ಬಗೆಗೆ ಲೇಖನಗಳನ್ನು ಬರೆದಿದ್ದಾರೆ.
1873ರಲ್ಲಿ ಮಂಗಳೂರು ಬಾಸೆಲ್ ಮಿಶನ್ ಪ್ರಕಟಣಾಲಯದವರು ಕಿಟೆಲರು ಅನುವಾದಿಸಿದ ‘ಹೊಸ ಒಡಂಬಡಿಕೆ’ಯನ್ನು ಬೆಳಕಿಗೆ ತಂದರು. ಇದು ಅವರ ಹೆಸರುವಾಸಿ ಬೈಬಲ್ ಕೃತಿ. ಅದೇ ವರ್ಷ ಕರ್ನಾಟಕದ ವೈಷ್ಣವ ದಾಸರ ಬಗೆಗೆ ಸಂಶೋಧನೆ ನಡೆಯಿಸುತ್ತಾ ಪುರಂದರ, ಕನಕ, ಮಾಧವ, ವಿಠ್ಠಲ, ವಿಜಯದಾಸ, ವೆಂಕಟದಾಸ ಮೊದಲಾದವರ ಕೃತಿಗಳನ್ನು ಸಂಗ್ರಹಿಸಿ, ಅವುಗಳಲ್ಲಿ ಕೆಲವನ್ನು ಇಂಗ್ಲಿಷಿಗೆ ಅವರು ಭಾಷಾಂತರಿಸಿದರು. 1875ರಲ್ಲಿ ‘ಕರ್ನಾಟಕ ಕಾವ್ಯಮಾಲೆ’ ಪ್ರಕಟವಾಯಿತು. ಅದೇ ವರ್ಷ ನಾಗವರ್ಮನ ‘ಛಂದೋಬುಧಿ’ಯನ್ನು ಮುದ್ರಿಸಿ ಪ್ರಕಟಿಸಿದರು. ಅಲ್ಲಿಯತನಕ ತಾಳೆಯಗರಿಗಳಲ್ಲಿದ್ದ ಇಂಥಹ ಕೃತಿಗಳನ್ನು ಪ್ರಕಟಿಸಿದ ಕೀರ್ತಿ ಕಿಟೆಲರಿಗೆ ಸಲ್ಲುತ್ತದೆ. ಕನ್ನಡದಲ್ಲಿ ವೈಜ್ಞಾನಿಕ ರೀತಿಯ ಗ್ರಂಥ ಸಂಪಾದನೆ ಕಿಟೆಲ್ ಅವರಿಂದಲೇ ಆರಂಭವಾದುದರಿಂದ ಅವರೇ ಈ ಕ್ಷೇತ್ರದ ಪಿತಾಮಹರು.
1875ರಲ್ಲಿ ‘Lingayat Lengends’ ಎಂಬ ತಮ್ಮ ಸುದೀರ್ಘ ಲೇಖನದಲ್ಲಿ ವೀರಶೈವ ಧರ್ಮ, ಇತಿಹಾಸ, ಸಾಹಿತ್ಯದ ಬಗೆಗೆ ಅರ್ಥಗರ್ಭಿತವಾಗಿ ಬರೆದಿದ್ದಾರೆ. ಅದೇ ವರ್ಷ ‘Jaina, Vaishnava and Shaiva Literature’ ಎಂಬ ಸಂಶೋಧನಾತ್ಮಕ ಲೇಖನದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಸ್ಥೂಲ ಚಿತ್ರಣ ನೀಡಿದ್ದಾರೆ. ಇನ್ನೊಂದೆಡೆ ನಿಜಗುಣ ಶಿವಯೋಗಿ ವೀರಶೈವನೆಂದು ಆಧಾರಸಮೇತವಾಗಿ ತೀರ್ಮಾನಿಸಿದ್ದಾರೆ. 1876ರಲ್ಲಿ ‘Washerman Virasena’ ಎಂಬ ಕಥೆಯ ಮೂಲಕ ವೀರಶೈವ ಪುರಾಣದ ಪರಿಚಯವನ್ನು ಕಿಟೆಲ್ ಮಾಡಿದ್ದಾರೆ. 1877ರಲ್ಲಿ ‘ಕರ್ನಾಟಕ ಕಾವ್ಯಮಂಜರಿ’ಯನ್ನು ಪ್ರಕಟಿಸಿದರು. ಇದರಲ್ಲಿ ಅವರು ಹಳಗನ್ನಡದ ಸೊಗಸಾದ ಪದ್ಯಗಳನ್ನು ಆಯ್ದು, ಸ್ವಕವನಗಳನ್ನೂ ಸೇರಿಸಿದ್ದಾರಲ್ಲದೆ, ಟೀಕೆ, ಶಬ್ದಕೋಶ ಇತ್ಯಾದಿಗಳನ್ನು ಕೂಡಿಸಿದ್ದಾರೆ. 1877ರಲ್ಲಿ ಇಲ್ಲಿಯ ಹವೆಯ ಅನಾನುಕೂಲತೆಯಿಂದಾಗಿ ಕಿಟೆಲ್ ತಮ್ಮ ಶಬ್ದಕೋಶದ ಹಸ್ತಪ್ರತಿಯೊಂದಿಗೆ ಜರ್ಮನಿಗೆ ತೆರಳಿದರು. 1877ರಲ್ಲಿ ‘The Kongu Inscriptions’ ಎಂಬ ಲೇಖನವನ್ನೂ, 1878ರಲ್ಲಿ ‘ಕೆನರೀಸ್ – ಇಂಗ್ಲಿಷ್ ಡಾಯಲಾಗ್’ ಎಂಬ ಪುಸ್ತಕವನ್ನೂ ಬರೆದರು. ಈ ಪುಸ್ತಕದಲ್ಲಿ ಶಿಕ್ಷಕರು ಕಲಿಸುವ ರೀತಿಯನ್ನು ತೋರಿಸಿಕೊಟ್ಟಿದ್ದಾರೆ. 1880ರಲ್ಲಿ ಸಂಸ್ಕೃತ ಸಣ್ಣ ವ್ಯಾಕರಣ ಎಂಬ ಕಿರುಹೊತ್ತಗೆಯನ್ನು ಬರೆದರು. ಅದು ಬಹಳ ಜನಪ್ರಿಯವಾಗಿತ್ತು.
1882ರಲ್ಲಿ ಕಿಟೆಲ್ ಧಾರವಾಡಕ್ಕೆ ಬಂದು ಕನ್ನಡ –ಇಂಗ್ಲಿಷ್ ಶಬ್ದಕೋಶದ ರಚನಾಕಾರ್ಯವನ್ನು ಮುಂದುವರೆಸಿದರು. 1889ರಲ್ಲಿ ‘ಹಳಗನ್ನಡ ವ್ಯಾಕರಣ ಸೂತ್ರಗಳು’ ಪ್ರಕಟವಾಯಿತು. ಅದೇ ವರ್ಷ ಧಾರವಾಡದ ಅನೇಕ ವಿದ್ವಾಂಸರೊಂದಿಗೆ ವಿಚಾರ ವಿನಿಮಯ ನಡೆಯಿಸಿ ‘ಕನ್ನಡ-ಇಂಗ್ಲಿಷ್ ಶಬ್ದಕೋಶ’ದ ಹಸ್ತ ಪ್ರತಿಯನ್ನು ಮುದ್ರಣಕ್ಕಾಗಿ ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್ಸಿಗೆ ಒಪ್ಪಿಸಿದರು. ಅದು 1894ರಲ್ಲಿ ಬೆಳಕನ್ನು ಕಂಡಿತು.
ಕಿಟೆಲ್ಲರ ‘ಕನ್ನಡ-ಇಂಗ್ಲಿಷ್ ಶಬ್ದಕೋಶ’ ಕನ್ನಡದ ಹಾಗೂ ಭಾರತೀಯ ಭಾಷೆಗಳಲ್ಲಿ ಅತ್ಯಂತ ಪ್ರಮಾಣಬದ್ಧವಾದ ಹಾಗೂ ವೈಜ್ಞಾನಿಕ ಪದ್ಧತಿಯನ್ನೊಳಗೊಂಡ ಸರ್ವಸಂಗ್ರಾಹಕ ವಿವರಣಾತ್ಮಕ ಶಬ್ದಕೋಶವಾಗಿದೆ. ಈ ಮೇರುಕೃತಿಯಲ್ಲಿ 1762 ಬೃಹತ್ ಗಾತ್ರದ ಪುಟಗಳಿವೆಯಲ್ಲದೆ ಸುಮಾರು 70,000 ಶಬ್ಧಗಳನ್ನು ಅದು ಒಳಗೊಂಡಿದೆ. ಈ ಕೋಶದ ಪುಟ ಪುಟಗಳಲ್ಲಿ ಕಿಟೆಲರ ಅಪಾರ ವಿದ್ವತ್ತು ಪುಟಿದು ಕಾಣುತ್ತದೆ. 1889ರಿಂದ ಅದರ ಮುದ್ರಣ ಪ್ರಾರಂಭಗೊಂಡು 1894ರಲ್ಲಿ ಅದು ಮುಗಿದಾಗ ಕಿಟೆಲರು ಕಣ್ಣುನೋವು ಮತ್ತು ತಲೆನೋವುಗಳಿಂದ ನರಳುತ್ತಿದ್ದರು. ತಮ್ಮ ಹುಟ್ಟೂರಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗಲೇ ಶಬ್ದಕೋಶ ಪರಿವೀಕ್ಷಣಾ ಕಾರ್ಯವನ್ನು ಮಾಡಿದ್ದರಲ್ಲದೆ ಬಹು ಉಪಯುಕ್ತ ಮುನ್ನುಡಿಯನ್ನು ಬರೆದು 1893ರಲ್ಲಿ ಕಳುಹಿಸಿದರು. 1894ರಲ್ಲಿ ಕಿಟೆಲರ ಪರಮೋಚ್ಚವಾದ ಈ ಕೃತಿ ಬೆಳಕನ್ನು ಕಂಡಿತು.
ಕೋಶದಲ್ಲಿ ಅಡಕವಾಗಿರುವ ಅಪಾರವಾದ ಶಬ್ದಸಂಪತ್ತು, ಕನ್ನಡದ ವಿವಿಧ ಪ್ರಾದೇಶಿಕ ಹಾಗೂ ಸಾಮಾಜಿಕ ಉಪಭಾಷೆಗಳ ಮಾತುಗಳು; ಗಾದೆ ನಾಣ್ಣುಡಿಗಳು; ಹಳಗನ್ನಡ, ಹೊಸಗನ್ನಡ ಪ್ರಯೋಗಗಳು ಕಿಟೆಲರ ಪರಿಶ್ರಮ, ಕರ್ತವ್ಯನಿಷ್ಠೆ, ಅಚ್ಚುಕಟ್ಟುತನ, ವೈಜ್ಞಾನಿಕತೆ, ವಿದ್ವತ್ತುಗಳೆಲ್ಲವನ್ನೂ ಪ್ರತಿಬಿಂಬಿಸುತ್ತವೆ.
1903ರಲ್ಲಿ ಕಿಟೆಲರ 483ಪುಟದ 28ಅಧ್ಯಾಯಗಳ ಬೃಹತ್ ಕನ್ನಡ ವ್ಯಾಕರಣ ಗ್ರಂಥ ‘A Grammar of Kannada Language’ ಬಾಸೆಲ್ ಮಿಶನ್ ಮುದ್ರಣಾಲಯದಲ್ಲಿ ಅಚ್ಚಾಗಿ ಪ್ರಕಟವಾಯಿತು. ಆ ಮಹತ್ತರವಾದ ಕೃತಿಯಲ್ಲಿ, ಹಳಗನ್ನಡ ಮತ್ತು ಹೊಸಗನ್ನಡ ಎಂಬ ಕನ್ನಡದ ಬೆಳವಣಿಗೆಯ ವಿವಿಧ ಘಟ್ಟಗಳ ವಿವರಣೆ ಇದೆಯಲ್ಲದೆ ಪ್ರಾದೇಶಿಕ ಹಾಗೂ ಜನಪದ ಪ್ರಯೋಗಗಳನ್ನು ಕಾಣಬಹುದು.
ಸಾಂಸ್ಕೃತಿಕ ಸೇವಾಕರ್ತರು ಹಾಗೂ ಧಾರ್ಮಿಕ ಗುರುಗಳು ತಾವು ದುಡಿಯುವ ಕ್ಷೇತ್ರದ ಸಂಸ್ಕೃತಿ ಭಾಷೆ, ಸಾಹಿತ್ಯಗಳ ಬಗೆಗೆ ಆಸಕ್ತಿ ವಹಿಸಿ ಅದರ ಅಭ್ಯುದಯಕ್ಕೆ ಯಾವ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂಬುದಕ್ಕೆ ಪೂಜ್ಯ ಕಿಟೆಲರು ಒಂದು ಅತ್ಯುತ್ತಮ ಉದಾಹರಣೆ.
ಹೀಗೆ ಕನ್ನಡಕ್ಕೆ ಅಪಾರವಾಗಿ ಸೇವೆ ಸಲ್ಲಿಸಿದ ಕಿಟೆಲ್ ಅವರ ಈ ಜನ್ಮದಿನದಂದು, ಅವರ ಕುರಿತು ಕನ್ನಡದ ಮಹಾನ್ ವಿದ್ವಾಂಸ, ಸಂಶೋದಕ ಮತ್ತು ಬರಹಗಾರರಾದ ಡಿ. ಎಲ್. ಎನ್ ಅವರು ಹೇಳಿರುವ ಈ ಮಾತನ್ನು ನೆನೆಯುವುದು ನಾವು ಅವರಿಗೆ ಸಲ್ಲಿಸುವ ಶ್ರೇಷ್ಠ ಗೌರವವಾಗುತ್ತದೆ. “ಶಾಸ್ತ್ರೀಯವಾದ ಮಾರ್ಗದಲ್ಲಿ ಕನ್ನಡ ವಿದ್ವತ್ತು ಬೆಳೆಯುವುದಕ್ಕೆ ಕಿಟೆಲ್ ಶ್ರಮಿಸಿದರು. ಕನ್ನಡದ ಋಷಿಗಳಲ್ಲಿ ಅವರೂ ಒಬ್ಬರು. ಜರ್ಮನಿಯಲ್ಲಿ ಹುಟ್ಟಿದ ಅವರು ಕನ್ನಡಿಗರಾಗಿ ಮೆರೆದರು. ಅವರನ್ನು ಸ್ಮರಿಸಿಕೊಳ್ಳುವುದು ಪವಿತ್ರ ವಸ್ತುವೊಂದನ್ನು ಧ್ಯಾನಿಸಿದಂತೆ ಪುಣ್ಯಕರವಾದದ್ದು.” ಡಿ. ಎಲ್. ಎನ್ ಅವರ ಈ ಮಾತು ಎಲ್ಲ ಕನ್ನಡಿಗರ ಹೃದಯದ ಮಾತಿನ ಪ್ರಾತಿನಿಧ್ಯ ದನಿಯಾಗಿದೆ.
On the birth anniversary of Reverend Ferdinand Kittel
ಕಾಮೆಂಟ್‌ಗಳು