ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕುಮಾರ ಗಂಧರ್ವ


 ಪಂಡಿತ್ ಕುಮಾರ ಗಂಧರ್ವ


ಪಂಡಿತ್ ಕುಮಾರ ಗಂಧರ್ವ ಹಿಂದೂಸ್ಥಾನಿ ಸಂಗೀತಲೋಕದ ಮಹಾನ್ ಸಾಧಕರು.

ಕುಮಾರ ಗಂಧರ್ವರು 1924ರ ಏಪ್ರಿಲ್ 8ರಂದು ಬೆಳಗಾವಿ ಜಿಲ್ಲೆಯ ಸೂಳಿಭಾವಿಯಲ್ಲಿ ಜನಿಸಿದರು. ಅವರ ಮೂಲ ಹೆಸರು  ಶಿವಪುತ್ರ ಕೊಂಕಾಳಿಮಠ. ಶಿವಪುತ್ರನ ತಂದೆ ಸಿದ್ಧರಾಮಯ್ಯ ಸ್ವತಃ ಸಂಗೀತಗಾರರಾಗಿದ್ದರು. ಸೋದರಮಾವ ಕಲ್ಲಯ್ಯಸ್ವಾಮಿ ರಂಗಭೂಮಿಯಲ್ಲಿ ಪ್ರಸಿದ್ಧ ಗಾಯಕ ಮತ್ತು ನಟರಾಗಿದ್ದರು. ಅವರು ಶಿವಪುತ್ರನಿಗೆ ನಾಲ್ಕು ವರ್ಷ ಇರುವಾಗಲೇ ಸಂಗೀತ ದೀಕ್ಷೆ ನೀಡಿದ್ದರು. ಆ ಮೇಲೆ ತಂದೆ ಜವಾಬ್ದಾರಿ ವಹಿಸಿಕೊಂಡರು.

ಶಿವಪುತ್ರರದು ಬಾಲಪ್ರತಿಭೆ. ಐದು ವರ್ಷದವನರಿದ್ದಾಲೇ ದಾವಣಗೆರೆಯಲ್ಲಿ ಪ್ರಥಮ ಕಛೇರಿ ನೀಡಿದರು. ಆರು ವರ್ಷದವರಿದ್ದಾಗ ಇವರ ಗಾಯನ ಕೇಳಿ ಗುಲ್ಬರ್ಗಾ ಜಿಲ್ಲೆಯ ಗುರುಕಲ್ಮಠದ ಶಾಂತವೀರ ಸ್ವಾಮಿಗಳು “ಓಹೋ! ಇವನು ಕುಮಾರ ಗಂಧರ್ವ” ಎಂದು ಉದ್ಘರಿಸಿದರು. ಅದೇ ಅವರ  ಪ್ರಸಿದ್ಧ  ಹೆಸರಾಯಿತು. 1935ರ ವರ್ಷದಲ್ಲಿ  ಅಲಹಾಬಾದಿನಲ್ಲಿ  ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಹನ್ನೊಂದು ವರ್ಷದ ಬಾಲಕ ಸಂಗೀತ ದಿಗ್ಗಜರ ಎದುರಲ್ಲಿ ಹಾಡಿ ದಿಗ್ಭ್ರಮೆ ಮೂಡಿಸಿದ್ದ.  ಕುಮಾರ ಗಂಧರ್ವರ ಸಂಗೀತಯಾತ್ರೆ ಕಲಕತ್ತಾ, ಆಗ್ರಾ, ಕರಾಚಿ, ನಾಗಪುರ ಮೂಲಕ ಮುಂಬಯಿ ಮುಟ್ಟಿತು.

ಸಿದ್ಧರಾಮಯ್ಯನವರು  ಮಗ ಕುಮಾರ ಗಂಧರ್ವನನ್ನು ಮುಂಬಯಿಯ ಪ್ರೊ. ಬಿ.ಆರ್. ದೇವಧರ ಅವರಲ್ಲಿ ಕರೆದೊಯ್ದರು. ದೇವಧರರು ಕುಮಾರಗಂಧರ್ವನಿಗೆ ತನ್ನದೇ ಪ್ರತಿಭೆಯನ್ನು ವಿಕಸಿಸಿಕೊಳ್ಳಲು ಪ್ರೋತ್ಸಾಹಿಸಿದರು. ಕುಮಾರ ಗಂಧರ್ವರು ಆರೋಹ-ಅವರೋಹ, ವಾದಿ-ಸಂವಾದಿ, ತಾಳ-ಲಯ, ರಾಗಧಾಟುಗಳ ತಾಂತ್ರಿಕಾಂಶಗಳನ್ನು ಕರಗತ ಮಾಡಿಕೊಂಡರು. ಕುಮಾರ ಗಂಧರ್ವ 1933ರಿಂದ 1943ರ ವರೆಗೆ ದೇವಧರರಲ್ಲಿ ಅಭ್ಯಾಸ ಮಾಡಿದರು.  ದೇವಧರರು ಕುಮಾರ ಗಂಧರ್ವರನ್ನು ಅಂಜನಿಬಾಯಿ ಮಾಲ್ಪೆಕರ ಅವರ ಬಳಿ ಕರೆದೊಯ್ದರು. ಕುಮಾರ ಗಂಧರ್ವರ ಮೇಲೆ ಪ್ರೊ.ಬಿ.ಆರ್. ದೇವಧರ ಮತ್ತು ಅಂಜನಿಬಾಯಿ ಮಾಲ್ಪೆಕರರ ಪ್ರಭಾವ ಅಷ್ಟಿಷ್ಟಲ್ಲ.

1947ರಲ್ಲಿ ಕುಮಾರ ಗಂಧರ್ವರಿಗೆ ಗಂಭೀರ ಪುಪ್ಪುಸ ಕ್ಷಯರೋಗ ತಗಲಿ ಒಂದು ಪಪ್ಪುಸವನ್ನೆ ತೆಗೆಯಬೇಕಾಯಿತು. ಡಾಕ್ಟರರು ಮಾತಾಡುವುದನ್ನೂ ನಿಷೇಧಿಸಿದರು. ಸಂಗೀತಪ್ರೇಮಿ ದಿ. ರಾಮಭಯ್ಯಾ ದಾತೆ ಕುಮಾರ ಗಂಧರ್ವರನ್ನು ಮಧ್ಯ ಪ್ರದೇಶದ ದೇವಾಸಕ್ಕೆ ಕರೆದೊಯ್ದರು. ದೇವಾಸದ ಮಹಾರಾಜನ ಉದಾರ ಸಹಾಯದೊಂದಿಗೆ ಔಷಧೋಪಚಾರ ವ್ಯವಸ್ಥೆ ಮಾಡಿದರು. ದೇವಾಸದಲ್ಲಿದ್ದಾಗ ಮಾಳವಾ ಪ್ರದೇಶದ ಜಾನಪದ ಸಂಗೀತವನ್ನು ಅರಗಿಸಿಕೊಳ್ಳತೊಡಗಿದರು. ಬಹಳಷ್ಟು ಲೋಕಗೀತೆಗಳನ್ನು ಸಂಗ್ರಹಿಸಿದರು. ಲೋಕಸಂಗೀತ ಮತ್ತು ಶಾಸ್ತ್ರೀಯ ಸಂಗೀತಗಳ ಬೆಸುಗೆ ಕುಮಾರ ಗಂಧರ್ವರ ವಿಶಿಷ್ಟ ಕೊಡುಗೆ. ಅನಾರೋಗ್ಯ ಒಂದು ರೀತಿಯಲ್ಲಿ ವರವೇ ಆಯಿತು. “ಅನಾರೋಗ್ಯಕ್ಕಿಂತ ಮೊದಲು ನಾನು ಸಂಗೀತವನ್ನು ಗಿಳಿಪಾಠದಂತೆ ಪುನರುಕ್ತಿಸುತ್ತಿದ್ದೆ. ಅನಾರೋಗ್ಯ ನನ್ನ ಆಂತರ್ಯದ ಬಾಗಿಲನ್ನು ತೆರೆಯಿತು” ಎಂದರು ಕುಮಾರ ಗಂಧರ್ವ.

1954ರ ಜನವರಿ 12ರಂದು ಅಲಹಾಬಾದಿನ ಪ್ಯಾಲೆಸ್‌ ಥಿಯೇಟರಿನಲ್ಲಿ ಏಳು ವರ್ಷದ ಮೌನದ ನಂತರ ಕುಮಾರ ಗಂಧರ್ವರ ಪ್ರಥಮ ಕಛೇರಿ ನಡೆಯಿತು. ಕುಮಾರ ಗಂಧರ್ವರ ಧ್ವನಿ ಬದಲಾಗಿತ್ತು. ಮಂದ ಮಾರುತದಂತಿದ್ದ ಅವರ ಭಿನ್ನ ಗಾಯನಶೈಲಿ ಸ್ವೀಕೃತವಾಯಿತು. ಕುಮಾರ ಗಂಧರ್ವ ಸಂಗೀತಾತ್ಮಕವಾಗಿ ಮರುಹುಟ್ಟು ಪಡೆದರು.

ಹಲವು ಘರಾಣೆಗಳ ಉತ್ತಮಾಂಶಗಳನ್ನು ಹೀರಿಕೊಂಡಿದ್ದರೂ ಕುಮಾರ ಗಂಧರ್ವರ ಸೃಜನಶೀಲ ಚೇತನ ಘರಾಣೆ ಗಡಿಗಳನ್ನು ಮೀರಿತ್ತು. ಪ್ರಚಲಿತ ರಾಗಗಳನ್ನು ಪ್ರಸ್ತುಪಡಿಸುವಲ್ಲಿಯೆ ತೃಪ್ತಿ ಕಾಣದ ಕುಮಾರ ಗಂಧರ್ವ ಲೋಕಸಂಗೀತದ ಆದಿಮಲೋಕಕ್ಕೆ ಹೊರಳಿದರು. ಅಲ್ಲಿಂದ ಪುಟಿದೆದ್ದವು ಕುಮಾರ ಗಂಧರ್ವರ ಧುನ್‌ ಉಗಮ ರಾಗಗಳು. ಅವರು ಲಗನ ಗಾಂಧಾರ, ಮಾಲವತಿ, ಭಾವಮತ ಭೈರವ, ಸಾಂಜರಿ, ಮಘವಾ, ಸಹೇಲಿ ತೋಡಿ, ಮಧು ಸೂರಜ, ರಾಹಿ, ಅಹಿರಮೋಹಿನಿ, ಸೋಹನಿ ಭಟಿಯಾರ, ನಿಂದಿಯಾರಿ ಮತ್ತು ಗಾಂಧಿ ಮಲ್ಹಾರ ಎಂಬ 12 ರಾಗಗಳನ್ನು ಸೃಷ್ಟಿಸಿದರು.

ಕುಮಾರ ಗಂಧರ್ವರು ಅಸ್ತಿತ್ವದಲ್ಲಿದ್ದ ರಾಗಗಳನ್ನು ಮತ್ತು ತಮ್ಮವೇ ರಾಗಗಳನ್ನು ಋತುಮಾನಕ್ಕನುಗುಣವಾಗಿ ವರ್ಗೀಕರಿಸಿ ಹಾಡುತ್ತಿದ್ದರು. “ತ್ರಿವೇಣಿ”ಯು ಸೂರದಾಸ, ಕಬೀರ ಮತ್ತು ಮೀರಾ ಭಜನಗಳ ಗುಚ್ಛ. ಈ ಸಂತರ ಆತ್ಮವನ್ನೇ ಪ್ರವೇಶಿಸಿರುವರೊ ಎನ್ನವಂತೆ ಭಾವನಾತ್ಮಕವಾಗಿ ಹಾಡುತ್ತಿದ್ದರು.

ಕುಮಾರ ಗಂಧರ್ವರು 1965ರಲ್ಲಿ ಅನೂಪ ರಾಗ ವಿಲಾಸ ಎಂಬ ಪುಸ್ತಕ ಪ್ರಕಟಿಸಿದರು. ಅದು ಅವರ ಹತ್ತು ವರ್ಷಗಳ ಸಂಶೋಧನೆಯ ಫಲ.

ಕುಮಾರ ಗಂಧರ್ವರಿಗೆ ಉಜ್ಜನಿಯ ವಿಕ್ರಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌, 1973 ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, 1974 ಪದ್ಮವಿಭೂಷಣ, ಕಾಳಿದಾಸ ಸಮ್ಮಾನ 1984 ಮುಂತಾದ ಗೌರವಗಳು ಸಂದಿದ್ದವು.

ಕುಮಾರ ಗಂಧರ್ವರು 1992ರ  ಜನವರಿ 12 ರಂದು ನಿಧನರಾದರು.

On the birth anniversary of great vocalist Pandit Kumara Gandharva 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ