ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಡಿ. ಜಯಕಾಂತನ್


ಡಿ. ಜಯಕಾಂತನ್

ಖ್ಯಾತ ಸಾಹಿತಿ ಡಿ. ಜಯಕಾಂತನ್ ಪದ್ಮಭೂಷಣ, ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಗೆ ಭಾಜನರಾದವರು. 

ಜಯಕಾಂತನ್ 1934ರ ಏಪ್ರಿಲ್ 24ರಂದು ಕಡಲೂರಿನ ಕೃಷಿ ಕುಟುಂಬದಲ್ಲಿ ಜನಿಸಿದರು.  ಐದನೇ ಕ್ಲಾಸಲ್ಲಿ ನಪಾಸಾಗಿ ಓದು ನಿಲ್ಲಿಸಿದರು. ಮುಂದೆ ವಿಳುಪ್ಪುರಂಗೆ ಬಂದು ಮಾವನ ಆಶ್ರಯದಲ್ಲಿ ಬೆಳೆದರು. ಮಾವನ ಕಮ್ಯುನಿಸ್ಟ್ ಚಿಂತನೆ ಹಾಗೂ ಕವಿ ಸುಬ್ರಮಣ್ಯ ಭಾರತಿಯವರ ಕೃತಿಗಳಿಂದ ಪ್ರಭಾವಿತರಾದರು.

ಬರವಣಿಗೆಗೆ ಮುನ್ನ ಜಯಕಾಂತನ್ ಅವರು ಮಳಿಗೆಯಂಗಡಿ ಹುಡುಗನಾಗಿ, ಒಬ್ಬ ವೈದ್ಯನ ಚೀಲ ಹೊರುವವನಾಗಿ, ಮಿಷಿನ್‍ನಲ್ಲಿ ಹಿಟ್ಟು ಮಾಡುವವನಾಗಿ, ಮಧುರೈನಲ್ಲಿ ಸಿನಿಮಾ ಹಾಡಿನ ಪುಸ್ತಕ ಮಾರಾಟಗಾರನಾಗಿ ಹೀಗೆ  ಮಾಡದ ಉದ್ಯೋಗವೇ ಇಲ್ಲ.  ಜಯಕಾಂತನ್ ಅವರ ಕಥೆಗಳಲ್ಲಿ ಈ ಬಡತನದ ಪಾತ್ರಗಳು ಜೀವಂತವಾಗಿ ಮೈದಳೆದಿವೆ.

1953ರಲ್ಲಿ ಬರೆದ 'ಸೌಭಾಗ್ಯವತಿ’ ಜಯಕಾಂತನ್ ಅವರ ಮೊದಲ ಕಥೆ. ಮುಂದೆ ಅನೇಕ ಪ್ರಸಿದ್ಧ ಪತ್ರಿಕೆಗಳಲ್ಲಿ ಅವರ ಕಥೆಗಳು ಮನ್ನಣೆ ಗಳಿಸಿದವು. ಕೊಳಗೇರಿಯವರು, ರಿಕ್ಷಾ ಓಡಿಸುವವರು, ಚಿಂದಿ ಆಯುವವರು, ಲೈಂಗಿಕ ಕಾರ್ಯಕರ್ತೆಯರು ಮುಂತಾದ ಶೋಷಿತ ವರ್ಗದ ಸಮಸ್ಯೆಗಳಿಗೆ ಅವರ ಕಥೆ-ಕಾದಂಬರಿಗಳು ಕನ್ನಡಿ ಹಿಡಿದವು. 

‘ಉನ್ನೈಪೋಲ್ ಒರುವನ್’ (ನಿನ್ನ ಹಾಗೇ ಒಬ್ಬ) ಕೊಳಗೇರಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾದಂಬರಿ. ತನ್ನೊಂದಿಗೆ ಒಡನಾಟ ಹೊಂದಿದ ನಟಿಯೊಬ್ಬಳ ಸಮಸ್ಯೆಗಳು ‘ಒರು ನಡಿಗೈ ನಾಡಗಂ ಪಾರ್ಕಿರಾಳ್’ (ಒಬ್ಬ ನಟಿ ನಾಟಕ ನೋಡುತ್ತಿದ್ದಾಳೆ) ಕಾದಂಬರಿಯಾಯಿತು. ಮಹಿಳಾಪರ ನಿಲುವುಗಳು ಅವರ ಕೃತಿಗಳಲ್ಲಿ ಎದ್ದು ಕಾಣುತ್ತವೆ. ತಮಿಳುನಾಡಿನಲ್ಲಿ ಬ್ರಾಹ್ಮಣ ವಿರೋಧಿ ನೀತಿ ವಿಜೃಂಭಿಸಿದ ಕಾಲದಲ್ಲಿ ಇವರು ಬ್ರಾಹ್ಮಣರನ್ನು ಅನುಕಂಪದಿಂದ ನೋಡಿದ್ದು ವಿಶೇಷ. 

ಕಥೆಯಲ್ಲಿ ವೇಗವಿರಬೇಕು; ಕುತೂಹಲ ಕೆರಳಿಸುವಂತಿರಬೇಕು ಎಂದವರಿಗೆ - ‘ಇವೆಲ್ಲವೂ ಕುದುರೆ ರೇಸ್‍ಗೆ ಹೊಂದುತ್ತವೆ, ಸಾಹಿತ್ಯಕ್ಕೆ ಹೊಂದುವುದಿಲ್ಲ’ ಎಂದಿದ್ದರು. ಒಂದು ಪಾತ್ರದ ಬಗ್ಗೆ ಅನಗತ್ಯ ದ್ವೇಷ ಅಥವಾ ಅತೀವ ಅನುಕಂಪ ಹೊಂದುವ ಓದುಗರು ಸಾಹಿತ್ಯದ ಮೂಲಕ ಜೀವನವನ್ನು ಅರ್ಥಮಾಡಿಕೊಳ್ಳಲು ಮರೆತುಬಿಡುತ್ತಾರೆ ಎಂಬುದು ಜಯಕಾಂತನ್ ಅವರ ಅಭಿಪ್ರಾಯವಾಗಿತ್ತು.

15 ಕಾದಂಬರಿಗಳು, 30 ಕಿರು ಕಾದಂಬರಿಗಳು, 200 ಸಣ್ಣಕಥೆಗಳನ್ನೊಳಗೊಂಡ 15 ಕಥಾ ಸಂಕಲನಗಳು ಮತ್ತು 20 ಪ್ರಬಂಧ ಸಂಕಲನಗಳು ಹೀಗೆ ಜಯಕಾಂತನ್ ಅವರದ್ದು ಬೃಹತ್ ಸಾಧನೆ.

ಜಯಕಾಂತನ್ ಅವರ ಐದು ಕಾದಂಬರಿಗಳು ಚಲನಚಿತ್ರಗಳಾಗಿವೆ. ಸ್ವತಃ ತಾವೇ ಮೂರು ಚಲನಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಆ ಪೈಕಿ ‘ಉನ್ನೈಪೋಲ್ ಒರುವನ್’ (1964) ಚಲನಚಿತ್ರ ರಾಷ್ಟ್ರಪತಿಗಳಿಂದ ಮೂರನೇ ಅತ್ಯುತ್ತಮ ಚಿತ್ರಪ್ರಶಸ್ತಿ ಗಳಿಸಿತು. ಅವರು ನಿರ್ದೇಶಿಸಿದ ‘ಯಾರುಕ್ಕಾಗ ಅಳುದಾನ್’ (ಯಾರಿಗಾಗಿ ಅತ್ತ-1966) ಚಿತ್ರದಲ್ಲಿ ಖ್ಯಾತ ಹಾಸ್ಯನಟ ನಾಗೇಶ್ ಮುಖ್ಯ ಪಾತ್ರಧಾರಿ. ‘ಸಿಲ ನೇರಂಗಳಿಲ್ ಸಿಲ ಮನಿದರ್ ಗಳ್’ (ಕೆಲವು ಸಂದರ್ಭಗಳಲ್ಲಿ ಕೆಲವು ಮನುಷ್ಯರು-1972) ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿರುವುದಲ್ಲದೆ, ಖ್ಯಾತ ನಿರ್ದೇಶಕ ಭೀಮ್‍ಸಿಂಗ್ ನಿರ್ದೇಶನದಲ್ಲಿ ಚಲನಚಿತ್ರವಾಗಿ ರಾಷ್ಟ್ರಪತಿ ಪ್ರಶಸ್ತಿ ಗಳಿಸಿತು.

ಪೆರಿಯಾರ್ ಅವರಿಂದ ಶಂಕರಾಚಾರ್ಯರವರೆಗೆ ವಿಶಾಲ ವ್ಯಾಪ್ತಿ ಹೊಂದಿದ್ದ ಜಯಕಾಂತನ್ ಅವರು ಆಸ್ತಿಕರೇ-ನಾಸ್ತಿಕರೇ, ಕಮ್ಯುನಿಸ್ಟರೇ-ಕಾಂಗ್ರೆಸ್ಸಿಗರೇ ಎಂಬುದು ಚರ್ಚೆಯಾಗುತ್ತಿತ್ತು.  ರಾಜೀವ್ ಗಾಂಧಿಯವರ ಹತ್ಯೆಗೆ ಮುನ್ನವೇ ಅವರು ಎಲ್.ಟಿ.ಟಿ.ಇ. ಸಂಘಟನೆಯನ್ನು ವಿರೋಧಿಸಿದ್ದರು.

ಜಯಕಾಂತನ್ 2015ರ ಏಪ್ರಿಲ್ 8ರಂದು  ನಿಧನರಾದಾಗ ಅವರ ವಯಸ್ಸು 81. ಆದರೆ ಅನಾರೋಗ್ಯದ ನಿಮಿತ್ತ ಅವರು ಎರಡೂವರೆ ದಶಕಗಳ ಹಿಂದೆಯೇ ಬರೆಯುವುದನ್ನು ನಿಲ್ಲಿಸಿದ್ದರು. ಜ್ಞಾನಪೀಠ ಪ್ರಶಸ್ತಿ (2002) ಬಂದ ಸಂದರ್ಭಕ್ಕೆ ಅವರು ಬರೆಯುವುದನ್ನು ನಿಲ್ಲಿಸಿ ಒಂದು ದಶಕ ಕಳೆದಿತ್ತು. ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ (1978), ಪದ್ಮಭೂಷಣ (2009) ಪ್ರಶಸ್ತಿಯ ಗೌರವವೂ ಅವರಿಗೆ ಸಂದಿತ್ತು.

On the birth anniversary of novelist D Jayakanthan

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ