ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎನ್. ಅನಂತರಂಗಾಚಾರ್


 ಎನ್. ಅನಂತರಂಗಾಚಾರ್


ಪ್ರೊ. ಎನ್. ಅನಂತರಂಗಾಚಾರ್ ಅವರು ಕನ್ನಡ ಸಾಹಿತ್ಯಲೋಕದ ಮಹಾನ್ ವಿದ್ವಾಂಸರಲ್ಲೊಬ್ಬರು. 

ಅನಂತರಂಗಾಚಾರ್‌ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ 1904ರ ಜೂನ್  4ರಂದು ಜನಿಸಿದರು. ತಂದೆ ಉಪಾಧ್ಯ ನರಸಿಂಹಾಚಾರ್.  ತಾಯಿ ವೆಂಕಟಲಕ್ಷ್ಮಮ್ಮ.

ಅನಂತರಂಗಾಚಾರ್ ಅವರು ಟಿ. ನರಸೀಪುರದ ಎ.ವಿ. ಸ್ಕೂಲಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ನಡೆಸಿ ಮೈಸೂರು ಮಹಾರಾಜ ಹೈಸ್ಕೂಲಿನಲ್ಲಿ ಪ್ರೌಢ ವಿದ್ಯಾಭ್ಯಾಸ ಪಡೆದರು. ಅಧ್ಯಾಪಕರಾಗಿದ್ದ ಎಂ.ಎಚ್. ಕೃಷ್ಣರವರು ಕನ್ನಡಾಭಿಮಾನವನ್ನು ಪ್ರೇರೇಪಿಸಿದರು. 

ಮುಂದೆ ಅನಂತರಂಗಚಾರ್ ಅವರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ಸಂದರ್ಭದಲ್ಲಿ ಎನ್.ಎಸ್. ಸುಬ್ಬರಾವ್, ಎಂ. ಹಿರಿಯಣ್ಣ, ಎ.ಆರ್. ವಾಡಿಯಾ ಮುಂತಾದ ವಿದ್ವಾಂಸರುಗಳು ಇವರ ಗುರುಗಳಾಗಿದ್ದರು. 1927ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಕನ್ನಡ ಎಂ.ಎ. ತರಗತಿ ಪ್ರಾರಂಭಿಸಿದಾಗ ಮೊದಲ ಗುಂಪಿನ ವಿದ್ಯಾರ್ಥಿ ಆದರು. ಪ್ರೊ. ಟಿ. ಎಸ್. ವೆಂಕಣ್ಣಯ್ಯ ಮತ್ತು ಪ್ರೊ. ಎ.ಆರ್. ಕೃಷ್ಣಶಾಸ್ತ್ರಿಗಳಿಂದ ಕನ್ನಡ ಬೋಧನೆ ದೊರಕಿತು. 

ಎಂ.ಎ., ಬಿ.ಟಿ. ಪದವಿ ಪಡೆದ ಅನಂತರಂಗಾಚಾರ್ಯರು ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ಉದ್ಯೋಗ ಆರಂಭಿಸಿದರು. ಮುಂದೆ ಪ್ರಾಚ್ಯವಿದ್ಯಾ ಸಂಶೋಧನಾಲಯಕ್ಕೆ ವರ್ಗಾವಾದಾಗ ಆಚಾರ‍್ಯರ ಸಾಹಿತ್ಯ ರಚನೆಯ ಕಾಲ ಆರಂಭಗೊಂಡಿತು.

ಅನಂತರಂಗಾಚಾರ್ ಅವರು ಹಲವಾರು ಗ್ರಂಥಗಳ ಪರಿಶೋಧನೆ ಮಾಡಿದರು. ಕುಮಾರವ್ಯಾಸ ಭಾರತದ ಯುದ್ಧ ಪಂಚಕವನ್ನು ಸಂಶೋಧಿಸಿ ಪ್ರಕಟಿಸಿದ ಕೀರ್ತಿ ಇವರದಾಯಿತು. ‘ಮಲ್ಲಿಕಾರ್ಜುನರ ಸೂಕ್ತಿ ಸುಧಾರ್ಣವ’ ಗ್ರಂಥವನ್ನು ಅಚ್ಚುಕಟ್ಟಾಗಿ ಸಂಶೋಧಿಸಿ ಸಂಕಲಿಸಿ ಅಕಾರಾದಿಯಾಗಿ ಪ್ರಕಟಣೆ ಮಾಡಿದರು. ಇದಲ್ಲದೆ ಹಲವಾರು ಕೈಬರಹದ ಗ್ರಂಥಗಳ ಸಂಶೋಧನೆ ನಡೆಸಿದರು. ದೇಶದ ಒಳಗೂ ಹೊರಗೂ ಸಂಚಾರ ಮಾಡಿಬಂದರು.  ಹಲವಾರು ಗ್ರಂಥಗಳ ಸಂಗ್ರಹ ಮಾಡಿ, ಪ್ರಕಟಿಸಿ ಕನ್ನಡ ಲೋಕಕ್ಕೆ ಅರ್ಪಣೆ ಮಾಡಿದರು.

ಅನಂತರಂಗಾಚಾರ್ ಅವರ ಸಾಧನೆಯ ಪ್ರಮುಖ ಕ್ಷೇತ್ರಗಳು ಗ್ರಂಥ ಸಂಪಾದನೆ, ಸಂಶೋಧನೆ ಮತ್ತು ಸಾಹಿತ್ಯ ಚರಿತ್ರೆ ರಚನೆ. ಮಲ್ಲಕವಿಯ ‘ಕಾವ್ಯಸಾರ’ ಕೃತಿಯು ಅಷ್ಟಾದಶ ವರ್ಣನೆಗಳ, ವಿಷಯಾಧಾರಿತವಾಗಿ ಸಂಕಲಿಸಿದ ಗ್ರಂಥ. ಸೂಕ್ತಿ ಸುಧಾರ್ಣವದ 2000 ಪದ್ಯಗಳು ಮತ್ತು ಕಾವ್ಯಸಾರದ 3500 ಪದ್ಯಗಳನ್ನು ತುಲನಾತ್ಮಕವಾಗಿ, ಕ್ರೋಢಿಕರಿಸಿ ಅಕಾರಾದಿಯನ್ನು ಗುರುತಿಸಿ ಆಕರ ಗ್ರಂಥವನ್ನಾಗಿ ಮಾಡಿದರು. ಹಳಗನ್ನಡ ಮುದ್ರಿತ, ಅಮುದ್ರಿತ ಕೃತಿಗಳನ್ನು ಸಂಪಾದಿಸಿ ಅಕಾರಾದಿಯಲ್ಲಿ ವ್ಯವಸ್ಥೆಗೊಳಿಸಿದರು. ಇವರ ಮತ್ತೊಂದು ಪ್ರಮುಖ ಗ್ರಂಥವೆಂದರೆ “ಕನ್ನಡ ಚಂಪೂ ಕಾವ್ಯಗಳ ಪದ್ಯಾನುಕ್ರಮಣಿಕೆ.” ಅನಂತರಂಗಾಚಾರ್ ಅವರು ಸುಮಾರು 30 ಕ್ಕೂ ಹೆಚ್ಚು ಅಮೂಲ್ಯ ಕೃತಿಸಂಪಾದನೆ ಮಾಡಿದರು. ಕನ್ನಡ ರತ್ನತ್ರಯ ಕವಿ ಕುಲಾಗ್ರಣಿ ಪಂಪ; ಕವಿ ರನ್ನ; ನೇಮಿಚಂದ್ರ; ಪೊನ್ನ-ಇವು ವಿಮರ್ಶಾ ಗ್ರಂಥಗಳು. ಪಂಪಭಾರತ ಸಂಪಾದಿತ ಕೃತಿ. ಸಾಹಿತ್ಯಭಾರತೀ ಎಂಬುದು ಸಾವಿರ ಪುಟಗಳು ಮೀರಿದ ಗ್ರಂಥ. ಈ ಕೃತಿಯ ಮುನ್ನುಡಿಯಲ್ಲಿ "ಇಪ್ಪತ್ತು ಭಾಷೆಗಳ ಸಾಹಿತ್ಯ ವೈವಿಧ್ಯವುಳ್ಳ ಇಂತಹ ಬೃಹತ್ ಕೃತಿ ಬೇರೆ ಯಾವುದೇ ಭಾಷೆಯಲ್ಲೂ ಬಂದಿಲ್ಲ" ಎಂದು ಕುವೆಂಪು ಅವರು ಶ್ಲಾಘಿಸಿದ್ದಾರೆ. ವೈದಿಕ ಸಾಹಿತ್ಯ ಚರಿತ್ರೆ ಎಂಬುದು ನಾಲ್ಕು ವೇದಸಂಹಿತೆಗಳು, ಬ್ರಾಹ್ಮಣ್ಯಗಳು, ಅರಣ್ಯಕಗಳು, ಉಪನಿಷತ್ತುಗಳು ಮತ್ತು ವೇದಾಂಗಗಳ ದರ್ಶನ ಗ್ರಂಥ.

ಅನಂತರಂಗಾಚಾರ್ ಅವರ ದುರ್ಗಸಿಂಹನ ಪಂಚತಂತ್ರ ಕೃತಿಗೆ ಸಾಹಿತ್ಯ ಅಕಾಡಮಿಯ ಬಹುಮಾನ ಸಂದಿತು. ಕಾವ್ಯಸಾರ ಕೃತಿಗೆ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಬಂತು. ಇವರು ರಚಿಸಿದ ಸಾಹಿತ್ಯ ಚರಿತ್ರೆ ‘ಸಾಹಿತ್ಯ ಭಾರತೀ’ ಮಹಾಪ್ರಬಂಧಕ್ಕೆ ಡಿ.ಲಿಟ್ ಪದವಿ ನೀಡಲಾಯಿತು.

ಆಚಾರ್ಯ ಎನ್. ಅನಂತರಂಗಾಚಾರ್ ಅವರು 1986ರ ಡಿಸೆಂಬರ್ 6 ರಂದು ಈ ಲೋಕವನ್ನಗಲಿದರು.

On the birth anniversary of great scholar N. Anantharangachar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ