ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೀರಣ್ಣ ರಾಜೂರ


 ವೀರಣ್ಣ ರಾಜೂರ


ಡಾ. ವೀರಣ್ಣ ರಾಜೂರ ಅವರು ಸಾಹಿತಿ ಮತ್ತು ಸಂಶೋಧಕರಾಗಿ ಹೆಸರಾದವರು.

ವೀರಣ್ಣ ರಾಜೂರ  1947ರ ಜೂನ್ 4ರಂದು ಕೊಪ್ಪಳ ಜಿಲ್ಲೆಯ, ಕುಷ್ಟಗಿ ತಾಲೂಕಿನ ಬೆನಕನಾಳದಲ್ಲಿ ಜನಿಸಿದರು. ತಂದೆ ಬಸಪ್ಪ, ತಾಯಿ ಫಕೀರಮ್ಮ. ಅವರ ಪ್ರಾಥಮಿಕ ವಿದ್ಯಾಭ್ಯಾಸ ಬೆನಕನಾಳ, ಹನುಮಸಾಗರಗಳಲ್ಲಿ ನಡೆಯಿತು. ಮುಂದೆ ಗದಗದ ಜೆ.ಟಿ. ಕಾಲೇಜಿನಲ್ಲಿ ಬಿ.ಎ. ಪದವಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಮತ್ತು ‘ಕನ್ನಡ ಸಾಂಗತ್ಯ ಸಾಹಿತ್ಯ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಗಳಿಸಿದರು. ಎಪಿಗ್ರಫಿಯಲ್ಲಿ ಡಿಪ್ಲೊಮ ಪದವಿಯನ್ನೂ ಪಡೆದರು. 

ವೀರಣ್ಣ ರಾಜೂರ ಅವರು  ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದಲ್ಲಿ ಸಹಾಯಕ ಸಂಶೋಧಕರಾಗಿ ಸೇರಿ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಅಧ್ಯಕ್ಷರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಹೀಗೆ ವಿವಿಧ ನೆಲೆಗಳಲ್ಲಿ ವಿವಿಧ ರೀತಿಯ ಸೇವೆ ಸಲ್ಲಿಸಿದರು. ಹಲವಾರು ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಗಳಲ್ಲಿ, ಹಲವಾರು ವಿಚಾರ ಸಂಕಿರಣ, ವಿಶೇಷ ಉಪನ್ಯಾಸಗಳಲ್ಲಿ ಭಾಗಿಯಾದರು.  

ವೀರಣ್ಣ ರಾಜೂರ ಸರಳತೆ ಸೌಜನ್ಯತೆಗೆ ಮತ್ತೊಂದು ಹೆಸರು. ಮಹಾನ್ ಸಂಶೋಧಕ ಡಾ. ಎಂ. ಎಂ. ಕಲಬುರ್ಗಿ ಅವರ 
ಅಂತರಂಗದ ಶಿಷ್ಯರು. ನಡುಗನ್ನಡ ಸಾಹತ್ಯ, ಅದರಲ್ಲಿಯೂ ವಿಶೇಷವಾಗಿ ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದವರು.  ಬಸವೋತ್ತರಯುಗದ ವಚನಕಾರ ಕುರಿತು ಸುದೀರ್ಘವಾಗಿ ಸಶೋಧನೆ ನಡೆಸಿದವರಲ್ಲಿ ರಾಜೂರ ಅವರು ಅಗ್ರಗಣ್ಯರು. 

ವೀರಣ್ಣ ರಾಜೂರ ನೂರೊಂದು ಬರಹ, ಸಂಶೋಧನ ಸಂಪ್ರಬಂಧಗಳ ಸಂಗ್ರಹ, ನೂರು ಶೋಧ, ನೂರು ಕಿರುಕೃತಿಗಳ ಸಂಕಲನ, ಹಸ್ತಪ್ರತಿಗಳ ಒಡಲಿನಿಂದ ಹತ್ತಾರು ಕಾವ್ಯ-ಪುರಾಣಗಳನ್ನು ಶೋಧಿಸೊ ಪರಿಷ್ಕರಿಸಿದ್ದಾರೆ.‍ ಇದಲ್ಲದೆ ನಾಟಕ ರಚನೆ, ರಂಗಭೂಮಿಯಲ್ಲೂ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ.  

ವೀರಣ್ಣ ರಾಜೂರ ಅವರು ವಚನ ಅಧ್ಯಯನ, ಸ್ವರವಚನಗಳು, ವಿಚಾರ ಪತ್ನಿಯರು ಮೊದಲಾದ ಅನೇಕ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ಅವಳೇ ಗಂಡ, ನಾನೆ ಹೆಂಣ್ತಿ, ಲವ್ ಅಂದ್ರೆ ಪ್ರೇಮ ಮುಂತಾದ ಅನೇಕ ನಾಟಕಗಳನ್ನು ರಚಿಸಿದ್ದಾರೆ. ಹಾಲಭಾವಿ ವೀರಭದ್ರಪ್ಪನವರು, ಪಿ.ಬಿ. ಧುತ್ತರಗಿ ಜೀವನಚರಿತ್ರೆಗಳು. ಸಿದ್ಧಲಿಂಗ ಶತಕ, ವಚನಾಮೃತಸಾರ, ವಚನಶಾಸ್ತ್ರ ಸಾರ, ಶಿವಯೋಗ ಪ್ರದೀಪಿಕೆ, ಭಕ್ತ್ಯಾನಂದ ಸುಧಾರ್ಣವ ಮೊದಲಾದ ಹಲವಾರು ಗ್ರಂಥಗಳ ಸಂಪಾದನೆ ಮಾಡಿದ್ದಾರೆ. ಸಮತಾ, ಕಥಾಶಾಲ್ಮಲಾ ಇವರ ಕಥಾಸಂಕಲನಗಳು. ನಡುಗನ್ನಡ ಪಠ್ಯತರಂಗ, ಪ್ರಬಂಧ ಸಂಚಯ ಪಠ್ಯಗ್ರಂಥಗಳು. ಜನಪದ ಸಾಹಿತ್ಯ ದರ್ಶನ, ಜಾನಪದ ಜಾಣ್ಮೆ, ಜನಪದ ಕಥೆಗಳು ಮೊದಲಾದ ಕೃತಿ ಸೇರಿ ಸುಮಾರು 100ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಣೆ ಮಾಡಿದ್ದಾರೆ. 

ವೀರಣ್ಣ ರಾಜೂರ ಅವರಿಗೆ ಹುಬ್ಬಳ್ಳಿ ಮೂರು ಸಾವಿರ ಮಠ ಗ್ರಂಥ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಗೌರವ ಫೆಲೊಶಿಪ್, ಜ.ಚ.ನಿ. ಪ್ರಶಸ್ತಿ, ಫ.ಗು. ಹಳಕಟ್ಟಿ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಕುಷ್ಟಗಿ ತಾಲ್ಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದಿವೆ.  ಅವರಿಗೆ ಅವರ ಅಭಿಮಾನಿಗಳು ಅರ್ಪಿಸಿರುವ ಅಭಿನಂದನ ಗ್ರಂಥ 'ರಾಜಮಾರ್ಗ'.

ಹಿರಿಯರಾದ ಪ್ರೊ. ವೀರಣ್ಣ ರಾಜೂರ ಅವರಿಗೆ ಜನ್ಮದಿನದ ಶುಭಹಾರೈಕೆಗಳು.

On the birthday of writer and scholar Prof. Veeranna Rajur

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ