ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನೂತನ್


 ನೂತನ್

ನೂತನ್ ಹಿಂದೀ ಚಿತ್ರರಂಗ ಕಂಡ ಸುಂದರ ಮತ್ತು ಮಹಾನ್ ಪ್ರತಿಭಾವಂತ ಅಭಿನೇತ್ರಿ.  ಅವರ ಹೆಸರು ನೂತನ್ ಬೆಹ್ಲ್ ಎಂದಾದರೂ ಅವರು ನೂತನ್ ಎಂದೇ ಪ್ರಖ್ಯಾತರು.  

ನೂತನ್ 1936ರ ಜೂನ್ 4ರಂದು ಜನಿಸಿದರು. ತಂದೆ ಕುಮಾರ್ ಸೇನ್ ಸಮರ್ಥ  ಕವಿ ಮತ್ತು ಚಲನಚಿತ್ರ ನಿರ್ದೇಶಕರು.  ಅವರ ತಾಯಿ ಶೋಭನಾ ಸಮರ್ಥ ಪ್ರಖ್ಯಾತ ಅಭಿನೇತ್ರಿ.  ತಮ್ಮ  ತಾಯಿ ಶೋಭನ ಸಮರ್ಥ ಅವರು  1950ರ ವರ್ಷದಲ್ಲಿ ನಿರ್ದೇಶಿಸಿದ ‘ಹಮಾರಿ ಭೇಟಿ’  ನೂತನ್ ನಟಿಸಿದ ಮೊದಲ ಚಿತ್ರ.  ಆಗ ಅವರ ವಯಸ್ಸು ಹದಿನಾಲ್ಕು.  

1951ರಲ್ಲಿ ನೂತನ್ ಅವರು  ನಗೀನಾ, ಹಮ್ ಲೋಗ್ ಚಿತ್ರಗಳಲ್ಲಿ ನಟಿಸಿದರು.   1952ರ ವರ್ಷದಲ್ಲಿ ಅವರು ‘ಭಾರತ ಸುಂದರಿ’ ಗೌರವ ಗಳಿಸಿದರು.   1955ರಲ್ಲಿ ತೆರೆಕಂಡ ‘ಸೀಮಾ’ ಚಿತ್ರ ಅವರಿಗೆ ಅತ್ಯುತ್ತಮ ಅಭಿನೇತ್ರಿ ಎಂಬ ಫಿಲಂ ಫೇರ್ ಪ್ರಶಸ್ತಿ ತಂದುಕೊಟ್ಟಿತು.  ಮುಂದೆ 1960 ಮತ್ತು 70ರ ದಶಕದವರೆಗೆ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ ಅವರು  1959ರ 'ಸುಜಾತ’, 1963ರ 'ಬಂಧಿನಿ’, 1967ರ 'ಮಿಲನ್’ ಮತ್ತು 1978ರ ವರ್ಷದ 'ಮೇ ತುಳಸಿ ತೇರೇ ಆಂಗನ್ ಕಿ’  - ಈ ನಾಲ್ಕು ಚಿತ್ರಗಳಲ್ಲಿ  ಶ್ರೇಷ್ಠ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.  ಈ ಕಾಲದಲ್ಲಿ ಮೂಡಿ ಬಂದ ಅವರ ಇತರ ಪ್ರಖ್ಯಾತ ಚಿತ್ರಗಳಲ್ಲಿ  ‘ಸೋನೆ ಕಿ ಚಿಡಿಯಾ’ (1958), ‘ಅನಾರಿ’ (1959), ‘ಚಾಲಿಯಾ’ (1960), ‘ತೇರೇ ಘರ್ ಕಿ ಸಾಮನೇ’ (1963), ‘ಸರಸ್ವತಿ ಚಂದ್ರ' (1968), ‘ಅನುರಾಗ್’ (1972) ಮತ್ತು ‘ಸೌಧಾಗರ್’ (1973) ಸೇರಿವೆ.  ತಮ್ಮ ಕಾಲದ ಪ್ರಸಿದ್ಧ ನಟರಾದ ದೇವಾನಂದ್, ದಿಲೀಪ್ ಕುಮಾರ್, ರಾಜ್ ಕಫೂರ್ ಹಾಗೂ ನಂತರದ ತಲೆಮಾರಿನ ಅಮಿತಾಬ್, ಧರ್ಮೇಂದ್ರ ಮುಂತಾದ ಪ್ರಖ್ಯಾತರೊಡನೆ ಅವರು ನಟಿಸಿದ್ದರು.  

1980ರ ದಶಕದಿಂದ ಪ್ರಾರಂಭಗೊಂಡಂತೆ ಈ ಮಹಾನ್ ನಟಿ ತಮ್ಮ ಕೊನೆಯ ದಿನಗಳವರೆಗೆ ಪೋಷಕ ಪಾತ್ರಗಳಲ್ಲಿ ತಮ್ಮ ಅಭಿನಯವನ್ನು ಮುಂದುವರೆಸಿದರು.  ಇವುಗಳಲ್ಲಿ ಸಾಜನ್ ಕಿ ಸಹೇಲಿ (1981), ಮೇರಿ ಜಂಗ್ (1985), ನಾಮ್ (1986) ಮುಂತಾದ ಚಿತ್ರಗಳಲ್ಲಿ ನಟಿಸಿದಂತೆ ತಾಯಿ ಪಾತ್ರಗಳೇ ಹೆಚ್ಚು.  ‘ಮೇರಿ ಜುಂಗ್’ ಚಿತ್ರದ ಅಭಿನಯಕ್ಕೆ ಅವರು ತಮ್ಮ ಐದನೆಯ ಫಿಲಂ ಫೇರ್ ಪ್ರಶಸ್ತಿ ಗಳಿಸಿದರು.  ಆ ದಾಖಲೆಯನ್ನು ಅವರ ತಂಗಿ ತನುಜಾ ಅವರ ಮಗಳಾದ  ಕಾಜೋಲ್ ಮೂರು ದಶಕಗಳ ನಂತರದಲ್ಲಿ 2011ರ ವರ್ಷದಲ್ಲಿ ಸರಿಗಟ್ಟಿದರು.  ಒಟ್ಟಾರೆ ಆರು ಫಿಲಂ ಫೇರ್ ಪ್ರಶಸ್ತಿ ಗಳಿಸಿದ ನಟಿಯರಲ್ಲಿ ನೂತನ್ ಮತ್ತು ಜಯಾ ಬಚ್ಚನ್ ಸರಿ ಸಮಾನರಾಗಿದ್ದಾರೆ.  1974ರ ವರ್ಷದಲ್ಲಿ ನೂತನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿತು.  

ನೂತನ್ ಅವರು  ಮುಜಿರಿಮ್ ಹಾಜಿರ್ ಎಂಬ ದೂರದರ್ಶನ ಧಾರವಾಹಿಯಲ್ಲೂ ಮನೋಜ್ಞವಾಗಿ ಅಭಿನಯಿಸಿದ್ದರು. 

1959ರ ವರ್ಷದಲ್ಲಿ ನೂತನ್ ರಜನೀಶ್ ಬೆಹ್ಲ್ ಅವರನ್ನು ವಿವಾಹವಾದರು.  ಅವರ ಮಗ ಮೊಹನೀಶ್ ಬೆಹ್ಲ್ ಅವರು ಹಿಂದೀ ಚಲನಚಿತ್ರ ಮತ್ತು ಕಿರುತೆರೆಯ ನಟರಾಗಿದ್ದಾರೆ.   ಈ ಮಹಾನ್ ನಟಿ ನೂತನ್ 1991ರ ಫೆಬ್ರುವರಿ 21ರಂದು ಕೇವಲ ತಮ್ಮ 54ನೆಯ ವಯಸ್ಸಿನಲ್ಲಿ ಕ್ಯಾನ್ಸರಿನಿಂದಾಗಿ , ತಮ್ಮ ಇಹಲೋಕದ ಜೀವನದಿಂದ ಮುಕ್ತಿ ಪಡೆದರು. 

ನೂತನ್ ತಮ್ಮ ಸೌಂಧರ್ಯ, ಅಭಿನಯಗಳಿಗೆ ಪ್ರಸಿದ್ಧಿ ಪಡೆದಷ್ಟೇ ಚಿತ್ರರಂಗದಲ್ಲಿಯೇ ಅಪೂರ್ವವೆನಿಸುವಂತೆ ತಮ್ಮ ಸರಳ, ಸಜ್ಜನಿಕೆ, ಸೌಮ್ಯ ಗುಣಗಳಿಗೂ ಹೆಸರಾಗಿದ್ದರು.   ಅವರ ಜೀವನ ಚರಿತ್ರೆ ‘ಅಸೇನ್ ಮಿ ನಸೇನ್ ಮಿ’  ಯನ್ನು ಮರಾಠಿಯ ಪ್ರಸಿದ್ಧ ಬರಹಗಾರ್ತಿ ಲಲಿತಾ ತಮ್ಹಾನೆ ಅವರು ದಾಖಲಿಸಿದ್ದಾರೆ.

On the birth anniversary of most beautiful and great actress Nutan

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ