ರಸ್ಕಿನ್ ಬಾಂಡ್
ರಸ್ಕಿನ್ ಬಾಂಡ್
ವಿದೇಶದಿಂದ ಬಂದು ಭಾರತದಲ್ಲಿ ನೆಲೆನಿಂತು, ಭಾರತೀಯತೆಯ ಕುರಿತು ಬರೆದ ಇಂಗ್ಲಿಷಿನ ಮಹತ್ವದ ಲೇಖಕರಲ್ಲಿ ರಸ್ಕಿನ್ ಬಾಂಡ್ ಪ್ರಮುಖರು. ಅವರು ಎಳೆಯ ಚಿಣ್ಣರಿಂದ ಹಿರಿಯರವರೆಗೆ ಎಲ್ಲ ಓದುಗರನ್ನೂ ರಂಜಿಸಿದವರು.
ರಸ್ಕಿನ್ ಬಾಂಡ್ ಹಿಮಾಚಲ ಪ್ರದೇಶದ ಕಸೌಲಿಯಲ್ಲಿ 1934ರ ಮೇ 19ರಂದು ಜನಿಸಿದರು ಅವರು ಹತ್ತಾರು ಕಾದಂಬರಿಗಳು, ನೂರಾರು ಕಥೆಗಳು, ಪ್ರಬಂಧಗಳು ಹಾಗೂ ಪ್ರವಾಸ ಕಥನಗಳನ್ನು ಬರೆದಿದ್ದಾರೆ.
ಬಾಂಡ್ ಅವರು ನಮ್ಮನ್ನು ಆಕರ್ಷಿಸುವುದು ಅವರ ಗದ್ಯದ ಸರಳತೆಯಿಂದಾಗಿ. ಹಲವಾರು ವರ್ಷಗಳ ಹಿಂದೆ ಇವರ ಕೃತಿಯೊಂದನ್ನು ವಿಮರ್ಶಿಸುತ್ತಾ ‘ಇಂಡಿಯಾ ಟುಡೆ’ Bond’s sentences are moist with dew and the mountain air with charm, nostalgia and underplayed humour. He is our resident Wordsworth in prose ಎಂದು ಬಣ್ಣಿಸಿತ್ತು.
ರಸ್ಕಿನ್ ಬಾಂಡರ ಬರವಣಿಗೆಯ ಆಕರ್ಷಣೆಯೇ ಅದು. ಅದರಲ್ಲಿ ಪರ್ವತಾಗ್ರದಿಂದ ಸುರಿವ ಝರಿಯ ಶಬ್ದ, ದಟ್ಟ ಕಾನನದ ಮೌನ; ಗಂಗೆ, ಮಂದಾಕಿನಿಯರ ಮರ್ಮರ, ಸುರಿವ ಹಿಮ; ವನಸುಮಗಳ ಸೌಗಂಧ…ಎಲ್ಲವೂ ಬೆರೆತಿದೆ. ಅವರ ಕೃತಿಗಳಲ್ಲಿ ಪ್ರಕಟವಾಗುವ ಜಗತ್ತು ವೇಗದ ಲೋಕವಲ್ಲ. ಅದು ಕಾಲದ ಹಂಗಿಲ್ಲದೆ ನಿಧಾನವಾಗಿ ಸಾಗುವ ಬದುಕು. ಅವರು ಪ್ರಯಾಣಿಸುವ ರೈಲುಗಳು ಗುಡ್ಡಗಾಡು, ಕಣಿವೆ, ದಟ್ಟ ಕಾಡಿನ ನಡುವೆ ಮಂದಗತಿಯಲ್ಲಿ ಸಾಗುತ್ತವೆ. ಅವರ ಒಂದು ಕಿರುಕಾದಂಬರಿಯ ಹೆಸರು Time stops at Shamli. ಈ ಕಾದಂಬರಿಯ ನಿರೂಪಕನಿಗೆ ಎಂದೂ ಯಾರೂ ಇಳಿಯದ, ಹತ್ತದ; ಆದರೂ ರೈಲು ಹತ್ತು ನಿಮಿಷಕ್ಕೂ ಹೆಚ್ಚು ಕಾಲ ನಿಲ್ಲುವ ಶಾಮ್ಲಿ ಎಂಬ ರೈಲು ನಿಲ್ದಾಣದ ಬಗ್ಗೆ ಕುತೂಹಲ ಮೂಡಿ ಅಲ್ಲಿಯೇ ಇಳಿದು ಬಿಡುತ್ತಾನೆ. ಮುಂದೆ ಕಾಡಿನ ನಡುವೆ ಬಹುದೂರ ಸ್ಟೇಷನ್‍ಗಳು ಸಿಕ್ಕುತ್ತಿರಲಿಲ್ಲವಾದ ಕಾರಣ ಶಾಮ್ಲಿಯಲ್ಲಿ ಟ್ರೈನು ಪ್ರಯಾಣಿಕರು ಕಾಫಿ, ಟೀ ಕುಡಿಯಲೋಸುಗ ನಿಲ್ಲುತ್ತಿರುತ್ತದೆ. ಶಾಮ್ಲಿಯಲ್ಲಿ ಇಳಿದಾತನಿಗೆ ಗೇಟ್‍ನಲ್ಲಿ ಟಿಕೆಟ್ ಕೇಳುವವರು ಯಾರೂ ಇರುವುದಿಲ್ಲ. ಬಹುದೂರ ಇರುವ ಶಾಮ್ಲಿ ಎಂಬ ಪುಟ್ಟಪಟ್ಟಣಕ್ಕೂ, ರೈಲ್ವೆ ಸ್ಟೇಷನ್‍ಗೂ ಕೊಂಡಿ ಎಂಬಂತೆ ಅಲ್ಲೊಂದು ಜಟಕಾ ಇರುತ್ತದೆ. ಬಾಂಡ್ ಅವರ ಬರವಣಿಗೆಯ ವಸ್ತು ಮತ್ತು ಶೈಲಿಯನ್ನು ಸೂಚಿಸುವುದಕ್ಕೆ ಇದೊಂದು ಉದಾಹರಣೆ.
ಬಾಂಡ್ ಅವರ ಪ್ರಬಂಧಗಳ ಹೆಸರನ್ನು ಗಮನಿಸಿ: Life at my own place; The old gramaphone; Upon an old wall dreaming… ಹೀಗೆ ಅವರ ಇಡೀ ಬರವಣಿಗೆಯಲ್ಲಿ ಒಂದು ಬಗೆಯ ದಟ್ಟ ನಾಸ್ತಾಲ್ಜಿಯಾ ಆವರಿಸುತ್ತದೆ. ನಿಜವಾದ ಗಂಗೆ ಯಾವುದು, ಅಲಕನಂದೆಯೋ, ಭಾಗೀರಥಿಯೋ ಎಂಬ ಪ್ರಶ್ನೆಯೊಂದಿಗೆ ಅವರ ಪ್ರಯಾಣ ಕಥನವೊಂದು ಆರಂಭವಾಗುತ್ತದೆ. ಅದಕ್ಕೆ ಆತನ ಮಿತ್ರ ಹೇಳಿದ ಉತ್ತರವನ್ನೇ ಈತನೂ ನೀಡುತ್ತಾನೆ: ಅಲಕನಂದೆ ನಿಜವಾದ ಗಂಗೆ; ಆದರೆ ಭಾಗೀರಥಿ ಗಂಗಾಜಿ. ರುದ್ರ ಪ್ರಯಾಗದಲ್ಲಿ ಅಲಕನಂದೆಯನ್ನು ಸೇರುವ ಮಂದಾಕಿನಿಯನ್ನು ಬಣ್ಣಿಸುವಾಗ, ತುಂಗಾನಾಥದ ಪ್ರಕೃತಿ ವೈಭವವನ್ನು ತೆರೆದಿಡುವಾಗ ಬಾಂಡರ ಬರವಣಿಗೆ ಕಾವ್ಯಮಯವಾಗುತ್ತದೆ. ಹಿಮಾಲಯದ ಕಣಿವೆ ಪ್ರದೇಶದ ಸೊಬಗನ್ನು, ಜನಜೀವನವನ್ನು ಅಲ್ಲಿಯೇ ಇದ್ದುಕೊಂಡು ತಮ್ಮದೇ ಶೈಲಿಯಲ್ಲಿ, ಭಾಷೆಯಲ್ಲಿ ನವಿರಾಗಿ ಗದ್ಯದಲ್ಲಿ ತೆರೆದಿಡುತ್ತಾರೆ ರಸ್ಕಿನ್ ಬಾಂಡ್.
ರಸ್ಕಿನ್ ಬಾಂಡ್ ಅವರ ಪ್ರಥಮ ಕಥೆ 1957ರಲ್ಲಿ ಪ್ರಕಟಗೊಂಡ ‘The Roof on the Roof’. ಇದು ರಸ್ಕಿನ್ನರ ಆತ್ಮ ಚರಿತ್ರೆಗೆ ತದ್ರೂಪು ಹೊಂದಿರುವ ರಸ್ಟಿ ಎಂಬ ಆಂಗ್ಲೋ ಇಂಡಿಯನ್ ಹುಡುಗನ ಕಥಾನಕ. ಈ ಕೃತಿಗೆ ಅವರಿಗೆ ಮೂವತ್ತರ ಒಳಗಿನ ಬ್ರಿಟಿಷ್ ಕಾಮನ್ ವೆಲ್ತ್ ಬರಹಗಾರರೆಂಬ ಗೌರವ ದೊರಕಿತು. ಇದು ಅವರು ಇಂಗ್ಲೆಂಡಿಗೆ ವಾಪಸ್ಸು ಹೋಗಿದ್ದಾಗ ಬರೆದ ಕೃತಿ. ಈ ಕೃತಿಗೆ ದೊರಕಿದ ಮುಂಗಡ ಹಣದಿಂದ ಅವರು ಭಾರತಕ್ಕೆ ಹೊರಟ ಹಡಗನ್ನು ಹತ್ತಿ ಬಂದರು. ಕೆಲಕಾಲ ಅವರು ನವದೆಹಲಿ ಮತ್ತು ಡೆಹ್ರಾಡೂನ್ ಪ್ರದೇಶಗಳಲ್ಲಿ ಪತ್ರಕರ್ತರಾಗಿ ದುಡಿದರು. 1963ರಿಂದ ಮೊದಲ್ಗೊಂಡಂತೆ ಸ್ವತಂತ್ರ ಬರಹಗಾರರಾಗಿ ಮುಸ್ಸೋರಿಯ ನಿವಾಸಿಯಾದರು.
ಮುಂದೆ ರಸ್ಕಿನ್ ಬಾಂಡರು ಹಲವಾರು ಕಥಾ ಸಂಕಲನಗಳನ್ನೂ ಕಾದಂಬರಿಗಳನ್ನೂ ಹೊರತಂದರು. ಅವರ ಕಥಾ ಸಂಕಲನಗಳೆಂದರೆ Tiger in the house, Garland of Memories,The boy who broke the bank, Funny Side Up, Night Train at Deoli, Rain in the Mountains-Notes from the Himalayas, Our trees still grow in Dehr, A season of ghost, Tigers Forever, A Town Called Dehra, A Face in the Dark and Other Hauntings, Potpurr, The Adventures Of Toto, The Lost Ruby, The Death Of Trees.
Room On The Roof, Vagrants in the Valley, Scenes from a Writer's Life, Susanna's Seven Husbands, A Flight of Pigeons, Landour Days – A writers Journal, The Sensualist by Ruskin Bond, The Road To The Bazaar, The Panther's Moon, Once Upon A Monsoon Time, The India I love, The Kashmiri Storyteller, The Blue Umbrella, The Tiger In The Tunnel ಮುಂತಾದವು ಅವರ ಪ್ರಸಿದ್ಧ ಕಾದಂಬರಿಗಳು.
ಶಶಿಕಪೂರರು ನಿರ್ಮಿಸಿ ಶ್ಯಾಮ್ ಬೆನಗಲ್ ಅವರು ನಿರ್ದೇಶಿಸಿದ ಪ್ರಸಿದ್ಧ ಚಿತ್ರ ‘ಜುನೂನ್’ ರಸ್ಕಿನ್ ಬಾಂಡ್ ಅವರ ‘The flight of Pigeons’ ಕಥೆಯನ್ನು ಆಧರಿಸಿದ್ದು. Susanna’s Seven Husbands ಕಥೆಯನ್ನು ವಿಶಾಲ್ ಬಾರದ್ವಾಜ್ ಅವರು ‘7 ಖೂನ್ ಮಾಫ್’ ಎಂಬ ಚಿತ್ರವಾಗಿಸಿದ್ದಾರೆ. ‘ಬ್ಲೂ ಅಂಬ್ರೆಲಾ’ ಎಂಬುದು ಅವರ ಕಥೆಯಾಧಾರಿತ ಮತ್ತೊಂದು ಚಿತ್ರ.
ಭಾರತದಲ್ಲಿ ಮಕ್ಕಳ ಶಿಕ್ಷಣಕ್ಕೆ ರಸ್ಕಿನ್ ಬಾಂಡ್ ಅವರು ನೀಡಿರುವ ಸಾಹಿತ್ಯಕ ಕೊಡುಗೆಯನ್ನು ಪರಿಗಣಿಸಿ ಭಾರತದ ಕೇಂದ್ರ ಸಾಹಿತ್ಯ ಅಕಾಡೆಮಿಯು ಅವರನ್ನು 1992ರ ವರ್ಷದಲ್ಲಿ ಗೌರವಿಸಿದೆ. 1999ರ ವರ್ಷದಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2014 ರಲ್ಲಿ ಪದ್ಮಭೂಷಣ ಸಂದಿದೆ.
ರಸ್ಕಿನ್ ಬಾಂಡರು ನುಡಿಯುತ್ತಾರೆ “ನಾನು ಪ್ರೀತಿಸುವ ಭಾರತವು ಪತ್ರಿಕೆಗಳ ಶಿರೋನಾಮೆಗಳಾಗಿ ಕಾಣುವುದಿಲ್ಲ, ಆದರೆ ನಾನು ಎಲ್ಲಿಗೆ ಹೋಗಲಿ – ಬಯಲಾಗಲಿ, ಕಾಡಾಗಲಿ, ಗ್ರಾಮವಾಗಲಿ ಅಥವಾ ಹಳ್ಳಿಯಾಗಲಿ, ಪರ್ವತವಾಗಲಿ ಅಥವಾ ಮರುಭೂಮಿಯಾಗಲಿ ಅದು ನನಗೆ ಕಾಣಸಿಗುತ್ತದೆ. ಅಷ್ಟೇ ಅಲ್ಲ ನನಗೆ ಇಲ್ಲಿನ ಜನರ ಮನಸ್ಸು ಮತ್ತು ಹೃದಯಗಳಲ್ಲಿ ತುಂಬಿ ತುಳುಕುತ್ತಿರುವ ಪ್ರೀತಿ ನನ್ನ ಬಾಳಿನ ಬಹುತೇಕ ಭಾಗವನ್ನು ತುಂಬಿದೆ”
ಈ ಭಾರತ ಪ್ರಿಯ ಹಿರಿಯ ಬರಹಗಾರರಾದ ರಸ್ಕಿನ್ ಬಾಂಡ್ ಅವರಿಗೆ ನಮ್ಮ ನಲ್ಮೆಯ ಹುಟ್ಟು ಹಬ್ಬದ ಶುಭ ಹಾರೈಕೆಗಳು.
On the birth anniversary of great writer of Indian origin, Ruskin Bond
ಕಾಮೆಂಟ್‌ಗಳು