ಲೋಕೇಶ್
ಲೋಕೇಶ್
ಲೋಕೇಶ್ ಕನ್ನಡದ ಚಿತ್ರರಂಗ ಮತ್ತು ರಂಗಭೂಮಿ ಕಂಡ ಮಹಾನ್ ಕಲಾವಿದ.
ಲೋಕೇಶರು ಹುಟ್ಟಿದ್ದು 1947ರ ಮೇ 19 ರಂದು.
ಲೋಕೇಶ್ ರಂಗಭೂಮಿಯ ಮಹಾನ್ ಕಲಾವಿದರಾದ ಸುಬ್ಬಯ್ಯ ನಾಯ್ಡು ಅವರ ಪುತ್ರ. ರಂಗಭೂಮಿಯಲ್ಲಿ ಕಷ್ಟಪಟ್ಟು ಜೀವನ ಸಾಗಿಸಿ ಅಭಿನಯ ಕಲೆಯಲ್ಲಿ ತೊಡಗಿಕೊಂಡವರು. ಕಾಕನ ಕೋಟೆ ನಾಟಕದಲ್ಲಿ ಅಭಿನಯಿಸುತ್ತಿರುವಾಗ ರಂಗಮಂಟಪದಲ್ಲಿ ಹಾರ ಬದಲಿಸಿಕೊಂಡು ಗಿರಿಜಾ ಮತ್ತು ಲೋಕೇಶ್ ಸತಿ ಪತಿಗಳಾಗಿದ್ದು ಅಂದಿನ ದಿನಗಳಲ್ಲಿ ಪತ್ರಿಕೆಯಲ್ಲಿ ಓದಿದ್ದು ನೆನಪಿದೆ. ಹೀಗೆ ಅವರಿಗೆ ರಂಗಭೂಮಿ ಬದುಕಿನ ಭೂಮಿಯೇ ಆಗಿತ್ತು.
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ 'ಭೂತಯ್ಯನ ಮಗ ಅಯ್ಯು' ಚಲನಚಿತ್ರವಾದಾಗ ಅದರಲ್ಲಿ ಎಂ.ಪಿ. ಶಂಕರ್ ಭೂತಯ್ಯನಾಗಿ, ಭೂತಯ್ಯನ ಮಗ 'ಅಯ್ಯು' ಪಾತ್ರಧಾರಿಯಾಗಿ ಲೋಕೇಶ್ ಅಭಿನಯಿಸಿ ಮತ್ತೊಂದು ಪ್ರಮುಖ ಪಾತ್ರವಾದ 'ಬುಳ್ಳ' ಪಾತ್ರಧಾರಿಯಾಗಿ ಅದೇ ಕಾಲದಲ್ಲಿ 'ನಾಗರಹಾವು' ಚಿತ್ರದಿಂದ ಮೇಲೆ ಬಂದ ವಿಷ್ಣುವರ್ಧನ್ ಅಭಿನಯಿಸಿದ್ದರು. ಆ ಚಿತ್ರದಲ್ಲಿ ಲೋಕನಾಥ್ ಅವರ 'ಮೋಚ'ನ ಪಾತ್ರದಿಂದ ಹಿಡಿದು ಪ್ರತೀ ಪಾತ್ರವೂ ಸಿದ್ಧಲಿಂಗಯ್ಯನವರ ಕೈ ಚಳಕದಲ್ಲಿ ಮೂಡಿಬಂದ ಪರಿ ಸ್ತುತ್ಯಾರ್ಹವಾದುದು. ಅದರಲ್ಲೂ ಒಮ್ಮೆ ಕ್ರೋಧಭರಿತನಾಗಿ ಅಪ್ಪ ಭೂತಯ್ಯನ ಹಾದಿ ಹಿಡಿದಿದ್ದ 'ಅಯ್ಯು' , ತನ್ನ ಸಾಧ್ವಿ ಪತ್ನಿ ಗಿರಿಜೆಯ ಮೂಲಕ ಕ್ರಾಂತಿಕಾರಕವಾಗಿಯೋ ಎಂಬಂತೆ, ಜನಹಿತಕಾರಿ 'ಅಯ್ಯು'ವಾಗಿ ಬದಲಾಗುವ ಪಾತ್ರದಲ್ಲಿ ಲೋಕೇಶ್ ತೋರಿದ ಅಭಿನಯ ಸಾಮರ್ಥ್ಯ ಕನ್ನಡ ಚಿತ್ರರಂಗದ ಮಹೋನ್ನತ ಪಾತ್ರ ನಿರ್ವಹಣೆಗಳ ಸಾಲಿನಲ್ಲಿ ಶಾಶ್ವತವಾಗಿ ನಿಲ್ಲುವಂತದ್ದು.
ಲೋಕೇಶ್ ತಾವು ನಾಯಕ ಪಾತ್ರದಲ್ಲೇ ಇರಲಿ, ಪೋಷಕ ಪಾತ್ರದಲ್ಲೇ ಇರಲಿ ತೋರಿದ ಗಾಂಭೀರ್ಯಪೂರ್ಣ ಪಾತ್ರ ನಿರ್ವಹಣೆ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನಿಲ್ಲುವಂತದ್ದಾಗಿದೆ. 'ಪರಸಂಗದ ಗೆಂಡೆ ತಿಮ್ಮ'ನಾಗಿ ಅವರು ತಮ್ಮ ಪಾತ್ರದಲ್ಲಿ ಮಾಡಿದ ಪರಕಾಯ ಪ್ರವೇಶ ಮರೆಯುವುದಾದರೂ ಹೇಗೆ. 'ಕಾಕನಕೋಟೆ', 'ಬ್ಯಾಂಕರ್ ಮಾರ್ಗಯ್ಯ', 'ಭುಜಂಗಯ್ಯನ ದಶಾವತಾರ', 'ಎಲ್ಲಿಂದಲೋ ಬಂದವರು', ‘ಸಂಗೀತ’, 'ಸಂಕ್ರಾಂತಿ', 'ಭಕ್ತ ಸಿರಿಯಾಳ', 'ಪಂಚಾಕ್ಷರಿ ಗವಾಯಿ', 'ನಿನಗಾಗಿ ನಾನು', 'ದೇವರಕಣ್ಣು', ಮುಂತಾದ ಚಿತ್ರಗಳಲ್ಲಿ ಅವರು ನೀಡಿದ ಶ್ರೇಷ್ಠ ಅಭಿನಯ ಕನ್ನಡಿಗರ ಸಹೃದಯಗಳಲ್ಲಿ ಚಿರಸ್ಥಾಯಿಯಾಗಿದೆ. 'ಜಿಮ್ಮಿಗಲ್ಲು', 'ಆಸೆಗೊಬ್ಬ ಮೀಸೆಗೊಬ್ಬ', 'ಚಂದನದ ಗೊಂಬೆ', 'ಪ್ರೇಮ ಲೋಕ', 'ಪ್ರೀತ್ಸೋದ್ ತಪ್ಪ', ‘ಮುಂಗಾರಿನ ಮಿಂಚು’ ಮುಂತಾದ ಚಿತ್ರಗಳು ಅವರು ವಿಶಿಷ್ಟ ಪಾತ್ರಗಳನ್ನು ಹೇಗೆ ಲೀಲಾಜಾಲವಾಗಿ ಅಭಿನಯಿಸುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿವೆ.
ಕನ್ನಡ ಪರ ಚಳುವಳಿಗಳಲ್ಲಿ ಕೂಡಾ ಉತ್ತಮ ಚಿಂತಕರಾಗಿ, ಉಪನ್ಯಾಸಕರಾಗಿ ಜನ ಸಂಪರ್ಕದಲ್ಲಿದ್ದ ಲೋಕೇಶ್ ಆ ನೆಲೆಯಲ್ಲಿ ಕೂಡಾ ಮಹತ್ವದ ಕೊಡುಗೆ ನೀಡಿದ್ದರು. ಯಾವುದೇ ಜನಪ್ರಿಯ ನಟನ ಹಮ್ಮು ಬಿಮ್ಮುಗಳಿಲ್ಲದೆ ಜನರೊಡನೆ ಸಾಧಾರಣನಂತೆ ಬೆರೆಯುವುದು ಲೋಕೇಶರಿಗೆ ಸಾಧ್ಯವಿತ್ತು.
'ಭುಜಂಗಯ್ಯನ ದಶಾವತಾರ' ಚಿತ್ರದ ನಿರ್ದೇಶಕರಾಗಿ ಕೂಡಾ ತಮ್ಮ ಪ್ರತಿಭೆಯನ್ನು ಮೆರೆದ ಲೋಕೇಶರಿಗೆ ಆ ಚಿತ್ರ ಒಳ್ಳೆಯ ಪತ್ರಿಕಾ ಪ್ರತಿಕ್ರಿಯೆ ನೀಡಿತಾದರೂ, ಮಾರುಕಟ್ಟೆಯ ಲೆಕ್ಕಾಚಾರದಲ್ಲಿ ಕೈ ಸುಟ್ಟಿದ್ದು ವಿಧಿಯ ವಿಪರ್ಯಾಸ. ಹಣಕಾಸಿನ ವಿಚಾರ ಅವರ ಬದುಕಿನ ಕೊನೆಯ ದಿನಗಳಲ್ಲಿ ಅವರನ್ನು ಸಾಕಷ್ಟು ಚಿಂತಾಕ್ರಾಂತರನ್ನಾಗಿ ಮಾಡಿರಲಿಕ್ಕೆ ಸಾಕು. ನಮ್ಮ ಜೀವನದಲ್ಲಿ ಕೂಡಾ ಹಲವೊಂದು ತಿರುವುಗಳು ಬಂದಾಗ ಲೋಕೇಶರು ಆ ಚಿತ್ರದಲ್ಲಿ ಮೇಲೆ ನೋಡಿಕೊಂಡು ಹೇಳುವ "ಲೋ, ನೀನಿದ್ದೀಯಲ್ಲ!" ತುಂಬಾ ನೆನಪಾಗುತ್ತದೆ. ಈ ರೀತಿಯಲ್ಲಿ ಲೋಕೇಶ್ ಆ ಕಾಲದ ಕಲಾಭಿಮಾನಿಗಳ ಹೃದಯದಲ್ಲಿ ಶಾಶ್ವತರಾಗಿದ್ದಾರೆ.
ಲೋಕೇಶರು ಕೇವಲ 56ವರ್ಷಗಳ ಆಸುಪಾಸಿನಲ್ಲೇ ನಿಧನರಾದರು. ಲೋಕೆಶರಂತಹ ಕಲಾವಿದರು ಅಪೂರ್ವರು. ಅವರು ಸದಾಕಾಲ ತಮ್ಮ ಅಭಿಮಾನಿಗಳ ಹೃದಯದಲ್ಲಿ ಉಳಿಯುತ್ತಾರೆ.
On the birth anniversary of great actor Lokesh
ಕಾಮೆಂಟ್‌ಗಳು