ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುನೀತಿ ಕೃಷ್ಣಸ್ವಾಮಿ


 ಸುನೀತಿ ಕೃಷ್ಣಸ್ವಾಮಿ


ಕಳೆದ ಶತಮಾನದ ಪ್ರಸಿದ್ಧ ಕಾದಂಬರಿಗಾರ್ತಿಯರಲ್ಲಿ ಸುನೀತಿ ಕೃಷ್ಣಸ್ವಾಮಿ ಅವರು ಒಬ್ಬರು. 

ಸುನೀತಿ ಕೃಷ್ಣಸ್ವಾಮಿಯವರು ಮೈಸೂರಿನಲ್ಲಿ
1932ರ ಮೇ 21ರಂದು ಜನಿಸಿದರು. ತಂದೆ ಸುಬ್ಬರಾವ್.  ತಾಯಿ ಪಾರ್ವತಮ್ಮ. ಅವರ ಪ್ರಾಥಮಿಕ ವಿದ್ಯಾಭ್ಯಾಸ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಮಹಿಳಾ ಸೇವಾ ಸಮಾಜದಲ್ಲಿ ನಡೆಯಿತು. 

ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನು ಉಪೇಕ್ಷೆ ಮಾಡುತ್ತಿದ್ದ ಕಾಲದಲ್ಲಿ ತಂದೆ ತಾಯಿಗಳಿಂದ ಓದಿಗೆ ಪ್ರೋತ್ಸಾಹ ದೊರೆತು ಸುನೀತಿ ಅವರು ಬೆಂಗಳೂರಿನ ಮಹಾರಾಣಿ ಕಾಲೇಜಿನಿಂದ ಬಿ. ಎ. ಪದವಿ ಪಡೆದರು. 

ಎಳೆವೆಯಿಂದಲೇ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡ ಸುನೀತಿ ಅವರು ಬರವಣಿಗೆ ಪ್ರಾರಂಭಿಸಿದ್ದು ಕೊರವಂಜಿ ಪತ್ರಿಕೆಯಿಂದ. ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಅವರ ಕಥೆಗಳು ಪ್ರಕಟಗೊಂಡವು. ಹೆಣ್ಣು ಭ್ರೂಣ ಒಂದನ್ನು ಗರ್ಭಪಾತ ಮಾಡಿ ತೆಗೆಸಿ ಬಿಡುವ ನಿರ್ಧಾರಕ್ಕೆ ತಾಯಿ ಬಂದಾಗ, ತಾಯಿಯೊಡನೆ ಸಂಭಾಷಣೆ ನಡೆಸುವ ಕಾಲ್ಪನಿಕ ವಸ್ತುವುಳ್ಳ ಕಥೆಯೊಂದು ಪ್ರಕಟಣೆಗೊಂಡಾಗ ಓದುಗರಿಂದ ಅಗಾಧ ಪ್ರಶಂಸೆ ಬಂತು.   ಹಲವಾರು ಕಾದಂಬರಿಗಳ ರಚನೆ ಮಾಡಿದರು.‍‍ ಮೊದಲ ಕಾದಂಬರಿ ‘ಅದೃಷ್ಟ ಚಕ್ರ’ ಇವರಿಗೆ ಬಹಳಷ್ಟು ಪ್ರಸಿದ್ಧಿ ತಂದ ಕೃತಿ.  ಇದು ಕನ್ನಡ ಪ್ರಭ ಪತ್ರಿಕೆಯಲ್ಲಿ 1969ರಲ್ಲಿ ದೈನಿಕ ಧಾರಾವಾಹಿಯಾಗಿ ಪ್ರಕಟಗೊಂಡಿತು. ಇವರ ಮತ್ತೊಂದು ಕಾದಂಬರಿ ‘ಪಚ್ಚೆಮನೆ’ ಮೊದಲಿನ ಕಾದಂಬರಿಯಷ್ಟೇ ಓದುಗರನ್ನು ಆಕರ್ಷಿಸಿತು. ಇದು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ 1972ರಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಹಲವಾರು ವೃದ್ಧಾಶ್ರಮಿಗಳನ್ನು ಸಂದರ್ಶಿಸಿ, ವೃದ್ಧರ ಸಮಸ್ಯೆಗಳ ಬಗ್ಗೆ ಬರೆದ ಕಾದಂಬರಿ ‘ಸಂಧ್ಯಾಕಿರಣ.’ ಇದಲ್ಲದೆ ಸ್ಮೃತಿರಂಗ, ಮಂದಾರ, ಡಾಕ್ಟರ್ ರಮ್ಯ, ಗಿಣಿ-ರಾಗಿಣಿ-ವಿರಾಗಿಣಿ, ದೀಪಲಕ್ಷ್ಮಿ, ಮೃಗಜಲ, ಕಂದರದಿಂದ ಅಂಬರಕೆ ಮುಂತಾದವು ಇವರ ಪ್ರಮುಖ ಪ್ರಕಟಿತ ಕಾದಂಬರಿಗಳು. 

ಸುನೀತಿ ಕೃಷ್ಣಸ್ವಾಮಿ ಅವರು ಸಂಘ ಸಂಸ್ಥೆಗಳ ಸಾಂಸ್ಕೃತಿಕ ಕಾರ‍್ಯಕ್ರಮಗಳ ರೂವಾರಿಯೂ ಆಗಿದ್ದರು. ಹಲವಾರು ನಾಟಕಗಳನ್ನು ಬರೆದು, ನಿರ್ದೇಶಿಸಿ, ನಟಿಸಿದ ಕೀರ್ತಿ ಅವರದು.  ಆಕಾಶವಾಣಿಯ ವನಿತಾ ವಿಹಾರ ಕಾರ‍್ಯಕ್ರಮಗಳಲ್ಲಿ ಸುನೀತಾ ಕೃಷ್ಣಸ್ವಾಮಿಯವರ ಹಾಜರಿ ಅನೇಕ ಬಾರಿ ಇರುತ್ತಿತ್ತು. ಅವರು ಪ್ರಸಿದ್ಧ ಸಿನಿಮಾ ನಟ ರಾಜೇಶ್ ಜೊತೆಯಲ್ಲಿ ಮಹಿಷಾಸುರ ಮರ್ದಿನಿಯಲ್ಲಿ ದುರ್ಗಿಯಾಗಿ ನಟಿಸಿದ್ದರು. 

ಸುನೀತಿ ಕೃಷ್ಣಸ್ವಾಮಿ ಅವರಿಗೆ ಕಥೆ ಕಾದಂಬರಿ ರಚನೆಯ ಜೊತೆಗೆ ಸುಮಧುರ ಕಂಠವೂ ಇದ್ದು,  ಸುಶ್ರಾವ್ಯವಾಗಿ ಹಾಡುತ್ತಿದ್ದರು. ಹಲವಾರು ವರ್ಷ ಆಕಾಶವಾಣಿಯ ಶಾಸ್ತ್ರೀಯ ಸಂಗೀತ ಕಾರ‍್ಯಕ್ರಮಗಳಲ್ಲೂ  ಅವರು ಭಾಗಿಯಾಗಿದ್ದರು. 

ಕ್ಯಾನ್ಸರ್ ಪೀಡಿತರಾಗಿದ್ದರೂ ಕಿದ್ವಾಯ್ ಇನ್‌ಸ್ಟಿಟ್ಯೂಟ್ ಪತ್ರಿಕೆಗಾಗಿ ಹಲವಾರು ಲೇಖನಗಳನ್ನು ಬರೆದು ಕ್ಯಾನ್ಸರ್ ಪೀಡಿತರಿಗೆ ಧೈರ‍್ಯ ತುಂಬುತ್ತಿದ್ದ ಸುನೀತಿ ಕೃಷ್ಣಸ್ವಾಮಿ ಅವರು 2000ದ ಆಗಸ್ಟ್ 14ರಂದು ಈ ಲೋಕವನ್ನಗಲಿದರು.

On the birthday anniversary prominent writer Sunithy Krishnaswamy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ