ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎನ್. ಬಿ. ಜಯಪ್ರಕಾಶ್


 ಎನ್. ಬಿ. ಜಯಪ್ರಕಾಶ್


ಎನ್. ಬಿ. ಜಯಪ್ರಕಾಶ್ (ಜೆಪಿ) ಕಲಾವಿದರಾಗಿ ಮತ್ತು ಹಲವು ಚಟುವಟಿಕೆಗಳ ಸಂಘಟಕರಾಗಿ ಸಕ್ರಿಯರಾಗಿದ್ದಾರೆ.  ಅವರು ಹಾಸ್ಯಪಾತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿ ರಂಗಭೂಮಿ, ದೂರದರ್ಶನ, ಚಲನಚಿತ್ರಗಳಲ್ಲಿ ಕಾರ್ಯನಿರ್ವಹಿಸಿದ್ದಾರಲ್ಲದೆ ಸಮಾಜಮುಖಿ ಕಾರ್ಯಗಳಲ್ಲೂ ಕಂಡಿದ್ದಾರೆ.

ಜಯಪ್ರಕಾಶ್‌ 1950ರ ಮೇ 20ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಸ್. ಬಸವಯ್ಯ ಮಹಂತರಮಠ.  ತಾಯಿ ಭ್ರಮರಾಂಬಿಕ. ಓದಿದ್ದು ಬಿ.ಎಸ್ಸಿ ಮತ್ತು ಹಿಂದಿಯಲ್ಲಿ ಬಿ.ಎ.   ಸಾರ್ವಜನಿಕ ಸೇವೆಗಳಲ್ಲಿ ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿರುವ ಇವರು ಸೋಷಿಯಲ್ ಎಂಟರ್ಪ್ರೆನ್ಯೂರ್ಷಿಪ್ ವಿಷಯದಲ್ಲಿ ಪಿಎಚ್.ಡಿ ಮಾಡಿದ್ದಾರೆ.  ಹಲವು ರೀತಿಯ ಸಮಾಜ ಸೇವೆಗಳಲ್ಲಿ ಭಾಗವಹಿಸಿರುವ ಜಯಪ್ರಕಾಶ್ ವಿಧವೆಯರು ಮತ್ತು ವಿವಾಹವಿಚ್ಛೇದಿತ ಮಹಿಳೆಯರ ಕ್ಷೇಮಾಭಿವೃದ್ಧಿಗಾಗಿ 'ಪರಿಹಾರ್ ಫೌಂಡೇಷನ್’ ಎಂಬ ಸಂಸ್ಥೆ ನಿರ್ವಹಿಸುತ್ತಿದ್ದಾರೆ.

ಎನ್. ಬಿ. ಜಯಪ್ರಕಾಶ್ ಶಾಲಾ ಕಾಲೇಜು ದಿನಗಳಿಂದಲೂ ನಾಟಕದ ಬಗ್ಗೆ ಒಲವು ಮೂಡಿಸಿಕೊಂಡವರು.   ಮುಂದೆ ಉದ್ಯೋಗಕ್ಕಾಗಿ ಎನ್. ಜಿ. ಇ. ಎಫ್. ಸೇರಿದರು.  ಅಲ್ಲಿ 22 ವರ್ಷಗಳು ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಅಭಿನಯ ಚಟುವಟಿಕೆಗಳು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಗಮನ ಹರಿಸಿದ್ದಾರೆ.

ಜೆಪಿ 'ಯಶಸ್ವಿ ಕಲಾವಿದರು’ ನಾಟಕ ಸಂಸ್ಥೆಯ ’ಸಂಸಾರದಲ್ಲಿ ಸರಿಗಮ’ ಹಾಸ್ಯ ನಾಟಕದಲ್ಲಿ ಪ್ರಮುಖ ಪಾತ್ರವಹಿಸಿ ಜನಪ್ರಿಯರಾದರು. ದಿ. ಉದಯಕುಮಾರ್‌ ಅವರು ಕನಕದಾಸ ಮಿತ್ರ ಮಂಡಲಿ ವೃತ್ತಿ ನಾಟಕ ಸಂಸ್ಥೆಗಾಗಿ ರಚಿಸಿದ್ದ ’ಭಕ್ತ ಕನಕದಾಸ’ ಐತಿಹಾಸಿಕ ನಾಟಕದಲ್ಲಿ ನೂರಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಹಾಸ್ಯ ಪಾತ್ರ ನಿರ್ವಹಣೆ ಮಾಡಿದ್ದರು.  ಆಕಾಶವಾಣಿ ಕಾರ್ಯಕ್ರಮಗಳಾದ ನಾಟಕ. ಚಲನಚಿತ್ರ ಗೀತೆಗಳ ನಂದನ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ರಂಗಭೂಮಿಯಲ್ಲಿ ಅಭಿನಯಿಸಿದ ನಾಟಕಗಳು ಹಲವಾರು. 36 ಅಲ್ಲ 63, ತ್ರಿಮೂರ್ತಿ, ಎದುರು ಮನೆ ಯಶೋದ, ಹಲೋ ಡಾರ್ಲಿಂಗ್, ಭಾರತೀಪುರ, ಹಳ್ಳಿಚಿತ್ರ, ನರ್ಸ್‌ ಡಾಕ್ಟರ್‌ ಪರ್ಸು, ಇವಳ್ನಬಿಟ್ ಇವಳ್ನ ಬಿಟ್‌ ಇವಳ್ಯಾರು, ಸುಖನಿವಾಸ, ಸಸ್ಪೆನ್‌ಷನ್, ಉದ್ಯೋಗಂ ಪುರುಷ ಲಕ್ಷಣಂ, ಮೊಂಡಗಂಡ- ತುಂಟ ಹೆಂಡ್ತಿ, ನಂ. 25, ಬಲು ಅಪರೂಪ ನಮ್ ಜೋಡಿ, ಕಂಬ್ಳಿ ಸೇವೆ, ಸಂಗೀತ ಸಾಮ್ರಾಟ್, ರಾಧಾ ಮಾಧವ, ಪೇಷನ್ಸ್ ಮುಂತಾದವು ಇವರ ನಟನೆಗೆ ಖ್ಯಾತಿ ತಂದ ನಾಟಕಗಳು. ಇವರು ರಂಗಭೂಮಿಯ ಎಲ್ಲಾ ರಂಗ ತಂಡಗಳ ಬೇಡಿಕೆಯ ಹಾಸ್ಯನಟ. ಇದಲ್ಲದೆ ನನ್ಹೆಂಡ್ತಿ ಮಗು ಮತ್ತು ಅಮ್ಮಾವ್ರಗಂಡ ಮುಂತಾದ ಅನೇಕ ಧ್ವನಿಸುರುಳಿ ಬಿಡುಗಡೆಯಾದವು. 

ಜಯಪ್ರಕಾಶ್ ಅವರು ರಾಷ್ಟ್ರೀಯ ಮತ್ತು ರಾಜ್ಯಪ್ರಶಸ್ತಿ ವಿಜೇತ  ಚಲನಚಿತ್ರ  'ಹೂಮಳೆ'ಯಲ್ಲಿ ನಟಿಸಿದ್ದೇ ಅಲ್ಲದೆ ಅದರ ಸಹನಿರ್ಮಾಪಕರಾಗಿದ್ದರು.‍ ಮಧುರ ಬಾಂಧವ್ಯ, ಬಣ್ಣದ ಗೆಜ್ಜೆ, ಮಹೇಂದ್ರವರ್ಮ, ಮಕ್ಕಳ ಸಾಕ್ಷಿ, ಶ್... , ಆಪರೇಷನ್ ಅಂತ, ಊರ್ವಶಿ, ಮದುಮಗಳು, ಹಳ್ಳಿಯಾದರೇನು ಶಿವಾ, ನಾಗರಕಟ್ಟೆ, ಚಂಚಲೆ, ಮೇಷ್ಟ್ರು ಸುಬ್ಬು, ರಾಜಕೀಯ ಮುಂತಾದ ಅನೇಕ ಚಿತ್ರಗಳಲ್ಲಿ ಪಾತ್ರವಹಿಸಿದ್ದಾರೆ.


ಜಯಪ್ರಕಾಶ್ ಕಿರುತೆರೆಯಲ್ಲಿ ಹೊಸ ಬದುಕು, ಭಕ್ತಕನಕದಾಸ, ಸರಸ-ವಿರಸ, ಹೆಂಡ್ತಿ-ಹೆಂಡ್ತೀನೆ, ಬದಲಾವಣೆ, ಕಾಡು, ಮನಸ್ಸೆಲ್ಲಾ ಅವಳೇ, ಖೈದಿ ನಂಬರ್ 55, ಸಂಬಂಧ ಮಾಲೆ, ಒಂದು ಘಟನೆಯ ಸುತ್ತ, ಎಲ್ಲರಂಥಲ್ಲ ನನ್ ಹೆಂಡ್ತಿ, ಹಗರಣ, ಶುಭೋದಯ, ಮನರಂಜನೆ, ದೂರದ ಬೆಟ್ಟ, ಹೇಯ್, ಮನೆಯೇ ಮೊದಲ ಪಾಠಶಾಲೆ
ಮುಂತಾದ ನೂರಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 

ಜಯಪ್ರಕಾಶ್ ರಾಜ್ಯಮಟ್ಟದ ಹಾಸ್ಯ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ಹಾಸ್ಯನಟ, ಚಿತ್ರಪ್ರೇಮಿಗಳ ಸಂಘದಿಂದ ಹಾಸ್ಯನಟ, ಆರ್ಯಭಟ ಪ್ರಶಸ್ತಿ, ’ಶ್‌’ ಚಿತ್ರದಲ್ಲಿ ಶ್ರೇಷ್ಟ ಹಾಸ್ಯನಟ ಪ್ರಶಸ್ತಿ ಅಲ್ಲದೆ ಹಲವು ಸಾಂಸ್ಕೃತಿಕ  ಹಾಗೂ ರಂಗಸಂಸ್ಥೆಗಳಿಂದ ಅನೇಕ  ಪ್ರಶಸ್ತಿ ಗೌರವ ಗಳಿಸಿದ್ದಾರೆ. ಅವರಿಗೆ ಸಮಾಜಸೇವೆಗಾಗಿನ ಗೌರವಗಳೂ ಸಂದಿವೆ.

ಜಯಪ್ರಕಾಶ್ ಅವರು ಬಯೋಸ್ಕೋಪ್ ಆಮ್ಬಿಷನ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರಾಗಿ; ಡಿಗ್ನಿಟಿ ಫೌಂಡೇಷನ್, ಎಮೋಷನ್ ಅಂಡ್ ಸಿನಿಮಾ ಅಟ್ ಹಾರ್ಟ್,  ಅರ್ಟಿಸ್ಟ್ಸ್ ಅಕಾಡೆಮಿ ಇಂಡಿಯಾಕೆನ್-ಎನ್‍ಡಿಟಿವಿ ಅಂಡ್ ಟೆಂಟ್ ಸಿನಿಮಾ, ಪರಿವರ್ತನ ಟ್ರಸ್ಟ್ ಹಾಗೂ ಪರಿಹಾರ್ ಫೌಂಡೇಷನ್ ಮುಂತಾದ ಸಂಘಟನೆಗಳ ಮೂಲಕ ಅನೇಕ ಚಟುವಟಿಕೆಗಳಲ್ಲಿ  ಭಾಗವಹಿಸುತ್ತಾ ಬಂದಿದ್ದಾರೆ.

ಜಯಪ್ರಕಾಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birthday of popular actor N. B. Jayaprakash

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ