ಮಹಾರಾಜಪುರಂ ಸಂತಾನಂ
ಮಹಾರಾಜಪುರಂ ಸಂತಾನಂ
ಮಹಾರಾಜಪುರಂ ಸಂತಾನಂ ಶ್ರೇಷ್ಠ ಸಂಗೀತಗಾರರಾಗಿ ಪ್ರಸಿದ್ಧರು.
ಮಹಾರಾಜಪುರಂ ಸಂತಾನಂ ತಮಿಳುನಾಡಿನ ಸಿರುನಂಗೂರ್ ಎಂಬ ಹಳ್ಳಿಯಲ್ಲಿ 1928ರ ಮೇ 20ರಂದು ಜನಿಸಿದರು. ಅವರು ತಮ್ಮ ತಂದೆ ಪ್ರಸಿದ್ಧ ಮಹಾರಾಜಪುರಂ ವಿಶ್ವನಾಥ ಅಯ್ಯರ್ ಅವರ ಹೆಜ್ಜೆಗಳನ್ನು ಅನುಸರಿಸಿದರು. ಜೊತೆಗೆ ಮೆಲತ್ತೂರು ಶಾಮಾ ದೀಕ್ಷಿತರ ಶಿಷ್ಯರೂ ಆಗಿದ್ದರು.
ಮಹಾರಾಜಪುರಂ ಸಂತಾನಂ ಒಬ್ಬ ವಿಶಿಷ್ಟ ವಾಗ್ಗೇಯಕಾರರೂ ಆಗಿದ್ದರು. ಅವರು ಮುರುಗನ್ ಮತ್ತು ಕಂಚಿ ಶಂಕರಾಚಾರ್ಯ, ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳ ಮೇಲೆ ಅನೇಕ ಹಾಡುಗಳನ್ನು ಬರೆದಿದ್ದಾರೆ. ಮಹಾರಾಜಪುರಂ ಸಂತಾನಂ ಶ್ರೀಲಂಕಾದ ರಾಮನಾಥನ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ನಂತರ ಚೆನ್ನೈಗೆ ಬಂದು ನೆಲೆಸಿದರು.
ಮಹಾರಾಜಪುರಂ ಸಂತಾನಂ ಅವರು ಜನಪ್ರಿಯಗೊಳಿಸಿದ ಹಾಡುಗಳಲ್ಲಿ "ಭೋ ಶಂಭೋ" (ರೇವತಿ), "ಮಧುರ ಮಧುರ" (ಬಾಘೆಶ್ರೀ),"ಉನ್ನೈ ಅಲ್ಲಾಲ್" (ಕಲ್ಯಾಣಿ ರಾಗ), "ಸದಾ ನಿನ್ನ ಪಾದಮೇ ಗತಿ", "ವರಮ್ ಒಂಡ್ರು” (ಷಣ್ಮುಖಪ್ರಿಯ), "ಶ್ರೀಚಕ್ರರಾಜ" (ರಾಗಮಾಲಿಕಾ), "ನಳಿನಕಾಂತಿಮತಿಮ್" (ರಾಗಮಾಲಿಕಾ), "ಕ್ಷೀರಾಬ್ದಿ ಕನ್ನಿಕೆ" (ರಾಗಮಾಲಿಕಾ), "ತಿಲ್ಲಾನ (ರೇವತಿ)" ಮುಂತಾದವು ಇವೆ. ಅವರು ಹಾಡಿರುವ ಪುರಂದರದಾಸರ ಕೃತಿಗಳಾದ "ನಾರಾಯಣ ನಿನ್ನ" (ಶುದ್ಧ ಧನ್ಯಾಸಿ) ಮತ್ತು "ಗೋವಿಂದ ನಿನ್ನ" ಕೂಡ ಪ್ರಸಿದ್ಧ. ಅವರ “ವಿಲಯದ ಇದು ನೇರಮ ಮುರುಗಾ" ಪ್ರಸ್ತುತಿ ಅನನ್ಯವೆನಿಸಿದೆ. “ಅಲೈ ಪಾಯುದೇ ಕಣ್ಣಾ" ಗಾಯನ ಕೂಡಾ ಭವ್ಯ. ಅವರ ನಿರೂಪಣೆಗಳು ಭಕ್ತಿಯಿಂದ ತುಂಬಿದ್ದವು.
ಮಹಾರಾಜಪುರಂ ಸಂತಾನಂ ಅವರಿಗೆ ಪದ್ಮಶ್ರೀ - 1990, ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಿಂದ ಸಂಗೀತ ಕಲಾನಿಧಿ - 1989, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ - 1984, ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ, ಋಷಿಕೇಶದಲ್ಲಿರುವ ಯೋಗ ವೇದಾಂತ ವಿಶ್ವವಿದ್ಯಾಲಯದಿಂದ "ಸಂಗೀತ ಸುಧಾಕರ", ಶೃಂಗೇರಿ ಶಾರದಾ ಪೀಠದ ಶ್ರೀ ಚಂದ್ರಶೇಖರ ಭಾರತಿಯವರ "ಗಾನ ಕಲಾನಿಧಿ", ಕಂಚಿ ಕಾಮಕೋಟಿ ಪೀಠದ ಜಯೇಂದ್ರ ಸರಸ್ವತಿ ಅವರಿಂದ "ಸಂಗೀತ ಸಾಗರಾಮೃತ ವರ್ಷಿ", ತಿರುಮಲ ತಿರುಪತಿ ದೇವಸ್ಥಾನಗಳು, ಕಂಚಿ ಕಾಮಕೋಟಿ ಪೀಠಂ, ಪಿಟ್ಸ್‌ಬರ್ಗ್ ವೆಂಕಟಾಚಲಪತಿ ದೇವಸ್ಥಾನ ಮತ್ತು ಗಣಪತಿ ಸಚ್ಚಿದಾನಂದ ಆಶ್ರಮದ "ಆಸ್ಥಾನ ವಿದ್ವಾನ್" ಮುಂತಾದ ಅನೇಕ ಗೌರವಗಳು ಸಂದಿದ್ದವು.
ಮಹಾರಾಜಪುರಂ ಸಂತಾನಂ ಅವರ ಗೌರವಾರ್ಥವಾಗಿ ಚೆನ್ನೈನಲ್ಲಿನ ಟಿ.ನಗರದ ಗ್ರಿಫಿತ್ ರಸ್ತೆಯನ್ನು 'ಮಹಾರಾಜಪುರಂ ಸಂತಾನಂ ಸಲೈ' ಎಂದು ಮರುನಾಮಕರಣ ಮಾಡಲಾಯಿತು. ಈ ಬೀದಿಯು ಪ್ರಸಿದ್ಧ ಕೃಷ್ಣ ಗಾನ ಸಭಾ ಮತ್ತು ಮುಪ್ಪತಮ್ಮನ್ ದೇವಾಲಯವನ್ನು ಹೊಂದಿದೆ.
ಮಹಾರಾಜಪುರಂ ಸಂತಾನಂ ಅವರು 1992ರ ಜೂನ್ 24 ರಂದು ಚೆನ್ನೈ ಬಳಿ ಕಾರು ಅಪಘಾತದಲ್ಲಿ ತಮ್ಮ ಕುಟುಂಬದ ಹಲವು ಸದಸ್ಯರೊಂದಿಗೆ ನಿಧನರಾದರು. ಅವರ ಮಕ್ಕಳಾದ ಮಹಾರಾಜಪುರಂ ಎಸ್.ಶ್ರೀನಿವಾಸನ್, ಮಹಾರಾಜಪುರಂ ಎಸ್.ರಾಮಚಂದ್ರನ್ ಮತ್ತು ಅವರ ಶಿಷ್ಯ ಡಾ.ಆರ್.ಗಣೇಶ್ ಈಗ ಅವರ ಸಂಗೀತ ಪರಂಪರೆಯನ್ನು ಮುಂದುವರೆಸಿದ್ದಾರೆ.
ಪ್ರತಿ ವರ್ಷ ಡಿಸೆಂಬರ್ 3 ರಂದು ಮಹಾರಾಜಪುರಂ ಸಂತಾನಂ ದಿನವನ್ನು ಆಚರಿಸಲಾಗುತ್ತಿದೆ.
On the birth anniversary of great musician Maharajapuram Santhanam
ಕಾಮೆಂಟ್‌ಗಳು