ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನೀಲಮ್ ಸಂಜೀವರೆಡ್ಡಿ


 ನೀಲಮ್ ಸಂಜೀವರೆಡ್ಡಿ

ನೀಲಮ್ ಸಂಜೀವರೆಡ್ಡಿ ಭಾರತದ 6ನೆಯ ರಾಷ್ಟ್ರಪತಿಗಳಾಗಿದ್ದವರು.  ಸ್ವಾತಂತ್ರ್ಯ ಹೋರಾಟಗಾರರು. 

ನೀಲಮ್ ಸಂಜೀವರೆಡ್ಡಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ 1913ರ ಮೇ 19ರಂದು ಜನಿಸಿದರು. ಅವರು ಇಲ್ಲೂರಿ ಗ್ರಾಮದ ರೈತಕುಟುಂಬಕ್ಕೆ ಸೇರಿದವರು. ಅಡ್ಯಾರ್, ಮದರಾಸು ಹಾಗೂ ಅನಂತಪುರದ ಕಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಮಹಾತ್ಮ ಗಾಂಧೀಜಿಯವರಿಂದ ಪ್ರಭಾವಗೊಂಡು ಅಸಹಕಾರ ಚಳವಳಿಯ ಮೂಲಕ ಸ್ವಾತಂತ್ರ್ಯ ಹೋರಾಟಕ್ಕಿಳಿದರು (1931).  ಬ್ರಿಟಿಷರ ವಿರುದ್ಧ ನಡೆದ ಹಲವು ಚಳವಳಿಗಳಲ್ಲಿ ಭಾಗವಹಿಸಿದರು. ಕ್ವಿಟ್ ಇಂಡಿಯ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿದರು. 1946ರಲ್ಲಿ ಮದರಾಸು ವಿಧಾನಸಭೆಗೆ ಆಯ್ಕೆಗೊಂಡರು. ಅನಂತರ ಮದರಾಸು ಕಾಂಗ್ರೆಸ್ಸಿನ ಕಾರ್ಯದರ್ಶಿಯಾಗಿದ್ದರು. ಲೋಕಸಭಾ ಸದಸ್ಯರಾಗಿಯೂ ಆಯ್ಕೆಗೊಂಡರು.

ಸಂಜೀವರೆಡ್ಡಿ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಆಂಧ್ರಪ್ರದೇಶದ ಪ್ರಾಂತೀಯ ಕಾಂಗ್ರೆಸ್ ಸಮಿತಿಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದರು. 25ನೇ ವಯಸ್ಸಿಗೇ ಆಂಧ್ರಪ್ರದೇಶ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆಯಾದಗಿ ಹತ್ತು ವರ್ಷ ಆ ಹುದ್ದೆ ನಿರ್ವಹಿಸಿದರು. 1940ರಿಂದ 1945ರವರೆಗೆ ಬಹುಕಾಲ ತುರಂಗವಾಸ ಅನುಭವಿಸಿದರು. 1942 ಆಗಸ್ಟ್ ತಿಂಗಳಿನಿಂದ 1945ರವರೆಗೆ ಮಧ್ಯಪ್ರದೇಶದ ಅಮರಾವತಿ ಜೈಲಿನಲ್ಲಿ ಪ್ರಕಾಶಂ, ಸತ್ಯಮೂರ್ತಿ, ಕಾಮರಾಜ್, ವಿ. ವಿ. ಗಿರಿ ಮತ್ತಿತರ ಘಟಾನುಘಟಿಗಳ ಜತೆ ಜೈಲುವಾಸ ಅನುಭವಿಸಿದರು.

ಸಂಜೀವರೆಡ್ಡಿ 1946ರಲ್ಲಿ ಮದ್ರಾಸ್ ವಿಧಾನಸಭೆಗೆ ಆಯ್ಕೆಯಾದರು. 1947ರಲ್ಲಿ ಭಾರತ ಸಂವಿಧಾನಸಭೆ ಸದಸ್ಯರಾದರು. 1949ರಿಂದ 1951ರವರೆಗೆ ಅವಿಭಜಿತ ಮದ್ರಾಸ್ ರಾಜ್ಯದಲ್ಲಿ ಪಾನವಿರೋಧ, ವಸತಿ, ಅರಣ್ಯ ಖಾತೆ ಸಚಿವರಾಗಿದ್ದರು. 1951ರಲ್ಲಿ ಆಂಧ್ರಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದರು. ಅನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಹಾಗೂ ಕೇಂದ್ರ ಸಂಸತ್ತು ಸಮಿತಿಗಳಲ್ಲಿ ಸೇವೆ ಸಲ್ಲಿಸಿದರಲ್ಲದೆ, ರಾಜ್ಯಸಭೆಗೂ ಆಯ್ಕೆಗೊಂಡರು (1952). ಮದರಾಸು ಪ್ರಾಂತದಿಂದ ಆಂಧ್ರಪ್ರದೇಶ ಪ್ರತ್ಯೇಕಗೊಂಡಾಗ ಟಿ. ಪ್ರಕಾಶಮ್ ಪ್ರಥಮ ಮುಖ್ಯಮಂತ್ರಿಯಾದಾಗ ಇವರು ಉಪಮುಖ್ಯಮಂತ್ರಿಯಾದರು. 1956ರಲ್ಲಿ ಭಾಷಾವಾರು ಪ್ರಾಂತಗಳ ರಚನೆಯಾದಾಗ ಇವರು ಆಂಧ್ರಪ್ರದೇಶ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾದರು. ಅನಂತರ ಭಾರತದ ರಾಷ್ಟ್ರೀಯ ಕಾಂಗ್ರೆಸಿನ ಅಧ್ಯಕ್ಷರಾಗಿ ಆಯ್ಕೆಗೊಂಡರು (1959-62). 1962ರ ಅನಂತರ ಮತ್ತೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಒಂದು ವರ್ಷ ಸೇವೆ ಸಲ್ಲಿಸಿದರು. ಅನಂತರ ಕೇಂದ್ರ ಸಚಿವಸಂಪುಟಕ್ಕೆ ಸೇರ್ಪಡೆಯಾದರು. ಲಾಲ್‍ಬಹದ್ದೂರ್ ಶಾಸ್ತ್ರಿ ಹಾಗೂ ಇಂದಿರಾಗಾಂಧಿ ಅವರ ಸರ್ಕಾರಗಳಲ್ಲಿ ಹಿರಿಯ ಸಚಿವರಾಗಿ ಸೇವೆ ಸಲ್ಲಿಸಿದರು. 1967ರ ಮಾರ್ಚ್ 17ರಂದು ಲೋಕಸಭೆ ಅಧ್ಯಕ್ಷರಾಗಿ ಆಯ್ಕೆಗೊಂಡರು. ಈ ಹುದ್ದೆಯಲ್ಲಿ ನೀಲಂ ಸಂಜೀವರೆಡ್ಡಿಯವರಿಗೆ ವ್ಯಾಪಕ ಮೆಚ್ಚುಗೆ-ಗೌರವ ದೊರೆತವು. 1969ರ ಜುಲೈ 19ರಂದು ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಿದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೀಮತಿ ಇಂದಿರಾಗಾಂಧಿ ಅವರಿಂದಲೇ ಮೊದಲು ಅವರ ಪರ ನಾಮಪತ್ರ ಸಲ್ಲಿಕೆಯಾಯಿತು. ನಂತರ ಕಾಂಗ್ರೆಸ್ ಇಂಡಿಕೇಟ್-ಸಿಂಡಿಕೇಟ್‍ಗಳೆಂದು ಎರಡು ಹೋಳಾಗಿ, ಶ್ರೀಮತಿ ಗಾಂಧಿ ಸಂಜೀವರೆಡ್ಡಿಯವರನ್ನು ಸೋಲಿಸಿದ್ದು ಸ್ವಾತಂತ್ರ್ಯಾನಂತರದ ಭಾರತ ಇತಿಹಾಸದಲ್ಲಿ ಮಹತ್ತ್ವದ ಸಂಕ್ರಮಣ ಘಟ್ಟವಾಯಿತು.

ವಿ.ವಿ.ಗಿರಿ ಹಾಗೂ ಇವರ ನಡುವೆ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆ ಏರ್ಪಟ್ಟಿತ್ತು. ಆಗ ಇಂದಿರಾ ಗಾಂಧಿಯವರು ವಿ. ವಿ. ಗಿರಿಯವರನ್ನೂ ಎಸ್. ನಿಜಲಿಂಗಪ್ಪನವರು ಸಂಜೀವರೆಡ್ಡಿ ಅವರನ್ನೂ ಬೆಂಬಲಿಸಿದರು. ಮುಂದೆ ಜನತಾಪಕ್ಷ ಹಾಗೂ ಕಾಂಗ್ರೆಸ್‍ನ ಬೆಂಬಲದೊಂದಿಗೆ 1977ರ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದರು. ಮತ್ತೆ ಅವಿರೋಧವಾಗಿ ಸ್ಪೀಕರ್ ಆದರು. ಅನಂತರ ಇವರು ಎಲ್ಲ ರಾಜಕೀಯ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಭಾರತದ 6ನೆಯ ರಾಷ್ಟ್ರಪತಿಗಳಾಗಿ (1977 ಜುಲೈ 25) ಆಯ್ಕೆಗೊಂಡು 1982 ಜುಲೈ 25ರಂದು ನಿವೃತ್ತಿಗೊಂಡರು. 

ಸಂಜೀವರೆಡ್ಡಿ ಅವರು 1996ರ ಜೂನ್ 1ರಂದು ಬೆಂಗಳೂರಿನಲ್ಲಿ ನಿಧನರಾದರು.

On the birth anniversary of Neelam Sanjiva Reddy 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ