ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಾಶೀನಾಥ್


 ಕಾಶೀನಾಥ್ 


ಕಾಶೀನಾಥ್ ಸರಳ ಸಾಧಾರಣರಾದ ಒಬ್ಬ ವ್ಯಕ್ತಿಯಾಗಿದ್ದು, ಮೆರುಗು ಬಣ್ಣಗಳ ಪ್ರದರ್ಶನಗಳ ಲೋಕವಾದ ಚಿತ್ರರಂಗವನ್ನು ತಮ್ಮ ಪ್ರತಿಭಾ ಮಾತ್ರದಿಂದ ಬೆಳಗಿದವರು.

ಕಾಶೀನಾಥ್ 1951ರ ಮೇ 8ರಂದು ಕುಂದಾಪುರದಲ್ಲಿ ಜನಿಸಿದರು.

ನಮ್ಮ ಯುವದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ರಾಜ್‍ಕುಮಾರ್ ಇದ್ದರು. ನಂತರದ ತಲೆಮಾರಿನ ವಿಷ್ಣುವರ್ಧನ್, ಶ್ರೀನಾಥ್, ನಾಗ್ ಸೋದರರು ಹೀಗೆ ಹಲವಾರು ಪ್ರಸಿದ್ಧ ಕಲಾವಿದರಿದ್ದರು.  ಪುಟ್ಟಣ್ಣ, ಸಿದ್ಧಲಿಂಗಯ್ಯ, ದೊರೈ ಭಗವಾನ್  ಅಂತಹ ಅನೇಕ ನಿರ್ದೇಶಕರು ಘಟಾನುಘಟಿ ನಿರ್ಮಾಪಕರಿಂದ ಶ್ರೀಮಂತ  ಚಿತ್ರಗಳನ್ನು ನಿರ್ಮಿಸುತ್ತ ಸಾಗಿದ್ದರು.   ಈ ಮಧ್ಯೆ ಅಚ್ಚರಿ ಎಂಬಂತೆ, ಹೆಚ್ಚು ಖರ್ಚು ವೆಚ್ಚವಿಲ್ಲದೆ,  ಅಂದಿನ ದಿನದಲ್ಲಿದ್ದ  ಯಾವ ಪರಿಚಿತ  ಹೆಸರನ್ನೂ  ಚಿತ್ರ ತಂಡದ ಪಟ್ಟಿಯಲ್ಲಿ ಹೊಂದಿಲ್ಲದ ಹಾಗೆ   ಈ ‘ಅಪರಿಚಿತರಾದ ಕಾಶೀನಾಥ್’ ತೆರೆಗೆ ತಂದ  ‘ಅಪರಿಚಿತ’ ಚಿತ್ರ  ಕನ್ನಡ ಚಿತ್ರರಂಗದಲ್ಲೊಂದು ವಿಸ್ಮಯ.    ಸಸ್ಪೆನ್ಸ್ ಎಂಬ ಪದ ನಮಗೆ ಪರಿಚಯವಾಗಿದ್ದೇ ‘ಅಪರಿಚಿತ’ದಿಂದ. ಈ ಚಿತ್ರದ  ‘ಸವಿ ನೆನಪುಗಳು ಬೇಕು’ ಎಂದು ಕೊರಗಿದ ಹುಡುಗಿ ಶೋಭಾ, ತನ್ನ ಬದುಕಲ್ಲಿ ಅಂತಹ ನೆನಪು ಸಿಗದೆ ಸಾವಿಗೆ ಮೊರೆಯಾಗಿದ್ದು ಸಹಾ ಮರೆಯಲಾರದ ನೆನಪು.  ಸುರೇಶ್ ಹುಬ್ಳೀಕರ್ ಯಾವುದೇ ಹೀರೋಗೂ ಕಡಿಮೆ ಇಲ್ಲದಂತೆ ಈ ಚಿತ್ರದಲ್ಲಿ ವಿಜ್ರಂಭಿಸಿದ್ದು, ನಂತರ ಅಂತಹದ್ದೇ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದು ಎಲ್ಲವೂ ಮನದಲ್ಲಿ ತೆರೆದುಕೊಳ್ಳುವ ಅಂಶಗಳು.  ಸುಂದರಕೃಷ್ಣ ಅರಸ್  ಎಂಬ  ವಿಶಿಷ್ಟ ಮರೆಯಲಾಗದ ಧ್ವನಿ ಕೂಡ.  

ಮುಂದೆ ಕಾಶೀನಾಥರ  ಚಿತ್ರವಾದ ‘ಅನುಭವ’, ಅದಕ್ಕಿದ್ದ ಕಾಮದ  ಬೆಸುಗೆಗಿಂತ  ಒಂದು ಹಾಸ್ಯ, ಕನಸು ಕಾಣುವ ವ್ಯಕ್ತಿತ್ವ, ಅಪಕ್ವತೆಯ ಅನುಭಾವಗಳನ್ನು ಹಿತಮಿತವಾಗಿ ಮೂಡಿಸಿದ ಸುಲಲಿತ ಚಿತ್ರ.  ಈ ಚಿತ್ರದಲ್ಲಿನ ಕಲಾವಿದರಾದ ಕಾಶೀನಾಥ್, ಆ ಪುಟ್ಟ ಹುಡುಗ, ಉಮಾಶ್ರೀ, ಅಭಿನಯ,  ಕಾಮಿನಿ ಧರನ್, ಅರವಿಂದ್  ಮುಂತಾದವರ ಅಭಿನಯವನ್ನು  ಈಗಲೂ ಮರೆಯಲು ಸಾಧ್ಯವಿಲ್ಲ.  ‘ಅವನೇ ನನ್ನ ಗಂಡ’, ‘ಅವಳೇ ನನ್ನ ಹೆಂಡ್ತಿ’ ಮುಂತಾದವೂ ಅಂದಿನ ಮಧ್ಯಮವರ್ಗಕ್ಕೆ ಹಿತವಾದ ಚಿತ್ರಗಳಾಗಿದ್ದವು.  

ತಮ್ಮ ಚಿತ್ರಗಳಲ್ಲಿ ಕಾಮದ ಬಳಕೆಯ ಯಶಸ್ಸಿನ ಬಗ್ಗೆ ಅರಿವು ಹೊಂದಿದ್ದ ಕಾಶೀನಾಥ್ ಅದನ್ನು  ಸ್ವಲ್ಪಮಟ್ಟಿಗೆ  ಕ್ಯಾಪಿಟಲೈಸ್  ಮಾಡಿಕೊಂಡರಾದರೂ ಅವರು ಆ ಕುರಿತು  ಬೇಜವಾಬ್ಧಾರಿತನ ಹೊಂದಿರಲಿಲ್ಲ ಎಂಬುದು ನನ್ನ ಅನಿಸಿಕೆ.   “ಕಾಮಶಾಸ್ತ್ರ ಭಾರತದ ಕೊಡುಗೆ. ಮಡಿವಂತಿಕೆಯನ್ನು ಹೇಳಿದ್ದೂ ಭಾರತವೇ. ಪುರಾತನ ಸಂಸ್ಕೃತಿಯಲ್ಲಿ ಅಶ್ಲೀಲದ ಬಗ್ಗೆ ವ್ಯಾಖ್ಯಾನ ಇಲ್ಲ. ನಮ್ಮ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ನನ್ನ ಸಿನಿಮಾಗಳು ಅಶ್ಲೀಲವಾಗಿವೆ ಎಂದು ಟೀಕಿಸಿದವರೇ ಮರೆಯಲ್ಲಿ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಇದೇ ನನ್ನ ಯಶಸ್ಸಿನ ಗುಟ್ಟು" ಎಂಬುದು ಕಾಶೀನಾಥ್ ಅವರ ನೇರನುಡಿಯಾಗಿತ್ತು. ಹಲವು ವರ್ಷದ ಹಿಂದೆ  ‘ಬೆಳ್ಳಿಹೆಜ್ಜೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ನುಡಿದದ್ದು ಹೀಗೆ : “ಇತ್ತೀಚೆಗೆ ಉಪೇಂದ್ರ ಅವರ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಅಲ್ಲಿದ್ದ ನಾಲ್ವರು ಮಹಿಳೆಯರು ‘ಅನಂತನ ಆವಾಂತರ’ದಂತಹ ಸಿನಿಮಾ ಯಾವಾಗ ಮಾಡುತ್ತೀರ? ಎಂದು ಪ್ರಶ್ನಿಸಿದರು. ನನಗೆ ಆಘಾತವಾಯಿತು. ಜನರ ಮನಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದ್ದರಿಂದ ಇಂತಹ ಚಿತ್ರ ಮಾಡಲು ಸಾಧ್ಯವಾಯಿತು. ಇದೊಂದು ರೀತಿ ಕತ್ತಿ ಅಲುಗಿನ ಮೇಲಿನ ನಡಿಗೆ. ನನ್ನ ಅನಂತನ ಆವಾಂತರ ಚಿತ್ರದಲ್ಲಿ ಈಗಿನ ಯು ಸರ್ಟಿಫಿಕೇಟ್‌ ಚಿತ್ರಗಳಂತೆ ಎಕ್ಸ್‌ಪೋಸ್‌ ಮಾಡಿಲ್ಲ".  ನಮ್ಮ ಮನಸ್ಸನ್ನು ಕನ್ನಡಿಯಲ್ಲಿ ಕಂಡುಕೊಂಡಾಗ  ಕಾಶೀನಾಥರ ಮಾತುಗಳು ಸುಳ್ಳು ಎಂದು ಎನಿಸುವುದಿಲ್ಲ.  

ಮುಖ್ಯವಾಗಿ ಕಾಶೀನಾಥರ ಚಿತ್ರಗಳು ಕೆಲವೊಂದು ಸೂಕ್ಷ್ಮವಿಚಾರಗಳನ್ನು ಕಥಾಹಂದರವಾಗಿ ಮಾಡಿಕೊಂಡು ಜನರ  ಅಂತರಂಗಕ್ಕೆ  ಪ್ರವೇಶಿಸಿದಂತಹವು.  ಯಾವುದೇ ವಸ್ತುವಾದರೂ ಚಿತ್ರರಂಗದಲ್ಲಿ ಒಮ್ಮೆ ಗೆಲುವುಕಂಡಾಗ ಪುನಃ ಪುನಃ ಪುನಾರಾವರ್ತನೆಗೊಂಡು ಸೋತಿರುವುದು ಸರ್ವವಿಧಿತವಾಗಿದ್ದು,  ಅದಕ್ಕೆ ಕಾಶೀನಾಥರೂ  ಅತೀತರಾಗಿರಲಿಲ್ಲ ಎಂಬುದು ನಾವೆಲ್ಲರೂ ಬಲ್ಲ ವಿಷಯ.

“ಚಿತ್ರಕಥೆಯೇ ಸಿನಿಮಾದ ತಳಪಾಯ. ಸಿನಿಮಾದಲ್ಲಿ ಚಿತ್ರಕಥೆಯೇ ಹೀರೋ. ಚಿತ್ರಕಥೆಗೆ ಹೊಂದಾಣಿಕೆ ಆಗುವ ನಟರನ್ನು ನಾವು ಹುಡುಕಬೇಕು. ಆಗ ಯಶಸ್ಸು ಸಿಗುತ್ತದೆ. ನನ್ನ ಚಿತ್ರಕಥೆಗೆ ಹೊಂದಾಣಿಕೆಯಾಗುವ ವ್ಯಕ್ತಿ ರಸ್ತೆಯಲ್ಲಿ ಸಿಕ್ಕರೂ ಆತನಿಗೆ ಪಾತ್ರ ಕೊಡುವ ಧೈರ್ಯ ನನಗಿದೆ" ಎಂದು ನುಡಿದಿದ್ದ ಕಾಶೀನಾಥ್ ಜೊತೆಗೆ ಈ ಮಾತು ಕೂಡ ಹೇಳಿದ್ದು ಮನನೀಯ. "ಅನೇಕ ಚಿತ್ರಗಳಲ್ಲಿ ಯಶಸ್ಸಿನ ಬಗ್ಗೆ ಹೊಗಳಿಕೆ ಮಾತು ಕೇಳಿ ಬಂದಾಗ ಅಹಂಕಾರ ಬಂತು. ಇದೇ ಅಂಶ ಹಿಂದಿ ಚಿತ್ರ ಸೋಲಲು ಕಾರಣವಾಯಿತು. ಜೀವನಾನುಭವವೂ ಸಿಕ್ಕಿತು”.  ಹೀಗೆ ಕಾಶೀನಾಥ್ ಅವರದ್ದು ನೇರ ನೋಟ.

ನನಗೆ ಕಾಶೀನಾಥ್ ಎಂದರೆ ತುಂಬಾ ಇಷ್ಟವಾಗುವುದು ಅವರು ತಮ್ಮನ್ನು ತಾವು ಮುಕ್ತವಾಗಿ ತೆರೆದುಕೊಂಡಿದ್ದ ರೀತಿಯ ಬಗ್ಗೆ. ಒಂದು ಚಿತ್ರದಲ್ಲಿ ಯಮನ ಆಸ್ಥಾನದಲ್ಲಿ ಯಮನಾದ ‘ದೊಡ್ಡಣ್ಣ’ ಅವರ  ಮುಂದೆ  ನ್ಯಾಯಸ್ಥಾನದಲ್ಲಿ ನಿಂತ  ಕಾಶೀನಾಥ್ ಬಗ್ಗೆ ಚಿತ್ರಗುಪ್ತರಾದ ‘ಸಾಧು ಕೋಕಿಲ’ ಹೀಗೆ ಹೇಳುತ್ತಾರೆ: “ಪ್ರಭು ಇವನ ಪಾಪಗಳನ್ನು ಎಣಿಸಿ ಹೇಳುವುದಕ್ಕಿಂತ, ತೂಕದಲ್ಲಿ ಹೇಳುವುದು ಒಳಿತು, ಈತ  ಡಬ್ಬಲ್ ಮೀನಿಂಗ್ ಸಂಭಾಷಣಾ  ಚಿತ್ರಗಳನ್ನು ನಿರ್ದೇಶಿಸಿ ಜನರ ಅಭಿರುಚಿಗಳನ್ನು ಕೆಡಿಸಿದವ”.  ಹೀಗೆ   ತಮ್ಮ ಇತಿ-ಮಿತಿ, ಸರಿ-ತಪ್ಪು, ಯಶಸ್ಸು-ಸೋಲು ಇವುಗಳೆಲ್ಲವನ್ನೂ  ಅರಿವಿನಿಂದ  ಅನುಭಾವಿಸಿಕೊಂಡಿದ್ದ  ವಿಶಿಷ್ಟ ವ್ಯಕ್ತಿ ಕಾಶೀನಾಥ್.  

ಕಾಶೀನಾಥ್ ಚಿತ್ರರಂಗದಲ್ಲಿದ್ದರೂ ಸಾಮಾನ್ಯರಂತೆ ಬಾಳಿ 2018ರ ಜನವರಿ 18ರಂದು ಈ ಲೋಕವನ್ನಗಲಿದರು.  ಇಂದು ಅವರು ಪರಿಚಯಿಸಿದ  ಅನೇಕ ಪ್ರತಿಭೆಗಳು  ಪ್ರಸಿದ್ಧರಾಗಿ ನಮ್ಮ ಕಣ್ಮುಂದಿದ್ದಾರೆ.  ಆದರೆ ಅದ್ಯಾವುದರ ಕುರಿತೂ ಕಿಂಚಿತ್ತೂ ಅಹಂ ಹೊಂದಿಲ್ಲದೆ ಸಾಧಾರಣ ವ್ಯಕ್ತಿಯಂತೆಯೇ  ಬಾಳಿದ ಕಾಶಿನಾಥ್ ನಿಜಕ್ಕೂ ಮುಕ್ತಿವಂತ.

On the birth anniversary of actor and director Kashinath

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ