ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನರೇಗಲ್ಲ ಮಾಸ್ತರ


 ಪ್ರಹ್ಲಾದ ನರೇಗಲ್ಲ ಬಂಡೇರಾವ


ನರೇಗಲ್ಲ ಮಾಸ್ತರ ಎಂದೇ ಪ್ರಖ್ಯಾತರಾದ ಮಹತ್ವದ ಸಾಹಿತ್ಯ ಸೇವಕರು ಪ್ರಹ್ಲಾದ ನರೇಗಲ್ಲ ಬಂಡೇರಾವ ಅವರು.

ಪ್ರಹ್ಲಾದ ನರೇಗಲ್ಲ ಬಂಡೇರಾವ 1907ರ ಮೇ 30ರಂದು ನವಲಗುಂದ ತಾಲ್ಲೂಕಿನ ಜಾವೂರಿನಲ್ಲಿ ಜನಿಸಿದರು. ತಂದೆ ಅನಂತರಾವ ನರೇಗಲ್ಲ. ತಾಯಿ ಅಂಬಾಬಾಯಿ.

ಪ್ರಹ್ಲಾದ ನರೇಗಲ್ಲರು ಧಾರವಾಡದಲ್ಲಿ ಓದಿನೊಡನೆ ಸಂಪಾದನೆಯ ಹಾದಿಯನ್ನೂ  ಹಿಡಿದಿದ್ದರು.  ಕರ್ಮವೀರ ಕಾರ‍್ಯಾಲಯದಲ್ಲಿ ಕೆಲಕಾಲ ಕಂಪೋಜಿಟರಾಗಿ, ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ‘ವಾರ್ತಾಹರ’ ಪತ್ರಿಕೆಯ ಸಂಪಾದಕ ಮಂಡಲಿಯಲ್ಲೂ  ಕೆಲಕಾಲ ದುಡಿದರು. 

ಪ್ರಹ್ಲಾದ ನರೇಗಲ್ಲ ಅವರು ಹೈಸ್ಕೂಲಿನಲ್ಲಿದ್ದಾಗಲೇ ಬೇಂದ್ರೆ, ಜೋಶಿ, ಗೋವಿಂದರಾವ್ ಚುಳಕಿ, ಕಲ್ಲೂರ, ಸಂಗಮ ಮುಂತಾದವರೊಡನೆ ಸ್ನೇಹ ಹೊಂದಿದ್ದರು. ಹದಿಮೂರರ ವಯಸ್ಸಿನಲ್ಲೇ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಿ ವಿದ್ಯೆಗೆ ಶರಣು ಹೊಡೆದರು. ಬೇಂದ್ರೆಯವರ ಉತ್ತೇಜನದ ಮೇರೆಗೆ. ರವೀಂದ್ರರ ಶಾಂತಿನಿಕೇತನ ಸೇರಿ ವಿಶ್ವಭಾರತಿಯಲ್ಲಿ ಪದವಿ ಪಡೆದರು. ಪದವಿ ಪಡೆದ ನಂತರ ಕೆಲಕಾಲ ಜಯ ಕರ್ನಾಟಕ ಪತ್ರಿಕೆಯ ಸಂಪಾದಕತ್ವ ಮಾಡಿದರು. ಚೇಂಬರ್ ಆಫ್ ಕಾಮರ್ಸ್ (ಹುಬ್ಬಳ್ಳಿ) ಕಾರ‍್ಯದರ್ಶಿ ಆಗಿದ್ದರು.  ಕರ್ನಾಟಕ ಏಕೀಕರಣದ ಕಾರ‍್ಯದಲ್ಲೂ  ಭಾಗಿಯಾದರು. ನಂತರ ವಿಜಾಪುರದ ವಿ.ಬಿ. ದರಬಾರ ಹೈಸ್ಕೂಲಿನಲ್ಲಿ ಕೆಲಕಾಲ ದುಡಿದರು. ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲಿನಲ್ಲಿ  ಶಿಕ್ಷಕರಾಗಿ ಸೇರಿದ ನಂತರ ಎಂ.ಎ. ಪದವಿಯನ್ನು  ಸಾಂಗ್ಲಿಯಲ್ಲೂ, ಬಿ.ಟಿ. ಪದವಿಯನ್ನು ಮುಂಬಯಿಯಲ್ಲೂ  ಪಡೆದರು. 

ಬಂಗಾಲಿ ಕಲಿತ ಪ್ರಹ್ಲಾದರು ಗೀತಾಂಜಲಿಯ ಅನುವಾದ ಕಾರ‍್ಯದಲ್ಲಿ ಭಾಗವಹಿಸಿ 157 ಗೀತೆಗಳನ್ನು ನೇರವಾಗಿ ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದರು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪಾಲ್ಗೊಂಡು ಸುಶ್ರಾವ್ಯ ಕಂಠದಿಂದ ಹಾಡಿ, ಸಭಿಕರ ಮನ ಗೆಲ್ಲುತ್ತಿದ್ದರು.

ಪ್ರಹ್ಲಾದ ನರೇಗಲ್ಲ ಅವರಿಗೆ ಚಿಕ್ಕಂದಿನಿಂದಲೂ ಕಾವ್ಯದ ಹುಚ್ಚು. ವಿದ್ಯಾರ್ಥಿಯಾಗಿದ್ದಾಗಲೇ ‘ಜೇನುಹುಟ್ಟು’ ಮತ್ತು ‘ಕಾವ್ಯಸೇವೆ’ಗಳ ಸಂಪಾದಕರಾಗಿದ್ದರು. ಇವರ ಮೊದಲ ಕವನ ಸಂಕಲನ ‘ನಸುಕು’ ಪ್ರಕಟವಾದುದು 1946 ರಲ್ಲಿ. ‘ಸಂಧ್ಯಾ ನಮನ’ ಅವರ ಇನ್ನೊಂದು ಕವನ ಸಂಕಲನ. ‘ಪ್ರಬಂಧ ಪುಷ್ಪಾಂಜಲಿ’ 1948 ರಲ್ಲಿ ಪ್ರಕಟಗೊಂಡಿತು. 1952 ರಲ್ಲಿ  ‘ಜ್ಞಾನೇಶ್ವರಿ ಸುಬೋನಿ’ ಕೃತಿಯನ್ನು 'ಮಹಾಯೋಗಿ' ಎಂದು  ಕನ್ನಡಕ್ಕೆ ಅನುವಾದಿಸಿದರು. ಕೇಂದ್ರ ಸಾಹಿತ್ಯ ಅಕಾಡಮಿಗಾಗಿ ‘ಈಶ್ವರ ಚಂದ್ರ ವಿದ್ಯಾಸಾಗರ’ ಕನ್ನಡ ಆವೃತ್ತಿಯನ್ನು  ಪ್ರಕಟಿಸಿದರು. 

ಪ್ರಹ್ಲಾದ ನರೇಗಲ್ಲ ಅವರು ಮೈಸೂರು ದಸರಾ ಕವಿಗೋಷ್ಠಿಯಲ್ಲಿ  ಭಾಗಿಯಾದರು. ಅರವಿಂದರ ಜನ ಶತಾಬ್ಧಿಗಾಗಿ ಅರವಿಂದ ಕರ್ಮಧಾರ ಪತ್ರಿಕೆಯ ಸಂಪಾದಕರಾದರು. ಅಲ್ಲಿನ ಗ್ರಂಥ ಪ್ರಕಟಣೆಯ ಹೊಣೆಗಾರಿಕೆ ನಿರ್ವಹಿಸಿದರು. 

ಪ್ರಹ್ಲಾದ ನರೇಗಲ್ಲ ಅವರಿಗೆ ಎಪ್ಪತ್ತು ತುಂಬಿದ ಸಂದರ್ಭದಲ್ಲಿ ಹುಟ್ಟಿದ ಜಾವೂರಿನಲ್ಲಿ, ಲಕ್ಷ್ಮೇಶ್ವರದಲ್ಲಿ, ಹುಬ್ಬಳ್ಳಿಯಲ್ಲಿ  ಸನ್ಮಾನಗಳು ಜರುಗಿದವು, ನರೇಗಲ್ಲ ಮಾಸ್ತರ ಎಂದೇ ಪ್ರಸಿದ್ಧರಾಗಿದ್ದ  ಪ್ರಹ್ಲಾದರಾಯರು 1977ರಲ್ಲಿ ಈ ಲೋಕವನ್ನಗಲಿದರು.

ಚಿತ್ರಕೃಪೆ: ಕಾಮತ್.ಕಾಂ

On the birth anniversary of scholar Prahlad Naregal Banderao

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ