ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಂಕಲ್ ಶ್ಯಾಮ್



ಅಂಕಲ್ ಶ್ಯಾಮ್

ಅಂಕಲ್ ಶ್ಯಾಮ್ ಎಂದೇ ಪ್ರಖ್ಯಾತರಾಗಿರುವವರು ರಂಗಕರ್ಮಿ ಎಂ. ಎಸ್. ಶಾಮಸುಂದರ್. 
 
ಶ್ಯಾಮ್ ಅವರು 1943ರ ಮೇ 30ರಂದು ಜನಿಸಿದರು.  ಇವರ ಊರು ತೀರ್ಥಹಳ್ಳಿಯ ಸಮೀಪದ ಮಾಳೂರು.  ತಂದೆ ಎಂ. ಎಸ್. ಶಂಕರಪ್ಪ. ತಾಯಿ ಸುಬ್ಬಮ್ಮ.  ತಾಯಿ ಸಂಗೀತದ ಸುಬ್ಬಮ್ಮ ಅಂತ ಹೆಸರುವಾಸಿಯಾದವರು.  ಇವರ ಅಣ್ಣ ‘ಕೊರವಂಜಿ’ಯಲ್ಲಿ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದರು.  ಅಕ್ಕ ಸಣ್ಣವರಿದ್ದಾಗಲೇ ನಾಟಕಗಳಲ್ಲಿ ನಟಿಸುತ್ತಿದ್ದರು.  ಅವರಿಗೆ ಶ್ಯಾಮ್ ಸಹಾಯ ಮಾಡುತ್ತಿದ್ದರು.  

ಶ್ಯಾಮ್ ಅವರು ಓದಿದ್ದು ಬಿ.ಕಾಂ.  ಉದ್ಯೋಗ ನಿರ್ವಹಿಸಿದ್ದು ಕೃಷಿ ಇಲಾಖೆಯಲ್ಲಿ.  ಮಂಡ್ಯದ ಕೃಷಿ ಕಾಲೇಜಿನಲ್ಲಿದ್ದಾಗ ವಿದ್ಯಾರ್ಥಿಗಳಿಗೆ ನಾಟಕದ ಬಗ್ಗೆ ಆಸಕ್ತಿ ಮೂಡಿಸಿ ಹಲವಾರು ನಾಟಕಗಳ ಪ್ರದರ್ಶನಕ್ಕೆ ಕಾರಣರಾಗಿದ್ದರು. ಬೆಂಗಳೂರಿಗೆ ಬಂದಾಗ ಇಲ್ಲಿದ್ದ ಹವ್ಯಾಸಿ ರಂಗಭೂಮಿ ಚಟುವಟಿಕೆಗಳು ಇವರನ್ನು ಮತ್ತಷ್ಟು ಗಾಢವಾಗಿ ಸೆಳೆಯಿತು. 
 
1980ರಲ್ಲಿ ಅಂಕಲ್ ಶ್ಯಾಮ್ ಅವರು ‫ಮಂಜು‬, ನಾಗರಾಜ್‌, ಪುರುಷೋತ್ತಮ್‌, ಗುರುಪ್ರಸಾದ್‌, ಜಗದೀಶ್‌, ರಮೇಶ್‌ರಾವ್‌ ಅವರೊಡನೆ ‘ಅಂತರಂಗ’ ತಂಡ ಕಟ್ಟಿದರು.  ಇಂದಿಗೂ ಶ್ಯಾಮ್ ‘ಅಂತರಂಗ’ದ ಕಾರ್ಯದರ್ಶಿಯಾಗಿ ತಂಡದ ಸೂತ್ರಧಾರರಾಗಿದ್ದಾರೆ.   ಅಂತರಂಗ ಹುಟ್ಟಿಕೊಂಡಾಗ ಅದರ ಮೊದಲ ನಾಟಕ ‘ನಾಯಕ’ವನ್ನು ಸಂಪಿಗೆ ತೋಂಟದಾರ್ಯ ಅವರು ನಿರ್ದೇಶಿಸುತ್ತಿದ್ದರು.  ತಂಡದಲ್ಲಿ ಎಲ್ಲರೂ ನಟನೆ ಮಾಡುತ್ತೇನೆ ಎಂದರೆ ಶ್ಯಾಮ್ ‘ನಾನು ನೇಪಥ್ಯದಲ್ಲಿ ಕೆಲಸ ಮಾಡುತ್ತೇನೆ’ ಎಂದರು.  ಇಂದಿನವರೆಗೂ ಅವರು ನೇಪಥ್ಯದಲ್ಲೇ ಇದ್ದಾರೆ. ಯಾರೋ ಅನಿವಾರ್ಯವಾಗಿ ಬರದೆ, ಅತೀ ಅಗತ್ಯ ಕಂಡು ಬಂದ ಸಂದರ್ಭದಲ್ಲಿ ನಟಿಸಿ ಸೈ ಎನಿಸಿಕೊಂಡದ್ದು  ಉಂಟು.  ಆದರೆ ಅವರಿಗೆ ನೇಪಥ್ಯದಲ್ಲಿ ಕೆಲಸ ಮಾಡುವುದು ಸಂತೋಷ ಕೊಡುವ ವಿಚಾರ.  ಹೀಗೆ ಅವರೊಬ್ಬ ಅಪರೂಪದ ರಂಗಕರ್ಮಿ. 
 
ಅಂಕಲ್ ಶ್ಯಾಮ್ ಅಂತರಂಗದ ಮೂಲಕ ನಾಟಕೋತ್ಸವ, ಸಂಘಟನಾ ಉತ್ಸವ, ರಂಗ ಸುಗ್ಗಿ, ಮಹಾ ಯಾತ್ರೆ, ರಜತ ಪ್ರದರ್ಶನ ಮುಂತಾದ ಕಾರ್ಯಕ್ರಮಗಳ ರೂವಾರಿಯಾಗಿದ್ದಲ್ಲದೆ ರಂಗ ಶಿಬಿರಗಳು, ಮಕ್ಕಳ ನಾಟಕಗಳ ಪ್ರದರ್ಶನಗಳಿಗೂ ಕಾರ್ಯನಿರ್ವಹಿಸಿದ್ದಾರೆ.  ಅಂತರಂಗ ತಂಡವು ಪ್ರದರ್ಶಿಸಿದ ನಾಟಕಗಳಲ್ಲಿ ಮಹಾಯಾತ್ರೆ, ಸಾಕ್ಷಿ, ಬೇಟೆ, ಸಮಯ ಸಾಧಕರು, ಕಾಲ, ಹುತ್ತದಲ್ಲಿ ಹುತ್ತ, ಹಾವಿಲ್ಲದ ಹುತ್ತ, ಮೌಲ್ಯಗಳು ಮುಂತಾದವು ಸೇರಿವೆ.  ಮೇಕಪ್‌ ನಾಣಿಯವರ ಆಶಯದಂತೆ  ಹಾಸ್ಯಮೇಳ ಪ್ರಾರಂಭಿಸಿ ಹಾಸ್ಯ ನಾಟಕ, ಹಾಸ್ಯಗಾರರಿಗೆ ಸನ್ಮಾನ, ಹಾಸ್ಯ ಭಾಷಣ ಮುಂತಾದ ಚಟುವಟಿಕೆಗಳನ್ನೂ ನಡೆಸಿದ್ದಾರೆ.  ಸಮಯ ಸಾಧಕರು, ಅಕ್ಕರೆ, ಜ್ವಾಲೆ, ಗೋರಿಗಳ ನಡುವೆ, ಅಪ್ಪನ ಅವಾಂತರ (ಕಿರುಪ್ರಹಸನ) ಮುಂತಾದವು ಸ್ವಯಂ ಶ್ಯಾಮ್ ಅವರು ರಚಿಸಿದ ನಾಟಕಗಳು.
 
ಶಾಮ್ ಸುಂದರ್ ಅವರ ಹೆಸರು ಅಂಕಲ್ ಶ್ಯಾಮ್ ಆದದ್ದು ವಿಶೇಷ ಸನ್ನಿವೇಶದಲ್ಲಿ.  1985ರಲ್ಲಿ ಬೇಟೆ ನಾಟಕದ ಅಭ್ಯಾಸ ನಡೆಯುತ್ತಿತ್ತು.  ಆ ಸಂದರ್ಭದಲ್ಲಿ ಇವರ ಅಕ್ಕನ ಮತ್ತು ಅಣ್ಣನ ಮಕ್ಕಳು ಅಂಕಲ್ ಅನ್ನುತ್ತಿದ್ದಾಗ, ಅಲ್ಲಿದ್ದ ಕಲಾವಿದರಾದ ಬಾಲಚಂದ್ರ ದತ್ತ ಮತ್ತು ಇತರ ಕಲಾವಿದರು ಇವರನ್ನು ಶ್ಯಾಮ್ ಅನ್ನುತ್ತಿದ್ದರಂತೆ.  ಆಗ ಸತ್ಯನಾರಾಯಣ ಅವರು ಎರಡೆರಡು ಹೆಸರ್ಯಾಕೆ ಇನ್ಮೇಲೆ ಎಲ್ಲರೂ ‘ಅಂಕಲ್ ಶ್ಯಾಮ್’ ಎಂದೇ ಕರೆಯೋಣ ಅಂದರಂತೆ.  ಹೀಗೆ ಅವರು ರಂಗಭೂಮಿಯಲ್ಲಿ ‘ಅಂಕಲ್ ಶ್ಯಾಮ್’ ಎಂದೇ ಖ್ಯಾತರು. 
 
ಅಂಕಲ್ ಶ್ಯಾಮ್ ಅವರಿಗೆ  ಕರ್ನಾಟಕ ನಾಟಕ ಅಕಾಡಮಿಯಿಂದ ಸನ್ಮಾನ ಸಂದಿತು.  ಅವರಿಗೆ 2018ರಲ್ಲಿ 75 ತುಂಬಿದ ಸಂದರ್ಭದಲ್ಲಿ ರಂಗದ ಗೆಳೆಯರು ‘ರಂಗಹಬ್ಬದ’ ಮೂಲಕವೇ  ಹೃದಯಸ್ಪರ್ಶಿ  ಅಭಿನಂದನಾ ಕಾರ್ಯಕ್ರಮ ನಡೆಸಿದರು.  ಆ ಸಂದರ್ಭದಲ್ಲಿ ಅಂಕಲ್ ಶ್ಯಾಮ್ ಹೇಳಿದ ಈ ಮಾತು ಸ್ಮರಣೀಯ “ನನಗೆ ವಯಸ್ಸು 75  ಆಗಿರಬಹುದು, ಆದರೆ ಇನ್ನೂ ಒಂದಷ್ಟು ವರ್ಷಗಳ ಕಾಲ ರಂಗಭೂಮಿಯಲ್ಲಿಯೇ  ಕೆಲಸ ಮಾಡುತ್ತೇನೆ‫.‬ ಒಳ್ಳೊಳ್ಳೇ ನಾಟಕಗಳನ್ನು ನೋಡಬೇಕು ಎಂಬುದು ನನ್ನಾಸೆ”.  ಅಂಕಲ್ ಶ್ಯಾಮ್ ಅಂತಹ ಕ್ರಿಯಾಶೀಲರು ಸದಾ ರಂಗಭೂಮಿಯ ಬೆನ್ನೆಲುಬಾಗಿರಬೇಕೆಂಬುದು ಎಲ್ಲ ರಂಗಕರ್ಮಿಗಳು ಮತ್ತು ರಂಗ ಅಭಿಮಾನಿಗಳ ಆಶಯವೂ ಹೌದು.  ಅಂಕಲ್ ಶ್ಯಾಮ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.

ಚಿತ್ರಕೃಪೆ: ಡೆಕ್ಕನ್ ಹೆರಾಲ್ಡ್

On the birth day of theatre personality ‘Uncle Shyam’ Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ