ಪರೇಶ್ ರಾವಲ್
ಪರೇಶ್ ರಾವಲ್
ಪರೇಶ್ ರಾವಲ್ ಚಿತ್ರರಂಗ ಮತ್ತು ರಂಗಭೂಮಿಯ ಉತ್ತಮ ಕಲಾವಿದ. ಅವರು ರಾಷ್ಟ್ರೀಯ ನಾಟಕ ಶಾಲೆಯ ಆಧ್ಯಕ್ಷರಾಗಿ ಸಹಾ ಗೌರವ ಗಳಿಸಿದ್ದಾರೆ.
ಪರೇಶ್ ರಾವಲ್ 1955ರ ಮೇ 30ರಂದು ಮುಂಬೈನಲ್ಲಿ ಜನಿಸಿದರು. ನಟಿ ಮತ್ತು ಭಾರತದ ಸುಂದರಿ ಪ್ರಸಿದ್ಧಿಯ ಸ್ವರೂಪ್ ಸಂಪತ್ ಇವರ ಪತ್ನಿ.
'ನನ್ನ ಮೊದಲ ಪ್ರೀತಿ ಇರುವುದು ರಂಗಭೂಮಿಯಲ್ಲಿ ಹಾಗೂ ರಂಗದ ಮೇಲೆ ನಾನು ಅತ್ಯಂತ ಖುಷಿಯಾಗಿರುವೆ. ನನ್ನ ಮೂಲ ಬೇರುಗಳು ರಂಗಭೂಮಿಯಲ್ಲಿವೆ...' ಎಂಬುದು ಪರೇಶ್ ರಾವಲ್ ಮಾತು.
1985ರಲ್ಲಿ ಬಂದ 'ಅರ್ಜುನ್' ಚಿತ್ರದಲ್ಲಿ ಕಿರಪಾತ್ರದಲ್ಲಿ ನಟಿಸಿದ ಪರೇಶ್ ರಾವಲ್ 1986ರಲ್ಲಿ ಬಂದ 'ನಾಮ್' ಚಿತ್ರದಲ್ಲಿ ಗಮನ ಸೆಳೆದರು. ಹಿಂದೀ ಮತ್ತು ತೆಲುಗು ಭಾಷೆಗಳ ಅನೇಕ ಚಿತ್ರಗಳಲ್ಲಿನ ಪೋಷಕ ಪಾತ್ರಗಳು, ಖಳ ಪಾತ್ರಗಳು ಮತ್ತು ಹಾಸ್ಯ ಪಾತ್ರಗಳಲ್ಲಿ ಅವರು ಪ್ರಸಿದ್ಧರಾಗಿದ್ದಾರೆ.
ಪರೇಶ್ ರಾವಲ್ 1994ರ 'ವೋಹ್ ಚೋಕ್ರಿ' ಮತ್ತು 'ಸರ್' ಚಿತ್ರಗಳಲ್ಲಿನ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಉತ್ತಮ ಪೋಷಕ ನಟ ಪ್ರಶಸ್ತಿ ಗಳಿಸಿದರು. ಅವರಿಗೆ ಅನೇಕ ಫಿಲಂಫೇರ್ ಪ್ರಶಸ್ತಿಗಳೂ ಬಂದವು. ಕೇತನ್ ಮೆಹ್ತಾ ಅವರ 'ಸರ್ದಾರ್' ಚಿತ್ರದಲ್ಲಿ ಪರೇಶ್ ನಿರ್ವಹಿಸಿದ ಸರ್ದಾರ್ ವಲ್ಲಭ ಬಾಯ್ ಪಟೇಲ್ ಪಾತ್ರ ನಿರ್ವಹಣೆ ಅವರಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಸಿದ್ಧಿ ತಂದಿತು.
ಪರೇಶ್ ರಾವಲ್ ತೆಲುಗು ಚಿತ್ರರಂಗದಲ್ಲಿನ ಯಶಸ್ವೀ ಚಿತ್ರಗಳ ಖಳನಟರಾಗಿಯೂ ಖ್ಯಾತರಾದರು. ಅವುಗಳಲ್ಲಿ ಕ್ಷಣ ಕ್ಷಣಂ, ಮನಿ, ಮನಿ ಮನಿ, ಗೋವಿಂದಾ ಗೋವಿಂದಾ, ರಿಕ್ಷಾವೋಡು, ಭಾವಗಾರು ಬಾಗುನ್ನಾರ, ಶಂಕರ್ ದಾದಾ ಎಂಬಿಬಿಎಸ್, ಮುಂತಾದವು ಸೇರಿವೆ.
ಹಿಂದಿಯಲ್ಲಿ ಪರೇಶ್ ರಾವಲ್ ಅವರ ಖಳ ನಟನೆ ನಾಮ್, ಶಿವಾ, ಮೊಹರಾ, ತಮನ್ನಾ. ಐತರಾಜ್, ಟೇಬಲ್ ನಂಬರ್ 21, ಜಿಲ್ಲಾ ಘಜಿಯಾಬಾದ್ ಮುಂತಾದ ಚಿತ್ರಗಳಲ್ಲಿ ಖ್ಯಾತವಾಗಿವೆ. ಅವರ ಹಾಸ್ಯ ಪಾತ್ರ ನಿರ್ವಹಣೆಗಳಲ್ಲಿ ಅಂದಾಜ್ ಅಪ್ನಾ ಅಪ್ನಾ, ಚಾಚಿ 420, ಹೇರಾ ಫೇರಿ, ನಾಯಕ್, ಆಂಖೇನ್, ಆವಾರಾ ಪಾಗಲ್, ದೀವಾನಾ, ಹಂಗಾಮಾ, ಹಲ್‍ಚಲ್, ದೀವಾನಿ ಹುಯೆ ಪಾಗಲ್, ಗರಂ ಮಸಾಲಾ, ಫಿರ್ ಹೇರಾ ಫೇರಿ, ಗೋಲ್ ಮಾಲ್ ಫನ್ ಅನ್‍ಲಿಮಿಟೆಡ್, ಭಾಗಮ್ ಭಾಗ್, ಭೂಲ್ ಬುಲಯ್ಯ, ವೆಲ್ಕಮ್, ಒನ್ ಟೂ ಥ್ರೀ,
ಓ ಮೈ ಗಾಡ್, ಕೂಲಿ ನಂ 1, ಅತಿಥಿ ತುಮ್ ಕಬ್ ಜಾವೋಗೆ? ಮುಂತಾದ ಸಾಲು ಸಾಲು ಚಿತ್ರಗಳಿವೆ. 'ಚೀನಿ ಕಮ್' ಅಂತಹ ಚಿತ್ರಗಳಲ್ಲಿನ ಅವರ ಗಂಭೀರ ಪಾತ್ರ ನಿರ್ವಹಣೆ ಸಹಾ ಉನ್ನತ ಮಟ್ಟದ್ದೇ.
ಪದ್ಮಶ್ರೀ ಪುರಸ್ಕಾರ ಮತ್ತು ಅನೇಕ ಚಲನಚಿತ್ರ ಪ್ರಶಸ್ತಿ ಗಳಿಸಿರುವ ಪರೇಶ್ ರಾವಲ್ ರಾಜಕೀಯದಲ್ಲೂ ಪಾರ್ಲಿಮೆಂಟ್ ಸದಸ್ಯರಾಗಿ ಆಯ್ಕೆಯಾಗಿದ್ದರು. ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕತ್ವದ ಜವಾಬ್ದಾರಿ ಗೌರವ ಕೂಡಾ ಅವರಿಗೆ ಒಲಿದಿದೆ.
On the birthday of very good actor Paresh Rawal
ಕಾಮೆಂಟ್‌ಗಳು