ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್. ಕೆ. ನಾರಾಯಣ


ಎಚ್. ಕೆ. ನಾರಾಯಣ

ನಮ್ಮ ಕಾಲದ ರೇಡಿಯೋ ಸಂಗೀತ – ಸುಗಮ ಸಂಗೀತಗಳಲ್ಲಿ ಅತ್ಯಂತ ಹೆಚ್ಚಿನ ಪ್ರಸಿದ್ಧ ಧ್ವನಿ ಎಚ್. ಕೆ. ನಾರಾಯಣ ಅವರದ್ದು ಎಂದರೆ ತಪ್ಪಾಗಲಾರದು.  ಎಚ್. ಕೆ. ನಾರಾಯಣರು ಹುಟ್ಟಿದ್ದು 1934ರ ಮೇ 14 ರಂದು.

ಜನ್ಮತಃ ಸಂಗೀತ ಸಂಸ್ಕಾರದಲ್ಲಿ ಬೆಳೆದ ನಾರಾಯಣ  ಅವರು ತಮ್ಮ ತಂದೆ ಕೇಶವ ಮತ್ತು ಮಾವ ನಾಗಮುತ್ತು ಅವರಿಂದ ಸಂಗೀತದ ಪಾಠಗಳನ್ನು ಕಲಿತು, ಮುಂದೆ ವಿದ್ವಾನ್ ಆರ್.ಕೆ. ಶ್ರೀಕಂಠನ್ ಅವರ ಶಿಷ್ಯರಾಗಿ ಸಂಗೀತದ ಉನ್ನತ ಪರಿಣತಿಯನ್ನು ಪಡೆದುದಲ್ಲದೆ ಮುಂದೆ ವಿದ್ವತ್ ಪರೀಕ್ಷೆಯಲ್ಲಿ ಸ್ವರ್ಣಪದಕವನ್ನು ಸಹಾ ಪಡೆದರು.  ಹಿಂದೂಸ್ಥಾನಿ ಸಂಗೀತಕ್ಕೂ ಒಲಿದು ಅಲ್ಲೂ ಗಣನೀಯ ಪ್ರಗತಿ ಸಾಧಿಸಿದರು.  ಪಿಟೀಲು ವಾದನದಲ್ಲಿ ತಂದೆಯವರೊಡನೆ ಸಾಕಷ್ಟು ಅಭ್ಯಾಸ ನಡೆಸಿದ್ದ ನಾರಾಯಣರು ಗಾಯನದತ್ತ ಹೆಚ್ಚು ಒಲವು ಬೆಳೆಸಿಕೊಂಡರು. 

ಆಕಾಶವಾಣಿಯಲ್ಲಿ ಹಲವು ಹಂತಗಳಲ್ಲಿ ಕಾರ್ಯನಿರ್ವಹಿಸಿದ ನಾರಾಯಣರು ಹಲವಾರು ಪ್ರತಿಭೆಗಳನ್ನು ಸುಗಮ ಸಂಗೀತದಲ್ಲಿ ಅಳವಡಿಸಿ, ತಾವೂ ಹಾಡಿ ಕನ್ನಡದ ಕವಿಗಳ ಹಾಡುಗಳನ್ನು ಜನಮಾನಸದಲ್ಲಿ ನೆಲೆ ಊರುವಂತೆ ಮಾಡಿದರು.  ಅವರ ಸಯೋಜನೆಯಾದ “ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ, ಜಯಭಾರತಿ” ಕನ್ನಡ ನಾಡಿನಲ್ಲಿ ಚಿರಸ್ಮರಣೀಯವಾದುದು.  ಶುಭ ನುಡಿಯೇ ಶಕುನದ ಹಕ್ಕಿ, ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ,  ಎಲ್ಲಿ ಹೋಯಿತು ನನ್ನ ಮುದ್ದು ಹಕ್ಕಿ, ಇದ್ಯಾವ ರಾಗ ಇದ್ಯಾವ  ಹಾಡು, ನನ್ನ ಪುಟ್ಟ ಪುರಂದರ ವಿಠ್ಠಲ, ಮುಸುಕು ಮುಚ್ಚಿದೆ ಧರೆಗೆ ಇಂದು ಭುಗಿಲೆದ್ದಿದೆ ಧರೆ ಉರಿದುರಿದು, ನಟನವಾಡಿದಳ್ ತರುಣಿ ನಟನವಾಡಿದಳ್, ನೋಡಮ್ಮ ಮುಗಿಲ ತುಂಬ ಬೆಳ್ ಬೆಳಗಿನ ಮಲ್ಲಿಗೆ,   ಇವೆಲ್ಲಾ ಎಚ್ ಕೆ ನಾರಾಯಣರ ಧ್ವನಿಯಲ್ಲಿ ಕನ್ನಡಿಗರ ಕಿವಿಯಲ್ಲಿ ಎಂದೆಂದೂ ಅಣುರಣಿಸುವಂತದ್ದಾಗಿದೆ.

ಆಕಾಶವಾಣಿಯ 36 ವರ್ಷಗಳ ಸೇವೆಯಲ್ಲಿ 'ವಸಂತಕವಲಿ', 'ಪದ್ಮಚರಣ್', 'ವಿದ್ವಾನ್, ಆರ್. ಕೆ. ಶ್ರೀಕಂಠನ್', 'ವೀಣಾ ದೊರೈಸ್ವಾಮಿ ಅಯ್ಯಂಗಾರ್', 'ಎಸ್. ಕೃಷ್ಣಮೂರ್ತಿ', 'ಎಚ್. ಆರ್. ಲೀಲಾವತಿ', ಮುಂತಾದವರಿಗೆ, ಸಹಾಯಕರಾಗಿ, ಸಹೋದ್ಯೋಗಿಯಾಗಿ ಎಲ್ಲರ ಮೆಚ್ಚುಗೆ ಗಳಿಸಿರುವುದರ ಜೊತೆಗೆ ನಾರಾಯಣರು ತಮ್ಮದೇ ಆದ ವಿಶಿಷ್ಟ ಛಾಪನ್ನು ಕೂಡಾ ಆಕಾಶವಾಣಿ ಸಂಗೀತದಲ್ಲಿ ಮೆರೆದರು.   ಅವರಿಂದ ಅನೇಕ ಯುವ ಪ್ರತಿಭೆಗಳು ಪೋಷಣೆ ಪಡೆದವು. ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ, ತೊರೆದು ಹೋಗದಿರು ಜೋಗಿ ಅಂತಹ ಗೀತೆಗಳು ಇಂದು ಪ್ರಸಿದ್ಧರಾಗಿರುವ ಅಂದಿನ ಯುವಗಾಯಕಿ ಬಿ.ಆರ್. ಛಾಯಾ ಅವರನ್ನು ಪ್ರಸಿದ್ಧರನ್ನಾಗಿಸಿತು. 

ಆಕಾಶವಾಣಿಯ ಕಾಯಕ, ಸುಗಮ ಸಂಗೀತಕ್ಕೆ ವಿಶಿಷ್ಟ ಕೊಡುಗೆಯಲ್ಲದೆ ಪೂರ್ಣ ಪ್ರಮಾಣದ ಸಂಗೀತ ಕಚೇರಿಗಳು ಮತ್ತು ನೃತ್ಯಕ್ಕೆ ಸಹಗಾನ ನೀಡುವುದರಲ್ಲಿ ಸಹಾ ಎಚ್. ಕೆ ನಾರಾಯಣರು ವಿಶಿಷ್ಟರಾಗಿದ್ದರು.  ಅವರ ಪತ್ನಿ ಶಾಂತಾ ಅವರು ನೃತ್ಯದಲ್ಲಿ ಪ್ರಸಿದ್ಧರಾದವರು.  ಲಲಿತಾ ಶ್ರೀನಿವಾಸನ್ ಅವರ ಪ್ರಾಯೋಜಕತ್ವದ ನೂಪುರ್ ತಂಡಕ್ಕೆ ನಾರಾಯಣರ ಗಾಯನ ವಿಶಿಷ್ಟ ಆಸ್ಥಿಯಂತಿತ್ತು.    ಕನ್ನಡ ನಾಡಿನ ಸಂಗೀತಾಭಿಮಾನಿಗಳ ಕಣ್ಮಣಿ ವಿದ್ಯಾಭೂಷಣರ ಬಹಳಷ್ಟು ಪ್ರಸಿದ್ಧ ಕ್ಯಾಸೆಟ್ಟುಗಳಿಗೆ ಎಚ್. ಕೆ. ನಾರಾಯಣರ ಸಂಗೀತ ಸಂಯೋಜನೆಯಿದೆ.    ಎಚ್. ಕೆ. ನಾರಾಯಣ ಅವರು ಸ್ವತಃ  ಹಾಡಿರುವ ಕೆಲವು ಪ್ರಸಿದ್ಧ ಸುಗಮ ಸಂಗೀತದ ಆಲ್ಬಂಗಳೆಂದರೆ - ‘ನೀಲಾಂಜನ’, ‘ಛಾಯಾ’, ‘ಗೆಳತಿ’, ‘ಅಗ್ನಿಹಂಸ’, ‘ಸಂಗೀತ’, ಮುಂತಾದವು.  ನಾರಾಯಣರು ಹಾಡಿದ್ದ ಹಕ್ಕಿಯಹಾಡಿಗೆ ತಲೆದೂಗುವ ಬಗೆ ನಾನಾಗುವ ಆಸೆ ಗೀತೆ ಅದರ ರಚನೆಕಾರರಾದ ಕೆ.ಎಸ್. ನರಸಿಂಹಸ್ವಾಮಿಗಳಿಗೆ ಅಪಾರವಾಗಿ ಮೆಚ್ಚುಗೆಯಾಗಿತ್ತು. 

ನಾರಾಯಣ ಅವರ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬರು ನೃತ್ಯಗಾತಿ, ತಂಜಾವೂರು ಶೈಲಿಯ ಚಿತ್ರಗಾತಿ ಮತ್ತು ಮತ್ತೊಬ್ಬರು ವಾದ್ಯಸಂಗೀತದಲ್ಲಿ ಪರಿಣತರು.  ಪತ್ನಿ ಶಾಂತ ಕಥಕ್ ನೃತ್ಯಗಾತಿ.  ತಮ್ಮ ಕೇಶವ  ಪಿಟೀಲುವಾದಕರು.  ಹೀಗೆ ಅವರ ಮನೆತನದ ಕಲಾಸಂಸ್ಕೃತಿ ನಿರಂತರವಾಗಿ ಸಾಗಿದೆ. 

ಎಚ್ ಕೆ ನಾರಾಯಣ ಅವರ ಅನನ್ಯ ಸಾಧನೆಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 1984-85ರ ‘ಕರ್ನಾಟಕ ಕಲಾತಿಲಕ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತು.  1987ರಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ ಮತ್ತು  ಸುಗಮ ಸಂಗೀತದ ಪರಮೋಚ್ಚ ‘ಸಂತ ಶಿಶುನಾಳ ಶರೀಫ ಪ್ರಶಸ್ತಿ’ಯು 2002 ವರ್ಷದಲ್ಲಿ ಲಭಿಸಿತು. ಇದಲ್ಲದೆ ಪಿಟೀಲು ಚೌಡಯ್ಯನವರ ಹೆಸರಿನಲ್ಲಿನ ಪ್ರಶಸ್ತಿ ಹಾಗೂ ಹಲವಾರು ಗೌರವಗಳು ನಾರಾಯಣ ಅವರಿಗೆ ಸಂದಿದ್ದವು.

ಎಚ್. ಕೆ. ನಾರಾಯಣರು ತಮ್ಮ ನಿವೃತ್ತಿಯ ನಂತರ ‘ರಮಣಾಂಜಲಿ’ ತಂಡದ ಸದಸ್ಯರಾಗಿ ಶ್ರೀರಮಣ ಮಹರ್ಷಿಗಳ ಗೀತೆಗಳನ್ನು ವಿಶ್ವದಾದ್ಯಂತ ಹಾಡಿದ್ದಾರೆ.  ಅವರು ಫೆಬ್ರವರಿ 2008 ವರ್ಷದಲ್ಲಿ ಈ ಭುವಿಯನ್ನು ಅಗಲಿದರು.  ರೇಡಿಯೋ ಸಂಗೀತದಲ್ಲಿ ಭಾವಗೀತೆಗಳ ಯುಗವನ್ನು ಅಮರರಾಗಿಸಿದವರಲ್ಲಿ ಎಚ್. ಕೆ. ನಾರಾಯಣರು ಪ್ರಧಾನರಾಗಿ ಕನ್ನಡಿಗರ ಹೃದಯದಲ್ಲಿ ಚಿರಸ್ಮರಣೀಯರಾಗಿದ್ದಾರೆ.

On the birth anniversary of great musician H.K. Narayana 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ