ಪಲ್ಲವಿ ಚಂದ್ರಪ್ಪ
ಪಲ್ಲವಿ ಚಂದ್ರಪ್ಪ
ಪಲ್ಲವಿ ಎಸ್ ಚಂದ್ರಪ್ಪ ಅವರು ಕರ್ನಾಟಕ ಸಂಗೀತಕ್ಕೆ ಅವಧಾನಪದ್ಧತಿಯ (ಎರಡು ಕೈಯಲ್ಲೂ ಬೇರೆ ಬೇರೆಗತಿಯ ತಾಳ ಹಾಕುವ) ಪಲ್ಲವಿಗಳನ್ನು ಪರಿಚಯಿಸಿದ ಮೇರು ಕಲಾವಿದರು.
ಚಂದ್ರಪ್ಪನವರು 1916ರ ಮೇ 11ರಂದು
ಬೆಂಗಳೂರಿನ ದಂಡು ಪ್ರದೇಶದಲ್ಲಿ ಜನಿಸಿದರು. ತಂದೆ ವಿದ್ವಾನ್ ಬಿ. ಶೇಷಪ್ಪ. ತಾಯಿ ಮುನಿಯಮ್ಮ. ತಾತ ಮುರಾರಿ ತಿಮ್ಮಯ್ಯಶೆಟ್ಟರು ಸಂಗೀತ, ಗಮಕ, ಕಾವ್ಯವಾಚನ, ಕೀರ್ತನೆ, ಶಿವಶರಣರ ವಚನ ಹಾಡುವುದರಲ್ಲಿ ಅದ್ವಿತೀಯರೆನಿಸಿದ್ದರು. ಎಳೆಯ ವಯಸ್ಸಿನಲ್ಲಿಯೇ ಈ ತಾತನ ತೊಡೆಯೇರಿ ಸಂಗೀತದ ಆಲಿಕೆ ಭಾಗ್ಯ ಇವರದಾಗಿತ್ತು.
ಚಂದ್ರಪ್ಪನವರಿಗೆ ಒಮ್ಮೆ ಕೇಳಿದರೆ ಸಾಕು ಅಚ್ಚಳಿಯದೆ ಮೆದುಳಿನಲ್ಲಿ ದಾಖಲಾಗುತ್ತಿತ್ತು. ಸ್ಕೂಲಿಗೆ ಕಳುಹಿಸಿದರೆ ಚಕ್ಕರ್ ಹೊಡೆದು ಮರದ ಕೆಳಗೆ ಸಂಗೀತಾಭ್ಯಾಸ ಮಾಡುತ್ತಿದ್ದರು. ಭಜನಾ ಮಂದಿರ, ಗುರು ಪೂಜಾ, ಸಾಂಸ್ಕೃತಿಕ ಕಾರ್ಯಕ್ರಮಗಳ ಜಾಗಗಳಲ್ಲೆಲ್ಲಾ ಹಾಜರಿರುತ್ತಿದ್ದರು. ಹುಡುಗನ ಹಾಡುಗಾರಿಕೆಗೆ ಮನಸೋತು ಜನ ತಮ್ಮ ಮನೆಯ ಸಮಾರಂಭಗಳಿಗೆ ಆಹ್ವಾನಿಸಿ ಹಾಡು ಕೇಳಿ ಸಂತೋಷ ಪಡುತ್ತಿದ್ದರು. ಇವರ ಹಾಡು ಕೇಳಿ ನಾಗಸ್ವರ ವಿದ್ವಾಂಸರಾದ ಬಂಗಾರು ಎಸ್. ವೆಂಕಟಪ್ಪನವರು ಸ್ವತಃ ಕರೆದು ಸಂಗೀತ ಪಾಠ ಮಾಡಿದರು. ನಂತರ ಟೈಗರ್ ವರದಾಚಾರ್ಯರ ಶಿಷ್ಯರಾದ ಬಿ. ನರಸಿಂಹಮೂರ್ತಿ ಹಾಗೂ ಬಿ. ದೇವೇಂದ್ರಪ್ಪನವರಲ್ಲಿ ಕೆಲವುಕಾಲ ಸಂಗೀತಾಭ್ಯಾಸ ಮಾಡಿದರು.
ಪಾಂಡಿಚೇರಿಯಲ್ಲಿ ಚಂದ್ರಪ್ಪನವರ ಸಂಗೀತ ಕಚೇರಿ ನಡೆಯಿತು. ಅಚಾನಕವಾಗಿ ಜಮೀನ್ದಾರರೊಬ್ಬರ ಮನೆಯ ಮದುವೆಗೆ ಬಂದ ಸಂಗೀತಗಾರ ನರಸಿಂಹಲು ನಾಯಡು ರವರ ಬಳಿ ಶಿಷ್ಯ ವೃತ್ತಿ ದೊರಕಿತು. ಹೀಗೆ ಹಲವಾರು ಕಡೆ ಘನ ಕಚೇರಿಗಳು ನಡೆದವು. ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೆಯವರು ಕಚೇರಿಗೆ ಬಾರದೆ ಹೋದಾಗ ಇವರಿಗೆ ಹಾಡಲು ಅವಕಾಶ ದೊರೆಯಿತು. ಮದರಾಸಿನಲ್ಲಿ ಮನೆಮಾತಾದ ಪಲ್ಲವಿ ಚಂದ್ರಪ್ಪನವರು, ಡಿ.ಕೆ.ಪಟ್ಟಮ್ಮಾಳ್ ಆಹ್ವಾನದ ಮೇರೆಗೆ ಮದರಾಸು ಮ್ಯೂಸಿಕ್ ಅಕಾಡಮಿಯಲ್ಲೂ ಸಂಗೀತ ಕಚೇರಿ ನಡೆಸಿಕೊಟ್ಟರು.
ಅನೇಕ ಅಪರೂಪದ ಪಲ್ಲವಿ ಪ್ರಸ್ತುತಿ, ಅಷ್ಟೋತ್ತರ ಶತತಾಳದ ಅವಧಾನ ಪದ್ಧತಿಯಲ್ಲಿ ಪಲ್ಲವಿಗಳ ಪ್ರಾತ್ಯಕ್ಷಿಕೆ, ಖ್ಯಾತ ನೃತ್ಯಪಟು ಶಾಂತಾರಾಮ್ ನೃತ್ಯಕ್ಕೆ ಸಂಗೀತ ಸಂಯೋಜನೆ, ಶಂಕರಪುರಂನ ಥಿಯೋಸಫಿಕಲ್ ಸೊಸೈಟಿ, ಗಾನಕಲಾ ಪರಿಷತ್‌ನಲ್ಲಿ ಹಾಡುಗಾರಿಕೆ ಮುಂತಾದವು ಚಂದ್ರಪ್ಪನವರ ಜೀವನದ ವಿಶಿಷ್ಟ ಸಾಧನಾ ಹಂತಗಳಾದವು.
ಚಂದ್ರಪ್ಪನವರು ಆಕಾಶವಾಣಿಯ ಕಲಾವಿದರ ಆಯ್ಕೆ ಸಮಿತಿ, ಕರ್ನಾಟಕ ಗಾನ ಕಲಾ ಪರಿಷತ್ ತಜ್ಞರ ಸಮಿತಿ, ಪರೀಕ್ಷಾ ಮಂಡಲಿಯ ಅಧ್ಯಕ್ಷರಾಗಿ ಸಲಹೆ ಮಾರ್ಗದರ್ಶನ ಮಾಡಿದರು. ಕೇಂದ್ರ ಸರ್ಕಾರದ ನೃತ್ಯ ಅಕಾಡೆಮಿಗಾಗಿ ತಾಳಾವಧಾನ ಪಲ್ಲವಿಗಳ ಚಿತ್ರೀಕರಣದಲ್ಲಿ ಭಾಗಿಯಾದರು. ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಸಹಾ ವಿಡಿಯೋ ಚಿತ್ರೀಕರಣವಾಯಿತು.
ಪಲ್ಲವಿ ಚಂದ್ರಪ್ಪನವರಿಗೆ ಅವಧಾನ ಪಲ್ಲವಿ ವಿಶ್ಲೇಷಣ ತಿಲಕ, ಗಾನಕಲಾಭೂಷಣ, ಲಯಯೋಗಿ, ತಾಳ ನಿರ್ಣಯ ಸಿಂಧು, ಪಲ್ಲವಿ ಸಂಗೀತ ವಿದ್ವಾನ್ ಮುಂತಾದ ಬಿರುದುಗಳು ಮತ್ತ ಅನೇಕ ಸನ್ಮಾನಗಳು ಸಂದವು.
ವಿದ್ವಾನ್ ಪಲ್ಲವಿ ಚಂದ್ರಪ್ಪನವರು 1986ರ ಅಕ್ಟೋಬರ್ 22ರಂದು ಈ ಲೋಕವನ್ನಗಲಿದರು. 2016ರ ವರ್ಷದಲ್ಲಿ ನಾಡು ಈ ಮಹಾನುಭಾವರ ಶತಮಾನೋತ್ಸವವನ್ನು ಆಚರಿಸಿತು.
Great Musician Pallavi S. Chandrappa
ಕಾಮೆಂಟ್‌ಗಳು