ಸವಿತಾ ನಾಗಭೂಷಣ
ಸವಿತಾ ನಾಗಭೂಷಣ
ಸವಿತಾ ನಾಗಭೂಷಣ ಅವರು ನಮ್ಮ ಕನ್ನಡದ ಹೆಮ್ಮೆಯ ಕವಯಿತ್ರಿ.
ಮೇ 11 ಸವಿತಾ ನಾಗಭೂಷಣ ಅವರ ಜನ್ಮದಿನ. ಅವರು 1961ರಲ್ಲಿ ಚಿಕ್ಕಮಗಳೂರಲ್ಲಿ ಜನಿಸಿ ತಮ್ಮ ಬಾಲ್ಯವನ್ನು ಶಿವಮೊಗ್ಗದಲ್ಲಿ ಕಳೆದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸರ್ವೋದಯ ಶಾಲೆಯಲ್ಲಿ ಪಡೆದು, ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆ ಹಾಗೂ ನ್ಯಾಷನಲ್ ಕಾಲೇಜಿನಲ್ಲಿ ಪಡೆದರು.
ಇತಿಹಾಸದಲ್ಲಿ ಸ್ನಾತಕೋತ್ತರ ಪದವೀಧರರಾದ ಸವಿತಾ ನಾಗಭೂಷಣ ಅವರು ಸುಮಾರು 20 ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು. ಮುಂದೆ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.
ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ತಮ್ಮ ಅಸಾಧಾರಣ ಪ್ರತಿಭೆಯನ್ನು ಬಿಂಬಿಸಿರುವ ಸವಿತಾ ನಾಗಭೂಷಣ ಅವರು ಪ್ರಧಾನವಾಗಿ ತಮ್ಮನ್ನು ಕವಯಿತ್ರಿಯಾಗಿ ಪರಿಗಣಿಸುತ್ತಾರೆ. ಅವರ ಕಾವ್ಯ, ಸಾಮಾಜಿಕ ಜಾಲತಾಣಗಳ ಓದುಗರಿಂದ ನಾಡಿನ ಶ್ರೇಷ್ಠ ವಿದ್ವಾಂಸರವರೆಗೆ ಎಲ್ಲರನ್ನೂ ಹೃದಯಂಗಮವಾಗಿ ಮೀಟುತ್ತ ಸಾಗಿದೆ. ಇವರ 'ಆಯ್ದ ನೂರು ಕವನಗಳು' ಸಂಕಲನದಲ್ಲಿ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪನವರ ಮಾತುಗಳು ಇಂತಿವೆ: "ಕನಸುಗಳಿಲ್ಲದ, ಮಹತ್ವಾಕಾಂಕ್ಷೆಯಿಲ್ಲದ, ಸುತ್ತಣ ನಿಸರ್ಗದೊಂದಿಗೆ ಸಂಬಂಧ ಮತ್ತು ಸಂವಾದವನ್ನು ಕಳೆದುಕೊಂಡು ಜಡವಾದ, ಈ ಹೊತ್ತಿನ ಸಂದರ್ಭದಲ್ಲಿ ಶ್ರೀಮತಿ ಸವಿತಾ ನಾಗಭೂಷಣ ಅವರ ಈ ಕವಿತೆಗಳು ತಮ್ಮ ಮೆಲು ದನಿಯ ಪ್ರಶಾಂತ ತೇಜಸ್ಸಿನಿಂದ, ಅದಮ್ಯವಾದ ಜೀವನಪ್ರೀತಿಯ ಸ್ವಗತ ಲಹರಿಗಳಂತಿವೆ. ಸಮಕಾಲೀನ ಕನ್ನಡ ಕವಯಿತ್ರಿಯರ ನಡುವೆ ವಿಭಿನ್ನವೂ ವಿಶಿಷ್ಟವೂ ಆದ ವ್ಯಕ್ತಿತ್ವವುಳ್ಳ ಸವಿತಾ ಅವರ ಕವಿತೆ, ಬದುಕನ್ನು ಉತ್ಕಟವಾಗಿ ಪ್ರೀತಿಸುವ ಎಲ್ಲರ ಧ್ವನಿಯೂ ಆಗಿದೆ. ಈ ಕವಿತೆಗಳ ಹಿಂದೆ ಮುಗ್ಧವಾದ, ಅತ್ಯಂತ ನವುರಾದ ಹಾಗೂ ವಿಸ್ಮಯವನ್ನು ನಿರಂತರವಾಗಿ ಕಾಯ್ದುಕೊಂಡ ಮತ್ತು ಆತ್ಮಪ್ರತ್ಯಯದಲ್ಲಿ ನೆಲೆ ನಿಂತ ಮನಸ್ಸೊಂದಿದೆ. ಆದ್ದರಿಂದಲೇ ಅದು ಚಂದ್ರನನ್ನು ಭೂಮಿಗೆ ಕರೆಯಬಲ್ಲದು. ಹಕ್ಕಿಯೊಂದಿಗೆ ಹೂವಿನೊಂದಿಗೆ, ಬೆಟ್ಟದೊಂದಿಗೆ, ಬಾನಿನೊಂದಿಗೆ ಮಾತನಾಡಬಲ್ಲದು; ಸಾಮಾಜಿಕ ವಾಸ್ತವಗಳಿಗೆ ಸ್ಪಂದಿಸಬಲ್ಲದು; ಅಂತರಂಗದ ಆಪ್ತವಾದ ಪಿಸುಮಾತುಗಳಿಗೆ, ಭಯಗಳಿಗೆ, ವಿಷಾದಗಳಿಗೆ, ಕನಸುಗಳಿಗೆ, ಈ ನೆಲದ ತಲ್ಲಣಗಳಿಗೆ, ಅತೀತದ ಹಂಬಲಗಳಿಗೆ, ತನ್ನ ವಿಶಿಷ್ಟವಾದ ರಚನಾ ಕೌಶಲಗಳ ಮೂಲಕ ದನಿಯಾಗಬಲ್ಲದು. ಇಲ್ಲಿ ಮುಂಬೆಳಗಿನ ಹೊಂಬಿಸಲಲ್ಲಿ ಹಚ್ಚ ಹಸುರಿನ ಮೇಲೆ ಮಿರುಮಿರುಗುವ ಇಬ್ಬನಿಗಳ ಚೆಲುವಿದೆ; ಹರಿದೋಡುವ ಹೊಳೆ-ಹಳ್ಳಗಳ ಲವಲವಿಕೆಯಿದೆ; ನೆಲದಾಳದಲ್ಲಿ ಬೇರನ್ನೂರಿ, ಮೇಲೆ ಕೊಂಬೆ-ರೆಂಬೆಗಳನ್ನು ಚಾಚಿಕೊಂಡ ವೃಕ್ಷಕ್ಕೆ ಇರುವ ದೃಢತೆಯಿದೆ."
ದೇವನೂರು ಮಹಾದೇವ ಅವರು "ಸವಿತಾ ಕಾವ್ಯ ತಂಗಾಳಿಯಂತೆ..... " ಎನ್ನುತ್ತಾರೆ.
ಇತ್ತೀಚೆಗೆ ನನ್ನ ಕಣ್ಣಿಗೆ ಬಿದ್ದ ಸವಿತಾ ಅವರ ಒಂದು ಕವಿತೆ ಇದು:
ಹೋಗೋಗು…..
ಸುಡಲು ಒಂದು ದಿಮ್ಮಿ ಸಾಕು!
ಅದೆಷ್ಟು ಮರ ಕಡಿಯುತ್ತೀಯ ?
ಹೋಗೋಗು…
ಉಡಲು ಇಷ್ಟಗಲ ಬಟ್ಟೆ ಸಾಕು!
ಅದೆಷ್ಟು ನೆಲ ಕದಿಯುತ್ತೀಯ ?
ಹೋಗೋಗು…
ಉಣಲು ಒಂದು ಹಿಡಿ ಅಕ್ಕಿ ಸಾಕು
ಅದೆಷ್ಟು ನದಿ ಬತ್ತಿಸುತ್ತೀಯ ?
ಹೋಗೋಗು….
ಹೃದಯ ಬರಡಾದರೆ
ಕಣ್ಣು ಕುರುಡಾದರೆ
ಬರದೆ ಕಾಡಿಸುವುದು ಮಳೆಗಾಲಬಂದೇ ತೀರುವುದು ಬರಗಾಲ
ನಾಕು ತಾಸೋ ನಲವತ್ತು ಗಂಟೆಯೋ
ನಾಕು ವರುಷವೋ ಏಸು ವರುಷವೋ
ಉಳಿಗಾಲ? ಕಾದು ಬರುವುದೆ ಕೊನೆಗಾಲ?
ಹೋಗೋಗು…..
ಗಿಡ ನೆಡು, ಬಾವಿ ತೋಡು,
ನೆನೆಯುವರು ಮಂದಿ ನಿನ್ನ ಅರೆಗಳಿಗೆ
ನಡೆದುಕೊಂಡಂತೆ ಅವರವರ ದೇವರಿಗೆ !
ಕವಿತಾ ಅವರ ಕೃತಿಗಳಲ್ಲಿ ನಾ ಬರುತ್ತೇನೆ ಕೇಳು, ಚಂದ್ರನನ್ನು ಕರೆಯಿರಿ ಭೂಮಿಗೆ, ಹೊಳೆ ಮಗಳು, ಆಕಾಶ ಮಲ್ಲಿಗೆ, ಆಯ್ದ ನೂರು ಕವನಗಳು (2000), ಜಾತ್ರೆಯಲ್ಲಿ ಶಿವ, ಕಾಡುಲಿಲ್ಲಿ ಹೂವುಗಳು, ಈ ವರೆಗಿನ ಕವನಗಳು (2006), ದರುಶನ, ಹಳ್ಳಿಯ ದಾರಿ, ಆಯ್ದ 50 ಕವನಗಳು (2011), ಕರುಣಾಳು, ದೇವರಿಗೆ ಹೋದೆವು, ಕಡೇ ಮಾತು (ರೈತಗೀತೆ), ದಿನದ ಪ್ರಾರ್ಥನೆ ಮುಂತಾದವು ಕವನ ಸಂಕಲನಗಳು. 'ಸ್ತ್ರೀ ಲೋಕ' ಅವರ ಕಾದಂಬರಿ. 'ಹೂ ಮನಸ್ಸಿನ ಹೋರಾಟಗಾರ ಮತ್ತು ಇತರ ಲೇಖನಗಳು' ಲೇಖನಗಳ ಸಂಗ್ರಹ. ಮುಡಿ ಮಲ್ಲಿಗೆ (ಮಹಿಳಾ ಸಾಹಿತ್ಯ ಸ್ಪಂದನ 1992), ಕವಿತೆ
1997 (ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ) ಇವರ ಸಂಪಾದಿತ ಕೃತಿಗಳು. 'ಅಜ್ಜಿ ಕರೆದ ಹಾಗಾಯ್ತು' ಇವರ ಕಥಾಸಂಕಲನ. ಇವರ ಸಹ ಸಂಪಾದನೆಗಳಲ್ಲಿ 'ಹಣತೆ' (ಜಿ.ಎಸ್. ಶಿವರುದ್ರಪ್ಪ ಅಭಿನಂದನ ಗ್ರಂಥ), ಸುವರ್ಣ ಕಾವ್ಯ (ಸುವರ್ಣ ಕರ್ನಾಟಕ ಕಾವ್ಯ ಸಂಪುಟ 2006) ಮತ್ತು ಇರುವಂತಿಗೆ (ವೈದೇಹಿ ಅಭಿನಂದನ ಗ್ರಂಥ) ಸೇರಿವೆ.
ಸವಿತಾ ನಾಗಭೂಷಣ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (2014), ಡಿ. ಎಸ್. ಕರ್ಕಿ ಕಾವ್ಯ ಪುರಸ್ಕಾರ, ಪು.ತಿ.ನ. ಕಾವ್ಯ ಪ್ರಶಸ್ತಿ, ಮಾಸ್ತಿ ಕಾವ್ಯ ಪುರಸ್ಕಾರ, ಮಧುರ ಚೆನ್ನ ಕಾವ್ಯ ಪುರಸ್ಕಾರ, ಕಿ.ರಂ. ಕಾವ್ಯ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಮನುಶ್ರೀ ರಾಷ್ಟ್ರೀಯ ಪ್ರಶಸ್ತಿ, ಎಂ.ಕೆ. ಇಂದಿರಾ ಪ್ರಶಸ್ತಿ, ಬಿ.ಹೆಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ, ಕೆ.ಎಸ್.ನರಸಿಂಹಸ್ವಾಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಮೂಳೆ ಮಾಂಸ ಮಜ್ಜೆ
ರಸ ಗಂಧ ಸ್ಪರ್ಶ ರೂಪ ತಳೆದು
ಹೊಳೆದು ನಿಂತ ಕವಿತೆಯೇ...
ಅರೆ ಇದೇನಿದು?
ಕಣ್ಣಲ್ಲಿ ಮಡುಗಟ್ಟಿದ ಕ್ಷೋಭೆ
ಕದಪುಗಳು ಕಾದು ಕೆಂಪಗೆ
ತುಟಿ ನಡುಗಿದೆ ಕಂಠ ಬಿಗಿದಿದೆ
ಹೂ ಬಿರಿವ ಸದ್ದನಾಲಿಸಿದೆ ಕಿವಿ
ತಲ್ಲಣಿಸಿ ಎದೆ ನವರಸಗಳಲ್ಲಿ ತೇಲಿ
ಮುಳುಗಿ ತುಯ್ಯತಿದೆ-
ಹಿಡಿ ಹೃದಯ ಬಡಿಯುತಿದೆ
ನರನಾಡಿ ಮಿಡಿದು
ಹುರಿದುಂಬಿಸಿ ಪ್ರಾಣವಾಯು
ಸಂಚರಿಸಿಹಳು ರಕ್ತದೇವತೆ!
ಲಜ್ಜಿ ಸಂಕೋಚಗಳೇ ಅವಳ ತ್ರಾಣ ಪ್ರಾಣ
ಸಕಲ ಜೀವಸಂಕುಲವ
ತಬ್ಬಿ ನಿಂತಿವೆ ಕೈಗಳು
ಕಾಲುಗಳೋ ಬೇರೂರಿ ನಿಂತು
ತೊಟ್ಟಿವೆ ನಕ್ಷತ್ರಗಳು!
ನಿಂತು ನೋಡಿದೆ ಹಾಡಿದೆ
ನೀ ವಿಶ್ವರೂಪಿ
ಮೈತ್ರಿ- ಕರುಣೆಯಂತೆ ನೀ ವಿಶ್ವವ್ಯಾಪಿ
('ದಿನದ ಪ್ರಾರ್ಥನೆ' ಸಂಕಲನದಿಂದ)
ನಮ್ಮ ಆತ್ಮೀಯರಾದ, ನಮ್ಮ ಕನ್ನಡದ, ನಮ್ಮ ಹೆಮ್ಮೆಯ ಕವಯಿತ್ರಿ, ಸರಳ ಸಹೃದಯಿ ಸವಿತಾ ನಾಗಭೂಷಣ ಅವರಿಗೆ ಅಕ್ಕರೆಯಿಂದ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday to our Great poetess Savitha Nagabhushana Smg 🌷🙏🌷
ಕಾಮೆಂಟ್‌ಗಳು