ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ. ಎಸ್. ರಾಮಯ್ಯ


 ಎಂ. ಎಸ್. ರಾಮಯ್ಯ


ವಿದ್ವಾನ್ ಎಂ. ಎಸ್. ರಾಮಯ್ಯನವರು  ಶ್ರೇಷ್ಠ ಮೃದಂಗ ವಾದಕರಾಗಿ ಪ್ರಸಿದ್ಧರು. 

ಎಂ. ಎಸ್.‍ ರಾಮಯ್ಯನವರು 1922ರ ಮೇ 24 ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ತಬಲ ವಿದ್ವಾಂಸರಾಗಿದ್ದ ಸುಬ್ಬಣ್ಣ. ತಂದೆ, ತಾತ, ಸಹೋದರರು ಎಲ್ಲರೂ ಸಂಗೀತದಲ್ಲಿ ಪಳಗಿದವರೆ. 

ಬಾಲ್ಯದಿಂದ ತಂದೆಯ ಬಳಿಯೇ ಮೃದಂಗ ವಾದನದ ಅಭ್ಯಾಸ ನಡೆಸಿದ ರಾಮಯ್ಯನವರು ಮುಂದೆ ಪ್ರಖ್ಯಾತ ಮೃದಂಗ ವಿದ್ವಾಂಸರೆನಿಸಿದ್ದ ಮುತ್ತುಸ್ವಾಮಿ ತೇವರ್‌ ಅವರ ಮಗ ವಿದ್ವಾನ್ ವೆಂಕಟೇಶ್‌ ತೇವರ್‌, ವಿದ್ವಾನ್ ಪುಟ್ಟಾಚಾರ್‌, ವಿದ್ವಾನ್ ಶ್ರೀನಿವಾಸಲು ನಾಯ್ಡು ಮುಂತಾದವರಲ್ಲಿ ಲಯ, ತಾಳಗಳ ಅಂತರಂಗದ ಸೂಕ್ಷ್ಮತೆಗಳ ಕಲಿಕೆ ಮಾಡಿದರು. ಜೊತೆಗೆ ಅಲಿ ಜಾನ್ ಸಾಹೇಬ್‌ರವರಲ್ಲಿ ತಬಲ ವಾದನ ಕಲಿತರು. ವಿದ್ವಾನ್ ಪಲ್ಲವಿ ಚಂದ್ರಪ್ಪನವರಲ್ಲಿ ಪಲ್ಲವಿಯ ಮರ್ಮಗಳ ಶಿಕ್ಷಣ ಪಡೆದರಲ್ಲದೆ ಮಹಾನ್ ವಿದ್ವಾಂಸ ಬಿ. ದೇವೇಂದ್ರಪ್ಪನವರಲ್ಲಿ ಗಾಯನ ಮತ್ತು ವಾದನ ತಂತ್ರ ಅಭ್ಯಾಸ ಮಾಡಿದರು. 

ರಾಮಯ್ಯನವರು ದೇವೇಂದ್ರಪ್ಪನವರ  ಕಚೇರಿಗಳಿಗೂ ಮೃದಂಗ ನುಡಿಸುತ್ತಿದ್ದರಲ್ಲದೆ, ದೇಶಾದ್ಯಂತ ಅನೇಕ ಸಭೆ, ಸಮಾರಂಭಗಳಲ್ಲಿ ಕಾರ್ಯಕ್ರಮ ನೀಡುತ್ತಾ ಬಂದರು. ಡಾ. ಗೋಪಾಲಸ್ವಾಮಿಯವರು ಮೈಸೂರಿನಲ್ಲಿ ಆರಂಭಿಸಿದ ಆಕಾಶವಾಣಿ ಕೇಂದ್ರದಲ್ಲಿ ಮೃದಂಗ ವಾದನ ಕಲಾವಿದರಾಗಿ ಗುತ್ತಿಗೆ ಹುದ್ದೆ ಪಡೆದರು. ಮುಂದೆ ಆಕಾಶವಾಣಿಯನ್ನು ಸರಕಾರ ವಹಿಸಿಕೊಂಡಾಗ ಖಾಯಂ ಉದ್ಯೋಗಿಯಾಗಿ ನೇಮಕಗೊಂಡರು. ಆಕಾಶವಾಣಿಯಲ್ಲಿ ಹಾಡುತ್ತಿದ್ದ ಸಂಗೀತ ವಿದ್ವಾಂಸರುಗಳಾದ ಟೈಗರ್‌ ವರದಾಚಾರ್‌, ಪಲ್ಲಡಂ ಸಂಜೀವರಾವ್, ಆಲತ್ತೂರು ಸಹೋದರರು, ಶೆಮ್ಮಂಗುಡಿ ಶ್ರೀನಿವಾಸ್‌ ಅಯ್ಯರ್‌, ಚಿಂತನಪಲ್ಲಿ ವೆಂಕಟರಾಯರು, ಆರ್‌.ಕೆ. ಶ್ರೀಕಂಠನ್ ಮುಂತಾದವರುಗಳಿಗೆ ನಿರಂತರ ಪಕ್ಕವಾದ್ಯದ ಜೊತೆಯಾಗಿದ್ದರು. 

ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಿಗಷ್ಟೇ ಅಲ್ಲದೆ ಹಿಂದೂಸ್ತಾನಿ ಸಂಗೀತಗಾರರಾದ ಪಂ. ಮಲ್ಲಿಕಾರ್ಜುನ ಮನಸೂರ್‌, ಪಂ. ಭೀಮಸೇನಜೋಶಿ   ಅವರಿಗೆ ತಬಲ ನುಡಿಸಿದ್ದರು. ಧ್ವನಿವರ್ಧಕಗಳೇ ಇಲ್ಲದ ಕಾಲದಿಂದ ಸಂಗೀತ ಕಚೇರಿಗಳಿಗೆ ಪಕ್ಕವಾದ್ಯ ನುಡಿಸಲಾರಂಭಿಸಿ ಬದಲಾವಣೆಗೊಳಗಾದಾಗ ಅದನ್ನು ತುಂಬು ಮನಸ್ಸಿನಿಂದ ಒಪ್ಪಿ, ಕಾಲಕ್ಕೆ ತಕ್ಕಂತೆ ಸಂಗೀತಗಾರರ, ಶೋತೃಗಳ ಮನೋಭಿಷ್ಟದಂತೆ ಮೃದಂಗ ನುಡಿಸಿ ಪ್ರಶಂಸೆ ಪಡೆದರು. 

ಎಂ. ಎಸ್. ರಾಮಯ್ಯನವರಿಗೆ ಗಾಯನ ಸಮಾಜದ ಸಮ್ಮೇಳನಾಧ್ಯಕ್ಷರಾಗಿ ಸಂಗೀತ ಕಲಾರತ್ನ ಬಿರುದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ, ಮೈಸೂರಿನ ಹನುಮ ಜಯಂತಿ ಉತ್ಸವದ ಲಯವಾದ್ಯ ಚತುರ, ಕರ್ನಾಟಕ ಗಾನ ಕಲಾ ಪರಿಷತ್ತಿನ ಗೌರವ, ಬೆಂಗಳೂರಿನ ಸಂಗೀತ ಕಲಾ ರತ್ನ, ಕರ್ನಾಟಕ ಸರಕಾರದ ಪ್ರತಿಷ್ಠಿತ ಕನಕಪುರಂದರ ಪ್ರಶಸ್ತಿ, ಕಲಾಜ್ಯೋತಿ ಪುರಸ್ಕಾರ, ಪಾಲ್ಘಾಟ್‌ಮಣಿ ಅಯ್ಯರ್‌ ಪ್ರಶಸ್ತಿ ಮುಂತಾದ ಅನೇಕ ಮಹತ್ವದ ಗೌರವಗಳು ಸಂದಿದ್ದವು.

ವಿದ್ವಾನ್ ರಾಮಯ್ಯನವರು 2002ರ ನವೆಂಬರ್ 30 ರಂದು ಈ ಲೋಕವನ್ನಗಲಿದರು.

On the birth anniversary of Mridangam artiste Vidwan M.S. Ramaiah 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ