ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸತ್ಯಜಿತ್ ರೇ


 ಸತ್ಯಜಿತ್ ರೇ


ಭಾರತ ರತ್ನ  ಸತ್ಯಜಿತ್ ರೇ ವಿಶ್ವ ಚಲನಚಿತ್ರರಂಗದ ಮಹಾನ್ ದಿಗ್ದರ್ಶಕರಲ್ಲೊಬ್ಬರು. 

ಸತ್ಯಜಿತ್ ರೇ  1921ರ ಮೇ 2 ರಂದು ಕಲ್ಕತ್ತೆಯಲ್ಲಿ ಜನಿಸಿದರು.  ಕಲ್ಕತ್ತೆಯ ವಿಶ್ವವಿದ್ಯಾಲಯದಲ್ಲಿ ಓದಿದ ನಂತರದಲ್ಲಿ ರವೀಂದ್ರನಾಥ ಠಾಕೂರರ ಶಾಂತಿನಿಕೇತನದಲ್ಲಿ ಕಲೆಯನ್ನು ಅಭ್ಯಸಿಸಿದ ಸತ್ಯಜಿತ್ ರೇ ಅವರಿಗೆ ಚಿಕ್ಕಂದಿನಿಂದ ಚಿತ್ರರಂಗದ ಆಳಗಳನ್ನು ಅರಿಯುವುದು ಮತ್ತು ವಿಶ್ವಪ್ರಸಿದ್ಧ ಸಂಗೀತವನ್ನು ಕೇಳುವುದು ಪ್ರಮುಖ ಆಸಕ್ತಿಯಾಗಿತ್ತು.  

ಸತ್ಯಜಿತ್ ರೇ ಅವರು ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಸಂಗೀತ ಸಂಯೋಜಕ, ಕಥೆಗಾರ ಮಾತು ಕಲಾ ವಿನ್ಯಾಸಕ ಎಲ್ಲವೂ ಒಂದುಗೂಡಿದ್ದ ಅತ್ಯದ್ಭುತ ಪ್ರತಿಭೆ.  ಎಷ್ಟರ ಮಟ್ಟಿಗೆ ಅವರು ಸ್ವಾವಲಂಬಿ ಎಂದರೆ ಪೋಸ್ಟರುಗಳನ್ನು ಕೂಡಾ ತಾವೇ ಮಾಡುತ್ತಿದ್ದರು.  ಅಕ್ಷರಗಳ ಅಚ್ಚುವಿನ್ಯಾಸವನ್ನು ಕೂಡಾ ತಾವೇ ಮಾಡಿಕೊಳ್ಳುತ್ತಿದ್ದರು.  ತಮ್ಮ ತಾತ ಉಪೇಂದ್ರ ಕಿಶೋರ್ ರೇ ಅವರು ಬಂಗಾಳಿಯಲ್ಲಿ ಮಕ್ಕಳಿಗಾಗಿ ಅವರ ಕಾಲದಲ್ಲಿ ನಡೆಸುತ್ತಿದ್ದ ಸಂದೇಶ್ ಎಂಬ ಪತ್ರಿಕೆಯನ್ನು 1961ರಲ್ಲಿ ಪುನಃಶ್ಚೇತನಗೊಳಿಸಿದರು.  

ಆರಡಿ ನಾಲ್ಕಂಗುಲ ಎತ್ತರದ ಈ ಆಜಾನುಬಾಹು,  ವಿಶ್ವ ಚಲನಚಿತ್ರರಂಗದಲ್ಲಿ  ಕೂಡಾ  ಗೋಪುರ ಸದೃಶ ವ್ಯಕ್ತಿತ್ವವೇ ಆಗಿದ್ದರು.  ರವೀಂದ್ರರ ನಿಧನಾನಂತರದಲ್ಲಿ ಶಾಂತಿನಿಕೇತನದಿಂದ ಹೊರಬಂದ ಸತ್ಯಜಿತ್ ರೇ 1943ರಿಂದ 1956 ಅವಧಿಯಲ್ಲಿ ವೃತ್ತಿಪರ ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿದ್ದರು.  1947ರಲ್ಲಿ ಕಲ್ಕತ್ತೆಯ ಪ್ರಥಮ ಚಲನಚಿತ್ರ ಸೊಸೈಟಿಯನ್ನು ನಿರ್ಮಿಸಿದ ಕೀರ್ತಿ ಅವರದು.   ಖಾಸಗಿ ಜಾಹಿರಾತು ಸಂಸ್ಥೆಯೊಂದರ ಉದ್ಯೋಗಿಯಾಗಿದ್ದುಕೊಂಡೇ 1955ರಲ್ಲಿ ‘ಪಥೇರ್ ಪಂಚಾಲಿ’ ಚಿತ್ರವನ್ನು ಸೃಜಿಸಿದರು.  ಹಾಗೆಂದರೆ ‘ಸಣ್ಣ ಹಾದಿಯ ಹಾಡು’ ಎಂದರ್ಥ.     ಈ ಚಿತ್ರ ಅಪಾರ ಯಶಸ್ಸಿನ ಜೊತೆಗೆ ಕೇನ್ಸ್ ಅಂತರರಾಷ್ಟ್ರೀಯ ಉತ್ಸವದಲ್ಲಿ ಆ ಚಿತ್ರ  ಪ್ರತಿಷ್ಟಿತ ‘ಗ್ರಾಂಡ್ ಪ್ರಿಕ್ಸ್’ ಗೌರವವನ್ನು ಗಳಿಸಿತು.  ಪಥೇರ್ ಪಂಚಾಲಿ ಚಿತ್ರದೊಂದಿಗೆ ಅಪರಾಜಿತೋ (ಅಪರಾಜಿತ) ಮತ್ತು ಅಪೂರ್ ಸಂಸಾರ್ (‘ಅಪು’ವಿನ ಪರಿವಾರ) ಚಿತ್ರಗಳು ಸೇರಿ ‘ಅಪು ತ್ರಿವಳಿಗಳು’ ಎಂದು ವಿಶ್ವಪ್ರಸಿದ್ಧಿ ಪಡೆದಿವೆ.  

ಜಲ್ಸಾ ಘರ್( ಸಂಗೀತದ ಮನೆ),  ದೇವಿ, ತೀನ್ ಕನ್ಯಾ, ಚಾರುಲತ (ಒಂಟಿ ಪತ್ನಿ), ನಾಯಕ್,  ಅಸನಿ ಸಂಕೇತ್ (ದೂರದ ಬಿರುಗಾಳಿ), ಶತ್ರಂಜ್ ಖಿ ಖಿಲಾರಿ (ಚದುರಂಗದಾಟಗಾರರು), ಘರೇ ಬಜ್ರೆ (ಮನೆ ಮತ್ತು ಪ್ರಪಂಚ), ಗಣಶತ್ರು (ಜನಗಳ ಶತ್ರು), ಶಾಖಾ ಪ್ರಶಾಖಾ (ಶಾಖೆ ಮತ್ತು ಉಪಶಾಖೆಗಳು)  ಮತ್ತು ಆಗಂತುಕ್ ಮುಂತಾದವು ಅವರ ಮುಂಬಂದ ಚಿತ್ರಗಳು.  

“ಯಾವುದು ಗುರುತಿಸಲ್ಪಡುವುದಿಲ್ಲವೋ ಅದೇ ಶ್ರೇಷ್ಠ ತಂತ್ರಜ್ಞಾನ” ಎಂಬುದು ರೇ ಅವರ ಮೂರೂವರೆ ದಶಕದ ಚಿತ್ರರಂಗದ ಬದುಕಿನ ಅಚಲ ನಿಲುಮೆಯಾಗಿತ್ತು.  ತಂತ್ರಜ್ಞಾನ ಎಂಬುದು ದಾರಿಯನ್ನು ಕ್ರಮಿಸಲಿಕ್ಕೆ ಬೇಕಿರುವ ಸಾಧನವಷ್ಟೆ.   ಅಂತಃಸತ್ವವಿಲ್ಲದೆ  ಕೇವಲ ವಿನ್ಯಾಸ ಶ್ರೀಮಂತಿಕೆಯ ತೋರ್ಪಡಿಕೆಗಾಗಿ ಚಿತ್ರ ನಿರ್ಮಾಣ ಮಾಡುವ ಕುರಿತು ಅವರಿಗೆ ಕಿಂಚಿತ್ತೂ ಆಸಕ್ತಿಯಿರಲಿಲ್ಲ.    

1966 ವರ್ಷದಲ್ಲಿ ‘ನನ್ನ ಕ್ರಿಯಾಶೀಲತೆಯಲ್ಲಿನ ಕೆಲವೊಂದು ಅಂಶಗಳು’ ಎಂಬ ಕುರಿತು ಅಂಕಣವೊಂದನ್ನು ಬರೆದಿದ್ದು “ನಮ್ಮ ಚಿತ್ರಗಳು, ಅವರ ಚಿತ್ರಗಳು” ಎಂಬ ಅವರ ಪ್ರಕಟಿತ ಸಂಕಲನದಲ್ಲಿ ಅವನ್ನು ಪೋಣಿಸಿದ್ದರು.  

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಚಿತ್ರ ನಿರ್ದೇಶಕರ ಸಾಲಿನಲ್ಲಿ ಪ್ರಮುಖರಾದ  ಅಕಿರಾ ಕುರಸೋವ “ಮಾನವಜೀವನದ ಕುರಿತಾದ ಅತ್ಯಂತ ಪ್ರಶಾಂತ, ಆಳವಾದ ಒಳನೋಟ ಮತ್ತು ಪ್ರೇಮವನ್ನು  ಹೊರಸೂಸುವ ಅಂಶಗಳು ಸತ್ಯಜಿತ್ ರೇ ಅವರ ಎಲ್ಲ ಚಿತ್ರಗಳ ವೈಶಿಷ್ಟ್ಯವಾಗಿದ್ದು ಅವು ನನ್ನ ಮೇಲೆ ಅಪಾರ  ಪ್ರಭಾವ ಬೀರಿದೆ” ಎಂದು ಹೇಳಿದ್ದಾರೆ.

ವಿಶ್ವದ ಸಾರ್ವಕಾಲಿಕ ಶ್ರೇಷ್ಠರೆಂದು ಗುರುತಿಸಲ್ಪಡುವ ಸುಮಾರು ಹತ್ತು ಹನ್ನೆರಡು ಪ್ರಮುಖ ನಿರ್ದೇಶಕರಲ್ಲಿ ಪ್ರತಿಷ್ಟಿತರಾಗಿರುವ ಸತ್ಯಜಿತ್ ರೇ ಅವರು ತಮ್ಮ ಚಿತ್ರಗಳಲ್ಲಿ ಮಾನವೀಯ ಸಂವೇದನೆಗಳ ಒಳನೋಟಗಳಿಗೆ ಅತ್ಯಂತ ಮಹತ್ವ ನೀಡಿದರು.  ಅವರು ಚಿತ್ರಗಳನ್ನು ಮಾಡಿದ್ದು ಬಂಗಾಳಿಯಲ್ಲಿ ಮಾತ್ರ.  ಆದರೂ ಅವು ವಿಶ್ವಮಟ್ಟದ ಆಸಕ್ತಿಯನ್ನು ಸೃಜಿಸುವುದರಲ್ಲಿ ಅತ್ಯಂತ ಯಶಸ್ವಿಯಾಗಿದ್ದವು.  ಕಾರಣ ಅವು ಭಾಷೆಗೆ ಮಿಗಿಲಾದ ಮನುಷ್ಯ ಜೀವನ, ಅದರಲ್ಲಿನ ಸಂಬಂಧಗಳು, ಅನುಬಂಧಗಳು, ಭಾವುಕತೆಗಳು, ಬದುಕಿಗಾಗಿನ ಹೋರಾಟಗಳು, ದ್ವಂದ್ವಗಳು, ಸಂತಸ ಮತ್ತು ದುಃಖಗಳನ್ನು ಸಮಗ್ರವಾಗಿ ಕಟ್ಟಿಕೊಡುವಂತಹವಾಗಿದ್ದವು.

ವಿಶ್ವದ ಪ್ರತಿಷ್ಟಿತ ಚಿತ್ರ ನಿರ್ದೇಶಕರಲ್ಲೊಬ್ಬರಾದ ಮಾರ್ಟಿನ್ ಸ್ಕೊರ್ಸೆಸೆ ಅವರು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಸತ್ಯಜಿತ್ ರೇ ಕುರಿತು 2002ರಲ್ಲಿ ಬರೆದಿರುವ ಈ ಗೌರವಯುತ ಮಾತುಗಳು ಸತ್ಯಜಿತ್ ರೇ ಅವರ ಬಗೆಗಿನ ಸಂಪೂರ್ಣ ತಿಳುವಳಿಕೆಗೆ ಸಮಗ್ರ ಸಾರಾಂಶದಂತಿವೆ.   “ಸತ್ಯಜಿತ್ ರೇ ಸಿನಿಮಾ ಮಾಡಿದಾಗ ಕೆಲವೊಂದು ಗಳಿಗೆಗಳು ನಿಮಗೇನೂ ಅರ್ಥವಾಗುವುದಿಲ್ಲ ಎಂಬ ಅಪರಿಚಿತ ವಾತಾವರಣವನ್ನು ಹುಟ್ಟಿಸಿಬಿಡುತ್ತವೆ ಕಾರಣ ಅವರು ಹೇಳುವ ಸಂಸ್ಕೃತಿ ಅತ್ಯಂತ ಸಂಕೀರ್ಣವಾದದ್ದು.  ಆದರೆ ಕೆಲವೇ ಕ್ಷಣಗಳಲ್ಲಿ ಅಲ್ಲಿನ ವ್ಯಕ್ತಿಗಳು ನಿಮಗೆ ಹತ್ತಿರವಾಗುತ್ತಾ ಹೋಗುತ್ತಾರೆ ಜೊತೆಗೆ ಅವರ ಸಂಸ್ಕೃತಿಯನ್ನು ಕೂಡಾ ನಿಮಗೆ ರುಚಿಸುವಂತೆ ಹತ್ತಿರವಾಗಿಸುತ್ತಾರೆ.  ಅವರು ಮಾತನಾಡುವ ವಿಷಯ ನಿಮಗೆ ಅರ್ಥವಾಗಬೇಕಿಲ್ಲ.  ಅವರು ತೊಡುವ ಬಟ್ಟೆಗಳ ವಿನ್ಯಾಸ ನಿಮಗೆ ವಿಚಿತ್ರವಾಗಿರಲಿಕ್ಕೆ ಸಾಕು, ಅವರ ಪದ್ದತಿಗಳು ಸಂಪೂರ್ಣ ಬೇರೆಯೇ ಇರಬಹುದು.  ಆದರೆ ಸತ್ಯಜಿತ್ ರೇ ನೀಡುವ ಸಹಜ ಮಾನವೀಯ ಸಂವೇದನೆಯಲ್ಲಿ  ನಿಮಗೇ ಅರಿವಿಗೆ ಬಾರದಂತೆ ಅವೆಲ್ಲಾ ಆತ್ಮೀಯವಾಗುತ್ತಾ ಹೋಗುತ್ತದೆ.  ಆ ವ್ಯಕ್ತಿಗಳ ಬದುಕು ನಿಮಗೆ ಅತ್ಯಂತ ಕುತೂಹಲ ಮತ್ತು ಅಚ್ಚರಿಗಳನ್ನು ಜೊತೆ ಜೊತೆಗೆ ಸೃಷ್ಟಿಸುವಂತಹವಾಗಿದ್ದು, ನಮ್ಮಿಂದಾಚೆಗೆ ಕೂಡಾ ಸಂಸ್ಕೃತಿಗಳಿವೆ ಎಂಬುದು  ತಾನೇ ತಾನಾಗಿ ಗೋಚರಿಸತೊಡಗುತ್ತದೆ”  

1978ರಲ್ಲಿ ಬರ್ಲಿನ್ ಚಿತ್ರೋತ್ಸವದ ನಿರ್ವಾಹಕ ಸಮಿತಿಯು ಸತ್ಯಜಿತ್ ರೇ ಅವರನ್ನು ವಿಶ್ವದ ಮೂರು ಶ್ರೇಷ್ಠ ನಿರ್ದೇಶಕರಲ್ಲೊಬ್ಬರು ಎಂದು ಕೊಂಡಾಡಿತು.  1992ರಲ್ಲಿ ಅವರಿಗೆ ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಿತಿಯು ಜೀವಮಾನದ ಸಾಧನೆಯ ಗೌರವವನ್ನು ನೀಡಿತು.  ಅವರಿಗೆ ಸಂದಿರುವ ಇತರ ಪ್ರಶಸ್ತಿಗಳೆಂದರೆ ಪ್ರಾನ್ಸ್ ದೇಶದ ಪ್ರತಿಷ್ಟಿತ ‘ಲೆಜೆನ್ ಡಿ ಹಾನರ್’ ಮತ್ತು ನಮ್ಮ ದೇಶದ ‘ಭಾರತರತ್ನ’ ಪ್ರಶಸ್ತಿಗಳು.    
   
ಈ ಮಹಾನ್ ತಂತ್ರಜ್ಞ ಸತ್ಯಜಿತ್ ರೇ ಅವರು 1992ರ  ಏಪ್ರಿಲ್ 23ರಂದು ನಿಧನರಾದರು. ಅವರು ಮಹಾನ್ ಮಾನವೀಯ ಸೂಕ್ಷ್ಮತೆಗಳ ಆಳ ಅರಿವುಗಳ ಪ್ರಾಜ್ಞರಾಗಿ  ಮತ್ತು ಅಭಿವ್ಯಕ್ತಿಯ ಪರಮೋಚ್ಚ ಪ್ರತಿಭೆಯಾಗಿ ಸದಾ ಜೀವಂತರು.

On the birth anniversary of all time great film personality Bharata Ratna Satyajit Ray 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ