ಎ. ಎನ್. ನರಸಿಂಹಯ್ಯ
ಎ. ಎನ್. ನರಸಿಂಹಯ್ಯ
ಡಾ. ಎ. ಎನ್. ನರಸಿಂಹಯ್ಯ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದ ಮೊದಲನೆಯ ಅಧ್ಯಾಪಕರಾಗಿ ಪ್ರಸಿದ್ಧರಾಗಿದ್ದವರು.
ಎ.ಎನ್. ನರಸಿಂಹಯ್ಯನವರು 1890ರ ಮೇ 23ರಂದು ಚಾಮರಾಜ ನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಗರ ಎಂಬ ಗ್ರಾಮದಲ್ಲಿ ಜನಿಸಿದರು. ಅನೇಕ ತಲೆಮಾರುಗಳಿಂದ ಆಯುರ್ವೇದ ವಿದ್ಯೆಗೆ ಹೆಸರುವಾಸಿಯಾಗಿದ್ದ ನರಸಿಂಹ ಪಂಡಿತರ ಮೂವರು ಗಂಡುಮಕ್ಕಳಲ್ಲಿ ಇವರು ಮೊದಲನೆಯವರು. ಇವರ ತಮ್ಮಂದಿರಲ್ಲಿ ಪ್ರಸಿದ್ಧ ಚಾರಿತ್ರಿಕ ನಾಟಕಕಾರರಾಗಿದ್ದ ‘ಸಂಸ’ರು ಒಬ್ಬರು.
ಎ. ಎನ್. ನರಸಿಂಹಯ್ಯನವರ ಶಿಕ್ಷಣವೆಲ್ಲ ಬಹುತೇಕ ಮೈಸೂರಿನಲ್ಲಿ ನಡೆಯಿತು. ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯ ಉಪಾಧ್ಯಾಯರಾಗಿ, ಟ್ರೈನಿಂಗ್ ಕಾಲೇಜಿನ ಉಪನ್ಯಾಸಕರಾಗಿ ಸಂಸ್ಕೃತ ಮಹಾಪಾಠಶಾಲೆಯ ಪ್ರಿನ್ಸಿಪಾಲರಾಗಿ, ಮೈಸೂರು ರಾಜ್ಯದ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ, ಮೈಸೂರು ವಿಶ್ವವಿದ್ಯಾಲಯದ ಪುಸ್ತಕ ಭಂಡಾರ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಸಿಸ್ಟೆಂಟ್ ರಿಜಿಸ್ಟ್ರಾರ್ ಹೀಗೆ ಇವರು ನಿರ್ವಹಿಸಿದ ಹುದ್ದೆಗಳು ಹಲವಾರು. ಇವರ ತಮ್ಮ 'ಸಂಸ'ರು ಮರಿಮಲ್ಲಪ್ಪ ಹೈಸ್ಕೂಲಿಗೆ ಸೇರಲು ಬಂದಾಗ ಇವರು ಅದೇ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು.
ನರಸಿಂಹಯ್ಯನವರು ಲಂಡನ್ ವಿಶ್ವವಿದ್ಯಾಲಯದ ‘ಸ್ಕೂಲ್ ಆಫ್ ಓರಿಯಂಟಲ್ ಸ್ಟಡೀಸ್’ನಲ್ಲಿ ಪ್ರಸಿದ್ಧ ವಿದ್ವಾಂಸರಾಗಿದ್ದ ಆರ್.ಎಲ್. ಟರ್ನರ್ ಅವರ ಮಾರ್ಗದರ್ಶನದಲ್ಲಿ ‘ಎ ಗ್ರಾಮರ್ ಆಫ್ ದಿ ಓಲ್ಡೆಸ್ಟ್ ಕ್ಯಾನರೀಸ್ ಇನ್‌ಸ್ಕ್ರಿಪ್ಷನ್ಸ್’ (1933) ಎಂಬ ಪ್ರೌಢ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದರು. ಇದರಲ್ಲಿ ಆರು ಮತ್ತು ಏಳನೆಯ ಶತಮಾನಗಳ ಕನ್ನಡ ವ್ಯಾಕರಣ ವಿಶ್ಲೇಷಣೆ ಇದೆ. ವಿದೇಶಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆಯ ಅಧ್ಯಯನ ಮಾಡಿ, ಸಂಶೋಧನೆ ನಡೆಸಿದವರಲ್ಲಿ ಇವರೇ ಮೊದಲಿಗರು. ಬಹುಶಃ ಕನ್ನಡದ ವಿಷಯದ ಮೇಲೆ ಪಿಎಚ್.ಡಿ. ಪಡೆದವರಲ್ಲಿಯೂ ಇವರೇ ಮೊದಲಿಗರು. ಇದು ಪ್ರಕಟವಾದುದು 1941ರಲ್ಲಿ.
ಬಂಗಾಳಿ ಭಾಷೆಯನ್ನು ಅಧ್ಯಯನ ಮಾಡಿ ಕನ್ನಡಕ್ಕೆ ತಂದವರಲ್ಲಿಯೂ ನರಸಿಂಹಯ್ಯನವರು ಮೊದಲಿಗರು. ರವೀಂದ್ರನಾಥ ಠಾಕೂರರ ಸಾಹಿತ್ಯ ಪ್ರಬಂಧಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಗೊಂಡ ನಂತರ ‘ಸಾಹಿತ್ಯ’ ಎಂಬ ಹೆಸರಿನಿಂದ ಪುಸ್ತಕ ರೂಪದಲ್ಲಿ ಪ್ರಕಟಿಸಿದರು (1940). ಶಿಕ್ಷಣ ಇಲಾಖೆಯ ಕೋರಿಕೆಯಂತೆ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಶಾಲೆಗಳ ಉಪಯೋಗಕ್ಕಾಗಿ ಪ್ರತ್ಯೇಕ ಕನ್ನಡ ವ್ಯಾಕರಣ ಪುಸ್ತಕಗಳನ್ನೂ ಸಿದ್ಧಗೊಳಿಸಿದರು. ‘ಕನ್ನಡ ಪ್ರಥಮ ವ್ಯಾಕರಣ’ ಎಂಬುದು ಹಲವಾರು ಮುದ್ರಣ ಕಂಡ ಪುಸ್ತಕ. ಪುರಾಣ ಪರಿಚಯ (೧೯೩೫) ಎಂಬುದು ಮತ್ತೊಂದು ಕಿರು ಪುಸ್ತಕ. ಇದಲ್ಲದೆ ಸಂಸ್ಕೃತದಲ್ಲಿ ‘ಸಂಗೀತ ಗಂಗಾಧರಂ’ ಮತ್ತು ‘ಶಿವಪಾದರೇಣುಕಾಸಹಸ್ರಂ’ ಎಂಬ ಎರಡು ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ನರಸಿಂಹಯ್ಯನವರ ‘ಕಾಶಕೃತ್ಸ್ನ ಶಬ್ದ ಕಲಾಪ ಧಾತುಪಾಟ’ ಎಂಬ ನಿಘಂಟನ್ನು ಪುಣೆಯ ಡೆಕ್ಕನ್ ಕಾಲೇಜಿನ ಸ್ನಾತಕೋತ್ತರ ಹಾಗೂ ಸಂಶೋಧನ ವಿಭಾಗದವರು ಪ್ರಕಟಿಸಿದ್ದಾರೆ (1952). "ಈ ಗ್ರಂಥದ ಮುನ್ನುಡಿಯಲ್ಲಿ ಹೇಳಿಕೊಂಡಿರುವಂತೆ ಧಾತುಪಾಠ, ಅದರ ಕರ್ನಾಟಕ ಟೀಕಾ, ಕವಿಯ ಕಾಲ ಈ ಮೂರು ವಿಷಯಗಳು ಎರಡನೆಯ ಸಂಪುಟದಲ್ಲಿ ಪ್ರಕಟವಾಗಲಿದೆ ಎಂದು ತಿಳಿಸಿರುವಂತೆ ಪ್ರಕಟವಾಗಿದ್ದರೆ ವಿದ್ವತ್ ಪ್ರಪಂಚಕ್ಕೆ ಉಪಕಾರವಾಗುತ್ತಿತ್ತು " ಎಂಬುದು ಹಾ.ಮಾ. ನಾ ಅವರ ಅನಿಸಿಕೆ.
ಪ್ರೌಢಶಾಲೆಗಳಲ್ಲಿ ಕನ್ನಡ ಮಾಧ್ಯಮವು ಪ್ರಾರಂಭವಾದಾಗ ಪಠ್ಯ ಪುಸ್ತಕಗಳ ಸಿದ್ಧತೆಗಾಗಿ ಮೈಸೂರು ವಿಶ್ವವಿದ್ಯಾಲಯದ ಅಂದಿನ ಕುಲಪತಿಗಳಾಗಿದ್ದ (1937-42) ಎನ್.ಎಸ್. ಸುಬ್ಬರಾಯರ ಯೋಜನೆಗಳ ಅನುಷ್ಠಾನಕ್ಕಾಗಿ ನರಸಿಂಹಯ್ಯನವರು ಬಹುವಾಗಿ ಶ್ರಮಿಸಿದರು. ಪಾಳಿ ವ್ಯಾಕರಣ, ಸಂಸ್ಕೃತ ಶಾಸನಗಳಲ್ಲಿ ವ್ಯಾಕರಣ, ಮುಂತಾದವುಗಳು ಹಸ್ತಪ್ರತಿ ರೂಪದಲ್ಲಿದ್ದು ಅಚ್ಚಾಗದೆ ಹೋದದ್ದು ದುರ್ದೈವ.
ನಾಡು-ನುಡಿಗಾಗಿ ಶ್ರಮಿಸಿ, ವಿದ್ವತ್ ಪ್ರಪಂಚದಲ್ಲಿ ಹೆಸರಾಗಿದ್ದ ಎ. ಎನ್. ನರಸಿಂಹಯ್ಯನವರು 1980ರ ಮೇ 20ರಂದು ನಿಧನರಾದರು.
On the birth anniversary of Dr. A. N. Narasimhaiah, first lecturer on linguistic sciences at Mysore University
ಕಾಮೆಂಟ್‌ಗಳು