ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅ. ನ. ಸುಬ್ಬರಾಯರು


 ಅ. ನ. ಸುಬ್ಬರಾಯರು

ಅ.ನ. ಸುಬ್ಬರಾಯರು ಕನ್ನಡ ನಾಡಿನ ಕಲೆ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಹಲವು ನಿಟ್ಟಿನಲ್ಲಿ ದುಡಿದವರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ.

ಮೂಲಭೂತವಾಗಿ ಚಿತ್ರಕಲೆಯಲ್ಲಿ ಜೀವನ ಪ್ರಾರಂಭಿಸಿ ಕಲೆಯ ಎಲ್ಲ ಪ್ರಕಾರಗಳಲ್ಲೂ ದುಡಿದ ಅ.ನ. ಸುಬ್ಬರಾಯರು 1891ರ ಫೆಬ್ರವರಿ 22ರಂದು ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಜನಿಸಿದರು. ತಂದೆ ಅಕ್ಕಿಹೆಬ್ಬಾಳು ನರಸಿಂಹಯ್ಯ. ತಾಯಿ ವೆಂಕಮ್ಮ. ಸುಬ್ಬರಾಯರ ಪ್ರಾರಂಭಿಕ ಶಿಕ್ಷಣ ನಾಗಮಂಗಲದಲ್ಲಿ ನಡೆಯಿತು. ಅಲ್ಲಿ ವಿಶ್ವಕರ್ಮರ ಮನೆಯಲ್ಲಿ ರಚಿಸುತ್ತಿದ್ದ ವಿಗ್ರಹಗಳಿಂದ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿತು. ಕಲಾ ಅಧ್ಯಾಪಕರಾದ ಎಂ. ಜಗದೀಶನ್ ಅವರಿಂದ ಕಲಾಭ್ಯಾಸ ಮಾಡಿದರು. ಮುಂದೆ ಮದರಾಸು ಸರಕಾರದ ಕಲಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಇವರು ರಚಿಸಿದ ದಕ್ಷಿಣ ಭಾರತದ ರಿಲೀಫ್ ಮ್ಯಾಪಿಗೆ ರಜತ ಪದಕ ಸಂದಿತು. 1916ರಲ್ಲಿ ಪುಷ್ಪ ರಚನಾ ಕೃತಿ ಪ್ರಕಟಗೊಂಡಿತು. ಚಾಮರಾಜೇಂದ್ರ ಕಲಾಶಾಲೆಯಲ್ಲಿ ಕಲಿಕೆ ಮುಂದುವರಿಸಿದರು.

ಅ. ನ. ಸುಬ್ಬರಾಯರು ಉದ್ಯೋಗ ಪ್ರಾರಂಭಿಸಿದ್ದು ಬೆಂಗಳೂರು ಸ್ತ್ರೀ ಸಮಾಜ ಶಾಲೆಯಲ್ಲಿ ಕಲಾವಿಭಾಗದ ಅಧ್ಯಾಪಕರಾಗಿ. ಸರ್. ಎಂ. ವಿಶ್ವೇಶ್ವರಯ್ಯ  ಅವರ ಸಲಹೆಯಂತೆ ಬಳೇಪೇಟೆಯಲ್ಲಿ 12.8.1919ರಂದು 'ಕಲಾಮಂದಿರ' ಕಲಾಶಾಲೆ ಪ್ರಾರಂಭ ಮಾಡಿದರು.  ಅಂದಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರಿಂದ ಪ್ರಶಂಸೆ ಸಂದಿತು. ನಂತರ ಮೆಜೆಸ್ಟಿಕ್‌ನ ಆನಂದ ಮಹಲ್, ಹಲಸೂರು ಪೇಟೆ ಸಂಪನ್ನಪ್ಪ ಬಿಲ್ಡಿಂಗ್, ಗಾಂಧಿಬಜಾರ್ ಮಹಡಿ ಮತ್ತು ಮುಂದೆ ಹನುಮಂತನಗರದಲ್ಲಿ ಈ ಕಲಾಶಾಲೆ ಮೂಡಿತು. ಸರಕಾರದ ನೆರವಿಲ್ಲದೆ  1921, 1927 ಮತ್ತು 1929ರಲ್ಲಿ ಮೂರು ಬಾರಿ ಕಲಾಪ್ರದರ್ಶನಗಳನ್ನು ಏರ್ಪಡಿಸಿದರು.  ಸಾರ್ವಜನಿಕರಿಂದ ಬೆಂಬಲ ಮತ್ತು ಪ್ರಶಂಸೆ ಸಂದಿತು. ಅರ್ಹರಾದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವ್ಯವಸ್ಥೆ ಮಾಡಿದರು. ನಾರಾಯಣ ಸಂಗಮ ಮುಂತಾದ ವಿದ್ಯಾರ್ಥಿಗಳಿಗೆ ಶಾಂತಿ ನಿಕೇತನದಲ್ಲಿ ಕಲಿಕೆಗೆ ಏರ್ಪಾಡು ಮಾಡಿದರು. ಬಿ.ಕೆ.ಎಸ್. ವರ್ಮ ಅಂತಹ ಅಂದು ಬಾಲಕರಾಗಿದ್ದ ಚಿತ್ರಕಾರರಿಗೆ ಸಹಾಯ ಹಸ್ತ ನೀಡಿದರು.  ಪ್ರಾತ್ಯಕ್ಷಿಕಕ್ಕಾಗಿ ವಿದ್ಯಾರ್ಥಿಗಳಿಗೆ ಬೇಲೂರು ದೇವಸ್ಥಾನದಲ್ಲಿ ಕಲಾಧ್ಯಯನ ರೂಪಿಸಿದರು. 

ಅ. ನ. ಸುಬ್ಬರಾಯರು ಕಲೆಯ ಜೊತೆ ಕಲೆಯ ಪರಿಕರಗಳ ಉತ್ಪಾದನೆ ಪ್ರಾರಂಭ ಸಹಾ ಮಾಡಿದರು. ‘ಮೈಸೂರು ಆರ್ಟ್ಸ್ ಫ್ರೇಂ ಅಂಡ್ ವುಡ್ ಇಂಡಸ್ಟ್ರೀಸ್’ ಸ್ಥಾಪನೆಯಾಯಿತು. ಹಲವಾರು ಮಂದಿಗೆ ಗುಡಿ ಕೈಗಾರಿಕೆಯಿಂದ ಉದ್ಯೋಗ ದೊರಕಿತು. ಮಹಿಳಾ ಸೊಸೈಟಿಯ ಮೂಲಕ ಮಹಿಳೆಯರಿಗೆ ಪ್ರೋತ್ಸಾಹ ಸಂದಿತು. ಲೇಖಕಿಯರ ಸಂಘದ ಸ್ಥಾಪನೆಯಾಯಿತು. 

ಅ. ನ. ಸುಬ್ಬರಾಯರು ಅಂದಿನ ಸಮಸ್ಯೆಗಳನ್ನು ಸಾರ್ವಜನಿಕರೆದುರಿಗಿಡಲು ನಾಟಕಗಳನ್ನು ಬರೆದು ಆಡಿಸಿದರು. ಹೀಗೆ ಚಿತ್ರಾ ತಂಡದ ಅಭಿನಯ ತರಂಗ ನಾಟಕ ಶಾಲೆಯು ಹುಟ್ಟಿತು. ಕಲೆಯ ಜೊತೆಗೆ ಯಕ್ಷಗಾನ, ಸೂತ್ರದ ಬೊಂಬೆಯಾಟ, ಬಯಲಾಟ, ಜಾನಪದ ಎಲ್ಲಾ ರಂಗದ ಬೆಳವಣಿಗೆಗೂ 'ಕಲಾಮಂದಿರ' ದುಡಿಯಿತು.  ಈ ಸಂಸ್ಥೆಗೆ ಹೆಸರು ತಂದವರು ಹಲವಾರು ವಿದ್ಯಾರ್ಥಿಗಳು. 'ಕಲಾ' ಎಂಬ ಪತ್ರಿಕೆ ಸಹಾ ಕಲಾಮಂದಿರದಲ್ಲಿ ಮೂಡುತ್ತಿತ್ತು.

ಅ. ನ. ಸುಬ್ಬರಾಯರು ಮತ್ತು ಹಿರಿಯ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕಲಾಮಂದಿರದ ಮೂಲಕ ಆಯೋಜಿಸಿದ ಖಾದಿ ಕಲಾಪ್ರದರ್ಶನಕ್ಕೆ ಮಹಾತ್ಮ ಗಾಂಧೀ, ಆ‍ನಿ ಬೆಸೆಂಟ್ ಹಾಗೂ ಸರ್. ಎಂ. ವಿಶ್ವೇಶ್ವರಯ್ಯ ಅವರುಗಳು ಭೇಟಿ ನೀಡಿದ್ದು ವಿಶೇಷ. 

ಅ. ನ. ಸುಬ್ಬರಾಯರಿಗೆ ಮೈಸೂರು ರಾಜ್ಯ ಲಲಿತಕಲಾ ಅಕಾಡಮಿಯ ಪ್ರಶಸ್ತಿ ಸಂದಿತು. ಎಲ್. ಶ್ರೀನಿವಾಸಮೂರ್ತಿ, ಎಸ್. ರಾಮನಾಥನ್, ಎನ್. ನಾರಾಯಣ, ನವರತ್ನರಾಮ್, ದಾಶರಥಿ ದೀಕ್ಷಿತ್ ಮುಂತಾದವರೆಲ್ಲ ಇಲ್ಲಿಂದ ಬಂದವರೇ. ಅ. ನ. ಸುಬ್ಬರಾಯರ ಸುಪುತ್ರ ಎ.ಎಸ್. ಮೂರ್ತಿಯವರನ್ನೊಳಗೊಂಡಂತೆ ಅವರ ಇಡೀ ಕುಟುಂಬವೇ ಕಲೆಗಾಗಿ ಸಮರ್ಪಣೆಗೊಂಡಿತು.   

ಈ ಮಹಾನ್ ಕಲಾಪ್ರೇಮಿ ಮತ್ತು ಕಲಾಪೋಷಕರಾದ ಅ.ನ. ಸುಬ್ಬರಾಯರು 1981ರ ಮೇ 20ರಂದು ಈ ಲೋಕವನ್ನಗಲಿದರು.

Great A. N. Subbarao who promoted art and developed artists 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ