ಶ್ಯಾಮಸುಂದರ ಬಿದರಕುಂದಿ
ಶ್ಯಾಮಸುಂದರ ಬಿದರಕುಂದಿ
ಶ್ಯಾಮಸುಂದರ ಬಿದರಕುಂದಿ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ಹೆಸರಾದವರು.
ಶ್ಯಾಮಸುಂದರ ಬಿದರಕುಂದಿ 1947ರ ಮೇ 18ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ತಂದೆ ಗುರುರಾವ ಬಿದರಕುಂದಿ. ತಾಯಿ ತುಂಗಾಬಾಯಿ. ಮೂಲತಃ ವಿಜಾಪುರ ಜಿಲ್ಲೆಯ ಮುದ್ದೇ ಬಿಹಾಳ ತಾಲ್ಲೂಕಿನ ಬಿದರಕುಂದಿ ಇವರ ಪೂರ್ವಿಕರ ಸ್ಥಳ.
ಶ್ಯಾಮಸುಂದರ ಬಿದರಕುಂದಿ ಅವರ ಪ್ರಾರಂಭಿಕ ಶಿಕ್ಷಣ ಆಲಮಟ್ಟಿ, ಕೊಣ್ಣೂರ, ಬ್ಯಾಡಗಿ ಮುಂತಾದೆಡೆಗಳಲ್ಲಿ ನಡೆಯಿತು. ಮುಂದೆ ಹುಬ್ಬಳ್ಳಿಯಲ್ಲಿ ಲ್ಯಾಮಿಂಗ್‌ಟನ್ ಹೈಸ್ಕೂಲಿನಲ್ಲಿ ಓದಿ, ಅಲ್ಲಿನ ಕಾಡಸಿದ್ದೇಶ್ವರ ಕಾಲೇಜಿನಿಂದ ಬಿ.ಎ. ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳನ್ನು ಗಳಿಸಿದರು. ‘ನವ್ಯ ಮಾರ್ಗದ ಕಾದಂಬರಿಗಳ ಅಧ್ಯಯನ’ ಕುರಿತು ಸಂಶೋಧನ ಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ ಗಳಿಸಿದರು.
ಶ್ಯಾಮಸುಂದರ ಬಿದರಕುಂದಿ ಹುಬ್ಬಳ್ಳಿಯ ನೆಹರೂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭ ಮಾಡಿ, ನಂತರ ಗದುಗಿನ ಆದರ್ಶ ಶಿಕ್ಷಣ ಸಮಿತಿ ಕಾಮರ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಯಾಗಿ ಸೇವೆ ಸಲ್ಲಿಸಿದರು.
ಶ್ಯಾಮಸುಂದರ ಬಿದರಕುಂದಿ ಹಿರಿಯ ಸಾಹಿತಿಗಳೊಂದಿಗೆ ಸಂದರ್ಶನ, ಸಾಹಿತ್ಯ ಸಂವಾದ, ವಾಚನ ಮುಂತಾದ ಕಾರ್ಯಕ್ರಮಗಳಿಗಾಗಿ ಅನ್ವೇಷಣ ಕೂಟದ ನಿರ್ವಹಣೆ ಮಾಡಿದರು. ಗದಗಿನಲ್ಲಿ ಸಾಹಿತ್ಯ ಚಟುವಟಿಕೆಗಾಗಿ ಚಿಂತನ ವೇದಿಕೆ, ಸಾಹಿತ್ಯ ಸಂಜೆ, ವಿಚಾರ ಸಂಕಿರಣ, ಬಂಡಾಯ ಸಾಹಿತ್ಯ ಸಂಘಟನೆ; ಬಳಕೆದಾರರ ಹಕ್ಕು ಬಾಧ್ಯತೆ ಗಳಿಸಲು ಜನಜಾಗೃತಿ ಕಾರ್ಯಕ್ರಮ; ನಾಟಕಾಭಿನಯ ಪ್ರದರ್ಶನಗಳಿಗಾಗಿ ‘ಅಭಿನಯರಂಗ’; ಕಲಾತ್ಮಕ ಸಿನಿಮಾ ಪ್ರದರ್ಶನಕ್ಕಾಗಿ ‘ಅನುಪಮ ಫಿಲ್ಮ್ ಸೊಸೈಟಿ', ಹೀಗೆ ಹಲವಾರು ಸಂಘಟನೆಗಳ ರೂವಾರಿಯಾಗಿ ಕೆಲಸ ಮಾಡಿದರು. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಕವಿಯಾಗಿ, ಚಿಂತಕರಾಗಿ, ಭಾಷಣಕಾರರಾಗಿ, ಸಂದರ್ಶನಕಾರರಾಗಿ, ಹಾಗೂ ದೆಹಲಿಯ ಗಣರಾಜ್ಯೋತ್ಸವ ಸಂದರ್ಭದ ಬಹುಭಾಷಾ ಕವಿ ಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗಿಯಾದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು.
ಸರ್ವಜಿತ ಸಂವತ್ಸರದಲ್ಲಿ ಜನಿಸಿದ ಶ್ಯಾಮಸುಂದರ ಬಿದರಕುಂದಿಯವರು 'ಸರ್ವಜಿತ' ಎನ್ನುವ ಕಾವ್ಯನಾಮದಲ್ಲಿಯೇ ಅನೇಕ ಪತ್ರಿಕೆಗಳಿಗೆ ಪ್ರಾಸಂಗಿಕ ಲೇಖನಗಳನ್ನು ಬರೆದಿದ್ದಾರೆ. ಇದಲ್ಲದೆ 'ಜ್ವಲಂತ' ಹಾಗು 'ಪ್ರಿಯಂವದ' ಹೆಸರುಗಳಿಂದಲೂ ಸಹ ಅನೇಕ ಲೇಖನಗಳನ್ನು ಪತ್ರಿಕೆಗಳಿಗೆ ನೀಡಿದ್ದಾರೆ.
ಶ್ಯಾಮಸುಂದರ ಬಿದರಕುಂದಿ ಅವರು ಪತ್ರಿಕೆಗಳಿಗೆ ಆಗಾಗ್ಗೆ ಬರೆದ ಕವನಗಳು ಅಜ್ಜಗಾವಲು, ಅಲ್ಲಮಪ್ರಭುವಾದ, ಬಹುದೇನುಂಟೊಮ್ಮೆ, ತಲೆ ಎತ್ತಿ ಶರಣು ಮುಂತಾದ ಸಂಕಲನಗಳಾಗಿ ಮೂಡಿವೆ. ಕೃತಿ ನೋಟ, ಅಚ್ಚುಕಟ್ಟು, ಪ್ರಸಂಗೋಚಿತ, ನೆಲೆಗಟ್ಟು ಮುಂತಾದವು ಅವರ ವಿಮರ್ಶಾ ಕೃತಿಗಳು; ಗರುಡ ಶ್ರೀಪಾದರಾಯರು, ಜಯತೀರ್ಥ ಜೋಶಿ, ಶಂಕರ ಮೊಕಾಶಿ ಪುಣೇಕರ ಮೊದಲಾದವು, ನಮ್ಮ ಗಿರಡ್ಡಿ ಸsರ್, ವ್ಯಕ್ತಿಚಿತ್ರಣ ಕೃತಿಗಳು. ರಾಯ ಧಾರವಾಡಕರ ಅಭಿನಂದನ ಗ್ರಂಥ ‘ಪ್ರಬಂಧ ಪ್ರಪಂಚ’, ಶಂಕರ ಮೊಕಾಶಿ ಪುಣೇಕರ ಅಭಿನಂದನ ಗ್ರಂಥ ‘ಗಂಧಗೊರಡು’, ಶಿವೇಶ್ವರ ದೊಡ್ಡಮನಿ ಜೀವನ ಮತ್ತು ಸಾಹಿತ್ಯ, ಡಿ.ಎಸ್. ಕರ್ಕಿಯವರ ಸಮಗ್ರ ಸಾಹಿತ್ಯ, ಛಂದೋವಿಕಾಸ, 'ಬೋಧವೊಂದೆ ಬ್ರಹ್ಮನಾದವೊಂದೆ' - ಶರೀಫ ಶಿವಯೋಗಿಯ ನೂರೊಂದು ಪದರತ್ನ, ವಿ.ಜಿ. ಭಟ್ಟರ ಉತ್ಥಾನ ಕಾವ್ಯ, ವಾಗರ್ಥ ದಾಂಪತ್ಯ, ಕಲಬುರ್ಗಿ ನೆನಪು, ದಾಸರ ಸಾಮಾಜಿಕ ಚಿಂತನ-ಕೀರ್ತನೆಗಳ ಸಂಗ್ರಹಗಳು-ಈಸಬೇಕು ಇದ್ದು ಜೈಸಬೇಕು ಮಾನವ ಜನ್ಮ ದೊಡ್ಡದು, ಸ್ವಾತಂತ್ರ್ಯದ ಸವಿನೀರು, ಕುಮಾರವ್ಯಾಸನ ಕನ್ನಡ ಭಾರತ, ಜ್ವಲಂತ (ಉದಯೋನ್ಮುಖರ ಪ್ರಬಂಧ ಸಂಕಲನ), ದೀಪದಡಿಯ ಗದ್ದುಗೆ (ಉದಯೋನ್ಮುಖರ ಕಾವ್ಯ) ಮುಂತಾದವು ಅವರ ಸಂಪಾದಿತ ಕೃತಿಗಳು. ಸ್ವಾತಂತ್ರ್ಯ ಚಳುವಳಿ ಮತ್ತು ಕನ್ನಡ ರಂಗಭೂಮಿ ಅವರ ಮತ್ತೊಂದು ವಿಶಿಷ್ಟ ಕೃತಿ.
ಶ್ಯಾಮಸುಂದರ ಬಿದರಕುಂದಿ ಅವರು ಕನ್ನಡ ಪ್ರಭ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಗಳಲ್ಲಿ ಪುಸ್ತಕಗಳ ಪರಿಚಯ ಮಾಡಿಕೊಟ್ಟರು.
ಶ್ಯಾಮಸುಂದರ ಬಿದರಕುಂದಿ ಅವರಿಗೆ ಗದಗ ಜಿಲ್ಲಾ ರೋಟರಿಯಿಂದ ‘ಸಾಹಿತ್ಯ ಸುಧಾಕರ’ ಪುರಸ್ಕಾರ, ಅಣ್ಣಿಗೇರಿ ಪಂಪ ಪ್ರತಿಷ್ಠಾನದಿಂದ ‘ಪಂಪಶ್ರೀ’, ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆಯಿಂದ ‘ಆದರ್ಶ ಶಿಕ್ಷಕ’ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಹಿರಿಯರಾದ ಶ್ಯಾಮಸುಂದರ ಬಿದರಕುಂದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.
On the birthday of our scholar and writer Dr. Shyamasundara Bidarakundi
ಕಾಮೆಂಟ್‌ಗಳು