ತೋರ್ಣೆ
ರಾಮಚಂದ್ರ ಗೋಪಾಲ ತೋರ್ಣೆ
ಭಾರತದಲ್ಲಿ ಕೆಲವೊಮ್ಮೆ ಯಾಕೆ ಹೀಗಾಗುತ್ತದೆ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟ! ಭಾರತದ ಸಿನಿಮಾಲೋಕದ ಪಿತಾಮಹರೆಂದು ದಾದಾ ಸಾಹೇಬ್ ಫಾಲ್ಕೆ ಅವರನ್ನು ಗೌರವಿಸುವುದರ ಜೊತೆಗೆ ಅವರ 'ರಾಜಾ ಹರಿಶ್ಚಂದ್ರ' ಚಿತ್ರವನ್ನು ಭಾರತದ ಪ್ರಥಮ ಚಲನಚಿತ್ರ ಎಂದು ಸ್ಮರಿಸಲಾಗುತ್ತಿದೆ. ಆದರೆ, ಭಾರತದಲ್ಲಿ ಮೊದಲು ಬಿಡುಗಡೆಯಾದ ಪ್ರಥಮ ಚಿತ್ರ 'ಶ್ರೀಪುಂಡಲೀಕ್'. ಅದನ್ನು ನಿರ್ಮಿಸಿದವರು ರಾಮಚಂದ್ರ ಗೋಪಾಲ ತೋರ್ಣೆ. 1912ರ ಮೇ 18ರಂದು ಈ ಚಿತ್ರ ಮುಂಬೈನ ಕಾರೊನೇಷನ್ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು. ಇದಾದ ಒಂದು ವರ್ಷದ ನಂತರ 1913ರ ಮೇ 3ರಂದು ಬಿಡುಗಡೆ ಆಗಿದ್ದು ದಾದಾ ಸಾಹೇಬ್ ಫಾಲ್ಕೆ ಅವರ ‘ರಾಜಾ ಹರಿಶ್ಚಂದ್ರ’.
ಮೂರು ವರ್ಷಕ್ಕೆ ತಂದೆಯನ್ನು ಕಳೆದುಕೊಂಡ ರಾಮಚಂದ್ರ ಗೋಪಾಲ ತೋರ್ಣೆ ಚಿತ್ರ ನಿರ್ಮಿಸಿದ್ದೇ ಒಂದು ದೊಡ್ಡ ಸಾಹಸ. 10ನೇ ವಯಸ್ಸಿಗೆ ಓದು ಬಿಟ್ಟು ದುಡಿಯಲು ಆರಂಭಿಸಿದ ತೋರ್ಣೆ ಮುಂಬೈನ ‘ದಿ ಕಾಟನ್ ಗ್ರೀವ್ಸ್ ಕಂಪನಿ’ಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಅವರನ್ನು ಕರಾಚಿಗೆ ವರ್ಗಾಯಿಸಲಾಯಿತು. ಇಲ್ಲಿ ಬಾಬು ರಾವ್ ಪೈ ಎಂಬ ಹಾಲಿವುಡ್ ಚಿತ್ರಗಳ ವಿತರಕರ ಪರಿಚಯವಾಯಿತು. ತೋರ್ಣೆಯೂ ವಿತರಕರಾದರು. ಮುಂಬೈಗೆ ಮರಳುವ ಹೊತ್ತಿಗೆ ತೋರ್ಣೆ ಅವರಲ್ಲಿ ತಮ್ಮದೇ ಆದ ಚಿತ್ರ ನಿರ್ಮಿಸುವ ಆಸೆ ಗಟ್ಟಿಯಾಗಿತ್ತು. ಮುಂಬೈಗೆ ಬಂದ ಕೆಲವೇ ದಿನಗಳಲ್ಲಿ ಕೊಲ್ಕತಾದಲ್ಲಿದ್ದ ಬೌರ್ನ್ಸ್ ಅಂಡ್ ಶೆಫರ್ಡ್ ಕಂಪನಿಯಿಂದ 1000 ರೂ.ಗಳಿಗೆ ವಿಲಿಯಮ್ಸನ್ ಕ್ಯಾಮೆರಾವನ್ನು ಖರೀದಿಸಿದರು.
ಇದೇ ಸಂದರ್ಭದಲ್ಲಿ ಶ್ರೀಪಾದ ನಾಟಕ ಮಂಡಳಿ ಪ್ರದರ್ಶಿಸುತ್ತಿದ್ದ ರಾಮ್ ರಾವ್ ಕೀರ್ತಿಕರ್ ವಿರಚಿತ ‘ಶ್ರೀ ಪುಂಡಲೀಕ್’ ನಾಟಕ ಜನಪ್ರಿಯವಾಗಿ ಹಲವು ಪ್ರದರ್ಶನಗಳನ್ನು ಕಂಡಿತ್ತು. ಇದನ್ನು ಚಿತ್ರವನ್ನಾಗಿ ಮಾಡುವುದು ತೋರ್ಣೆ ಉದ್ದೇಶವಾಗಿತ್ತು. ಆದರೆ ಕ್ಯಾಮೆರಾ ಹೇಗೆ ಬಳಸುವುದು ಎಂಬುದೇ ಅವರಿಗೆ ಗೊತ್ತಿರಲಿಲ್ಲ. ಕ್ಯಾಮೆರಾ ಖರೀದಿಸಿದ ಕಂಪನಿಗೆ ಸಹಾಯ ಕೇಳಿದರು. ಅಲ್ಲಿಂದ ಜಾನ್ಸನ್ ಎಂಬುವವರು ಬಂದರು.
ಯೋಜನೆಯಂತೆ ಮುಂಬೈನ ಲ್ಯಾಮಿಂಗ್ಟನ್ ಪ್ರದೇಶದಲ್ಲಿರುವ ಮಂಡಳವಾಡಿ ಆವರಣ(ಈಗ ಇದು ನಾಝ್ ಚಿತ್ರಮಂದಿರ)ದಲ್ಲಿ ನಾಟಕವನ್ನು ಚಿತ್ರೀಕರಿಸಲಾಯಿತು. ಯಾವುದೇ ಆಂಗಲ್‌ಗಳಿಲ್ಲದೆ, ಸೀನ್-ಲೋಕೇಷನ್‌ಗಳಲ್ಲಿ ಬದಲಾವಣೆಗಳಿಲ್ಲದೆ ನಾಟಕವನ್ನು ಆರಂಭದಿಂದ ಅಂತ್ಯದವರೆಗೆ ಚಿತ್ರೀಕರಿಸಲಾಯಿತು. ತೋರ್ಣೆ ತಮಗೆ ಕ್ಯಾಮೆರಾ ಒದಗಿಸಿದ ಕಂಪನಿಗೆ, ಕ್ಯಾಮೆರಾ ಮರಳಿಸುವ ಒಪ್ಪಂದದ ಮೇಲೆ ಪೋಸ್ಟ್‌ಪ್ರೊಡಕ್ಷನ್ ಕೆಲಸವನ್ನು ಮಾಡಿಸಿಕೊಡಲು ಕೇಳಿಕೊಂಡರು. ಚಿತ್ರೀಕರಿಸಿದ ರೀಲುಗಳನ್ನು ಲಂಡನ್‌ಗೆ ಕಳಿಸಿಕೊಡಲಾಯಿತು. ಕೆಲವು ವಾರಗಳಲ್ಲಿ ತೋರ್ಣೆ ಚಿತ್ರಿಸಿದ ‘ಶ್ರೀ ಪುಂಡಲೀಕ್’ ಚಿತ್ರದ ರೀಲುಗಳು ಮುಂಬೈಗೆ ಬಂದವು. ಆದರೆ ಭಾರತೀಯರು ಸಿನಿಮಾ ಮಾಡಿದರೆ ನೋಡಲು ಜನ ಬರುವುದು ಕಷ್ಟ ಎಂದು ಊಹಿಸಿದ ತೋರ್ಣೆ ಅವರು ‘ಡೆಡ್ ಮ್ಯಾನ್ಸ್ ಚೈಲ್ಡ್’ ಎಂಬ ಹಾಲಿವುಡ್ ಚಿತ್ರದ ಒಂದು ಭಾಗವಾಗಿ ‘ಶ್ರೀಪುಂಡಲೀಕ್’ ಚಿತ್ರವನ್ನು ಪ್ರದರ್ಶನಕ್ಕೆ ಸಿದ್ಧ ಮಾಡಿದರು. ಯಾಕೆಂದರೆ ‘ಪುಂಡಲೀಕ್’ ಚಿತ್ರದ ಕಾಲಾವಧಿ ಇದ್ದದ್ದೇ 20 ನಿಮಿಷಗಳು. 1912ರ ಮೇ ತಿಂಗಳಲ್ಲಿ ಕೊರೊನೇಷನ್ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಯಿತು. ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆಯೂ ಲಭಿಸಿತು. 1912 ಮೇ 18ರಂದು ಸ್ವತಃ ತೋರ್ಣೆ ಒಂದು ಜಾಹೀರಾತನ್ನು ನೀಡಿದರು. 'ಜನಪ್ರಿಯ ಹಿಂದು ನಾಟಕ. ಈಗಾಗಲೇ ಮುಂಬೈನ ಅರ್ಧದಷ್ಟು ಹಿಂದುಗಳು ನೋಡಿದ್ದಾರೆ. ಮುಂದಿನ ಕಾರ್ಯಕ್ರಮ ಬದಲಾಗುವ ಹೊತ್ತಿಗೆ ನೋಡದವರು ಬಂದು ನೋಡಬೇಕೆಂದು ಬಯಸುತ್ತೇವೆ’ ಎಂದಿತ್ತು ಆ ಜಾಹೀರಾತು. ಜಾಹೀರಾತಿನ ನಂತರ ‘ಶ್ರೀ ಪುಂಡಲೀಕ್’ ಸತತ ಎರಡು ವಾರಗಳ ಪ್ರದರ್ಶನ ಕಂಡಿತು. ‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ಈ ಚಿತ್ರವನ್ನು ಮೆಚ್ಚಿ, ಮಹತ್ವದ ಪ್ರಯತ್ನವೆಂದು ಹೊಗಳಿ, ವಿಮರ್ಶೆಯನ್ನೂ ಪ್ರಕಟಿಸಿತು. ಇಷ್ಟಾಗಿಯೂ 1913ರಲ್ಲಿ ಬಂದ ‘ರಾಜಾ ಹರಿಶ್ಚಂದ್ರ’ ಚಿತ್ರ ಭಾರತದ ಮೊದಲ ಚಿತ್ರ ಎಂದು ಪ್ರಚಾರ ಪಡೆಯಿತು.
1920ರ ದಶಕದಲ್ಲಿ ಬರುತ್ತಿದ್ದ ಇಂಗ್ಲಿಷ್ ಚಿತ್ರಗಳೆಲ್ಲವೂ ಬಹುತೇಕ 40ರಿಂದ 50 ನಿಮಿಷಗಳ ಕಾಲಾವಧಿಯವು. ಫಾಲ್ಕೆಯವರ ‘ರಾಜಾ ಹರಿಶ್ಚಂದ್ರ’ ಕೂಡ 40 ನಿಮಿಷಗಳ ಚಿತ್ರವಾಗಿತ್ತು. ಆದರೆ ‘ಶ್ರೀಪುಂಡಲೀಕ್’ ಕೇವಲ 22 ನಿಮಿಷಗಳ ಚಿತ್ರವಾಗಿತ್ತು. ಅಲ್ಲದೆ ಫಾಲ್ಕೆ ಚಿತ್ರ ನಿರ್ಮಿಸುವುದಕ್ಕಾಗಿ ಕಥೆ ಆರಿಸಿ, ಅದನ್ನು ಚಿತ್ರಕತೆಯಾಗಿಸಿ, ತಾರಾಗಣ ನಿಗದಿ ಮಾಡಿ, ಹೊರಾಂಗಣದಲ್ಲಿ ಚಿತ್ರೀಕರಿಸಿದ್ದರು. ಬಳಿಕ ಚಿತ್ರೀಕರಣದ ನಂತರದ ಎಲ್ಲ ಕೆಲಸಗಳನ್ನು ಭಾರತದಲ್ಲೇ ಪೂರೈಸಿ, ಪ್ರದರ್ಶನಕ್ಕೆ ಸಿದ್ಧ ಮಾಡಿದ್ದರು. ಈ ಎಲ್ಲ ಕಾರ್ಯಗಳಲ್ಲೂ ಭಾಗಿಯಾಗಿದ್ದವರು ಫಾಲ್ಕೆ ಮತ್ತು ಅವರ ಭಾರತೀಯ ಮಿತ್ರರು. ತೋರ್ಣೆ ಅವರ ಚಿತ್ರ ನಿರ್ಮಾಣಕ್ಕೆ ಹಣ ಹೂಡಿದವರು ಕೊರೊನೇಷನ್ ಚಿತ್ರಮಂದಿರದ ಎನ್.ಜಿ. ಚಿತ್ರೆ. ವಿತರಕರಾದ ಪಿ.ಆರ್. ಟಿಪ್ನಿಸ್. ಕ್ಯಾಮೆರಾ ಹಿಡಿದವರು ವಿದೇಶಿಗರಾದ ಜಾನ್ಸನ್. ಅವರಿಗೆ ತಾಂತ್ರಿಕ ನೆರವು ನೀಡಿದ್ದೂ ವಿದೇಶೀ ಸಂಸ್ಥೆ. ಸಂಕಲನ, ಮುದ್ರಣದ ಕೆಲಸ ನಡೆದಿದ್ದು ಲಂಡನ್ನಿನಲ್ಲಿ. ಎಲ್ಲಕ್ಕೂ ಮುಖ್ಯವಾಗಿ ತೋರ್ಣೆ ಅವರು ಪ್ರದರ್ಶನಗೊಳ್ಳುತ್ತಿದ್ದ ನಾಟಕವನ್ನು ರೆಕಾರ್ಡ್ ಮಾಡಿದ್ದರೇ ಹೊರತು, ಸಿನಿಮಾಕ್ಕಾಗಿ ಕಥೆಯೊಂದನ್ನು ಸಿದ್ಧ ಮಾಡಿರಲಿಲ್ಲ. ಈ ಕಾರಣಗಳಿಗಾಗಿ ಫಾಲ್ಕೆ ಅವರ ‘ರಾಜಾ ಹರಿಶ್ಚಂದ್ರ’ ಚಿತ್ರವನ್ನು ಭಾರತದ ಮೊದಲ ಚಿತ್ರ ಎಂದು ಪರಿಗಣಿಸಲಾಯಿತು.
ಇಷ್ಟಾಗಿಯೂ 43ರ ಫಾಲ್ಕೆಯವರು ಈ ಯೋಚನೆ ಮಾಡುವ ಹೊತ್ತಿಗೆ 22ರ ಹರೆಯದ ತೋರ್ಣೆ ಮಾಡಿದ ಸಾಹಸ ಸಾಮಾನ್ಯದ್ದೇನಾಗಿರಲಿಲ್ಲ.ಅನೇಕರು ಈ ಬಗ್ಗೆ ಚರ್ಚಿಸಿದರು. 70ರ ದಶಕದಲ್ಲಿ ಚಿತ್ರ ವಿಮರ್ಶಕ ಫಿರೋಜ್ ರಂಗೂನ್‌ವಾಲಾ, ತಮ್ಮ ಬರಹವೊಂದರಲ್ಲಿ ಈ ಎರಡು ಸಿನಿಮಾಗಳಲ್ಲಿ ಯಾವುದು ಭಾರತದ ಮೊದಲ ಚಲನಚಿತ್ರ ಎಂಬ ಚರ್ಚೆಗೆ ಚಾಲನೆ ನೀಡಿದ್ದರು. ಆದರೆ ಚರ್ಚೆ ಕೆಲವೇ ದಿನಗಳಲ್ಲಿ ತಣ್ಣಗಾಗಿ ಹೋಯಿತು.
2012 ವರ್ಷ ‘ಶ್ರೀ ಪುಂಡಲೀಕ್’ ಚಿತ್ರಕ್ಕೆ 100 ವರ್ಷ ತುಂಬಿದ ಸಂದರ್ಭದಲ್ಲಿ ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್‌ನ ವಿಕಾಸ್ ಪಾಟೀಲ್ ಮತ್ತು ದಾದಾ ಸಾಹೇಬ್ ತೋರ್ಣೆ ಅವರ ಸೊಸೆ ಮಂಗಳ ತೋರ್ನೆ ಕೋರ್ಟ್ ಮೆಟ್ಟಿಲು ಹತ್ತಿದರು. ತೋರ್ಣೆ ಅವರ ಕಿರಿಯ ಪುತ್ರ ಅನಿಲ್ ತೋರ್ಣೆ ಕೂಡ ‘ನನ್ನ ತಂದೆಯ ಪ್ರಯತ್ನ ಕೂಡ ಚಿತ್ರರಂಗದ ಇತಿಹಾಸದಲ್ಲಿ ಒಂದು ಮಹತ್ವದ ದಾಖಲೆ. ನಾವೇನು ಫಾಲ್ಕೆ ಬದಲು ದಾದಾಸಾಹೇಬ್ ತೋರ್ಣೆ ಅವರನ್ನೇ ಭಾರತೀಯ ಚಿತ್ರರಂಗದ ಪಿತಾಮಹ ಎಂದು ಕರೆಯಬೇಕೆಂದು ಬಯಸುತ್ತಿಲ್ಲ. ಆದರೆ ಅವರು ಮಾಡಿದ ಕೆಲಸವನ್ನು, ಅವರ ಚಿತ್ರವನ್ನು ಗುರುತಿಸುವಂತಾಗಬೇಕು ಎಂಬುದು ನಮ್ಮ ಅಭಿಲಾಷೆ’ ಎಂದಿದ್ದರು. ಫಾಲ್ಕೆ ಅವರಂತೆ ಶಿಕ್ಷಿತರು, ತಂತ್ರಜ್ಞಾನ ಬಲ್ಲವರೂ ಆಗಿರದ ತೋರ್ಣೆ ಕೇವಲ ಸಿನಿಮಾ ಬಗ್ಗೆ ಇದ್ದ ಅತೀವ ಪ್ರೀತಿ ಮತ್ತು ತುಡಿತದಿಂದ ಚಿತ್ರ ನಿರ್ಮಿಸುವ ಕೆಲಸಕ್ಕೆ ಮುಂದಾದವರು. ವೃತ್ತಿ ಜೀವನದಲ್ಲಿ ‘ಶ್ರೀ ಪುಂಡಲೀಕ’ ಸೇರಿ ಐದು ಮೂಕಿ ಚಿತ್ರಗಳಿಗೆ 20 ಚಿತ್ರಗಳಿಗೆ ನಿರ್ಮಾಪಕ, ನಿರ್ದೇಶಕ, ಸೌಂಡ್ ರೆಕಾರ್ಡಿಸ್ಟ್ ಆಗಿದ್ದರು.
1932ರಲ್ಲಿ ಬಂದ ‘ಶಾಮ್‌ಸುಂದರ್’ ಬೆಳ್ಳಿ ಹಬ್ಬ ಆಚರಿಸಿದ ಮೊದಲ ಭಾರತೀಯ ಚಿತ್ರ. 1935ರಲ್ಲಿ ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ತೆರೆ ಕಂಡ ‘ಭಕ್ತ ಪ್ರಹ್ಲಾದ’ ಚಿತ್ರ 25 ವಾರಗಳು ಓಡಿದ ಮೊದಲ ಚಿತ್ರ ಎನ್ನಿಸಿಕೊಂಡಿತು. ದ್ವಿಪಾತ್ರವನ್ನು ಪರಿಚಯಿಸಿದ ಮೊದಲ ನಿರ್ದೇಶಕ ಎಂಬ ಹೆಗ್ಗಳಿಕೆಗೆ ತೋರ್ಣೆ ಪಾತ್ರರಾದರು. ಅಷ್ಟೇ ಅಲ್ಲ , ಭಾರತದ ಮೊದಲ ಟಾಕಿ ಚಿತ್ರ ನಿರ್ದೇಶಿಸಿದ ಅರ್ದೇಶಿರ್ ಇರಾನಿ ಅವರೊಂದಿಗೂ ತೋರ್ಣೆ ಕೆಲಸ ಮಾಡಿದ್ದರು.
‘ಸರಸ್ವತಿ ಸಿನಿಟೋನ್’ ಎಂಬ ಚಿತ್ರ ಸಂಸ್ಥೆ ಕಟ್ಟಿ ಅನೇಕರನ್ನು ಚಿತ್ರರಂಗಕ್ಕೆ ಪರಿಚಯಿಸಿದ ತೋರ್ಣೆ ಸಿನಿಮಾರಂಗಕ್ಕೆ ಕೊಟ್ಟ ಕೊಡುಗೆ ಕೂಡ ಗಣನೀಯವಾದದ್ದು. ದಾದಾಸಾಹೇಬ್ ಫಾಲ್ಕೆ ಅವರನ್ನು ಗೌರವಿಸಿಯೂ ತೋರ್ಣೆ ಅವರು ಮಾಡಿದ ಪ್ರಥಮ ಸಾಹಸವನ್ನು ಗೌರವಿಸುವುದು ಸಾಧ್ಯವಿದೆ ಅನಿಸುತ್ತದೆ.
ಆಧಾರ: ವಿಜಯಕರ್ನಾಟಕ ಪತ್ರಿಕೆಯಲ್ಲಿ 2013 ವರ್ಷದಲ್ಲಿ ಎಸ್. ಕುಮಾರ್ ಅವರು ಬರೆದ ಲೇಖನ
On the day Ramachandra Gopal Thorne who released first Indian feature film ‘Shree Pundalik’
ಕಾಮೆಂಟ್‌ಗಳು