ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗಣಪತಿ ಅಗ್ನಿಹೋತ್ರಿ


 ಗಣಪತಿ ಅಗ್ನಿಹೋತ್ರಿ


ಗಣಪತಿ ಅಗ್ನಿಹೋತ್ರಿ ಚಿತ್ರಕಲಾವಿದರಾಗಿ ಪ್ರಸಿದ್ಧರಾಗಿದ್ದಾರೆ.  ಪತ್ರಕರ್ತರಾಗಿ ಮತ್ತು ಅಂಕಣಕಾರರಾಗಿಯೂ ಅವರು ಸಾಧಿಸಿದ್ದಾರೆ.
 
 ಮೇ 18, ಗಣಪತಿ ಅಗ್ನಿಹೋತ್ರಿ ಅವರ ಜನ್ಮದಿನ.   ಅವರು ಉತ್ತರ ಕನ್ನಡ ಜಿಲ್ಲೆ, ಕುಮಟಾ ತಾಲೂಕಿನವರು. ಬಡ ಕುಟುಂಬವೊಂದರಲ್ಲಿ ಜನಿಸಿ, ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಪ್ರೌಢ ಶಿಕ್ಷಣ ಪಡೆದುಕೊಂಡರು. ಪ್ರಥಮ ದರ್ಜೆ ಕಾಲೇಜು ಶಿಕ್ಷಣವನ್ನು ಎ.ವಿ.ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ಪಡೆದ ಗಣಪತಿ ಅಗ್ನಿಹೋತ್ರಿ ಅವರ ಚಿತ್ರಕಲಾ ಶಿಕ್ಷಣಕ್ಕೆ ಮೈಸೂರಿನ ಶ್ರೀ ಕಲಾನಿಕೇತನ ದೃಶ್ಯಕಲಾ ಮಹಾವಿದ್ಯಾಲಯ ವೇದಿಕೆಯಾಯಿತು. ತಾಯಿ ಪಾರ್ವತಿ ಭಟ್ ಅವರ ಕರಕುಶಲ ಕಲೆಯಿಂದ ಪ್ರೇರೇಪಿತರಾದ ಗಣಪತಿ ಅಗ್ನಿಹೋತ್ರಿ ಅವರು ಕಲಾ ಶಿಕ್ಷಣದ ಕಡೆಗೆ ಒಲವು ತೋರಲು ಕಾರಣವಾಯಿತು.
 
ಶ್ರೀ ಕಲಾನಿಕೇತನ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಡ್ರಾಯಿಂಗ್ ಮಾಸ್ಟರ್ ಕೋರ್ಸ್(ಡಿಎಂಸಿ), ಡ್ರಾಯಿಂಗ್ ಮತ್ತು ಪೇಂಟಿಂಗ್‌ನಲ್ಲಿ ಡಿಪ್ಲೋಮಾ (GD Art) ಪಡೆದು ಬಳಿಕ ಆರ್ಟ್ ಮಾಸ್ಟರ್ (Art Master AM) ಪದವಿಯನ್ನೂ ಪಡೆದುಕೊಂಡರು. ಅಷ್ಟೇ ಅಲ್ಲ, ಪದವಿ ಶಿಕ್ಷಣದ ಸಮಯದಲ್ಲೇ ಅರೀನಾ ಅನಿಮೇಶನ್ (Arena  Animation) ಸಂಸ್ಥೆಯಲ್ಲಿ ಮಲ್ಟಿಮೀಡಿಯಾ ಡಿಪ್ಲೋಮಾ ತರಬೇತಿಯನ್ನೂ ಪಡೆದಿರುತ್ತಾರೆ. ನಂತರದ ದಿನಗಳಲ್ಲಿ ಮೈಸೂರಿನ ರವಿವರ್ಮ ಕಲಾಶಾಲೆಯಡಿ ಮೈಸೂರು ವಿಶ್ವವಿದ್ಯಾಲಯದಿಂದ MFA ಪದವಿಯನ್ನೂ ಪಡೆದುಕೊಂಡಿರುತ್ತಾರೆ.
 
ಬರವಣಿಗೆ ಗಣಪತಿ ಅಗ್ನಿಹೋತ್ರಿ ಅವರ ಇನ್ನೊಂದು ಪ್ರಮುಖ ಆಸಕ್ತಿಯ ಕ್ಷೇತ್ರ.  ಹೀಗಾಗಿ ಕಲಾವಿದರು, ಜಾನಪದ ತಜ್ಞರು ಆಗಿದ್ದ ಪಿ.ಆರ್.ತಿಪ್ಪೇಸ್ವಾಮಿ ಅವರ ಸಲಹೆಯ ಮೇರೆಗೆ ಪತ್ರಿಕೋದ್ಯಮ ಪ್ರವೇಶಿಸಿ ಸುಮಾರು 20 ವರ್ಷಗಳ ಕಾಲ ಪತ್ರಕರ್ತರಾಗಿ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರಿನ ಸಂಕ್ರಾಂತಿ ಪತ್ರಿಕೆಯಿಂದ ಪತ್ರಕರ್ತರಾಗಿ ಕಾಯಕ ಆರಂಭಿಸಿ, ಬಳಿಕ ಆಂದೋಲನ, ಪ್ರಜಾನುಡಿ, ಮಂಗಳೂರಿನಿಂದ ಮುದ್ರಣಗೊಳ್ಳುವ ಕನ್ನಡ ಜನಾಂತರಂಗ, ರಾಜ್ಯಮಟ್ಟದ ಪತ್ರಿಕೆಗಳಾದ ಕನ್ನಡಪ್ರಭ, ವಿಜಯ ಕರ್ನಾಟಕ, ವಿಜಯವಾಣಿ, ಉದಯವಾಣಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕೆಲ ದಿನಗಳ ಕಾಲ ಪ್ರತಿಷ್ಠಿತ ತರಂಗ ವಾರ ಪತ್ರಿಕೆ, ವಿಜಯ ನೆಕ್ಸ್ಟ್ ವಾರ ಪತ್ರಿಕೆಯಲ್ಲೂ ಕಾರ್ಯನಿರ್ವಹಿಸಿದ್ದಾರೆ. ಇತ್ತೀಚೆಗೆ ಪೂರ್ಣ ಪ್ರಮಾಣದಲ್ಲಿ ತಮ್ಮ ಕಲಾ ಕಾಯಕ ಮುಂದುವರಿಸಿದ್ದಾರೆ. ಕಲೆಯ ಕುರಿತಾದ ಬರಹ ಈಗ ಇವರ ಪ್ರಮುಖ ಕ್ಷೇತ್ರವಾಗಿದೆ. ಕನ್ನಡಪ್ರಭ ಪತ್ರಿಕೆಯ ಪುರವಣಿಯಲ್ಲಿ ನಾಲ್ಕು ವರ್ಷಗಳ ಕಾಲ ಪ್ರಕಟವಾಗಿರುವ ಇವರ ಅಂಕಣ "ಪಕ್ಷಿಕಾಶಿ" ಲೇಖನಗಳಲ್ಲಿನ ೫೦ ಪಕ್ಷಿಗಳ ಕುರಿತಾದ ಬರಹಗಳು ಪುಸ್ತಕ ರೂಪದಲ್ಲಿಯೂ ಪ್ರಕಟಗೊಂಡಿದೆ. "ಹಕ್ಕಿ: ಬಾನಾಡಿಗಳ ಕಲರವ" ಪುಸ್ತಕವನ್ನು ಸಮರ್ಥ ಪ್ರಕಾಶನ ಪ್ರಕಟಿಸಿದೆ. ಸುಮಾರು ೪೦೦ಕ್ಕೂ ಹೆಚ್ಚು ಬೇರೆ ಬೇರೆ ಪಕ್ಷಿಗಳ ಗುಣ ಲಕ್ಷಣ, ನಡವಳಿಕೆ, ಜಾತಿ, ಪ್ರಭೇದ, ಹಳ್ಳಿ ಸೊಗಡಿನ ಹೆಸರುಗಳ ಮಾಹಿತಿ ಒಳಗೊಂಡಿರುವ ಬರಹಗಳು ಈ ಪುಸ್ತಕದಲ್ಲಿವೆ.
 
ಈಗಾಗಲೇ ೧೦ಕ್ಕೂ ಹೆಚ್ಚು ಏಕವ್ಯಕ್ತಿ ಕಲಾಪ್ರದರ್ಶನಗಳನ್ನು ಆಯೋಜಿಸಿ ಮೆಚ್ಚುಗೆ ಪಡೆದುಕೊಂಡಿರುವ ಕಲಾವಿದ ಗಣಪತಿ ಅಗ್ನಿಹೋತ್ರಿ ಅವರು ದೇಶದ ಅನೇಕ ಕಡೆಗಳಲ್ಲಿ ನಡೆದ ಸಮೂಹ ಕಲಾಪ್ರದರ್ಶನಗಳಲ್ಲಿಯೂ ಪಾಲ್ಗೊಂಡಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಆಯೋಜಿಸುವ ವಾರ್ಷಿಕ ಕಲಾಪ್ರದರ್ಶಗಳಲ್ಲಿ, ಕೇಂದ್ರ(ನವದೆಹಲಿ) ಲಲಿತ ಕಲಾ ಅಕಾಡೆಮಿ ನಡೆಸುವ ವಾರ್ಷಿಕ ಕಲಾಪ್ರದರ್ಶನದಲ್ಲಿ, ಪ್ರತಿಷ್ಠಿತ ಕಲಾ ಸಾಮಗ್ರಿ ತಯಾರಿಕಾ ಸಂಸ್ಥೆಯಾದ ಕ್ಯಾಮಲಿನ್ ನಡೆಸುತ್ತಿದ್ದ ವಾರ್ಷಿಕ ಕಲಾಪ್ರದರ್ಶನಗಳಲ್ಲಿ, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (ಓಉಒಂ) ನಡೆಸಿದ ಕೋವಿಡ್ ಸಮಯದ ಕಲಾಪ್ರದರ್ಶನದಲ್ಲಿ ಇವರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ದೇಶದ ಅನೇಕ ಪ್ರಮುಖ ಗ್ಯಾಲರಿಗಳು, ಕಲಾ ಸಂಸ್ಥೆಗಳು ಇವರ ಸಮಕಾಲೀನ ಪ್ರಕಾರದ ಕಲಾಕೃತಿಗಳನ್ನು ಪ್ರದರ್ಶಿಸಿವೆ. ಅನೇಕ ಸಂಸ್ಥೆಗಳಲ್ಲಿ, ಕಲಾ ಸಂಗ್ರಾಹಕಾರರ ಬಳಿ ಇವರ ಕಲಾಕೃತಿಗಳು ಸೇರಿಕೊಂಡಿವೆ. ಕೇಂದ್ರ ಲಲಿತಕಲಾ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ, ನಾಗಪುರದ ಸೌತ್ ಜೋನ್ ಕಲ್ಚರ್ ಸೆಂಟರ್, ಕ್ಯಾಮಲಿನ್ ಕಲಾ ಸಂಸ್ಥೆ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ನಡೆಸಿರುವ ಕಲಾ ಶಿಬಿರಗಳಲ್ಲಿ ಕಲಾಕೃತಿ ರಚಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
 
ಗಣಪತಿ ಅಗ್ನಿಹೋತ್ರಿ ಅವರ ಕಲಾಕೃತಿಗಳಲ್ಲಿ ಸಾಮಾಜಿಕ ವಿಚಾರಗಳು ವಸ್ತು ವಿಷಯವಾಗಿದ್ದನ್ನು ಗಮನಿಸಬಹುದಾಗಿದೆ. ಇವರ ಕಲೆ ಗ್ರಾಮೀಣ ಮತ್ತು ನಗರ ಜೀವನದ ನಡುವಿನ ಅಸಮಾನತೆ ಹಾಗೂ ಭಿನ್ನತೆ, ಮಾನವೀಯ ಮೌಲ್ಯಗಳಿಲ್ಲದ ನಡವಳಿಕೆ ಮತ್ತು ಮೌಢ್ಯತೆಗಳೆಡೆಗೆ ನೋಟ ಬೀರಿವೆ. ಮೂಖ ಪ್ರಾಣಿ-ಪಕ್ಷಿಗಳ ವೇದನೆಗಳು, ಮನುಷ್ಯ ತನ್ನ ಮೌಢ್ಯಕ್ಕೆ, ಸ್ವಾರ್ಥಕ್ಕೆ ವನ್ಯಜೀವಿಗಳನ್ನು ಬಲಿ ಪಡೆಯುವ ಆಚರಣೆಗಳ ವಿಚಾರಗಳೇ ಇವರ ಆಯ್ಕೆ ವಿಷಯಗಳಾಗಿವೆ. ಸಾಮಾಜಿಕ ಕಳಕಳಿ, ಸಾಮಾಜಿಕ ನ್ಯಾಯದ ಬಗ್ಗೆ ಇವರ ಕಾಳಜಿಯನ್ನು ಇವರ ಕಲಾಕೃತಿಗಳು ಧ್ವನಿಸುತ್ತವೆ.
 
ಪ್ರಿಂಟ್ ಮೇಕಿಂಗ್ (ಮುದ್ರಣ ಕಲೆ)ನಲ್ಲೂ ವಿಶೇಷ ಆಸಕ್ತಿ ಬೆಳೆಸಿಕೊಂಡಿರುವ ಇವರು ಲಿನೋ ಕಟ್, ವುಡ್ ಕಟ್, ಎಚ್ಚಿಂಗ್, ಸಿರಿಗ್ರಾಫಿ, ಲಿಥೋಗ್ರಾಫಿ, ಕೊಲೋಗ್ರಾಫಿ ಸೇರಿದಂತೆ ಸಮೀಕರಣ ಮುದ್ರಣ ಪ್ರಕಾರಗಳಲ್ಲಿನ ಸಾಧ್ಯತೆಗಳ ಕಲಾಕೃತಿಗಳನ್ನೂ ರಚಿಸಿದ್ದಾರೆ. 

ಕಲಾವಿದ ಗಣಪತಿ ಅವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ ಗ್ರಾಫಿಕ್ ಫೆಲೋಶಿಪ್ (೨೦೨೧), ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ (೨೦೨೨) ಲಭಿಸಿದೆ. ೧೯೯೯, ೨೦೦೧, ೨೦೦೨, ೨೦೦೪ರಲ್ಲಿ ಮೈಸೂರು ದಸರಾ ಪ್ರಶಸ್ತಿ, ಅಖಿಲ ಭಾರತ ಮೈಸೂರು ದಸರಾ ಪ್ರಶಸ್ತಿ (೨೦೧೫), ಮೈಸೂರು ಹವ್ಯಕ ಸಂಸ್ಥೆಯಿಂದ ಹವ್ಯಕ ಪುರಸ್ಕಾರ(೨೦೦೧), ಶ್ರೀ ಕಲಾನಿಕೇತನ ಕಲಾಶಾಲೆಯ ಉತ್ತಮ ವಿದ್ಯಾರ್ಥಿ ವಾರ್ಷಿಕ ಪ್ರಶಸ್ತಿಗಳು ಲಭಿಸಿವೆ.

ಆತ್ಮೀಯರಾದ ಕಲಾಸಾಧಕ ಗಣಪತಿ ಅಗ್ನಿಹೋತ್ರಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Ganapathi Agnihothri Sir 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ