ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುರೇಖಾ ದೇವಾಡಿಗ



 ಸುರೇಖಾ ದೇವಾಡಿಗ


ಮುಂಬೈನ ಡಾ. ಸುರೇಖಾ ದೇವಾಡಿಗ ಅವರು ಕನ್ನಡ, ಸಾಹಿತ್ಯ, ಕ್ರೀಡೆ, ಸಂಸ್ಕೃತಿ ಕ್ಷೇತ್ರಗಳಲ್ಲಿ ನಿರಂತರ ಸಾಧನೆ ಮಾಡುತ್ತಾ ಬಂದಿದ್ದಾರೆ.

ಸುರೇಖಾ ದೇವಾಡಿಗ 1968ರ ಮೇ 29ರಂದು ಜನಿಸಿದರು.  ಅವರು ಮೂಲತಃ ದೇರೆಬೈಲು ಕೊಂಚಾಡಿ ಮಂಗಳೂರಿನವರು.  ತಂದೆ ಮುಚ್ಚೂರು ಸುಂದರ ದೇವಾಡಿಗ.  ತಾಯಿ ಉಚ್ಚಿಲ ಸಿಂಧು.  ಮಂಗಳೂರಿನ ಶಾಲಾಕಾಲೇಜುಗಳಲ್ಲಿ ವಿದ್ಯಾಭ್ಯಾಸ ನಡೆಸಿ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ಪದವಿ ಮತ್ತು ಕಮರ್ಷಿಯಲ್ ಟ್ರೇಡ್ ಪ್ರಾಕ್ಟೀಸಸ್ನಲ್ಲಿ  ಡಿಪ್ಲೊಮಾ ಪಡೆದ ಸುರೇಖಾ, ವಿವಾಹದ ನಂತರ ಮುಂಬೈಗೆ ಬಂದರು.  ಕನ್ನಡ ಮೀಡಿಯಂನಲ್ಲಿ ಓದಿ ಏನೂ ಅರಿವಿಲ್ಲದವಳು ಎಂಬ ಅಪಹಾಸ್ಯ ಕಾಲಿರಿಸಿದ ಮನೆಯಲ್ಲಿ,  ಕೀಳರಿಮೆಯ ನೋವು, ಹಿಂಸೆಗಳು ಕಾಡಿದರೂ, ಕಡೆಗೆ ಅದರಿಂದ ಕೊಡವಿಕೊಂಡು ಮೇಲೆದ್ದು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ಪಡೆದು ಪ್ರೊ. ಜಿ. ಎನ್. ಉಪಾಧ್ಯರ ಮಾರ್ಗದರ್ಶನದಲ್ಲಿ 'ದೇವಾಂಗ ಜನಾಂಗದ ಒಂದು ಸಾಂಸ್ಕೃತಿಕ ಅಧ್ಯಯನ' ಎಂಬ ಪ್ರಬಂಧ ಮಂಡಿಸಿ ಎಂ.ಫಿಲ್ ಪದವಿ ಪಡೆದ ಛಲವಂತೆ.

ಶಾಲಾದಿನಗಳಿಂದಲೂ ಕ್ರೀಡಾ ಪ್ರತಿಭೆಯಾದ ಸುರೇಖಾ ದೇವಾಡಿಗ ಕ್ರೀಡಾಪಟುವಾಗಿ ರಾಷ್ಟ್ರಮಟ್ಟದಲ್ಲಿ ಮಿಂಚಿದರು.  ಉತ್ಸಾಹಕ್ಕೆ ವಯಸ್ಸೆಲ್ಲಿ.  ಪುನಃ ಕ್ರೀಡಾ ಪ್ರೀತಿಯನ್ನು ಉದ್ದೀಪಿಸಿಕೊಂಡ ಸುರೇಖಾ
ಮುಂದೆ ತಮ್ಮ ನಲವತ್ತನೇ ವಯಸ್ಸಿನಲ್ಲಿ ಮುಂಬೈನಲ್ಲಿ ಮಹಾರಾಷ್ಟ್ರ ರಾಜ್ಯದ ಹಿರಿಯರ ಕ್ರೀಡಾಕೂಟಕ್ಕೆ ಸೇರಿದರು.  ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ದೇಶದಾದ್ಯಂತ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಅನೇಕ ಪಾರಿತೋಷಕಗಳನ್ನು ಗೆದಿದ್ದಾರೆ.

ಸುರೇಖಾ ಅವರು ಕ್ರೀಡೆ ಮಾತ್ರವಲ್ಲದೆ  ನಾಟಕ, ನೃತ್ಯ, ಯಕ್ಷಗಾನಗಳಲ್ಲೂ ಪಾತ್ರವಹಿಸುತ್ತಾರೆ.  ಮುಂಬಯಿ ದೇವಾಡಿಗ, ಮುಂಬಯಿ ಕಲಾಜಗತ್ತು, ಕನ್ನಡಿಗರ ಕಲಾವಿದರ ಪರಿಷತ್ತು, ಮುಂಬಯಿ ಕನ್ನಡ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

ಬರೆಹಗಾರ್ತಿಯಾಗಿ ಸುರೇಖಾ ಅವರ ಲೇಖನಗಳು ಅನೇಕ ಕಡೆಗಳಲ್ಲಿ ಮೂಡಿಬಂದಿವೆ. ಅವರ ಎಂ.ಫಿಲ್ ಪ್ರಬಂಧ 'ದೇವಾಡಿಗ ಜನಾಂಗ' ಕೃತಿಯಾಗಿ ಮೂಡಿಬಂದಿದೆ.  ಅವರ ಮತ್ತೊಂದು ಕೃತಿ 'ಹೋರಾಟದ ಮೂಲಕ ಕ್ರಾಂತಿಯ ಕನಸು ಕಂಡ ಜಾರ್ಜ್ ಫರ್ನಾಂಡಿಸ್'.

ಸುರೇಖಾ ಅವರಿಗೆ ಪಲಿಮಾರು ಮಠದ ಸನ್ಮಾನ, ಮುಂಬಯಿ ದೇವಾಡಿಗ ಸಂಘದ ಸುವರ್ಣೋತ್ಸವ ಸನ್ಮಾನ, ಕ್ರೀಡಾ ಸಾಧಕಿ ಗೌರವ, ವಿಶ್ವ ತುಳು ಸಮ್ಮೇಳನದ 'ತೌಲವ ಸಿರಿ' ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ. 

ಉತ್ಸಾಹಿಗಳಾದ ಸುರೇಖಾ ದೇವಾಡಿಗ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Surekha Hemnath Devadiga

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ