ಜಾನ್ ಎಫ್. ಕೆನೆಡಿ
ಜಾನ್ ಎಫ್. ಕೆನೆಡಿ
ಜಾನ್ ಫಿಟ್ಸ್ ಜೆರಲ್ಡ್ ಕೆನೆಡಿ ನಮ್ಮ ಕಾಲದ ವಿಶ್ವಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರು. "ನಿಮ್ಮ ದೇಶ ನಿಮಗೇನು ಮಾಡಬಲ್ಲುದೆಂದು ಕೇಳಬೇಡಿ. ನೀವು ನಿಮ್ಮ ದೇಶಕ್ಕಾಗಿ ಏನು ಮಾಡಬಲ್ಲಿರೆಂದು ಕೇಳಿಕೊಳ್ಳಿ" ಎಂಬುದು ಅವರ ಪ್ರಸಿದ್ಧ ಮಾತು.
ಅಮೆರಿಕ ಸಂಯುಕ್ತ ಸಂಸ್ಥಾನದ 35ನೆಯ ಅಧ್ಯಕ್ಷರಾದ ಇವರು, ಆ ಸ್ಥಾನಕ್ಕೆ ಆ ವರೆಗೆ ಆಯ್ಕೆಯಾದವರಲ್ಲಿ ಅತ್ಯಂತ ಕಿರಿಯರು. ಕೊಲೆಗಡುಕನ ಗುಂಡಿಗೆ ಬಲಿಯಾದ ಅಮೆರಿಕಾಧ್ಯಕ್ಷರ ಪೈಕಿ ನಾಲ್ಕನೆಯವರು.
ಕೆನೆಡಿ ಮ್ಯಾಸಚೂಸೆಟ್ಸಿನ ಬಾಸ್ಟನ್‍ನ ಉಪನಗರಗಳಲ್ಲೊಂದಾದ ಬ್ರೂಕ್ಲಿನಿನಲ್ಲಿ 1917ರ ಮೇ 29ರಂದು ಜನಿಸಿದರು. ತಂದೆ ಜೋಸೆಫ್ ಪ್ಯಾಟ್ರಿಕ್ ಕೆನೆಡಿ, ತಾಯಿ ರೋಸ್. ತಂದೆ-ತಾಯಿಯರಿಬ್ಬರ ಹಿರಿಯರೂ ಐರ್ಲೆಂಡಿನಿಂದ ಬಂದವರು. ಅವರ ಒಂಬತ್ತು ಜನ ಮಕ್ಕಳ ಪೈಕಿ ಜಾನ್ ಎಫ್. ಕೆನಡಿ ಎರಡನೆಯವರು.
ಕೆನಡಿಯ ಬಾಲ್ಯ ಬಾಸ್ಪನಿನ ಕೆಳಮಧ್ಯಮ ವರ್ಗದ ವಸತಿ ಪ್ರದೇಶದಲ್ಲಿ ಆರಂಭವಾಯಿತು. ತಂದೆಯ ಆರ್ಥಿಕ ಸ್ಥಿತಿ ಉತ್ತಮಗೊಂಡಂತೆ ಹೆಚ್ಚು ಹೆಚ್ಚು ಉತ್ತಮ ವಾತಾವರಣದಲ್ಲಿ ಬೆಳೆಯುವ ಅವಕಾಶ ಅವರಿಗೆ ಒದಗಿಬಂತು. ಸ್ಥಳೀಯ ಶಾಲೆಗಳಲ್ಲಿ ಆರಂಭಿಕ ಶಿಕ್ಷಣ ಪಡೆದ ಮೇಲೆ ನ್ಯೂ ಮಿಲ್ಫರ್ಡಿನ ಕ್ಯಾಂಟರ್‍ಬೆರಿ, ವಾಲಿಂಗ್ ಫರ್ಡಿನ ಕೊಯೇಟ್, ಪ್ರಿನ್ಸ್‍ಟನ್ ಮತ್ತು ಹಾರ್ವರ್ಡ್‍ಗಳಲ್ಲಿ ವ್ಯಾಸಂಗ ಮಾಡಿದ ಕೆನೆಡಿಯ ಬುದ್ಧಿಮತ್ತೆ ಆತನ ವಿದ್ಯಾಭ್ಯಾಸದ ಕೊನೆಯ ವರ್ಷಗಳಲ್ಲಿ ಹೆಚ್ಚು ಪ್ರಕಾಶಕ್ಕೆ ಬಂತು. ಈ ಕಾಲದಲ್ಲಿ ಅವರು ಇತಿಹಾಸ ಮತ್ತು ರಾಜಕಾರಣಗಳಲ್ಲಿ ಹೆಚ್ಚು ಆಸಕ್ತಿ ತಳೆದರಲ್ಲದೆ ದೇಶವಿದೇಶ ಸಂಚಾರ ಮಾಡಿ ಅನುಭವ ಗಳಿಸಿದರು. ಎರಡನೆಯ ಮಹಾಯುದ್ಧದ ಆದಿಕಾಲದಲ್ಲಿ ಯೂರೋಪು ಹಿಟ್ಲರನ ಆಕ್ರಮಣಕ್ಕೊಳಗಾಗುತ್ತಿದ್ದಾಗ ಇವರು ಹಾರ್ವರ್ಡಿನ ಪ್ರಗತಿಪರ ಇತಿಹಾಸಕಾರರ, ರಾಜ್ಯಶಾಸ್ತ್ರಜ್ಞರ ಪ್ರಭಾವಕ್ಕೊಳಗಾದರು. ಜರ್ಮನಿ ಪ್ರಬಲವಾಗುತ್ತಿದ್ದಾಗಲೇ ಬ್ರಿಟನ್ ಏಕೆ ಎಚ್ಚತ್ತುಕೊಳ್ಳಲಿಲ್ಲವೆಂಬುದನ್ನು ವಿವರಿಸಿ ಹಾರ್ವರ್ಡಿನ ವ್ಯಾಸಂಗಕ್ರಮದ ಕೊನೆಯ ವರ್ಷದಲ್ಲಿ ಬರೆದ ಪೌಢಪ್ರಬಂಧ 1940ರಲ್ಲಿ ಬ್ರಿಟನ್-ಅಮೆರಿಕಗಳಲ್ಲಿ ಪ್ರಕಟವಾಗಿ ಜನಪ್ರಿಯತೆ ಗಳಿಸಿತು. ಕೆನೆಡಿ 1940ರಲ್ಲಿ ಹಾರ್ವರ್ಡ್ ವ್ಯಾಸಂಗ ಪೂರೈಸಿದ ಮೇಲೆ ಕ್ಯಾಲಿಫೋರ್ನಿಯದ ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಕೆಲವು ತಿಂಗಳುಗಳ ಕಾಲ ಗ್ರಾಜುಯೇಟ್ ಸ್ಕೂಲ್ ಆಫ್ ಬಿಸನೆಸ್ ವಿದ್ಯಾರ್ಥಿಯಾಗಿದ್ದು ದಕ್ಷಿಣ ಅಮೆರಿಕದಲ್ಲಿ ಪ್ರವಾಸ ಮಾಡಿದರು. 1941ರಲ್ಲಿ ಅಮೆರಿಕದ ನೌಕಾಪಡೆಯನ್ನು ಸೇರಿ ಮೋಟಾರ್ ಟಾರ್ಪೆಡೊ ದೋಣಿಯೊಂದರ ಕಮ್ಯಾಂಡರ್ ಆಗಿ, ಆಗ್ನೇಯ ಫೆಸಿಫಿಕಿನ ಸಾಲೊಮನ್ ದ್ವೀಪಗಳಲ್ಲಿ ಜಪಾನ್ ನೌಕಾಪಡೆಯ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದರು. 1943ರಲ್ಲಿ ಜಪಾನಿ ಡಿಸ್ಟ್ರಾಯರ್ ಒಂದು ಇವರ ದೋಣಿಯ ಮೇಲೆ ಏರಿ ಬಂದು ಅದನ್ನು ಮುಳುಗಿಸಿತು. ಕೆನೆಡಿಯೂ ಅವರ ಜೊತೆಗಾರರ ಪೈಕಿ ಸಾಯದೆ ಉಳಿದವರೂ, ಸುಮಾರು ಮೂರು ಮೈಲಿಗಳ ದೂರ ಸಮುದ್ರದಲ್ಲಿ ಈಜಿ ದ್ವೀಪವೊಂದನ್ನು ಸೇರಿ ಬದುಕಿಕೊಂಡರು. ನೌಕಾ ಮತ್ತು ಸಮುದ್ರ ಪಡೆಯ ಪದಕವೂ ಪರ್ಪಲ್ ಹಾರ್ಟ್ ಪ್ರಶಸ್ತಿಯೂ ಕೆನಡಿ ಅವರಿಗೆ ಲಭ್ಯವಾದುವು. ಸಮರದಲ್ಲಿ ಗಾಯಗೊಂಡಿದ್ದುದಲ್ಲದೆ ಮಲೇರಿಯ ವ್ಯಾಧಿಪೀಡಿತರಾಗಿದ್ದ ಕೆನೆಡಿಯನ್ನು ಸ್ವದೇಶಕ್ಕೆ ಕಳುಹಿಸಲಾಯಿತು.
ಕೆನೆಡಿ 1945ರಲ್ಲಿ ನೌಕಾಪಡೆಯಿಂದ ಬಿಡುಗಡೆಯಾದ ಮೇಲೆ ಸ್ವಲ್ಪ ಕಾಲ ಪತ್ರಿಕೋದ್ಯಮದಲ್ಲಿದ್ದರು. ಅಣ್ಣ ಜೋಸೆಫ್ ಪಿ. ಕೆನೆಡಿ ರಾಜಕೀಯ ಪ್ರವೇಶ ಮಾಡಬೇಕೆಂಬುದು ಕುಟುಂಬದ ಹಿರಿಯರ ಉದ್ದೇಶವಾಗಿತ್ತು. ಆದರೆ ಆತ 1944ರಲ್ಲಿ ಯುದ್ಧದಲ್ಲಿ ಪ್ರಾಣ ಕಳೆದುಕೊಂಡರು. ಅಣ್ಣನ ಸಾವಿನಿಂದಾದ ಆ ಆಶಯವನ್ನು ತುಂಬುವುದೂ ಜಾನ್ ಕೆನೆಡಿಯ ರಾಜಕೀಯ ಪ್ರವೇಶದ ಒಂದು ಉದ್ದೇಶವಾಗಿತ್ತು. 1946ರಲ್ಲಿ ಅವರು ಡೆಮೋಕ್ರಾಟಿಕ್ ಪಕ್ಷದಿಂದ ಕಾಂಗ್ರೆಸ್ಸಿಗೆ ಸ್ಪರ್ಧಿಸುವ ತೀರ್ಮಾನ ಮಾಡಿದರು. ಹಾರ್ವರ್ಡ್ ಮತ್ತು ನೌಕಾ ಗೆಳೆಯರು ಇವರ ಹಿಂದೆ ನಿಂತು ಕೆಲಸ ಮಾಡಿದರು. ಪ್ರಾಥಮಿಕದಲ್ಲಿ ಭಾಗವಹಿಸಿ ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು, 1947ರ ಜನವರಿಯಲ್ಲಿ ಪ್ರತಿನಿಧಿ ಸಭೆಯನ್ನು ಪ್ರವೇಶಿಸಿದರು. ಆಗ ಅವರಿಗೆ ಇನ್ನೂ 29 ವರ್ಷ. ಅನ್ನ ಸ್ವಾತಂತ್ರ್ಯ, ಕಾರ್ಮಿಕರ ಸಮಸ್ಯೆ, ಸಮಾಜ ಕಲ್ಯಾಣ, ಸಾಮಾಜಿಕ ರಕ್ಷಣೆ ಮುಂತಾದ ಕಾರ್ಯನೀತಿಗಳಿಗೆ ಕೆನೆಡಿ ಬೆಂಬಲ ನೀಡಿದರು. ಇದರಿಂದ ಅವರ ಜನಪ್ರಿಯತೆ ಹೆಚ್ಚಿತು. ಮತ್ತೆ ಎರಡು ಬಾರಿ 1948 ಮತ್ತು 1950ರಲ್ಲಿ ಅವರು ಪ್ರತಿನಿಧಿ ಸಭೆಯ ಚುನಾವಣೆಯಲ್ಲಿ ಜಯ ಗಳಿಸಿದರು. 1952ರಲ್ಲಿ ಸೆನೆಟಿಗೆ ಸ್ಪರ್ಧಿಸಿಯೂ ಗೆದ್ದರು. 1953ರ ಸೆಪ್ಟೆಂಬರಿನಲ್ಲಿ ಕೆನೆಡಿ ಅವರಿಗೆ ಜಾಕ್ವೆಲೀನ್ ಲೀ ಬೌವಿಯೇರ್ ಒಂದಿಗೆ ವಿವಾಹವಾಯಿತು. ಯುದ್ಧ ಸಮಯದಲ್ಲಿ ಕೆನಡಿಯ ಬೆನ್ನುಮೂಳೆಗೆ ಆಗಿದ್ದ ಆಘಾತದಿಂದಾಗಿ ನೋವು ಅತಿಯಾಗಿ, 1954ರಲ್ಲಿ ಆತ ಆಸ್ಪತ್ರೆ ಸೇರಬೇಕಾಯಿತು. ಅಲ್ಲಿ ಎರಡು ಬಾರಿ ಅಪಾಯಕಾರಿ ಶಸ್ತ್ರಕ್ರಿಯೆಗೆ ಒಳಗಾಗಿ ಮೃತ್ಯುಮುಖದಿಂದ ಪಾರಾದರು. ಅನಂತರದ ಚೇತರಿಕೆಯ ಅವಧಿಯಲ್ಲಿ ಒಂದು 'ಪ್ರೊಫೈಲ್ಸ್ ಇನ್ ಕರೇಜ್' (1956) ಪುಸ್ತಕ ರಚಿಸಿದರು. ಆ ಪುಸ್ತಕಕ್ಕೆ 1957ರಲ್ಲಿ ಪುಲಿಟ್ಜರ್ ಬಹುಮಾನ ಬಂತು. 1956ರಲ್ಲಿ ಅವರು ರಾಷ್ಟ್ರದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪಕ್ಷದ ನಾಮಕರಣ ಪಡೆಯಲು ಯತ್ನಿಸಿ ಸ್ವಲ್ಪದರಲ್ಲಿ ವಿಫಲರಾದರು. ಆದರೆ 1958ರಲ್ಲಿ ಸೆನೆಟಿಗೆ ನಡೆದ ಚುನಾವಣೆಯಲ್ಲಿ ಅವರಿಗೆ ಅಧಿಕ ಬಹುಮತ ಲಭ್ಯವಾಯಿತು. 1960ರಲ್ಲಿ ಅಧ್ಯಕ್ಷಸ್ಥಾನಕ್ಕೆ ಪಕ್ಷದ ನಾಮಕರಣ ಪಡೆಯಲು ಪ್ರಯತ್ನ ನಡೆಸಿ ಸಫಲರಾದರು. 1960ರಲ್ಲಿ ಅವರನ್ನು ಅಧ್ಯಕ್ಷಸ್ಥಾನಕ್ಕೆ ಡೆಮೊಕ್ರಾಟ್ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು. ಆ ವರ್ಷ ನವೆಂಬರ್ 8ರಂದು ನಡೆದ ಚುನಾವಣೆಯಲ್ಲಿ ಕೆನೆಡಿ ವಿಜಯಿಯಾದರು. 1961ರ ಜನವರಿ 20ರಂದು ಅಧ್ಯಕ್ಷಾಧಿಕಾರ ಸ್ವೀಕಾರ ಮಾಡಿದ ಕೆನೆಡಿಯ ಪ್ರಾರಂಭ ಭಾಷಣ ಗಮನಾರ್ಹವಾದ್ದು. ಭೂಮಿಯ ಅರ್ಧಭಾಗದಲ್ಲಿ ಗುಡಿಸಲುಗಳಲ್ಲೂ ಹಳ್ಳಿಗಳಲ್ಲೂ ವಾಸಿಸುವ ಜನರಿಗೆ ನೆರವು ನೀಡುವುದಾಗಿ ಅವರು ಪ್ರತಿಜ್ಞೆ ಮಾಡಿದರು. ಕಮ್ಯೂನಿಸ್ಟ್ ರಾಷ್ಟ್ರಗಳೊಂದಿಗೆ ಸಂಧಾನ ಮಾಡಲು ಹೆದರಬಾರದು; ಆದರೆ ಹೆದರಿಕೆಯಿಂದ ಸಂಧಾನ ಮಾಡಬಾರದು ಎಂದರು. "ನಿಮ್ಮ ದೇಶ ನಿಮಗೇನು ಮಾಡಬಲ್ಲುದೆಂದು ಕೇಳಬೇಡಿ. ನೀವು ನಿಮ್ಮ ದೇಶಕ್ಕಾಗಿ ಏನು ಮಾಡಬಲ್ಲಿರೆಂದು ಕೇಳಿಕೊಳ್ಳಿ" ಎಂಬುದು ಕೆನೆಡಿಯವರ ಪ್ರಸಿದ್ಧ ವಾಕ್ಯ.
ಕೆನೆಡಿ ತಮ್ಮ ಸಂಪುಟಕ್ಕೂ ಇತರ ಸ್ಥಾನಗಳಿಗೂ ನೇಮಿಸಿಕೊಂಡ ವ್ಯಕ್ತಿಗಳು ದಕ್ಷರು, ನಿಷ್ಠಾವಂತರು. ಈ ನೇಮಕಗಳು ಅವರ ಕೀರ್ತಿಪ್ರತಿಷ್ಠೆ ಬೆಳೆಯಲು ಸಾಧಕವಾದುವು. ಅವರ ಚೇತನ ಅದ್ಭುತವಾದ್ದು. ಪತ್ನಿ ಕಲಾಪ್ರಿಯೆ. ಇದರಿಂದ ಅಧ್ಯಕ್ಷರ ಅಧಿಕೃತ ನಿವಾಸವಾದ ಶ್ವೇತಭವನ ಎಲ್ಲರ ಗಮನ ಸೆಳೆಯಿತು. ಅದೊಂದು ರಾಜಕೀಯ ಮಧುಚಂದ್ರದ ಕಾಲ. ಆ ಕಾಲದಲ್ಲಿ ಕೆನೆಡಿ ಅನೇಕ ವಿಶ್ವಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಶ್ರಮಿಸಿದರು. ಆದರೆ ಬಲುಬೇಗ ಭ್ರಮನಿರಸನ ಅವರಿಗಾಗಿ ಕಾದಿತ್ತು. ಕ್ಯೂಬದಲ್ಲಿ ಅಧಿಕಾರ ಗಳಿಸಿದ್ದ ಫಿಡೆಲ್ ಕ್ಯಾಸ್ಟ್ರೋನನ್ನು ಕೆಳಗಿಳಿಸಲು ಪ್ರಯತ್ನಿಸುತ್ತಿದ್ದವರಿಗೆ ಬೆಂಬಲವಾಗಿ ಆಕ್ರಮಣಕಾರ್ಯ ನಡೆಸಬೇಕೆಂಬ ಕೆನೆಡಿಯ ಸೂಚನೆಗೆ ಕಾಂಗ್ರೆಸ್ ಒಪ್ಪಲಿಲ್ಲ. ಲಾವೋಸ್ ವಿಯೆಟ್ನಾಂಗಳಲ್ಲಿ ಕಮ್ಯೂನಿಸ್ಟ್ ಕಾರ್ಯಾಚರಣೆಯ ವಿರುದ್ಧ ಅಮೆರಿಕನ್ ಪಡೆಗಳು ಸತ್ತ್ವಹೀನವಾಗಿದ್ದುವು. ಪಶ್ಚಿಮ ಬರ್ಲಿನಿಗೂ ಪೂರ್ವಬರ್ಲಿನಿಗೂ ಸಂಪರ್ಕವನ್ನು ಕಡಿದುಹಾಕಲು ಪೂರ್ವಜರ್ಮನ್ ಸರ್ಕಾರ ಅವೆರಡು ಭಾಗಗಳ ನಡುವೆ ಗೋಡೆ ಎಬ್ಬಿಸಿತು. ಈ ಪ್ರತಿಕೂಲ ಪರಿಸ್ಥಿತಿಯಲ್ಲೂ ಕೆನೆಡಿ ಕೆಲವು ದೃಢ ಕ್ರಮಗಳನ್ನು ಕೈಗೊಂಡರು. ಕಾಂಗ್ರೆಸಿನ ಡೆಮೊಕ್ರಾಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳಲ್ಲಿದ್ದ ಸಂಪ್ರದಾಯ ಶರಣರೆಲ್ಲ ಒಂದಾಗಿ ಕೆನೆಡಿಯ ಪ್ರಗತಿಪರ ಕ್ರಮಗಳನ್ನೆಲ್ಲ ವಿರೋಧಿಸುತ್ತಿದ್ದರು.
1963ರ ನವೆಂಬರಿನಲ್ಲಿ ಕೆನೆಡಿ ಟೆಕ್ಸಾಸಿನಲ್ಲಿ ಭಾಷಣಪ್ರವಾಸ ಕೈಗೊಂಡಿದ್ದರು. ನವೆಂಬರ್ 22ರಂದು ಡ್ಯಾಲಸಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದು ಅಲ್ಲಿಂದ ಮೋಟಾರಿನಲ್ಲಿ ಪರಿವಾರದೊಡನೆ ಸಾಗುತ್ತಿದ್ದಾಗ ಹಂತಕನೊಬ್ಬ ಮೂರು ಗುಂಡು ಹಾರಿಸಿದ. ಎರಡು ಗುಂಡುಗಳು ಕೆನಡಿಯನ್ನು ತಾಕಿ ಅವರು ಮೃತಪಟ್ಟರು.
On the birth anniversary of Jhon F. Kennedy
ಕಾಮೆಂಟ್‌ಗಳು