ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದುರ್ಗಾದಾಸ್ ರಾಥೋಡ್


 ದುರ್ಗಾದಾಸ್ ರಾಥೋಡ್


ದುರ್ಗಾದಾಸ್ ರಾಥೋಡ್ ಮಾರವಾಡದ ರಾಥೋಡರ ನಾಯಕನಾಗಿ ಪ್ರಸಿದ್ಧ. ಆತ ದಕ್ಷ ಸೇನಾನಿ, ರಾಜನೀತಿಜ್ಞ.

ದುರ್ಗಾದಾಸ್ 1639ರ ಆಗಸ್ಟ್ 13 ರಂದು ಜನಿಸಿದ. ಮಾರವಾಡದ ರಾಜ ಜಸವಂತ ಸಿಂಹನ ಮಾಂತ್ರಿಯಾಗಿದ್ದ ಅಸಕರನ ಮಗ ಈತ.  

ರಾಜ ಜಸವಂತ ಸಿಂಹ ಮೊಗಲ್ ಸಾಮ್ರಾಟನ ಸಹಾಯಾರ್ಥವಾಗಿ ಹೋಗಿದ್ದಾಗ ಆಫ್ಘಾನಿಸ್ತಾನದ ಜಮ್ರೂಡ್‍ನಲ್ಲಿ 1678ರ ಡಿಸೆಂಬರ್ 10 ರಂದು ತೀರಿಕೊಂಡ. ಅವನಿಗೆ ಮಕ್ಕಳಿರಲಿಲ್ಲ. ಗರ್ಭವತಿಯಾಗಿದ್ದ ರಾಣಿಗೆ ರಾಜನ ಮರಣಾನಂತರ ಅವಳಿ ಮಕ್ಕಳು ಹುಟ್ಟಿದವು. ಅವುಗಳಲ್ಲಿ ಒಂದು ಮಗು ತೀರಿಕೊಂಡಿತು. ಇನ್ನೊಂದು ಮಗುವೇ ಅಜಿತ್ ಸಿಂಗ್. ಮಾರವಾಡದ ಸಿಂಹಾಸನದ ಉತ್ತರಾಧಿಕಾರಿಯೆಂದು ಅವನಿಗೆ ಮನ್ನಣೆ ನೀಡಬೇಕೆಂದು ದುರ್ಗಾದಾಸನೂ ಇತರರೂ ಮೊಗಲ್ ಚಕ್ರವರ್ತಿ ಔರಂಗ್‍ಜೇಬನನ್ನು ಪ್ರಾರ್ಥಿಸಿದರು. ಆದರೆ ಔರಂಗ್‍ಜೇಬ್ ಆ ರಾಜ್ಯವನ್ನು ಕಬಳಿಸಲು ಹೊಂಚು ಹಾಕುತ್ತಿದ್ದ. ದೆಹಲಿಗೆ ಬಂದಿದ್ದ ರಾಣಿಯನ್ನೂ ಮಗುವನ್ನೂ ಸೆರೆಹಿಡಿಯಲು ಸೈನ್ಯವನ್ನು ಕಳಿಸಿದ. ದುರ್ಗಾದಾಸ್ ರಜಪೂತ ಸೈನ್ಯದ ನೆರವು ಪಡೆದು ಉಪಾಯದಿಂದ ರಾಜಕುಮಾರನನ್ನೂ ರಾಣಿಯನ್ನೂ ಬಿಡಿಸಿಕೊಂಡು ಪಲಾಯನ ಮಾಡಿದ. ಮಾರವಾಡಕ್ಕೆ ಬಂದು ಮೊಗಲ್ ಸೈನ್ಯದ ವಿರುದ್ಧ ಯುದ್ಧ ಮಾಡಲು ವ್ಯವಸ್ಥೆ ಮಾಡಿದ. ಅಲ್ಲದೆ ರಾಣಿಯನ್ನೂ ರಾಜಕುಮಾರನನ್ನೂ ಜೋಧ್‍ಪುರಕ್ಕೆ ಕರೆತಂದ. ಮೇವಾಡದ ರಾಣಾನೊಂದಿಗೆ ಒಪ್ಪಂದ ಮಾಡಿಕೊಂಡು ಔರಂಗ್‍ಜೇಬ್ ವಿರುದ್ಧ ಯುದ್ಧ ಮಾಡಲು ಧಾವಿಸಿದ. 1680ರಲ್ಲಿ ನಡೆದ ಭೀಕರ ಕದನದಲ್ಲಿ ರಾಥೋಡನ ಸೇನಾನಾಯಕನಾಗಿ ಬಹು ಚತುರತೆಯಿಂದ ಕಾದಾಡಿದ. ಈ ಯುದ್ದದಲ್ಲಿ ಔರಂಗ್‍ಜೇಬನ ವಿದ್ರೋಹಿ ಪುತ್ರನಾದ ಅಕ್ಬರನನ್ನು ರಜಪೂತ ಸೈನ್ಯ ಸೆರೆಹಿಡಿಯಿತು. ಔರಂಗ್‍ಜೇಬ್ ಮಗನನ್ನು ಬಿಡಿಸಿಕೊಳ್ಳುವ ತಂತ್ರ ಹೂಡುವುದರಲ್ಲಿದ್ದ. ಇದು ಗೊತ್ತಾದ ಕೂಡಲೇ ದುರ್ಗಾದಾಸ್ ಅಕ್ಬರನನ್ನು ಕರೆದುಕೊಂಡು ಖಾಂದೇಶ ಬಗ್ಲಾನಾ ಮಾರ್ಗವಾಗಿ ಮರಾಠರ ಸಾಮ್ರಾಜ್ಯಕ್ಕೆ ಓಡಿಬಂದು ಸಾಂಬಾಜಿಯ ಆಸ್ಥಾನದಲ್ಲಿ ಅಕ್ಬನನ್ನು ಭದ್ರವಾಗಿ ಇರಿಸಿದ. ಮೊಗಲ್ ಸೈನ್ಯದ ವಿರುದ್ಧಕಾದಾಡಲು ಸಾಂಬಾಜಿ ಆಸಕ್ತಿ ತೋರಲಿಲ್ಲ. ದುರ್ಗಾದಾಸ್ ಕೂಡಲೇ ಮಾರವಾಡಕ್ಕೆ ಧಾವಿಸಿದ (1687). ಮೇವಾಡದ ಸೈನ್ಯ ಮೊಗಲ್‍ರೊಡನೆ ಶಾಂತಿ ಒಪ್ಪಂದ ಮಾಡಿಕೊಂಡಿತ್ತು. ದುರ್ಗಾದಾಸ್ ಪುನ: ಯುದ್ಧ ಸಾರಿದ. ರಜಪೂತ ಸೇನೆಯ ನಾಯಕತ್ವ ವಹಿಸಿ ಕಾದಾಡಿದ. ಅಜಿತ್ ಸಿಂಹನನ್ನು ಮಾರವಾಡದ ಸಿಂಹಾಸನದ ರಾಣನೆಂದು ಮೊಗಲರು ಮಾನ್ಯ ಮಾಡಲೆಬೇಕಾಯಿತು(1709). 

ಇಷ್ಟೆಲ್ಲ ಆದರೂ ಸ್ವಲ್ಪ ಕಾಲದಲ್ಲೇ ಅಜಿತ್‍ಸಿಂಹ ತನ್ನ ರಕ್ಷಕನಾದ ದುರ್ಗದಾಸನನ್ನೇ ದೇಶಭ್ರಷ್ಟನನ್ನಾಗಿ ಮಾಡಿದ. ದುರ್ಗಾದಾಸ್ ಮಾರವಾಡವನ್ನು ಬಿಟ್ಟು ಉದಯಪುರದ ಮಹಾರಾಣನ ಆಸ್ಥಾನದಲ್ಲಿ ಸೇವೆ ಸಲ್ಲಿಸಲಾರಂಭಿಸಿದ. 

ಮಹಾನ್ ಸೇನಾನಿ ದುರ್ಗಾದಾಸ್ 1719ರ ನವಂಬರ್ 22ರಂದು ಅವನು ರಾಮಾಪುರದಲ್ಲಿ ತೀರಿಕೊಂಡ.

On the birth anniversary of Durgadas Rathore preserved the rule of the Rathore dynasty over Marwar  defying Aurangzeb

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ