ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸ್ಯಾಮ್ ಪಿತ್ರೋಡಾ


 ಸ್ಯಾಮ್ ಪಿತ್ರೋಡಾ


ಸತ್ಯನಾರಾಯಣ ಗಂಗಾರಾಮ್ ಪಿತ್ರೋಡಾ ಆಧುನಿಕ ಭಾರತದ ಸಂವಹನ ಕ್ಷೇತ್ರದ ಸುಧಾರಣೆಯ ಹರಿಕಾರ. ಭಾರತದಲ್ಲಿ  ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ಬೆಳವಣಿಗೆಗೆ ಪ್ರಥಮ ಮಾರ್ಗದರ್ಶಿ ಸೂತ್ರ ರೂಪಿಸಿದವರೆಂದು ಹೆಸರಾಗಿದ್ದಾರೆ. ಅಮೆರಿಕ ನಿವಾಸಿಯಾಗಿ ವಾಣಿಜ್ಯೋದ್ಯಮದಲ್ಲೂ ಛಾಪು ಮೂಡಿಸಿದ ಧೀಮಂತ. ದೂರವಾಣಿ ಸಂಪರ್ಕ ಕ್ಷೇತ್ರದಲ್ಲಿ  ಕ್ಷಿಪ್ರರೀತಿಯ ಪ್ರಗತಿಯನ್ನು ಸಾಧಿಸಿ ತೋರಿಸಿದ ಛಲಗಾರರಾಗಿ ಸಹಾ ಅವರು ಎದ್ದುಕಾಣುತ್ತಾರೆ.

ಸ್ಯಾಮ್ ಪಿತ್ರೋಡಾ 1942ರ ಮೇ 4ರಂದು ಒದಿಷಾದ ಟಿಟ್ಲಾಗರ್ ಎಂಬಲ್ಲಿ ಜನಿಸಿದರು. ಪಿತ್ರೋಡಾ ಅವರ ಪೂರ್ವಜರು ಮೂಲತಃ ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯವರು. ಇವರ ಇಡೀ ಕುಟುಂಬವೇ ಮಹಾತ್ಮ ಗಾಂಧೀಜಿ ಪ್ರಭಾವಕ್ಕೆ ಒಳಗಾಗಿತ್ತು. 

ಪಿತ್ರೋಡಾ ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಗುಜರಾತ್‌ನ ವಲ್ಲಭ ವಿದ್ಯಾನಗರದಲ್ಲಿ ಪೂರೈಸಿದರು. ಮುಂದೆ ಭೌತಶಾಸ್ತ್ರ ವಿಷಯದಲ್ಲಿ ಬರೋಡದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ತದನಂತರ ಅಮೆರಿಕಕ್ಕೆ ತೆರಳಿದ ಇವರು ಷಿಕಾಗೋದ ಇಲಿನಾಯ್ಸ್ ತಾಂತ್ರಿಕ ವಿಶ್ವವಿದ್ಯಾಲಯದಿಂದ ಇಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಸಂಪಾದಿಸಿದರು. ಇದೇ ವಿಶ್ವವಿದ್ಯಾಲಯದಿಂದ 2010ರಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಸಂದಿತು.

ಹೊಸ ಹೊಸ ತಂತ್ರಜ್ಞಾನದ ಅನ್ವೇಷಣೆ ಮತ್ತು ಇವಕ್ಕೆ ತಕ್ಕ ಗ್ರಾಹಕರ ನಡುವಿನ ಅಭಿವೃದ್ಧಿ ಪಥ ಹೇಗಿರಬೇಕೆಂಬುದಕ್ಕೆ ಒತ್ತು ಕೊಟ್ಟು ಸ್ಥಾಪಿಸಲಾಗಿರುವ ಸ್ಯಾಮ್ ಪಿತ್ರೋಡಾ ಅವರ `ಸಿ-ಎಸ್‌ಎಎಮ್` ಹೆಸರಿನ ಕಂಪೆನಿ ವಿಶ್ವದ ತಾಂತ್ರಿಕ ಅಭಿವೃದ್ಧಿ ಮತ್ತು ಅನ್ವೇಷಣಾ ಭೂಪಟದಲ್ಲಿ ತನ್ನದೇ ಆದ ಛಾಪು ಒತ್ತಿದೆ. ಷಿಕಾಗೋ, ಲಂಡನ್, ಟೋಕಿಯೊ, ಮುಂಬೈ ಮತ್ತು ಬರೋಡಗಳಲ್ಲಿ ಇದರ ಕಚೇರಿಯಿದೆ.

1992ಕ್ಕೂ ಮುನ್ನ 1960 ಮತ್ತು 70ರ ದಶಕದಲ್ಲಿ ಅಮೆರಿಕದಲ್ಲಿ ನೆಲೆಸಿದ್ದ ಪಿತ್ರೋಡಾ ದೂರವಾಣಿ ಕ್ಷೇತ್ರದಲ್ಲಿ ಅವ್ಯಾಹತ ಸಂಶೋಧನೆ ಕೈಗೊಂಡರು. 1975ರಲ್ಲಿ ಇವರು ಸ್ಥಾಪಿಸಿದ ವೆಸ್ಕಾಮ್ ಸ್ವಿಚ್ಚಿಂಗ್ ಕಂಪೆನಿ ವಿಶ್ವದಲ್ಲೇ ಮೊದಲ  ಡಿಜಿಟಲ್ ಸ್ವಿಚ್ಚಿಂಗ್ ಕಂಪೆನಿ ಎಂಬ ಖ್ಯಾತಿ ಪಡೆಯಿತು. 

40 ವರ್ಷಗಳ ದೂರಸಂಪರ್ಕ ಕ್ಷೇತ್ರದಲ್ಲಿನ ಪಿತ್ರೋಡಾ ಅವರ ಸತತ ಅಧ್ಯಯನ, ಸಂಶೋಧನೆಗಳ  ದೆಸೆಯಿಂದ ಗಳಿಸಿದ ಹಕ್ಕುಸ್ವಾಮ್ಯಗಳು ನೂರಾರು. ಪಿತ್ರೋಡಾ ಪರಿಶೋಧನೆಯ ಕೂಸಾಗಿರುವ `ಮೊಬೈಲ್ ಫೋನುಗಳ ವಹಿವಾಟು ತಂತಜ್ಞಾನ` ಅಭಿವೃದ್ಧಿ ಹೊಂದುತ್ತಿರುವ ದೂರಸಂಪರ್ಕ ಮಾರುಕಟ್ಟೆಯ ಮಹತ್ವಾಕಾಂಕ್ಷೆಯ ಸಾಧನೆ. ಇದು ಇವರ ಹಕ್ಕುಸ್ವಾಮ್ಯಗಳಲ್ಲೊಂದು.

ಸ್ಯಾಮ್ ಪಿತ್ರೋಡಾ 1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಅಪೇಕ್ಷೆಯ ಮೇರೆಗೆ ಭಾರತಕ್ಕೆ ಆಗಮಿಸಿ ಸಿ-ಡಾಟ್ ಕೇಂದ್ರವನ್ನು ಆರಂಭಿಸಿದರು. ದೂರವಾಣಿ ಕ್ಷೇತ್ರದ ಸ್ವಾಯತ್ತ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಹುಟ್ಟು ಹಾಕಿದರು.

ಪಿತ್ರೋಡಾ 1987ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು. ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ಬೆಳವಣಿಗೆಗೆ ವಿಶಿಷ್ಟ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದರು. ಈ ಸಂದರ್ಭದಲ್ಲಿ ದೂರಸಂಪರ್ಕ ಕ್ಷೇತ್ರವನ್ನು ನೀರು, ಶಿಕ್ಷಣ, ಹಾಲಿನ ಡೈರಿ, ಬೀಜ ಹಾಗೂ ಪ್ರತಿರೋಧಕ ಶಕ್ತಿ ವೃದ್ಧಿಯ ಕ್ಷೇತ್ರಗಳ ಜೊತೆ ಸೇರಿಸಿ ಅಭಿವೃದ್ಧಿ ವಲಯದ ವಿಸ್ತರಣೆಗೆ ನಾಂದಿ ಹಾಡಿದರು. ನೈರ್ಮಲ್ಯ, ಕೃಷಿ, ಗೃಹ ನಿರ್ಮಾಣ ಕ್ಷೇತ್ರಗಳಲ್ಲೂ ಪರಿವರ್ತನೆಯ ಪಲಕುಗಳನ್ನು ಬಿಂಬಿಸಿದರು. ಟೆಲಿಕಾಂ ಆಯೋಗದ ಸಂಸ್ಥಾಪಕರೂ ಆಗಿದ್ದ ಇವರು ಈ ಆಯೋಗದ ಮೊದಲ ಅಧ್ಯಕ್ಷರೂ ಆಗಿ ಕಾರ್ಯ ನಿರ್ವಹಿಸಿದರು.
 
ಮುಂದೆ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರಿಗೆ ಸಲಹೆಗಾರರಾಗಿದ್ದ ಪಿತ್ರೋಡಾ ಸಂಪುಟ ದರ್ಜೆಸ್ಥಾನಮಾನದ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದರು. ಸಾರ್ವಜನಿಕ ಮಾಹಿತಿ ಮೂಲಸೌಕರ್ಯ ಮತ್ತು ಅನ್ವೇಷಣಾ ವಲಯ ಅವರ ಹುದ್ದೆಯ ಕಾರ್ಯ ವ್ಯಾಪ್ತಿಯಲ್ಲಿತ್ತು.

ಸ್ಯಾಮ್ ಪಿತ್ರೋಡಾ 2005ರಿಂದ 2008ರಲ್ಲಿ ಜ್ಞಾನ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಜ್ಞಾನ ಆಯೋಗದ ಅಧ್ಯಕ್ಷರಾಗಿದ್ದಾಗ ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತು ಇದಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಮೂಲ ಸೌಕರ್ಯ ಹೇಗಿರಬೇಕೆಂಬ ಬಗ್ಗೆ ವ್ಯಾಪಕ ಕಲ್ಪನೆಯನ್ನು ದಕ್ಕಿಸಿಕೊಟ್ಟರು. 

2009ರ ಅಕ್ಟೋಬರ್ ತಿಂಗಳಿನಲ್ಲಿ ಭಾರತ ಸರ್ಕಾರ ಇವರನ್ನು ಭಾರತೀಯ ರೈಲ್ವೆ ಇಲಾಖೆಯ ಮಾಹಿತಿ ಸಂಪರ್ಕ ತಂತ್ರಜ್ಞಾನ ಅಭಿವೃದ್ಧಿಯ ತಜ್ಞ ಸಮಿತಿಗೆ ಮುಖ್ಯಸ್ಥರನ್ನಾಗಿ ನೇಮಿಸಿತ್ತು.

ಪಿತ್ರೋಡಾ ಅವರಿಗೆ ಸಂದಿರುವ ಪ್ರಶಸ್ತಿ, ಪುರಸ್ಕಾರಗಳು ಅನೇಕ. ಇವುಗಳಲ್ಲಿ ಪ್ರಮುಖವಾದುದು 2011ರಲ್ಲಿ ಜಿನಿವಾದಲ್ಲಿ ನೀಡಲಾದ ಅಂತರರಾಷ್ಟ್ರೀಯ ದೂರಸಂಪರ್ಕ ಮತ್ತು ಮಾಹಿತಿ ಸಮುದಾಯದ ಪ್ರಶಸ್ತಿ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯರು ಇವರು.  ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ 2009ರಲ್ಲಿ ಪದ್ಮಭೂಷಣ, ರಾಜೀವ್ ಗಾಂಧಿ `ಗ್ಲೋಬಲ್ ಇಂಡಿಯನ್` ಪ್ರಶಸ್ತಿ, 2008ರಲ್ಲಿ ಆಂಧ್ರಪ್ರದೇಶ ವಿಶ್ವವಿದ್ಯಾಲಯದಿಂದ ಮತ್ತು 2010ರಲ್ಲಿ ಸಂಭಾಲಪುರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗೌರವಗಳೂ ಸಂದವು. 

'ಡ್ರೀಮಿಂಗ್ ಬಿಗ್ ಮೈ ಜರ್ನಿ ಟು ಕನೆಕ್ಟ್ ಇಂಡಿಯಾ' ಎಂಬುದು ಇವರ ಆತ್ಮಚರಿತ್ರೆ.ಇದಲ್ಲದೆ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ.

On the birthday of Sam Pitroda

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ