ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೃಣಾಲ್ ಸೇನ್


 ಮೃಣಾಲ್ ಸೇನ್


ಮೃಣಾಲ್ ಸೇನ್ ವಿಶ್ವಮಟ್ಟದಲ್ಲಿ ಹೆಸರಾದ ಮಹಾನ್ ಭಾರತೀಯ ಚಲನಚಿತ್ರ ನಿರ್ದೇಶಕರು.

ಮೃಣಾಲ್ ಸೇನ್ 1923ರ  ಮೇ 14 ರಂದು ಈಗಿನ ಬಾಂಗ್ಲಾದೇಶದ ಭಾಗವಾಗಿರುವ ಫರೀದ್ ಪುರದಲ್ಲಿ ಜನಿಸಿದರು.   ವಿಜ್ಞಾನದ ವಿದ್ಯಾರ್ಥಿಯಾಗಿ ಕಲ್ಕತ್ತೆಯಲ್ಲಿ ಕಾಲೇಜು ಶಿಕ್ಷಣ ಆರಂಭಿಸಿದ ಸೇನರು ತಮ್ಮ ಓದಿನ ದಿನಗಳಲ್ಲಿ ಕಮ್ಯೂನಿಸ್ಟ್ ಪಕ್ಷದ ಸಾಂಸ್ಕೃತಿಕ ವಿಭಾಗದ ಕಾರ್ಯಕರ್ತರಾಗಿ ಭಾಗವಹಿಸುತ್ತಿದ್ದರು.  ಅವರು ರಾಜಕೀಯದಲ್ಲಿ ಪಾಲ್ಗೊಳ್ಳಲಿಲ್ಲವಾದರೂ ಸಮಾಜವಾದೀಯ ಹಲವಾರು ಚಿಂತಕರ ಜೊತೆಗೆ ಅವರ ಸ್ನೇಹ ಗಾಢವಾದುದಾಗಿತ್ತು.  ಈ ಗಾಢ ಸ್ನೇಹ ಅವರನ್ನು ‘ಸಮಾಜವಾದೀಯ ರಂಗಕರ್ಮಿಗಳ ಸಂಘ’ದಲ್ಲಿ ನಿರಂತರವಾಗಿ ಬೆಸೆದಿತ್ತು. 

ಚಲನಚಿತ್ರಗಳಲ್ಲಿನ ಶ್ರೀಮಂತಿಕೆಗಳ  ಕುರಿತಾಗಿನ ಪುಸ್ತಕವೊಂದು ಮೃಣಾಲ್ ಸೇನರಿಗೆ ಚಿತ್ರರಂಗದ ಕುರಿತಂತೆ ಆಸಕ್ತಿ ಹುಟ್ಟುವ ಹಾಗೆ ಮಾಡಿತಾದರೂ ಅವರ ಆಸಕ್ತಿಗಳೆಲ್ಲವೂ ಬುದ್ಧಿ ಪ್ರಚೋದಕ ವಿಷಯಗಳಲ್ಲೇ ಇದ್ದವು.  ಬದುಕಿನ ಅವಶ್ಯಕತೆಗಳ ದೆಸೆಯಿಂದಾಗಿ ಔಷದ ಮಾರಾಟಗಾರನ ಕೆಲಸವನ್ನು ಆಶ್ರಯಿಸಿದ ಮೃಣಾಲ್ ಸೇನರು ಕೆಲಕಾಲ ಕಲ್ಕತ್ತೆಯಿಂದ ಹೊರಗುಳಿಯಬೇಕಾಯಿತು.  ಇದನ್ನು ಹೆಚ್ಚು ದಿನ ತಾಳಿಕೊಳ್ಳದ ಮೃಣಾಲರು ಕಲ್ಕತ್ತೆಗೆ ಹಿಂದಿರುಗಿ ಅಲ್ಲಿನ  ಚಲನಚಿತ್ರ ಸ್ಟೂಡಿಯೋದಲ್ಲಿ ಆಡಿಯೋ ತಂತ್ರಜ್ಞರಾಗಿ ಕಾರ್ಯನಿರ್ವಹಿಸತೊಡಗಿದರು.  ಇದು ಇವರ ಚಲನಚಿತ್ರರಂಗದಲ್ಲಿನ ಭವಿತವ್ಯವನ್ನು ರೂಪಿಸಿತು.

1955ರಲ್ಲಿ ಆಗಿನ್ನೂ ಪ್ರವರ್ಧಮಾನ ಹಂತದಲ್ಲಿದ್ದ ಉತ್ತಮ್‍ ಕುಮಾರ್ ಅಭಿನಯದಲ್ಲಿ ‘ರಾತ್ ಬೋರ್’ ಎಂಬ ಚಿತ್ರವನ್ನು ಮೃಣಾಲ್ ಸೇನರು ನಿರ್ಮಿಸಿದರು.  ಆ ಚಿತ್ರ ಸೋಲುಂಡಿತು.  ಅವರ ಮುಂದಿನ ಚಿತ್ರ ‘ನೀಲ್ ಆಕಾಶೇರ್ ನೀಚೆ’ (ನೀಲಾಕಾಶದ ಕೆಳಗೆ) ಒಂದಿಷ್ಟು ಗೌರವ ಸಂಪಾದಿಸಿ ಕೊಟ್ಟರೆ, ಅವರ ಮೂರನೆಯ ಚಿತ್ರ ‘ಬೈಶೇಯ್ ಶ್ರವಣ್’  (ರಬೀಂದ್ರನಾಥ ಠಾಗೂರರು  ನಿಧನರಾದ ಘಳಿಗೆ) ಚಿತ್ರವು ಅವರಿಗೆ ಅಂತರರಾಷ್ಟ್ರೀಯ ಪ್ರಾಮುಖ್ಯತೆಯನ್ನು ತಂದುಕೊಟ್ಟಿತು.

ಮುಂದೆ ನಾಲ್ಕೈದು ಚಿತ್ರಗಳನ್ನು ನಿರ್ದೇಶಿಸಿದ ಮೃಣಾಲ್ ಸೇನರು ಭಾರತ ಸರ್ಕಾರದ ಚಲನಚಿತ್ರ ಅಭಿವೃದ್ಧಿ ನಿಗಮದ  ಸಣ್ಣ ಹೂಡಿಕೆಯೊಂದಿಗೆ ’ಭುವನ್ ಶೋಮೆ’ (ಶೋಮೆ ಎಂಬಾತನ ಕಥೆ) ಎಂಬ ಚಿತ್ರವನ್ನು ನಿರ್ದೇಶಿಸಿದಾಗ ಆ ಚಿತ್ರ ಮೃಣಾಲ್ ಸೇನರನ್ನು ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದ ಮಹಾನ್ ನಿರ್ದೇಶಕರ ಸಾಲಿಗೆ ಸೇರಿಸಿತು.  1969ರಲ್ಲಿ ಮೂಡಿಬಂದ ‘ಭುವನ್ ಶೋಮೆ’ ಭಾರತದಲ್ಲಿ ‘ನವೀನ ಚಲನಚಿತ್ರ’ ಪರಂಪರೆಯನ್ನೇ ಹುಟ್ಟುಹಾಕಿತು.

ಮೃಣಾಲ್ ಸೇನರ ಮುಂದಿನ ಹಲವಾರು ಚಿತ್ರಗಳು ರಾಜಕೀಯ ವಿಚಾರಗಳಿಂದ ಕೂಡಿದ್ದರಿಂದ ಅವರು ಮಾರ್ಕಿಸ್ಟ್ ಕಲಾವಿದರೆಂದೇ ಹೆಸರಾಗಿದ್ದರು.  ದೇಶದಲ್ಲಿ ಅದರಲ್ಲೂ ಕಲ್ಕತ್ತೆಯ ಸುತ್ತಮುತ್ತಲಿನಲ್ಲಿ  ರಾಜಕೀಯ ಅನಿಶ್ಚಿತತೆ ತುಂಬಿದ್ದ ಆ ದಿನಗಳಲ್ಲಿ, ನಕ್ಸಲೀಯ ಚಳುವಳಿ ಮುಂಚೂಣಿಯಲ್ಲಿತ್ತು.  ಈ ಸಂದರ್ಭದಲ್ಲಿ ಮೃಣಾಲ್ ಸೇನರ ಚಿತ್ರಗಳು ಮಧ್ಯಮ ವರ್ಗದ ಬದುಕಿನ ತಲ್ಲಣಗಳತ್ತ ಗಮನ ಹರಿಸತೊಡಗಿದವು.  ಇದು ಮೃಣಾಲ್ ಸೇನರ ಬದುಕಿನಲ್ಲಿ ಅತ್ಯಂತ ಸೃಜನಶೀಲ ದಿನಗಳಾಗಿದ್ದವು.

ಮೃಣಾಲ್ ಸೇನರ ಬಹುತೇಕ ಚಿತ್ರಗಳಲ್ಲಿ ಕಲ್ಕತ್ತಾ ನಗರವು ಪ್ರಮುಖವಾಗಿ ಅಭಿವ್ಯಕ್ತಗೊಂಡಿದೆ.  ಅವರ ಚಿತ್ರಗಳಲ್ಲಿ ಕಲ್ಕಾತ್ತಾ ನಗರವೇ ಒಂದು ಪಾತ್ರವಾಗಿಯೂ, ಪ್ರೇರಕವಾಗಿಯೂ ಕಾರ್ಯನಿರ್ವಹಿಸಿದೆ.  ಜನ ಸಮುದಾಯ, ಸಾಮಾಜಿಕ ಮೌಲ್ಯಗಳು, ವರ್ಗಭೇದಗಳು, ಮತ್ತು ನಗರದ ರಸ್ತೆಗಳು ಇವೆಲ್ಲವನ್ನೂ ಮೃಣಾಲ್ ಸೇನರು ಅತ್ಯಂತ ಸುಂದರವಾಗಿ ಪೋಣಿಸಿದ್ದಾರೆ ಎಂಬುದು ಚಲನಚಿತ್ರ ವಿದ್ವಾಂಸರ ಅಭಿಪ್ರಾಯವಾಗಿದೆ.  

ವಿಶ್ವದ ಹಲವಾರು ತತ್ವ ಸಿದ್ಧಾಂತಗಳ ವಿಶಿಷ್ಟ ಪೋಣಿಕೆ ಮೃಣಾಲ್ ಸೇನರ ಚಿತ್ರಗಳಲ್ಲಿ ಮೂಡಿಬಂದಿವೆ.  ಹೀಗಾಗಿ ಅವರ ಚಿತ್ರಗಳು ಉಡಿ ಅಲೆನ್ ಅವರ ಚಿತ್ರಗಳ ಸಮಾನಾಂತರ ಸಿನಿಮಾಗಳಿಗೆ ಸಮೀಪದ್ದಾಗಿವೆ ಎಂಬ ಅಭಿಪ್ರಾಯ ಸಿನಿಮಾ ವಿದ್ವಾಂಸರಲ್ಲಿವೆ.  ಮೃಣಾಲ್ ಸೇನರ ಚಿತ್ರಗಳು ಅವರ ಸಮಕಾಲೀನರಾದ ಸತ್ಯಜಿತ್ ರೇ ಅವರ ಚಿತ್ರಗಳಿಗಿಂತ ಬಹಳಷ್ಟು ಭಿನ್ನವಾಗಿವೆ.  ಮೃಣಾಲ್ ಸೇನರ ಚಿತ್ರಗಳು ಸುಖಾಂತ್ಯವೇನನ್ನೂ ಸೂಚಿಸುವುದಿಲ್ಲ.  ಅವರ ಬಹಳಷ್ಟು ಚಿತ್ರಗಳು ವಿವಿಧ ಸಾಧ್ಯತೆಗಳನ್ನು ತೆರೆದಿಡುವಂತದ್ದಾಗಿದ್ದು, ಪ್ರೇಕ್ಷಕನನ್ನೇ ಚಿತ್ರದ  ನಿರ್ಣಾಯಕ ಓಟದಲ್ಲಿ ಭಾಗಿಯನ್ನಾಗಿಸುವ ಜಾಣ್ಮೆಯನ್ನು ಕಟ್ಟಿಕೊಡುತ್ತವೆ.  ಒಂದು ಸೀಮಿತ ಮಾರುಕಟ್ಟೆಯಲ್ಲಿ ಕೂಡಾ ಇಂಥಹ ಪ್ರಯೋಗಶೀಲತೆಯನ್ನು ಮೆರೆದ ಮೃಣಾಲ್ ಸೇನರ ಧೈರ್ಯ ಮತ್ತು ಸೃಜನಶೀಲತೆ ಮೆಚ್ಚುವಂತದ್ದೆನಿಸಿದೆ.

1982ರ ವರ್ಷದಲ್ಲಿ ಮೃಣಾಲ್ ಸೇನರು ಬರ್ಲಿನ್ ಚಲನಚಿತ್ರೋತ್ಸವದ ತೀರ್ಪುಗಾರರ ಜ್ಯೂರಿಗೆ ಆಹ್ವಾನಿತರಾದ ಗೌರವ ಪಡೆದಿದ್ದರು.  ನಿರಂತರವಾಗಿ ಕಾರ್ಯಶೀಲರಾದ ಮೃಣಾಲ್ ಸೇನರು 2002ರ ವರ್ಷದಲ್ಲಿ ತಮ್ಮ ಎಂಭತ್ತನೆಯ ವಯಸ್ಸಿನಲ್ಲಿ ಕೂಡಾ ‘ಆಮಾರ್ ಭುವನ್’ ಎಂಬುವ ಚಿತ್ರವನ್ನು ನಿರ್ದೇಶಿಸಿದರು.

ಮೃಣಾಲ್ ಸೇನರ ಚಿತ್ರಗಳು ಕೇನ್ಸ್, ಬರ್ಲಿನ್, ವೆನಿಸ್, ಮಾಸ್ಕೋ, ಕರ್ಲೋವಿ ವೇರಿ, ಮಾಂಟ್ರಿಯಲ್, ಚಿಕಾಗೋ ಮತ್ತು ಕೈರೋ ಹೀಗೆ ಬಹುತೇಕ ಅಂತರರಾಷ್ಟ್ರೀಯ ಮಟ್ಟದ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೌರವಗಳನ್ನು ಗಳಿಸಿವೆ.  ಅವರ ಚಲನಚಿತ್ರಗಳನ್ನು ವಿಶ್ವದ ಬಹುತೇಕ ಪ್ರಸಿದ್ಧ ನಗರಗಳಲ್ಲಿ ಪ್ರದರ್ಶಿಸಲಾಗಿದೆ.  ಬಹಳಷ್ಟು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳು ಅವರನ್ನು ಡಾಕ್ಟರೇಟ್ ಅಥವಾ ಅದಕ್ಕೆ ಸಮಾನವಾದ  ಗೌರವಗಳನ್ನು ನೀಡಿ ಸಂಮ್ಮಾನಿಸಿವೆ.  ಮೃಣಾಲ್ ಸೇನರನ್ನು International Federation of the Film Societies ಸಂಘಟನಯ ಅಧ್ಯಕ್ಷರನ್ನಾಗಿ ಸಹಾ ಆಯ್ಕೆ ಮಾಡಲಾಯಿತು.  ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆಗಾಗಿ Taj Enlighten Tareef ಗೌರವ ಮತ್ತು ಓಶಿಯನ್ ಸಿನೆ ಫೆಸ್ಟ್ ಚಲನಚಿತ್ರೋತ್ಸವದ ಗೌರವಗಳು ಸಂದವು.  

ರಾಷ್ಟ್ರಮಟ್ಟದಲ್ಲಿ ಮೃಣಾಲ್ ಸೇನರಿಗೆ ಭುವನ್ ಶೋಮೆ, ಏಕ್ ದಿನ್ ಪ್ರತಿದಿನ್, ಅಕಾಲೆರ್ ಸಂಧಾನೆ, ಖಂಡಹಾರ್ ಮುಂತಾದ ಚಿತ್ರಗಳಿಗೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯೂ, ಪದಾತಿಕ್, ಅಕಾಲೆರ್ ಸಂಧಾನೆ, ಖಾರ್ಜಿ ಚಿತ್ರಗಳಿಗಾಗಿ ಶ್ರೇಷ್ಠ ಚಿತ್ರಕಥಾ ಪ್ರಶಸ್ತಿಗಳೂ ಸಂದವು.  ಅಂತರರಾಷ್ಟ್ರೀಯ ಪ್ರಶಸ್ತಿಗಳೂ, ಫಿಲಂಫೇರ್ ಅಂತಹ ಸಂಘ ಸಂಸ್ಥೆಗಳ ಪ್ರಶಸ್ತಿಗಳೂ ಹೇರಳವಾಗಿ ಸಂದವು.  ಭಾರತ ಸರ್ಕಾರದ ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಫ್ರಾನ್ಸಿನ Ordre des Arts et des Lettres ಮುಂತಾದ ಉನ್ನತ ಗೌರವಗಳೂ ಸಂದವು.  

ಇಂಥಹ ಶ್ರೇಷ್ಠ ಸಾಧಕನಿಗೆ ಪ್ರತೀಕ್ಷಣವೂ ಹುಟ್ಟು ಪಡೆದಂತಹ ರೋಚಕತೆ ಜೊತೆ ಜೊತೆಗೇ ಸಾಗಿರುತ್ತದೆ.  ಹಾಗಾಗಿ,  ಅವರ ಆತ್ಮಚರಿತ್ರೆಯ ಹೆಸರು ‘Always Being Born’. 

ಮೃಣಾಲ್ ಸೇನ್ ಅವರು 2018ರ ಡಿಸೆಂಬರ್ 30 ರಂದು ಈ ಲೋಕವನ್ನಗಲಿದರು.

On the birth anniversary of Mrinal Sen

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ