ಟಿ. ಎನ್. ನಾಗರತ್ನ
ಟಿ. ಎನ್. ನಾಗರತ್ನ
ಡಾ. ಟಿ. ಎನ್. ನಾಗರತ್ನ ಹರಿದಾಸ ಸಾಹಿತ್ಯದ ಸಂಪಾದನೆ ಮತ್ತು ಸಂಶೋಧನೆಯಲ್ಲಿ ಮಹತ್ವದ ಕೆಲಸ ಮಾಡುತ್ತ ಬಂದಿದ್ದಾರೆ.
ನಾಗರತ್ನ ಮಧ್ಯಪ್ರದೇಶದ ಸಿಯೋನಿ ಎಂಬಲ್ಲಿ 1945ರ ಮೇ 29ರಂದು ಜನಿಸಿದರು. ತಂದೆ ಟಿ. ನಾಗಶರ್ಮ. ತಾಯಿ ಹೊನ್ನುಡಿಕೆ ರಾಜಲಕ್ಷ್ಮಿ. ಇವರು ಪ್ರಾರಂಭಿಕ ಹಂತದಿಂದ ಬಿ.ಎ. ಪದವಿಯವರೆಗೂ ಶಿವಮೊಗ್ಗದಲ್ಲಿ ಓದಿದರು. 1965ರಲ್ಲಿ ಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಡನೆ ಬಿ.ಎ. ಪದವಿ ಪಡೆದು, ಮುಂದೆ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಡನೆ ಎಂ.ಎ. ಪದವಿಯನ್ನು ಪಡೆದರು.
ನಾಗರತ್ನ ಅವರು 1970ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕಿಯಾಗಿ ವೃತ್ತಿ ಜೀವನ ಪ್ರಾರಂಭ ಮಾಡಿದರು. ಡಾ. ಜಿ. ವರದರಾಜರಾಯರ ಮಾರ್ಗದರ್ಶನದಲ್ಲಿ ‘ಹರಿದಾಸರ ಭಕ್ತಿ ಸ್ವರೂಪ’ ಪ್ರೌಢ ಪ್ರಬಂಧ ಮಂಡಿಸಿ ಪಿಎಚ್.ಡಿ. ಗಳಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಡಾಕ್ಟರೇಟ್ ಪಡೆದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿ, ಹರಿದಾಸ ಸಾಹಿತ್ಯ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ 2003ರಲ್ಲಿ ನಿವೃತ್ತರಾದರು.
ನಾಗರತ್ನ ಅವರು ಮುಂದೆ ಹರಿದಾಸ ಸಾಹಿತ್ಯದ ಕುರಿತು ತಲ್ಲೀನರಾಗಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನಕದಾಸರ ಕೃತಿಗಳ ಸಂಪಾದನಾ ಕಾರ್ಯದಲ್ಲಿ ನಿರತರಾದರು. ಹರಿದಾಸರ ಕೀರ್ತನೆಗಳಲ್ಲಿ, ಹರಿದಾಸ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಲು ಮೂಲ ಪ್ರೇರಣೆ ಇವರ ತಾಯಿ. ಮನೆಯಲ್ಲಿ ಆಗಾಗ್ಗೆ ತಾಯಿ ಹಾಡುತ್ತಿದ್ದ ದೇವರ ನಾಮಗಳು, ಸಂಗೀತದಲ್ಲಿ ವಿದ್ವತ್ ಪರೀಕ್ಷೆ ಪಾಸುಮಾಡಿದ್ದ ಚಿಕ್ಕಮ್ಮ, ಜೊತೆಗೆ ಅಜ್ಜ ಟಿ. ಶಾಮರಾಯರು ಸಂಗ್ರಹಿಸಿದ್ದ ಸುಬೋಧರಾಮರಾಯರ ದಾಸರ ಕೀರ್ತನೆಯ ಪುಸ್ತಕಗಳನ್ನು ಆಗಾಗ್ಗೆ ಓದುತ್ತಿದ್ದುದು, ಹೀಗೆ ಎಲ್ಲವೂ ಸೇರಿ ಮನೆಯವರ ಪ್ರೋತ್ಸಾಹದಿಂದ ಸಂಗೀತ ಕಲಿತು, ಸೀನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ದಾಸರ ಪದಗಳನ್ನು ಸಂಗೀತ ಕಚೇರಿಯಲ್ಲಿ ಹಾಡುವ ಪರಿಪಾಠ ಇವರಲ್ಲಿ ಬೆಳೆಯಿತು.
ಡಾ. ನಾಗರತ್ನ ಅವರು, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದ ದೇ. ಜವರೆಗೌಡರ ಅಪೇಕ್ಷೆಯಂತೆ ಅದೇ ತಾನೇ ಪ್ರಾರಂಭವಾಗಿದ್ದ ಹರಿದಾಸರ ಕೀರ್ತನೆಗಳ ಶಾಸ್ತ್ರೀಯ ಸಂಪಾದನೆಯ ಯೋಜನೆಯಲ್ಲಿ ಕಾರ್ಯನಿರತರಾಗಿ ಅಧ್ಯಯನ, ಬೋಧನೆ, ಮಾರ್ಗದರ್ಶನ, ಸಂಪಾದನೆ, ಪ್ರಕಟಣೆ ಹಾಗೂ ಮೇಲ್ವೀಚಾರಣೆ ಮುಂತಾದ ಜವಾಬ್ದಾರಿಯುತ ಕಾರ್ಯಗಳನ್ನು ನಿರ್ವಹಿಸಿದರು. ಇದರ ಜೊತೆಗೆ ಜಿ.ಎಸ್.ಎಸ್. ವಿದ್ಯಾಸಂಸ್ಥೆಯ ಕಾಲೇಜಿನಲ್ಲಿ (ಚಾಮರಾಜನಗರ) ಸ್ನಾತಕೋತ್ತರ ಪದವಿ ತರಗತಿಗಳಿಗೆ (ಎಂ.ಎ) ಗೌರವ ಪ್ರಾಧ್ಯಾಪಕಿಯಾಗಿ, ಬೆಂಗಳೂರು ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯಗಳ ಪಿಎಚ್.ಡಿ. ಪದವಿಗಳಿಗೆ ಪ್ರೌಢಪ್ರಬಂಧಗಳ ಮೌಲ್ಯಮಾಪಕರಾಗಿ, ಕರ್ನಾಟಕ ಸರಕಾರದ ಸಮಗ್ರ ದಾಸ ಸಾಹಿತ್ಯ ಪ್ರಕಟಣೆ ಯೋಜನೆಯ (50 ಸಂಪುಟಗಳ) ಸಂಪಾದಕ ಮಂಡಲಿಯಲ್ಲಿ ಕಾಯನಿರ್ವಾಹಕ ಸಂಪಾದಕರಾಗಿ ದುಡಿದಿರುವುದಲ್ಲದೆ, ಕನಕದಾಸ ಅಧ್ಯಯನ ಕೇಂದ್ರದ ಸದಸ್ಯೆಯಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪುರಂದರ ಪೀಠದ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ನಾಗರತ್ನ ಅವರು ಸಂಪಾದಿಸಿ ಪ್ರಕಟಿಸಿರುವ ಕೃತಿಗಳೆಂದರೆ ಶ್ರೀ ಗೋಪಾಲದಾಸರ ಕೃತಿಗಳು, ಶ್ರೀ ವಾದಿರಾಜರ ಕೃತಿಗಳು, ಶ್ರೀವಾದಿರಾಜರ ದೀರ್ಘಕೃತಿಗಳು, ಶ್ರೀ ಜಗನ್ನಾಥ ದಾಸರ ಕೃತಿಗಳು, ಶ್ರೀ ವ್ಯಾಸರಾಯರ ಕೃತಿಗಳು, ಹರಪನಹಳ್ಳಿ ಭೀಮವ್ವನವರ ಹಾಡುಗಳು, ಶ್ರೀ ರಾಮದಾಸರ ಕೃತಿಗಳು, ದಾಸ ಸಾಹಿತ್ಯ ವೈಭವ, ದಾಸ ಸಾಹಿತ್ಯದ ಪ್ರಸ್ತುತತೆ, ಹರಿದಾಸ ಸಾಹಿತ್ಯ ಉಗಮ - ವಿಕಾಸ - ಸಾಧನೆ-ಸಿದ್ಧಿ, ಕನ್ನಡ ಕೀರ್ತನೆ: ಸಾಹಿತ್ಯ-ಸಂಗೀತ, ಶ್ರೀ ವಾದಿರಾಜರ ಕೃತಿಗಳು, ಕನಕದಾಸರು, ಕೀರ್ತನಕಾರರು, ಹರಿದಾಸ ವಾಙ್ಮಯ, ಹರಿದಾಸರ ಸೂಕ್ತಿಗಳು, ಹರಿದಾಸ ಸಾಹಿತ್ಯ ದರ್ಪಣ, ಸಿರಿಗಂಗಾಜನಕ ಕೀರ್ತನ ಕುಸುಮಾಂಜಲಿಯಲ್ಲದೆ ಇವರ ಪ್ರೌಢ ಪ್ರಬಂಧ ಹರಿದಾಸರ ಭಕ್ತಿಸ್ವರೂಪವೂ ಸೇರಿ ಮೂವತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಇದಲ್ಲದೆ ನೂರಾರು ಲೇಖನಗಳನ್ನು ಪ್ರಕಟಿಸಿ, ಭಾಷಣಗಳು, ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ, ಉಪನ್ಯಾಸ, ಚರ್ಚೆ, ಗೋಷ್ಠಿಗಳ ಅಧ್ಯಕ್ಷತೆ, ಆಕಾಶವಾಣಿ-ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಹರಿದಾಸ ಸಾಹಿತ್ಯದ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿದ್ದಾರೆ.
ಡಾ. ಟಿ. ಎನ್. ನಾಗರತ್ನ ಅವರ ಹರಿದಾಸ ಸಾಹಿತ್ಯದ ಬಹುಮುಖ ಕೊಡುಗೆಗೆ ಶ್ರೀ ವಾದಿರಾಜರ ಕೃತಿಗಳು ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಆಕಾಡಮಿಯ ಉತ್ತಮ ಸಂಪಾದನ ಕೃತಿ ಬಹುಮಾನ (1980), ಹಲವಾರು ವಿಶ್ವವಿದ್ಯಾಲಯಗಳ ಅಧ್ಯಯನ ಪೀಠಗಳು, ಧಾರ್ಮಿಕ ಸಂಸ್ಥೆಗಳು, ಹರಿದಾಸ ತತ್ತ್ವಜ್ಞಾನ ಸಮ್ಮೇಳನಗಳು, ಹರಿದಾಸರ ಸಂಸ್ಮರಣೋತ್ಸವಗಳು ಮುಂತಾದವುಗಳಲ್ಲಿ ಇವರಿಗೆ ಸನ್ಮಾನ ಗೌರವಗಳು ಸಂದಿವೆ. ಕರ್ನಾಟಕ ಸರಕಾರದ 2009ನೇ ಸಾಲಿನ ಪ್ರತಿಷ್ಠಿತ ‘ಕನಕಶ್ರೀ ಪ್ರಶಸ್ತಿ’ಯ ಗೌರವಕ್ಕೂ ಇವರು ಪಾತ್ರರಾಗಿದ್ದಾರೆ.
ಹರಿದಾಸ ಸಾಹಿತ್ಯಕ್ಕೆ ಮಹಾನ್ ಕೊಡುಗೆ ನೀಡಿರುವ ಹಿರಿಯರಾದ ಡಾ. ಟಿ. ಎನ್. ನಾಗರತ್ನ ಅವರಿಗೆ ಜನ್ಮದಿನದ ಹೃತ್ಪೂರ್ವಕ ಗೌರವಗಳು.
On the birthday of great contributor in Haridasa Literature Dr. T. N. Nagaratna
ಕಾಮೆಂಟ್‌ಗಳು