ಮುರಳೀಧರ ಉಪಾಧ್ಯ
ಮುರಳೀಧರ ಉಪಾಧ್ಯ ಹಿರಿಯಡಕ
ಮುರಳೀಧರ ಉಪಾಧ್ಯ ಹಿರಿಯಡಕ ಅವರು ವೃತ್ತಿಯಿಂದ ಪ್ರಾಧ್ಯಾಪಕರಾಗಿ, ಬರಹಗಾರರಾಗಿ ಮತ್ತು ಸಾಂಸ್ಕೃತಿಕ ಚಿಂತಕರಾಗಿ ಹೆಸರಾಗಿದ್ದಾರೆ.
ಮುರಳೀಧರ ಉಪಾಧ್ಯ ಹಿರಿಯಡಕ 1950ರ ಮೇ 29ರಂದು ಮೈಸೂರು ಜಿಲ್ಲೆಯ ಕೊಳ್ಳೇಗಾಲದಲ್ಲಿ ಜನಿಸಿದರು. ಅವರು ಎಂ. ಎ. ಕನ್ನಡ ಹಾಗೂ ಹಿಂದಿ ರತ್ನ ಪದವಿ ಗಳಿಸಿದರು.
ಮುರಳೀಧರ ಉಪಾಧ್ಯ ಹಿರಿಯಡಕ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಆಡಳಿತ ಮಂಡಳಿ ಸದಸ್ಯರಾಗಿ, ಉಡುಪಿಯ 'ರಥಬೀದಿ ಗೆಳೆಯರು ಸಾಂಸ್ಕೃತಿಕ ಸಂಘಟನೆ’ಯ ಅಧ್ಯಕ್ಷರಾಗಿ, ಕರ್ನಾಟಕ ಸರಕಾರದ ಗೆಜೆಟಿಯರ್ ಸಲಹಾ ಸಮಿತಿಯ ಸದಸ್ಯರಾಗಿ, ಹೀಗೆ ಅನೇಕ ರೀತಿಯಲ್ಲಿ ಕೆಲಸ ಮಾಡಿದ್ದಾರೆ.
ಸಾಹಿತ್ಯದಲ್ಲಿ ಅಪಾರ ಆಸಕ್ತಿಯ ಜೊತೆ ಜೊತೆಗೆ ಮಹತ್ವದ ಸಾಧನೆ ಮಾಡಿರುವ ಉಪಾಧ್ಯರು ರಚಿಸಿರುವ ಕೃತಿಗಳಲ್ಲಿ ಪೇಜಾವರ ಸದಾಶಿವ ರಾಯರು (1972), ಎಂ. ಎನ್. ಕಾಮತ್ (1975), ಕಯ್ಯಾರ ಕಿಞ್ಞಣ್ಣ ರೈ (1989), ಎಸ್. ಯು. ಪಣಿಯಾಡಿ (1997), ಡಾ. ಬಿ. ಚಂದಯ್ಯ ಹೆಗಡೆ (1997 ), ಡಾ. ಯು. ಆರ್. ಅನಂತಮೂರ್ತಿ (2002), ಹಾಜಿ ಅಬ್ದುಲ್ಲಾ ಸಾಹೇಬ್ (2006), ಪುಸ್ತಕ ಪ್ರತಿಷ್ಠೆ (2009) ಮುಂತಾದವು ಸೇರಿವೆ. ಮುರಳೀಧರ ಉಪಾಧ್ಯ ಹಿರಿಯಡಕ ಅವರ ಸಂಪಾದನೆಗಳಲ್ಲಿ ಗೋವಿಂದ ಪೈ ಸಂಶೋಧನ ಸಂಪುಟ (1995), ಕೊಂಕಣಿ ಭಾಷೆ - ಸಾಹಿತ್ಯ (1995), ಬಿ. ವಿ. ಕಾರಂತ (1996), ದಕ್ಷಿಣ ಕನ್ನಡ ಕಾವ್ಯ 1901 - 1996 (1997 - ಸುಬ್ರಾಯ ಚೊಕ್ಕಾಡಿ ಅವರೊಂದಿಗೆ), ದಕ್ಷಿಣ ಕನ್ನಡದ ದೇವಾಲಯಗಳು (2000), ಯು. ಆರ್. ಅನಂತ ಮೂರ್ತಿ (2000), ಹಾಜಿ ಅಬ್ದುಲ್ಲಾ ಸಾಹೇಬರು (2001 - ಎಚ್. ಡುಂಡಿರಾಜರೊಂದಿಗೆ), ವಿಭುದೇಶ ತೀರ್ಥರು (2010), ಉಡುಪಿ ಜಿಲ್ಲಾ ಸಾಂಸ್ಕೃತಿಕ ಸಾತತ್ಯ (2010), ಬನ್ನಂಜೆ ರಾಮಾಚಾರ್ಯರ ಸಂಪಾದಕೀಯ ಸಂಪುಟ (ಭಾಗ - 1 - 2010), ಪಾದೂರು ಗುರುರಾಜ ಭಟ್ (2012), ವೈದೇಹಿ (ಜೀವನ , ಕೃತಿಗಳ ಸಮೂಹ ಶೋಧ-2018) ಮುಂತಾದವು ಸೇರಿವೆ.
ಮುರಳೀಧರ ಉಪಾಧ್ಯರು ಉದಯವಾಣಿಯಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದಂತೆ ‘ಪುಸ್ತಕ ಪ್ರೀತಿ’ ಎಂಬ ಅಂಕಣವನ್ನು ಬರೆಯುತ್ತಿದ್ದರು. ಅವರು ಸಾಹಿತ್ಯ ಕ್ಷೇತ್ರದ ಮಹತ್ವದ ಬ್ಲಾಗಿಗರೂ ಆಗಿದ್ದಾರೆ. ಅವರ 'ಸಖೀಗೀತ' ಕನ್ನಡ ಸಾಹಿತ್ಯಲೋಕದ ವೈವಿಧ್ಯತೆಗಳ ಆಪ್ತ ಸಖೀಗೀತದಂತೆಯೇ ಇದೆ.
ಮುರಳೀಧರ ಉಪಾಧ್ಯ ಹಿರಿಯಡಕ ಅವರ ಸೇವೆಗೆ ವಿ. ಎಂ. ಇನಾಂದಾರ್ ಪ್ರಶಸ್ತಿ, ಎಂ. ಗೋಪಾಲಕೃಷ್ಣ ಅಡಿಗ ಜನ್ಮ ಶತಾಬ್ಧಿ ಪ್ರಶಸ್ತಿ, ಕಾಂತಾವರ ಕನ್ನಡ ಸಂಘ ಪುರಸ್ಕಾರ, ಶ್ರೀ ರಾಮ ವಿಠಲ ಪ್ರಶಸ್ತಿ, ಶ್ರೀ ಕೃಷ್ಣ ಮುಖ್ಯಪ್ರಾಣ ಪ್ರಶಸ್ತಿ, ಜ್ಞಾನದೇಗುಲ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
ಹಿರಿಯರಾದ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.
On the birthday of scholar and writer Prof. Muraleedhara Upadhya Hiriyadaka
ಕಾಮೆಂಟ್‌ಗಳು