ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೃದಯ ಸೌಂದರ್ಯ

 


ಹೃದಯ ಸೌಂದರ್ಯ: ಒಂದು ಮಧುರ ಸ್ಮೃತಿ

-ಡಿ. ವಿ. ಜಿ.

ಬಹುಶಃ 1920-21 ಇರಬಹುದು.  ಬೆಂಗಳೂರು ಹೊಸ ತರಗುಪೇಟೆ ಪೂರ್ವದಿಕ್ಕಿನ ಮಂಡಿ ಅಂಗಡಿ ಸಾಲು: ವಿಕ್ಟೋರಿಯ ಆಸ್ಪತ್ರೆಯ ಪಶ್ಚಿಮ ಕಾಂಪೌಂಡ್ ಗೋಡೆಯ ಎದುರಾಗಿ ಮುಖ್ಯ ಅಂಗಡಿಗಳ ಪೈಕಿ ಮೂರನೆಯದೋ ನಾಲ್ಕನೆಯದೋ ದಿವಂಗತ ಧರ್ಮಪ್ರವರ್ತಕ ಡಿ. ಅಪ್ಪೂರಾಯರ ಮಕ್ಕಳು ಡಿ. ಶ್ರೀನಿವಾಸರಾಯರಿಗೆ ಸೇರಿದ್ದು.  ಆ ಕಟ್ಟಡದಲ್ಲಿ ಇದ್ದದ್ದು ನವರತ್ನ ಅಂಡ್ ಕಂಪೆನಿ ಮುದ್ರಣಾಲಯ.  ಅಲ್ಲಿ ಆಗ ನಾನು ನಡೆಸುತ್ತಿದ್ದ ‘ದಿ ಕರ್ಣಾಟಕ’ ಎಂಬ ಇಂಗ್ಲಿಷ್ ಪತ್ರಿಕೆ ಅಚ್ಚಾಗುತ್ತಿತ್ತು.  


ಪ್ರೆಸ್ಸಿನ ಪಕ್ಕದ ಮಂಡಿಯ ಹಿಂದುಗಡೆಯ ವೆರಾಂಡದಲ್ಲಿ ಆ ಮಂಡಿಗೆ ಸೇರಿದ ಒಬ್ಬ ಮುದುಕ, ಒಬ್ಬ ಮುದುಕಿ ವಾಸಮಾಡುತ್ತಿದ್ದರು.  ಆ ಮುದುಕಿ ಆ ಮಂಡಿಯಲ್ಲಿ ಕಸಗುಡಿಸುವವಳು.  ಆ ಮುದುಕ ತುಂಬ ವಯಸ್ಸಾಗಿದ್ದದ್ದರಿಂದಲೋ ಏನೋ, ಯಾವಾಗಲೂ ಮಲಗಿರುತ್ತಿದ್ದ.  ಆ ಹೆಂಗಸು ತಾನು ಬೆಳಗ್ಗೆ ಕೆಲಸ ಮಾಡುವಾಗ ಸಿಕ್ಕಿದ ಕೊಂಚ ಕೊಳೆತ ಈರುಳ್ಳಿ, ಹುಳಿತ ಆಲೂಗೆಡ್ಡೆ, ಕರಟು ಬದನೆಕಾಯಿ ಇವುಗಳನ್ನು ಸಂಗ್ರಹ ಮಾಡುತ್ತಿದ್ದಳು.  


ಮಧ್ಯಾಹ್ನ ಆಕೆ ಆ ಈರುಳ್ಳಿ ಅಲೂಗೆಡ್ಡೆಗಳ ಕೊಳಕು ಹುಳುಕಲು ಭಾಗಗಳನ್ನೆಲ್ಲಾ ತೆಗೆದುಹಾಕಿ ಸರಿಯಾಗಿದ್ದ ಭಾಗಗಳನ್ನೆಲ್ಲ ಹಾಕಿ ಅಡಿಗೆ ಮಾಡುತ್ತಿದ್ದಳು.  ಪದಾರ್ಥಗಳು ಬೇಯುತ್ತ ಬೇಯುತ್ತ ಘಮಲೆದ್ದು ಬೀದಿಯೆಲ್ಲ ವ್ಯಾಪಿಸುವುದು.  ನನ್ನ ಮೂಗಿಗೂ ತಗಲುವುದು.


ದಿನಚರಿ:


ಇದಾದ ಮೇಲೆ ಸ್ನಾನ.  ಅವರಿಗೆ ಇದ್ದದ್ದು ಎರಡು ಮೂರು ಮಡಕೆಗಳು.  ಒಂದು ಹಿಟ್ಟು ಬೇಯಿಸುವುದಕ್ಕೆ.  ಇನ್ನೊಂದು ಅಂಬಲಿ ಕಾಯಿಸುವುದಕ್ಕೆ.  ಇನ್ನೊಂದು ಕುಡಿಯುವ ನೀರಿಟ್ಟುಕೊಳ್ಳುವುದಕ್ಕೆ.  ಒಂದು ದೊಡ್ಡ ಮಣ್ಣು ಗಡಿಗೆ ಬೇರೆ: ಸ್ನಾನಕ್ಕೆ ನೀರು ಕಾಯಿಸಿಕೊಳ್ಳುವುದಕ್ಕಾಗಿ.  ಆ ಹೆಂಗಸು ತಾನು ಸಂಪಾದಿಸಿದ ಕಸಕಡ್ಡಿಗಳನ್ನು ಉರಿಹಾಕಿ ಆ ದೊಡ್ಡಗಡಿಗೆ(ಕಡಾಯಿ)ಯೊಳಗೆ ನೀರು ಕಾಯಿಸುವಳು.  ಆ ಬಿಸಿನೀರನ್ನು ಗಂಡನಿಗೆ ಸ್ನಾನ ಮಾಡಿಸುವಳು, ಅದೂ ಸಾವಕಾಶವಾಗಿ.  ಆತನ ಮೈ ಹುಣ್ಣಾಗಿ ಕರಟುಕಟ್ಟಿದ್ದ ಕಡೆಯೆಲ್ಲಾ ಮೆತ್ತಗೆ ಕೈ ಸವರುತ್ತಾ, ಅವನ ನೋವೂ ಆಯಾಸವೂ ಪರಿಹಾರವಾಗುವಂತೆ ಬಿಸಿನೀರು ಹಾಕುವಳು.  ಅವನು ಆ ಸಂತೋಷದಲ್ಲಿ ನಗುಮುಖದಿಂದ ಸ್ನಾನ ಮಾಡಿಸಿಕೊಳ್ಳುವನು.  ‘ಹಾಯ್’ ಎಂದು ಮಧ್ಯೇ, ಮಧ್ಯೇ ಉದ್ಗಾರ ಮಾಡುವನು.  ಸ್ನಾನವಾದ ಬಳಿಕ ಅವನ ಕೊಳೆಯ ಬಟ್ಟೆಯಿಂದಲೇ ಮೈ ಒರಸಿಕೊಳ್ಳುವನು, ಒರಸಿಸಿಕೊಳ್ಳುವನು.  ಇದೆಲ್ಲ ಬಯಲಿನಲ್ಲಿ ಆದದ್ದರಿಂದ ನನ್ನ ಕಣ್ಣಿಗೆ ಕಾಣಿಸುತ್ತಿತ್ತು.


ಭೋಜನಾನಂದ:


ಬಳಿಕ ಒಂದು ಊಟದೆಲೆಯನ್ನು ಹಾಕಿ ಅದರ ನಡುವೆ ರಾಗಿ ಹಿಟ್ಟಿನ ಮುದ್ದೆಯನ್ನು ಇರಿಸುವಳು.  ತಂಬಿಗೆ ಗಾತ್ರದ ದೊಡ್ಡ ಮುದ್ದೆ.  ಅದರಲ್ಲಿಯೇ ಬಟ್ಟಲಿನಂತೆ ಕೈಯಿಂದ ಕೊರೆಯುವಳು – ಕಟ್ಟೆ ಕಟ್ಟಿದ ಕೊಳದಂತೆ.  ಅದರ ನಡುವೆ ತಾನು ಕಾಯಿಸಿದ್ದ ಅಂಬಲಿಯನ್ನು ಹಾಕುವಳು.  ಮುದುಕನು ಹಿಟ್ಟಿನ ಸ್ವಲ್ಪವನ್ನು ತೆಗೆದು ತುಂಡುಮಾಡಿ ಅಂಬಲಿಯಲ್ಲಿ ಅದ್ದಿ ಬಾಯಲ್ಲಿಟ್ಟುಕೊಂಡು ಚಪ್ಪರಿಸಿ ನುಂಗುವನು.  ನಗುವನು.  ಒಂದೊಂದು ಮಾತನಾಡುವನು.  ಆಕೆಯೂ ಮಾತನಾಡುವಳು.  ಈ ಊಟ ಅರ್ಧ ಘಂಟೆ ನಡೆಯುವುದು.  ಇದನ್ನು ಸಾಕ್ಷಿಯಂತೆ ನೋಡುವುದು ನನಗೊಂದು ಸಂತೋಷ.


ಸಂಜೆ ಸಂಜೆಯೂ ತಪ್ಪದೆ ನಾನು ಇದನ್ನು ಬಹು ಕುತೂಹಲದಿಂದ ನೋಡುತ್ತಿದ್ದೆ.  ಅದೊಂದು ಆನಂದಾನುಭವ.


ಆನಂದೋ ಬ್ರಹ್ಮೇತಿ ವ್ಯಜಾನಾತ್ |

ಆನಂದಾದ್ಧ್ಯೇವ ಖಲ್ವಿಮಾನಿ ಭೂತಾನಿ ಜಾಯನ್ತೇ |

ಆನಂದೇನ ಜಾತಾನಿ ಜೀವನ್ತಿ |

ಆನಂದಂ ಪ್ರಯಂತ್ಯಭಿಸಂವಿಶನ್ತಿ |

(‘ತೈತ್ತಿರೀಯೋಪನಿಷತ್ತು’)


ಆನಂದವೇ ಬ್ರಹ್ಮವೆಂದು ನೀನರಿಯೆಯೈ |

ಆನಂದದಿಂದ ಪುಟ್ಟಿಹುದೆಲ್ಲಮಲ್ತೇ |

ಆನಂದದಿಂ ಪುಟ್ಟಿದೆಲ್ಲಮುಂ ಬಾಳುಗುಂ |

ಆನಂದವನೆ ಕುರಿತು ಪೋಗುತಲಿ ಪುಗುಗುಂ ||


ಪ್ರೀತಿಯೇ ಸೌಂದರ್ಯ:


ಆನಂದಕ್ಕೆ ಕಾರಣವಾದದ್ದು ಇಲ್ಲಿ ಪ್ರೀತಿ.  ಅನ್ಯೋನ್ಯ ಪ್ರೀತಿ ಆ ಮುದುಕ ಮುದುಕಿಯರ ಬಡತನವನ್ನು ಮರೆಯಿಸಿತ್ತು.  ಅವರಿಗೆ ಆಗ ಲಾಟರಿಯಿಂದಲೋ ಬೇರೆಲ್ಲಿಂದಲೋ ಹಣ ಬಂದಿದ್ದರೆ ಅವರಿಗೆ ಆಗ – ಆ ವಯಸ್ಸಿನಲ್ಲಿ - ಏನು ತಾನೆ ಪ್ರಯೋಜನವಾಗುತ್ತಿತ್ತು?  ಹಣ ಪ್ರಯೋಜನಕ್ಕೆ ಬಾರದ ವಯಸ್ಸು ಅದು.  ಅದಕ್ಕಿಂತ ಹೆಚ್ಚಾಗಿ, ಪ್ರೀತಿ ಅವರ ಮುಪ್ಪನ್ನು ಮರೆಯಿಸಿ ಯೌವನವನ್ನು ತಂದುಕೊಟ್ಟಿತ್ತು.  ಇನ್ನೂ ಹೆಚ್ಚಾಗಿ, ಪ್ರೀತಿಯು ಅವರ ನೊಂದ ಬಡಕಲು ಕೊಳಕಲು ಮೈಗಳಲ್ಲಿ ಅವರ ಪಾಲಿಗೆ ಸೌಂದರ್ಯದರ್ಶನ ಮಾಡಿಸಿತು.  ಪ್ರೀತಿಯೇ ಸೌಂಧರ್ಯ; ಪ್ರೀತಿ ಸಾಲದೆಹೋದಲ್ಲಿ ಆಭರಣ ಅಲಂಕಾರ ಐಶ್ವರ್ಯಗಳು ಬರಿಯ ಭಾರ.  ಪ್ರೀತಿಯೇ ಸೌಂಧರ್ಯ;  ಪ್ರೀತಿಯೇ ಐಶ್ವರ್ಯ.  ಪ್ರೀತಿಯೆಂದರೆ ಹೃದಯವಿಕಾಸ.  


(ಡಿ.ವಿ.ಜಿ ಅವರ ‘ಹಕ್ಕಿಯ ಪಯಣ’ ಕೃತಿಯಿಂದ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ