ಅಶ್ವಿನಿ
ಅಶ್ವಿನಿ
ಅಶ್ವಿನಿ ಕನ್ನಡದ ಪ್ರಸಿದ್ಧ ಕಾದಂಬರಿಕಾರ್ತಿಯರಲ್ಲಿ ಒಬ್ಬರು. ಅವರ ಮೂಲ ಹೆಸರು ಎಂ. ವಿ. ಕನಕಮ್ಮ. ಅಶ್ವಿನಿ ಅವರ ಧಾರಾವಾಹಿಗಳು ವಾರಪತ್ರಿಕೆಗಳಲ್ಲಿ ಬರುತ್ತಿದ್ದ ಸಂದರ್ಭಗಳಲ್ಲಿ ನಾವುಗಳು ವಾರಪತ್ರಿಕೆ ಬರುವುದನ್ನೇ ಕಾಯುತ್ತಿದ್ದು ನಾ ಮುಂದು ತಾ ಮುಂದು ಎಂದು ಮನೆಗಳಲ್ಲಿ ಎಲ್ಲರೂ ಓದುತ್ತಿದ್ದೆವು. 'ಮೃಗತೃಷ್ಣ' ಕಾದಂಬರಿ ಧಾರಾವಾಹಿ ಬರುತ್ತಿದ್ದಾಗಲಂತೂ ಆ ಪಾತ್ರದಲ್ಲಿ ಅಭಿನಯಿಸಲು ವಿಷ್ಣುವರ್ಧನ್ ಅವರೇ ಸರಿ ಎಂದು ನಾವು ತೀರ್ಮಾನಿಸಿಬಿಟ್ಟಿದ್ದೆವು. ಅಚ್ಚರಿ ಎಂಬಂತೆ ಹಿರಿಯರಾದ ರಾಜ್‍ಕುಮಾರ್ ಅವರ ಅಭಿನಯದಲ್ಲಿ 'ಕಾಮನಬಿಲ್ಲು' ಎಂಬ ಹೆಸರಿನಲ್ಲಿ ಅದು ಯಶಸ್ವೀ ಚಿತ್ರವಾಯಿತು.
ಕನಕಮ್ಮನವರು ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಂಗಲಂ ಎಂಬ ಗ್ರಾಮದಲ್ಲಿ 1933ರ ನವಂಬರ್ 1ರಂದು ಜನಿಸಿದರು. ತಂದೆ ವೆಂಕಟರಾಘವಾಚಾರ್ಯ. ತಾಯಿ ಲಕ್ಷ್ಮಮ್ಮ. ಈ ದಂಪತಿಗಳಿಗೆ ಹುಟ್ಟಿದ ಎಂಟು ಮಕ್ಕಳಲ್ಲಿ ಕನಕಮ್ಮನವರು ಆರನೆಯವರು. ಅಣ್ಣ ಶ್ರೀನಿವಾಸಾಚಾರ್ಯರು ಪೊಲೀಸ್ ಇಲಾಖೆಯಲ್ಲಿ ಹಾಸನದಲ್ಲಿದ್ದುದರಿಂದ ವಿದ್ಯಾಭ್ಯಾಸಕ್ಕಾಗಿ ಎಲ್ಲರನ್ನೂ ಹಾಸನಕ್ಕೆ ಕರೆದೊಯ್ದರು. ಕನಕಮ್ಮನವರ ಪ್ರಾಥಮಿಕ ವಿದ್ಯಾಭ್ಯಾಸ ಹಾಸನದಲ್ಲಿ ಹಾಗೂ ಪ್ರೌಢಶಾಲೆಯಿಂದ ಇಂಟರ್‌ವರೆಗಿನ ಓದು ತುಮಕೂರಿನಲ್ಲಿ ನೆರವೇರಿತು. ಚಿಕ್ಕಂದಿನಿಂದಲೂ ಓದುವುದರಲ್ಲಿ, ಬರೆಯುವುದರಲ್ಲಿ ಆಸಕ್ತರಾಗಿದ್ದ ಕನಕಮ್ಮನವರು ರಾಮಾಯಣ, ಮಹಾಭಾರತ ಕಥೆಗಳನ್ನು ಮಿಡ್ಲ್ ಸ್ಕೂಲಿನಲ್ಲಿದ್ದಾಗಲೇ ಓದಿ ಮುಗಿಸಿದ್ದರು. ಇವರ ಓದಿನ ಆಸಕ್ತಿಯನ್ನು ಗಮನಿಸಿದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ರಾಮಯ್ಯನವರು ಹೆಚ್ಚಿನ ಪ್ರೋತ್ಸಾಹ ನೀಡಿದರು.
ಕನಕಮ್ಮನವರು ಮೈಸೂರಿನಲ್ಲಿ
ಸ್ಟಾಟಿಸ್ಟಿಕ್ಸ್‍ನಲ್ಲಿ ಬಿ.ಎ. ಆನರ್ಸ್ ಪದವಿಯಲ್ಲದೆ, ಎಂ.ಎಸ್ಸಿ. ಪರೀಕ್ಷೆಯಲ್ಲೂ ಮೊದಲ ದರ್ಜೆಯಲ್ಲೇ ತೇರ್ಗಡೆ ಹೊಂದಿದರು.
ಕನಕಮ್ಮನವರಿಗೆ ಬೆಂಗಳೂರಿನ ಅಕೌಂಟೆಂಟ್ ಜನರಲ್ ಅವರ ಕಚೇರಿಯಲ್ಲಿ ಉದ್ಯೋಗ ದೊರೆಯಿತು. ಮುಂದೆ ಸರಕಾರದಿಂದ ಕೃಷಿ ವಿಶ್ವವಿದ್ಯಾಲಯ ಪ್ರಾರಂಭವಾದಾಗ, ಕನಕಮ್ಮನವರು ವಿಶ್ವವಿದ್ಯಾಲಯದ ಆಡಳಿತ ಕಚೇರಿಯಲ್ಲಿ ಆಡಳಿತಾಧಿಕಾರಿಗಳಾಗಿ ಆಯ್ಕೆಯಾಗಿ, ಕೃಷಿ ವಿಶ್ವವಿದ್ಯಾಲಯದಲ್ಲೇ 26 ವರ್ಷಕಾಲ ದೀಘಸೇವೆ ಸಲ್ಲಿಸಿ 1993ರಲ್ಲಿ ನಿವೃತ್ತರಾದರು.
ಕನಕಮ್ಮನವರು ಅಕೌಂಟೆಂಟ್ ಜನರಲ್ ಅವರ ಕಚೇರಿಯಲ್ಲಿದ್ದಾಗಲೇ ಕಿರು ಪ್ರಹಸನಗಳನ್ನು ಆಕಾಶವಾಣಿಗಾಗಿ ಬರೆದು ಕೊಡತೊಡಗಿದ್ದರು. ಹೀಗೆ ಪ್ರಾರಂಭವಾದ ಇವರ ಸಾಹಿತ್ಯದ ಬರವಣಿಗೆ ಸಾಗುತ್ತಾ ಬಂದು ‘ನಿಲುಕದ ನಕ್ಷತ್ರ’ ಕಾದಂಬರಿ ರಚಿಸಿದರು. ಕಾದಂಬರಿ ಓದಿದ ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿದರಾದರೂ ಕಾದಂಬರಿಯನ್ನು ಪ್ರಕಟಿಸಲು ಪ್ರಕಾಶಕರು ದೊರಕಲಿಲ್ಲ.
ನಾಡಿಗೇರ ಕೃಷ್ಣರಾಯರು ಕನಕಮ್ಮನವರಿಗೆ ಚಿಕ್ಕ ಚಿಕ್ಕ ಲೇಖನಗಳನ್ನು ಪತ್ರಿಕೆಗೆ ಬರೆದು ಕಳುಹಿಸಲು ಸಲಹೆ ನೀಡಿದರು. ಇದರಂತೆ ‘ಕನಕಿಯ ಓಲೆಗಳು’ ಎಂಬ ಹೆಸರಿನಿಂದ ಬರೆದರಾದರೂ ಅವು ಕೂಡಾ ತಕ್ಷಣ ಪ್ರಕಟವಾಗಲಿಲ್ಲ. ಕನಕಮ್ಮನವರು 1965 ರಲ್ಲಿ ಪ್ರಾರಂಭವಾಗಿದ್ದ 'ಸುಧಾ' ವಾರಪತ್ರಿಕೆಗೆ ‘ಚೋಟುದ್ದ ಜಡೆ’ ಎಂಬ ಸಣ್ಣ ಕಥೆಯೊಂದನ್ನು ಬರೆದು ಕಳುಹಿಸಿದಾಗ ಅದು ಪ್ರಕಟಗೊಂಡಿತು. ಅಂದು ಸುಧಾ ಸಂಪಾದಕರಾಗಿದ್ದ ಎಂ.ಬಿ. ಸಿಂಗ್‌ರವರು ಕನಕಮ್ಮನವರಿಗೆ ‘ಅಶ್ವಿನಿ’ ಎಂಬ ಕಾವ್ಯನಾಮದಿಂದ ಬರೆಯಲು ಸೂಚಿಸಿದರು. ಇದು ಇವರ ಜನ್ಮನಕ್ಷತ್ರ ಕೂಡ. ನಂತರ ಬರೆದ ವೆಂಕಟೂವಿನ ಬುಗುರಿ, ತುಪ್ಪದ ದೀಪ,ನಾನೇಕೆ ಬೇಡವಾದೆ ಮುಂತಾದ ಇಪ್ಪತ್ತು ಕಥೆಗಳು ಸುಧಾ, ಮಯೂರ, ಪ್ರಜಾಮತ, ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಂಡವು.
ಅಶ್ವಿನಿ ಅವರು ಬರೆದ ಮೊದಲ ಕಾದಂಬರಿ ‘ನಿಲುಕದ ನಕ್ಷತ್ರ’ ವನ್ನು ಸಂಯುಕ್ತ ಕರ್ನಾಟಕ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣನವರು ಪ್ರಕಟಿಸಿ ಪ್ರೋತ್ಸಾಹಿಸಿದರು. ನಂತರ ಇವರು ಬರೆದ ಕಪ್ಪುಕೊಳ, ಬೆಸುಗೆ, ಮೃಗತೃಷ್ಣಾ, ಬಿಂದಿಯಾ, ಆಕರ್ಷಿತ, ಯೋಗಾಯೋಗ ಮುಂತಾದ ಇಪ್ಪತ್ತಕ್ಕೂ ಮಿಕ್ಕ ಕಾದಂಬರಿಗಳು ಸುಧಾ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡವು.
ಅಶ್ವಿನಿ ಅವರ ಮನೆಮಾತು ತಮಿಳು; ಓದಿದ್ದು ಕನ್ನಡ, ಇಂಗ್ಲಿಷ್; ಬಾಲ್ಯ ಕಳೆದದ್ದು ತೆಲುಗು ಭಾಷಿತ ಪ್ರದೇಶದಲ್ಲಿ; ಉದ್ಯೋಗಿಯಾಗಿ ಕಲಿತದ್ದು ಹಿಂದಿ; ಹೀಗೆ ಹಲವಾರು ಭಾಷೆಗಳಲ್ಲಿ ಅವರು ಪ್ರಾವೀಣ್ಯತೆ ಪಡೆದಿದ್ದರು.
ಅಶ್ವಿನಿ ಅವರು ರಚಿಸಿದ ಬಹುತೇಕ ಕಾದಂಬರಿಗಳು ನಾಯಕಿ ಪ್ರಧಾನವಾಗಿದ್ದ ಧೈರ್ಯ ಸಾಹಸಗಳ ಪ್ರತೀಕವಾಗಿವೆ. ಇಂತಹ ಸಾಹಸ ಪ್ರವೃತ್ತಿಯನ್ನು ಮೆಚ್ಚುತ್ತಿದ್ದುದರಿಂದಲೇ ಇಂಗ್ಲಿಷ್‌ನ ಕಾದಂಬರಿಗಾರ್ತಿ ಡೆನಿಸ್ ರಾಬಿನ್ಸ್ ರವರ ಕಥೆಯನ್ನು ಆಧಾರವಾಗಿಟ್ಟುಕೊಂಡು ಕನ್ನಡದ ಪರಿಸರಕ್ಕೆ ಹೊಂದುವಂತೆ ‘ಕಪ್ಪುಕೊಳ’ ಕಾದಂಬರಿ ಬರೆದರು. ಅವರು ಇಂಗ್ಲಿಷ್‌ನಿಂದ ತಂದ ಇನ್ನೊಂದು ಕಾದಂಬರಿ ‘ಹುತ್ತದ ಸುತ್ತ’. ತೆಲುಗಿನಲ್ಲೂ ಪ್ರಾವೀಣ್ಯತೆ ಪಡೆದಿದ್ದುದರಿಂದ ಯದ್ದನಪೂಡಿ ಸುಲೋಚನ ಅವರ ‘ವಿಜೇತ’ ಹಾಗೂ ‘ನಾನು ಲೇಖಕಿ ಅಲ್ಲ’ ಎಂಬ ಎರಡು ಕಾದಂಬರಿಗಳನ್ನು ಕನ್ನಡೀಕರಿಸಿದರು.
ಅಶ್ವಿನಿ ಅವರ ಕಾದಂಬರಿಗಳಲ್ಲಿ ನಿಲುಕದ ನಕ್ಷತ್ರ, ಮೈತ್ರಿ, ಕಪ್ಪುಕೊಳ, ಬೆಸುಗೆ, ಹುತ್ತದ ಸುತ್ತ, ಯೋಗಾಯೋಗ, ವಿಜೇತ, ಮೃಗತೃಷ್ಣಾ, ಆನಂದವನ, ನಾನು ಲೇಖಕಿ ಅಲ್ಲ, ಬಿಂದಿಯಾ, ಆಕರ್ಷಿತ, ನಿಮಿತ್ತ, ಬಾಲ್ಯಸಖ, ಪ್ರೇಮಸೋಪಾನ, ವಿಸ್ಮೃತಿ ಮುಂತಾದವು ಸೇರಿವೆ. ಅವರ ಸಣ್ಣ ಕಥೆಗಳು ‘ದಂತಗೋಪುರ’ ಮತ್ತು ‘ತುಪ್ಪದ ದೀಪ’ ಎಂಬ ಸಂಕಲನಗಳಲ್ಲಿ ಸೇರಿವೆ.
ಅಶ್ವಿನಿಯವರ ಕಾದಂಬರಿಗಳಾದ ಬೆಸುಗೆ, ಕಪ್ಪುಕೊಳ, ನಿಲುಕದ ನಕ್ಷತ್ರ. ಅವೇ ಹೆಸರಿನಿಂದ ಚಲನಚಿತ್ರವಾಗಿ ತೆರೆಕಂಡಿದ್ದರೆ 'ಮೃಗಕೃಷ್ಣಾ' ಕಾದಂಬರಿಯು ‘ಕಾಮನಬಿಲ್ಲು’ ಎಂಬ ಹೆಸರಿನಿಂದ ಚಲನಚಿತ್ರವಾಗಿದೆ.
ಅಶ್ವಿನಿ ಅವರು 2007ರ ನವೆಂಬರ್ 7ರಂದು ಈ ಲೋಕವನ್ನಗಲಿದರು.
Our great novelist Ashwini
ಕಾಮೆಂಟ್‌ಗಳು