ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿಪಿನ್ ಚಂದ್ರ ಪಾಲ್


 ಬಿಪಿನ್ ಚಂದ್ರ ಪಾಲ್


ಮಹಾನ್ ರಾಷ್ರೀಯವಾದಿ ಬಿಪಿನ್ ಚಂದ್ರ ಪಾಲ್ ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಮಖ ಹೋರಾಟಗಾರರಲ್ಲಿ ಒಬ್ಬರು.  ಲಾಲ್ - ಪಾಲ್ - ಬಾಲ್ ಎಂದು ಪ್ರಸಿದ್ಧರಾದ ಲಾಲ ಲಜಪತ್ ರಾಯ್, ಬಿಪಿನ್ ಚಂದ್ರ ಪಾಲ್ ಮತ್ತು ಬಾಲ ಗಂಗಾಧರ ತಿಲಕರ ಪ್ರಭಾವ ಭಾರತೀಯ ಸ್ವತಂತ್ರ ಚಳುವಳಿಯ ಮೇಲೆ ಬೀರಿದ ಪ್ರಭಾವ ಅಪಾರವಾದದ್ದು. ಸಂಪೂರ್ಣ ಸ್ವರಾಜ್ಯದ ಬೇಡಿಕೆಯನ್ನು ಪ್ರಸ್ತಾಪಿಸಿದ ಈ ತ್ರಿಮೂರ್ತಿಗಳು  ಪ್ರಾರಂಭಿಸಿದ ಸ್ವದೇಶೀ ಚಳುವಳಿ ಇಡೀ ರಾಷ್ಟ್ರವನ್ನೇ ವ್ಯಾಪಿಸಿತು.

ಬಿಪಿನ್ ಚಂದ್ರ ಪಾಲ್ ಈಗಿನ ಬಾಂಗ್ಲಾದೇಶದ ಭಾಗವಾಗಿರುವ ಸಿಲ್ಹಟ್ ಜಿಲ್ಲೆಯ ಹಬೀಗಂಜ್ ತಾಲ್ಲೂಕಿನ ಪಾಯ್ಲ್ ಎಂಬ ಹಳ್ಳಿಯಲ್ಲಿ 1858ರ ನವೆಂಬರ್ 7ರಂದು  ಜನಿಸಿದರು. ಅವರ ತಂದೆ ರಾಮಚಂದ್ರ ಪಾಲ್ ಪರ್ಷಿಯನ್ ವಿದ್ವಾಂಸರೂ, ಸಣ್ಣ ಪ್ರಮಾಣದ ಭೂಮಾಲಿಕರೂ ಆಗಿದ್ದರು.

ಬಿಪಿನ್ ಚಂದ್ರ ಪಾಲ್ ಕೋಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಸೇರಿದ ಚರ್ಚ್ ಮಿಷನ್ ಸೊಸೈಟಿ ಕಾಲೇಜಿನಲ್ಲಿ ಓದಿ ಅಲ್ಲೇ ಬೋಧನೆಯನ್ನೂ ಮಾಡಿದರು.  ಇದೇ ಸಮಯದಲ್ಲಿ ಅವರು ಕೇಶವಚಂದ್ರ ಸೇನ್ ಮತ್ತು ಪಂಡಿತ್ ಶಿವನಾಥ ಶಾಸ್ತ್ರೀ ಮುಂತಾದ ಪ್ರಖ್ಯಾತ ಬಂಗಾಳಿ ನೇತಾರರ ಸಂಪರ್ಕಕ್ಕೆ ಬಂದರು.  

1907ರಲ್ಲಿ ಪಾಲ್ ಇಂಗ್ಲೆಂಡಿನಲ್ಲಿ ವಿಚಾರವಾದಿ ವಿದ್ಯಾರ್ಥಿ ಆಗಿದ್ದರು. ಅಲ್ಲಿ ‘ಸ್ವರಾಜ್’ ಪತ್ರಿಕೆಯನ್ನು ಪ್ರಾರಂಭಿಸಿದ ಅವರು ಮುಂದಿನ ವರ್ಷವೇ ಭಾರತಕ್ಕೆ ಮರಳಿ ಸಂಪೂರ್ಣವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ‘ಬಂದೇ ಮಾತರಂ’ ಖಟ್ಲೆಯಲ್ಲಿ ಶ್ರೀ ಅರವಿಂದರವರ ವಿರುದ್ಧ ಸಾಕ್ಷ್ಯ ನೀಡಲು ನಿರಾಕರಿಸಿದ ಪಾಲ್  6 ತಿಂಗಳ ಕಾರಾಗೃಹವಾಸವನ್ನು ಅನುಭವಿಸಬೇಕಾಯಿತು.

ಪಾಲ್ ಓರ್ವ ಶಿಕ್ಷಕ, ಪತ್ರಕರ್ತ, ಲೇಖಕ ಹಾಗೂ ಗ್ರಂಥಪಾಲಕ ಮುಂತಾದ ಹುದ್ದೆಗಳನ್ನು ವಹಿಸಿದವರು. ಆರಂಭದಲ್ಲಿ ಬ್ರಹ್ಮ ಸಮಾಜದ ಸಮರ್ಥಕರಾಗಿದ್ದ ಪಾಲ್ ಮುಂದೆ ವೇದಾಂತದ ಕಡೆಗೆ ವಾಲಿದರು. ಅವರು ಶ್ರೀ ಚೈತನ್ಯರ ವೈಷ್ಣವ ದರ್ಶನದ ಮುಂದಾಳತ್ವ ಕೂಡ ವಹಿಸಿದರು. ಕ್ರಾಂತಿಕಾರಿ ಸಮಾಜ ಚಿಂತಕ ಮತ್ತು ಸಮಾಜ ಸುಧಾರಕರಾದ ಪಾಲ್ ತಮ್ಮ ಪತ್ನಿ ನಿಧನರಾದಾಗ ವಿಧವೆಯನ್ನು ಮದುವೆ ಮಾಡಿಕೊಂಡರು. ಅವರು ರಾಜಾರಾಮಮೊಹನರಾಯ್, ಕೇಶವಚಂದ್ರ ಸೇನ್,  ಅರವಿಂದ ಘೋಷ್, ರವೀಂದ್ರನಾಥ ಠಾಕೂರ್, ಆಶುತೋಷ್ ಮುಖರ್ಜಿ ಹಾಗೂ ಆನಿ ಬೆಸೆಂಟ್ ಮುಂತಾದ ಆಧುನಿಕ ಭಾರತದ ಶಿಲ್ಪಿಗಳ ಜೀವನವನ್ನು ಅಧ್ಯಯನ ಮಾಡಿ, ಒಂದು ಲೇಖನ ಮಾಲೆಯನ್ನು ಪ್ರಕಟಿಸಿದರು. ವ್ಯಾಪಕ ದೃಷ್ಟಿಕೋನ ನೀಡುವ ‘ಸಮಗ್ರ ದೇಶಭಕ್ತಿ’ಯನ್ನು ಅವರು ಉಪದೇಶಿಸಿದರು. 

1886ರ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ ಸಿಲ್ಹಟ್ ಅನ್ನು ಪ್ರತಿನಿಧಿಸಿದ್ದರು.  ಬಿಪಿನ್ ಚಂದ್ರ ಪಾಲ್ ಅವರು 'ಪರಿದರ್ಶಕ್’ ಬಂಗಾಳಿ ಸಾಪ್ತಾಹಿಕ, 'ನ್ಯೂ ಇಂಡಿಯಾ’ ಆಂಗ್ಲ ಸಾಪ್ತಾಹಿಕ,  ‘ಬಂದೇ ಮಾತರಂ’ ಬಂಗಾಳಿ ದೈನಿಕ, 'ದಿ ಟ್ರಿಬ್ಯೂನ್' ಇಂಗ್ಲಿಷ್ ದೈನಿಕ ಮುಂತಾದ ಪತ್ರಿಕೆಗಳನ್ನು ಸಂಪಾದಿಸುತ್ತಿದ್ದು,  ರಾಷ್ಟ್ರೀಯತೆಯ ಪ್ರಮುಖ ವಕ್ತಾರರಾಗಿದ್ದರು. ಸಮಾಜದಲ್ಲಿನ ಎಲ್ಲ ಭೇದ‍ ಭಾವಗಳು ಶೋಷಣೆಗಳನ್ನು ಅವರು ವಿರೋಧಿಸಿದರು.  ಕಾರ್ಮಿಕರಿಗೆ 48ಗಳಿಗಿಂತ ಹೆಚ್ಚು ಕೆಲಸ ಇರಕೂಡದು, ನ್ಯಾಯಯುತ ವೇತನ ಸಿಗಬೇಕು ಎಂದು ಹೋರಾಡಿದರು.  ಚೀಣಾ ಮತ್ತು ವಿಶ್ವದ ಇತರೆಡೆಗಳಲ್ಲಿನ ಬದಲಾವಣೆಗಳಿಂದ‍ ಭಾರತಕ್ಕಿರುವ ಅಭದ್ರತೆಗಳ ಕುರಿತು ಬರೆದಿದ್ದರು.

ಸಾಂಕೇತಿಕ ಹೋರಾಟಗಳಲ್ಲಿ ನಂಬಿಕೆ ಹೊಂದಿಲ್ಲದಿದ್ದ ಪಾಲ್ ಗಾಂಧೀಜಿಯವರ ಜೊತೆ ಯಾವುದೇ ರೀತಿಯಲ್ಲೂ ಸಮಾನ ಮನಸ್ಕತೆ ಹೊಂದಿರಲಿಲ್ಲ.  ತಮ್ಮ ಕೊನೆಯ ಆರು ವರ್ಷಗಳಲ್ಲಿ ಕಾಂಗ್ರೆಸ್ನಿಂದ ಹೊರಬಂದು ರಾಜಕೀಯ ಚಟುವಟಿಕೆಗಳಿಂದ  ಸಂನ್ಯಾಸ ಪಡೆದ ಪಾಲ್, ರಾಷ್ಟ್ರೀಯ ಪ್ರಶ್ನೆಗಳ ಮೇಲೆ ಬರಹ  ಮಾತ್ರ ಮಾಡತೊಡಗಿದರು. 

ಬಿಪಿನ್ ಚಂದ್ರ ಪಾಲ್ 1932ರ ಮೇ 20 ರಂದು  ಈ ಲೋಕವನ್ನಗಲಿದರು.

On the birth anniversary of nationalist, writer and social reformer Bipin Chandra Pal

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ