ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಜಯಕ್ಕ ಅಜ್ಜಿಮನೆ


 ವಿಜಯಕ್ಕ ಅಜ್ಜಿಮನೆ


ವಿಜಯಕ್ಕ ಅಜ್ಜಿಮನೆ ಅವರು ನನಗೆ ಗೊತ್ತಿರುವುದು ಫೇಸ್ಬುಕ್ ಮೂಲಕ.  ಅವರು ಆಗಾಗ ನಾನು ತೆಗೆದ ಪ್ರಕೃತಿ ಚಿತ್ರಗಳನ್ನು ಆಸ್ಥೆಯಿಂದ ಬಂದು ನೋಡುವುದಿದೆ.  ಯಾಕೆ ಆ ಕುರಿತು ಹೇಳುತ್ತಿರುವೆ ಅಂದರೆ ಅವರೊಬ್ಬ ಮಹತ್ವದ ಪ್ರಕೃತಿ ಪ್ರಿಯರು.  ಈ ಪ್ರಕೃತಿ ಪ್ರಿಯತೆ ಎಂಬುದು ಅಂತರಂಗದ ಕೂಗಿಗೆ ಓಗೊಡುವ ಪರಿ.  ಎಲ್ಲರೂ ಪ್ರಕೃತಿಯ ರಮಣೀಯತೆಯನ್ನು ಒಂದಲ್ಲ ಒಂದು ರೀತಿ ಪ್ರೀತಿಸುತ್ತಾರೆ ಎಂಬುದು ನಿಜವಿರಬಹುದಾದರೂ, ಪ್ರಕೃತಿಪ್ರಿಯತೆ ಎಂಬ ಅಂತರಂಗದ ಕೂಗೇ ತಮ್ಮ  ಪ್ರಕೃತಿಯಾದವರು ಕಡಿಮೆ. ವಿಜಯಕ್ಕ ಅವರ ಪ್ರಕೃತಿಯೇ ಒಂದು ರೀತಿಯ ಪ್ರಕೃತಿಪ್ರಿಯತೆ.  ಇಂದು ನಮ್ಮ ವಿಜಯಕ್ಕನ ಜನ್ಮದಿನ ಅಂತ ಎಲ್ಲೋ ಒಂದೆಡೆ ಆತ್ಮೀಯರೊಬ್ಬರ ಗೋಡೆ ಮೇಲೆ ಕಾಣಿಸಿತು.

ವಿಜಯಕ್ಕ ಅವರು 'ಅಜ್ಜಿಮನೆ’ ಎಂಬ ಹೊಸ ಆಲೋಚನೆಯ ಪ್ಲೇ ಹೋಂ ಆರಂಭಿಸಿದ ಕಾರಣದಿಂದ ‘ಅಜ್ಜಿಮನೆ ವಿಜಯಕ್ಕ’ ಎಂದೇ ಪರಿಚಿತರು. ಅವರದ್ದು ಸದಾ ಚಟುವಟಿಕೆ.  "ಅರಳು ಹುರಿದ ಮಾತು ಇವರ ಹೆಗ್ಗುರುತು" ಎಂದು ಒಂದೆಡೆ ಓದಿದೆ. ನನಗೆ ಅವರ ಚಿತ್ರಗಳು, ಚಟುವಟಿಕೆಗಳು, ಬರಹಗಳ ಮೂಲಕ ಕಾಣುವ ಬದುಕಿನ ಕಾಣ್ಕೆಗಳ ಹಿಂದೆ ಗಾಂಭೀರ್ಯದ ದರ್ಶನವಿದ್ದ ಹಾಗನಿಸುತ್ತದೆ.  ಅವರ ಪ್ರಕೃತಿ ಪ್ರೀತಿ, ಮಕ್ಕಳ 'ಅಜ್ಜಿಮನೆ' ಹಿಂದಿರುವ ಪರಿಕಲ್ಪನೆ, ಅವರು ನಡೆಸಿದ 'ತಿಂಡಿ ಬಜಾರು', ಅವರು ಮಾಡುವ ಚಾರಣ, ಅವರ ಕ್ಯಾಮರಾ ಕಣ್ಣು; ಅವರ ಬರಹಗಳಲ್ಲಿ ನಮಗೆ ಕಾಣಸಿಗುವ ಸುತ್ತಮುತ್ತಲಿನ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಮಕ್ಕಳು, ಮಕ್ಕಳ ಪೋಷಕರು, ಎಂದೋ ಜೊತೆಗಿದ್ದು ಪುನಃ ಭೇಟಿ ಆದವರು,  ಎಲ್ಲೋ ಭೇಟಿಯಾಗಿ ಅಂತಃಕರಣದಿಂದ ಆತ್ಮೀಯರಾದವರು ಹೀಗೆ ಎಲ್ಲೆಡೆ ಎಲ್ಲದರೊಂದಿಗೆ ತಮ್ಮ ಆಳಪ್ರಪಂಚದೊಂದಿಗೆ ಅವರಿಗೆ ಆಳವಾದ ಕನೆಕ್ಟ್ ಇದೆ. 

ವಿಜಯಕ್ಕನವರು ಒಂದು ಶಾರ್ಟ್ ಫಿಲಂ ಮಾಡಿದ್ದರು. ಅದೂ ಕನ್ನಡ, ತುಳು. ಕೊಂಕಣಿ ಮೂರು ಭಾಷೆಯಲ್ಲಿ. 'ಒಂದು ಮುಷ್ಠಿ ಆಕಾಶ’ ಅದರ ಹೆಸರು. ಅದು ಅಪಾರ ಜನರ ಹೃದಯ ಸಂವೇದನೆ ಗಳಿಸಿತು.

ಕೋವಿಡ್ನಲ್ಲಿ ಎಲ್ಲರೂ ಅಕ್ಷರಶಃ ಕುಸಿದು ಕೂತಿದ್ದಾಗ ಯಾವಾಗಲೂ ಚಾರಣ, ಛಾಯಾಗ್ರಹಣ ಎಂದು ತಿರುಗುತ್ತಿದ್ದ ವಿಜಯಕ್ಕ ಒಂದಿಷ್ಟೂ ಕಂಗೆಡದೆ ಕುಸಿಯದೆ ‘ವಿಜ್ಜಿಸ್ ಕಿಚನ್’ ಎನ್ನುವ ಹೆಸರಲ್ಲಿ ಬೇಕಾದವರಿಗೆ ಸಿಹಿ ತಿಂಡಿ ಮಾಡಿ ಕಳಿಸುತ್ತಾ, ಎಲ್ಲರ ಬಾಯಲ್ಲೂ ಸಿಹಿಯೇ ಇರುವಂತೆ ನೋಡಿಕೊಳ್ಳುತ್ತಾ ಉತ್ಸಾಹದ ಬುಗ್ಗೆಯಾದರು.  'ವಿಜ್ಜಿಸ್ ಕಿಚನ್'ನ ‘ರಾಯಲ್ ಸ್ವೀಟ್’ ರುಚಿ ಎಲ್ಲೆಡೆ ಮಾತಾಯಿತು. "ರಾಯಲ್‌ ಸ್ವೀಟ್‌” ಬೆಂಗಳೂರಿನಲ್ಲಿ ಮಾತ್ರವಲ್ಲ, ಮೈಸೂರು, ಮಂಗಳೂರು, ಮುಂಬಯಿಯನ್ನೂ ತಲುಪಿತು. ಈ ವಿಜಯಕ್ಕ ಅಜ್ಜಿಮನೆ ಎಂಬ ಹೃದಯದ ಆಂತರ್ಯದ ಸವಿ ಇದೆಯಲ್ಲ ಅದು ಯಾರಿಗೇ ಆಗಲಿ ರುಚಿಸದಿರುವುದು ಹೇಗೆ ತಾನೇ ಸಾಧ್ಯ.

ನನಗಂತೂ ವಿಜಯಕ್ಕ ಅಜ್ಜಿಮನೆ ಅಂದರೆ ಒಂದು ರೀತಿ ಪ್ರೇರಣೆಯ ಶಕ್ತಿ.  ಈ ಪ್ರೇರಣೆ ಸದಾ ನಮ್ಮನ್ನು ಉತ್ತಮ ಬಾಳಿನೆಡೆಗೆ ಮಾರ್ಗದರ್ಶಿಸುತ್ತಿರಲಿ ಎಂದು ಆಶಿಸುತ್ತಾ 'ವಿಜಯಕ್ಕ ಅಜ್ಜಿಮನೆ' ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆ ಹೇಳುತ್ತಿರುವೆ.  ಅಮ್ಮಾ ನಿಮ್ಮ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. ನಮಸ್ಕಾರ 🌷🙏🌷

Happy birthday to my inspiration Vijayakka Ajjimane 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ