ಬನವಾಸಿ ವೆಂಕಟೇಶ ದೀಕ್ಷಿತ್
ಬನವಾಸಿ ವೆಂಕಟೇಶ ದೀಕ್ಷಿತ್
ಬನವಾಸಿ ವೆಂಕಟೇಶ ದೀಕ್ಷಿತ್ ಉತ್ತಮ ಬರೆಹಗಳಿಂದ ಹೆಸರಾಗಿದ್ದಾರೆ. "ಬರೆಯುವುದು ನನ್ನ ಪ್ರೀತಿ" ಎಂಬುದು ಅವರ ಅಂತರಾಳದ ಮಾತು.
ವೆಂಕಟೇಶ ದೀಕ್ಷಿತರು 1952ರ ಮೇ 5ರಂದು ಜನಿಸಿದರು. ಅವರ ಹುಟ್ಟೂರು ಉತ್ತರಕನ್ನಡ ಜಿಲ್ಲೆಯ ಬನವಾಸಿ. ಹತ್ತಿರದ ಬೆಂಗಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಶಿರಸಿಯಲ್ಲಿ ಕಾಲೇಜು ಸೇರಿ ವಿಜ್ಞಾನ ಪದವಿ ಗಳಿಸಿದರು.
ಬನವಾಸಿ ವೆಂಕಟೇಶ ದೀಕ್ಷಿತರು ಭಾರತೀಯ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಸೇರಿ ಕಲಬರ‍್ಗಿಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅಲ್ಲಿಂದ ಭಾರತೀಯ ಸೇನೆಯಲ್ಲಿ ವಾರಂಟ್ ಆಫೀಸರಾಗಿ ಆಯ್ಕೆಯಾಗಿ ಕಾಶ್ಮೀರದಲ್ಲಿ ನೇಮಕಗೊಂಡರು. ಬಾರಾಮುಲಾ, ಕುಪ್ವಾಡಾ, ಶ್ರೀನಗರ, ರಜೋರಿ ಮತ್ತು ನಗ್ರೋಟಾಗಳಲ್ಲಿ ಸೇವೆ ಸಲ್ಲಿಸಿದರು. ಮುಂದೆ ದಿಲ್ಲಿ, ನಾಗಪುರಗಳಲ್ಲಿ ಅವರ ಸೇವೆ ನಡೆಯಿತು. ಸೇನೆಯಲ್ಲಿರುವಾಗಲೆ ಇಂಡಿಯನ್ ಪಿ ಎಂಡ್ ಟಿ ಫೈನಾನ್ಸ್ ಎಂಡ್ ಅಕೌಂಟ್ಸ್ ರ‍್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಎಮ್ ಟಿ ಎನ್ನೆಲ್ ಮುಂಬಯಿಯಲ್ಲಿ ಜೂನಿಯರ್ ಅಕೌಂಟ್ಸ್ ಆಫೀಸರಾಗಿ ನೇಮಕಗೊಂಡರು. ಪದೋನ್ನತಿ ಪಡೆಯುತ್ತ ಅಕೌಂಟ್ಸ್ ಆಫೀಸರ್, ಚೀಫ್ ಅಕೌಂಟ್ಸ್ ಆಫೀಸರ್ ನಂತರ ಉಪ ಮಹಾಪ್ರಬಂಧಕರ ವೇತನ ಶ್ರೇಣಿಯಲ್ಲಿ ಬೆಂಗಳೂರಿನಲ್ಲಿ ನಿವೃತ್ತರಾದರು.
ಬನವಾಸಿ ವೆಂಕಟೇಶ ದೀಕ್ಷಿತರಿಗೆ ಹೈಸ್ಕೂಲಿನಲ್ಲಿರುವಾಗಲೇ ಕಾರಂತರ ಮತ್ತು ಭೈರಪ್ಪನವರ ಕಾದಂಬರಿಗಳನ್ನೋದಿ ಸಾಹಿತ್ಯದತ್ತ ಆಕರ್ಷಣೆ ಬೆಳೆದಿತ್ತು. ಕಲಬುರಗಿಯಲ್ಲಿರುವಾಗ ಬರೆವಣಿಗೆ ಆರಂಭಗೊಂಡಿತು. ಉತ್ಥಾನ ಮತ್ತು ಮಯೂರಗಳಲ್ಲಿ ಇವರ ಮೊದಲ ಕಥೆಗಳು ಪ್ರಕಟವಾದವು (1974). ಅಲ್ಲಿಯೆ ಕಥೆಗಾರ ಆರೂರು ಲಕ್ಷ್ಮಣ ಶೇಟ್ ಮತ್ತು ಸಾಹಿತಿ ವಸಂತ ಕುಷ್ಟಗಿಯವರ ಪರಿಚಯವಾಯಿತು. ಮುಂದೆ ಈ ಬರೆವಣಿಗೆ ನಾಗಪುರ ದಿಲ್ಲಿಗಳಲ್ಲೂ ಹೊಸ ಅನುಭವಗಳೊಂದಿಗೆ ಮುಂದುವರಿಯಿತು. ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯಾದಾಗ ದಿಲ್ಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ದೀಕ್ಷಿತರಿಗೆ ಸಿಖ್ ಹತ್ಯಾಕಾಂಡವನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತ್ತು. ಅವರು ತಮ್ಮ ಪ್ರಸಿದ್ಧ 'ಪುರುಷಾಮೃಗ' ಕಥೆಯನ್ನು ತುಷಾರದಲ್ಲಿ ಬರೆದದ್ದು ಆಗಲೇ. ದೀಕ್ಷಿತರು ಸುಧಾ, ಮಯೂರ, ತರಂಗ, ಕರ್ಮವೀರ, ಪ್ರಜಾಮತ, ಮಲ್ಲಿಗೆ, ಕಸ್ತೂರಿ, ತುಷಾರ ಹೀಗೆ ನಾಡಿನ ಎಲ್ಲಾ ನಿಯತಕಾಲಿಕಗಳಲ್ಲಿ 150 ಕ್ಕೂ ಹೆಚ್ಚು ಕಥೆ ಮತ್ತು ನೀಳ್ಗಥೆಗಳನ್ನು ಇಲ್ಲಿಯವರೆಗೆ ಬರೆದಿದ್ದಾರೆ. ಇದುವರೆಗೆ ಇವರ 'ಕಾವಡಿ', 'ಬೇರಿಗಂಟಿದ ಮಣ್ಣು', 'ಗಡಿಯೀಚೆಯ ಸದ್ದುಗಳು' ಎಂಬ ಮೂರು ಕಥಾ ಸಂಕಲನಗಳು ಪ್ರಕಟಗೊಂಡಿವೆ.
ಬನವಾಸಿ ವೆಂಕಟೇಶ ದೀಕ್ಷಿತರ 'ನಕ್ಷತ್ರ ನುಂಗುವ ಸಮಯ' ಕಾದಂಬರಿ 'ಸುಧಾ'ದಲ್ಲಿ ಧಾರಾವಾಹಿಯಾಗಿಯಲ್ಲದೆ ಪುಸ್ತಕವಾಗಿಯೂ ಪ್ರಕಟವಾಗಿದೆ. ಅವರ ಇತ್ತೀಚಿನ 'ಅರೋಮಾ' ಕಾದಂಬರಿ 'ತರಂಗ'ದಲ್ಲಿ 2024ರ ಮೇ 2ರ ವರೆಗೆ 14 ಕಂತುಗಳಲ್ಲಿ ಪ್ರಕಟವಾಗಿದೆ.
ಬನವಾಸಿ ವೆಂಕಟೇಶ ದೀಕ್ಷಿತರಿಗೆ 'ತುಷಾರ' ವಾರ್ಷಿಕ ಕಥಾಸ್ಪರ್ಧೆಯಲ್ಲಿ ಬಹುಮಾನ, 'ಮಲ್ಲಿಗೆ' ಕಥಾಸ್ಪರ್ಧೆಯಲ್ಲಿ ಬಹುಮಾನಗಳು ಸಂದಿವೆ. ಕರ್ಮವೀರ ಮತ್ತು ಉತ್ಥಾನಗಳಲ್ಲಿ ಇವರ ಕಥೆಗಳು ತೀರ್ಪುಗಾರರ ಮೆಚ್ಚುಗೆಯನ್ನು ಪಡೆದಿವೆ.
ಸರಳ ಸಹೃದಯಿ ಉತ್ತಮ ಬರೆಹಗಾರರಾದ ಬನವಾಸಿ ವೆಂಕಟೇಶ ದೀಕ್ಷಿತರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Venkatesh Dixit Sir 🌷🙏🌷
ಕಾಮೆಂಟ್‌ಗಳು