ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅರುಣಾ ರಾಯ್


 ಅರುಣಾ ರಾಯ್


ಅರುಣಾ ರಾಯ್ ಸಾಮಾಜಿಕ ಮತ್ತು ಮಾನವ ಹಕ್ಕುಗಳ ಹೋರಾಟ ಕಾರ್ಯಕರ್ತೆಯಾಗಿ ಹೆಸರಾಗಿದ್ದಾರೆ.

ಅರುಣಾ ರಾಯ್ 1946ರ ಜೂನ್ 26ರಂದು ಚೆನ್ನೈನಲ್ಲಿ ಜನಿಸಿದರು. ಅವರು ಬೆಳೆದದ್ದು ದೆಹಲಿಯಲ್ಲಿ.  ದೆಹಲಿ ವಿಶ್ವವಿದ್ಯಾಲಯದ ಇಂದ್ರಪ್ರಸ್ಥ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮಾಡಿದರು. 1968-1974ರ ಅವಧಿಯಲ್ಲಿ ಐಎಎಸ್ ಅಧಿಕಾರಿಯಾಗಿ 
ಸೇವೆ ಸಲ್ಲಿಸಿದರು.

ಅರುಣಾ ರಾಯ್  ತಾವು ಹೊಂದಿದ್ದ ಐಎಎಸ್ ಅಧಿಕಾರವನ್ನು  ತ್ಯಜಿಸಿ ಬಡತನದ ಅಂಚಿನಲ್ಲಿರುವವರಿಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ರಾಜಸ್ಥಾನದ ಟಿಲೋನಿಯಾದಲ್ಲಿನ ಸೋಷಿಯಲ್ ವರ್ಕ್ ಅಂಡ್ ರಿಸರ್ಚ್ ಸೆಂಟರ್ (SWRC) ಸೇರಿದರು.  1987ರಲ್ಲಿ ನಿಖಿಲ್ ಡೇ, ಶಂಕರ್ ಸಿಂಗ್ ಮತ್ತು ಇತರರೊಂದಿಗೆ ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯನ್ನು ಸ್ಥಾಪಿಸಿದರು.
ಕಾರ್ಮಿಕರ ನ್ಯಾಯಯುತ ಮತ್ತು ಸಮಾನ ವೇತನಕ್ಕಾಗಿ ಹೋರಾಡುವ ಮೂಲಕ ಈ ಸಂಘಟನೆ ಪ್ರಾರಂಭವಾಯಿತು. ಇದು ಭಾರತದ ಮಾಹಿತಿ ಹಕ್ಕು (RTI) ಕಾಯ್ದೆ ಜಾರಿಗೆ ತರಲು ಹೋರಾಟವಾಗಿ ರೂಪುಗೊಂಡಿತು. ಅರುಣಾ ರಾಯ್ ಅವರು ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆ ಮತ್ತು ಜನರ ಮಾಹಿತಿ ಹಕ್ಕುಗಳ ರಾಷ್ಟ್ರೀಯ ಅಭಿಯಾನದ ಮೂಲಕ ಭಾರತದಲ್ಲಿ ಮಾಹಿತಿ ಹಕ್ಕು ಚಳವಳಿಯ ನಾಯಕರಾದರು. ಭಾರತ ಸರ್ಕಾರವು 2005ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಅಂಗೀಕರಿಸುವುದರೊಂದಿಗೆ ಈ ಹೋರಾಟ ಯಶಸ್ಸು ಕಂಡಿತು. ಅರುಣಾ ರಾಯ್ 2006ರವರೆಗೆ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. 

ಅರುಣಾ ರಾಯ್ ಬಡವರ ಹಕ್ಕುಗಳಿಗಾಗಿನ ಹಲವಾರು ಅಭಿಯಾನಗಳಲ್ಲಿ ಮುಂಚೂಣಿಯಲ್ಲಿದ್ದರು. ಇವುಗಳಲ್ಲಿ ಮಾಹಿತಿ ಹಕ್ಕು, ಕೆಲಸ ಮಾಡುವ ಹಕ್ಕು ಮತ್ತು ಆಹಾರದ ಹಕ್ಕು ಸೇರಿವೆ.  ಮುಂದೆ ಅವರು ಪಿಂಚಣಿ ಪರಿಷತ್ತಿನ ಸದಸ್ಯರಾಗಿ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ದೊರಕಿಸಬೇಕೆಂಬ ಆಶಯದ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ  ವಿಷಲ್ ಬ್ಲೋವರ್  ಪ್ರೊಟೆಕ್ಷನ್ ಕಾನೂನು ಮತ್ತು ಕುಂದುಕೊರತೆ ಪರಿಹಾರ ಕಾನೂನುಗಳಿಗಾಗಿ ಹೋರಾಟದ ಅಭಿಯಾನದಲ್ಲೂ ಇದ್ದಾರೆ. 

2016ರಲ್ಲಿ ಮಾಂಟ್ರಿಯಲ್ ವಿಶ್ವವಿದ್ಯಾಲಯವು ಅರುಣಾ ರಾಯ್ ಅವರನ್ನು ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಇನ್ ಗ್ಲೋಬಲ್ ಗವರ್ನೆನ್ಸ್ ಆಗಿ ನೇಮಕ ಮಾಡಿಕೊಂಡಿದೆ.  2018ರಲ್ಲಿ ಅವರು ಎಂ.ಕೆ.ಎಸ್.ಎಸ್ ಕಲೆಕ್ಟಿವ್ ಜೊತೆಯಲ್ಲಿ "ದ. ಆರ್ ಟಿ ಐ ಸ್ಟೋರಿ; ಪವರ್ ಟು ದ ಪೀಪಲ್" ಎಂಬ ಕೃತಿ ಪ್ರಕಟಿಸಿದ್ದಾರೆ.

ಅರುಣಾ ರಾಯ್ ಅವರಿಗೆ 1991ರಲ್ಲಿ ಟೈಮ್ಸ್ ಫೆಲೋಶಿಪ್ ಪ್ರಶಸ್ತಿ ಸಂದಿತು. ಗ್ರಾಮೀಣ ಕಾರ್ಮಿಕರ ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಯ ಹಕ್ಕುಗಳಿಗಾಗಿ ಮಾಡಿದ ಸೃಜನಶೀಲ ಕಾರ್ಯಕ್ಕಾಗಿ
2000ದ ವರ್ಷದಲ್ಲಿ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಸಂದಿತು. 2010ರಲ್ಲಿ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು.  2011ರಲ್ಲಿ ಟೈಮ್ಸ್ ನಿಯತಕಾಲಿಕವು ವಿಶ್ವದ ಅತ್ಯಂತ ಪ್ರಭಾವಶಾಲಿ ನೂರು ಜನರಲ್ಲಿ ಇವರನ್ನು ಒಬ್ಬರಾಗಿ ಹೆಸರಿಸಿತು. ಸೆಪ್ಟೆಂಬರ್ 2017ರಲ್ಲಿ ಇಂಡಿಯಾ ಟೈಮ್ಸ್ ಅವರನ್ನು  ಪ್ರಸಿದ್ಧ ಹನ್ನೊಂದು ಮಾನವ ಹಕ್ಕುಗಳ ಕಾರ್ಯಕರ್ತರಲ್ಲಿ ಒಬ್ಬರನ್ನಾಗಿ ಹೆಸರಿಸಿದೆ. 

On the birthday of social activist Aruna Roy

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ